ಹೊನ್ನಾಳಿ: ಸರ್ಕಾರದ ಅನ್ನಭಾಗ್ಯ ಯೋಜನೆ ಬಡವರ ಹಸಿವು ನೀಗಿಸುವ ಉದ್ದೇಶದಿಂದ ಜಾರಿಗೆ ಬಂದ ಮಹತ್ವಾಕಾಂಕ್ಷೆಯ ಜನಪರ ಯೋಜನೆಗಳಲ್ಲಿ ಒಂದಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಈ ಯೋಜನೆಗೆ ವಿಶೇಷ ಮಹತ್ವ ನೀಡಲಾಗಿತ್ತು. ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಜಾರಿಗೊಂಡ ಈ ಯೋಜನೆಯ ಪ್ರತಿಯೊಂದು ಅಕ್ಕಿಯ ಕಾಳಿನಲ್ಲೂ ಒಂದು ಬಡ ಕುಟುಂಬದ ನಿರೀಕ್ಷೆ ಅಡಗಿದೆ. ಆ ಅಕ್ಕಿ ಬಡವರ ಹಸಿವನ್ನು ನೀಗಿಸುವ ಶಕ್ತಿ ಹೊಂದಿದೆ.
ಆದರೆ ಇದೇ ಅನ್ನಭಾಗ್ಯ ಯೋಜನೆಯ ಅಕ್ಕಿಯ ಸುತ್ತ ಹೊನ್ನಾಳಿ ತಾಲೂಕಿನಲ್ಲಿ ಕೇಳಿಬರುತ್ತಿರುವ ಆರೋಪಗಳು ಹಾಗೂ ಅನುಮಾನಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಕಳೆದ ಹಲವು ತಿಂಗಳುಗಳಿಂದ ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸ್ಥಳೀಯ ವಲಯದಲ್ಲಿ ಒಂದೇ ಪ್ರಶ್ನೆ ಕೇಳಿಬರುತ್ತಿದೆ.
"ಬಡವರ ಅಕ್ಕಿ ನಿಜವಾಗಿಯೂ ಬಡವರ ಮನೆ ಸೇರುತ್ತಿದೆಯೇ?"
ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ, ಹೊನ್ನಾಳಿಯ ಕೆಲವು ಪ್ರದೇಶಗಳತ್ತ ಜನರ ಗಮನ ಹರಿಯುತ್ತಿದೆ. ತಾಲೂಕು ಆಡಳಿತ ಕಚೇರಿಯ ಹಿಂಭಾಗ, ಆಹಾರ ಇಲಾಖೆಯ ಕಚೇರಿ ಸಮೀಪ, ಬಿಎಸ್ಎನ್ಎಲ್ ಕಚೇರಿ ಮುಂಭಾಗ, ಖಾಸಗಿ ಬಸ್ ನಿಲ್ದಾಣದ ಪಕ್ಕ ಹಾಗೂ ಶಿವಮೊಗ್ಗ ರಸ್ತೆ ಭಾಗಗಳಲ್ಲಿ ಅನ್ನಭಾಗ್ಯ ಅಕ್ಕಿಯ ಖರೀದಿ–ಮಾರಾಟ ಹಗಲು ಹೊತ್ತಿನಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಪ್ರತಿದಿನ ನೂರಾರು ಟನ್ ಅಕ್ಕಿ ಕಾಳಸಂತೆಯ ಕದಿಮರ ಪಾಲಾಗುತ್ತಿದೆ. ದೊಡ್ಡ ಗಾತ್ರದ ವಾಹನಗಳಲ್ಲಿ ಹೊರರಾಜ್ಯಗಳಿಗೆ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಹೊನ್ನಾಳಿ ತಾಲೂಕು ಆಹಾರ ಇಲಾಖೆಯ ಶಿರಸ್ತೇದಾರ್ ಸಂಜಯ್ ಬಾಗೇವಾಡಿ ಅವರ ಕರಿನೆರಳು ಈ ಅನ್ನಭಾಗ್ಯ ಅಕ್ಕಿಯ ದಂದೆ ಮೇಲೆ ಬಿದ್ದಿದೆ. ಇವರ ಕೃಪೆಯಿಂದ ಈ ಅಕ್ಕಿ ದಂಧೆ ಕಳೆದ ಹತ್ತಾರು ವರ್ಷದಿಂದ ನಿರಂತರವಾಗಿ ನಡೆಯುತ್ತಿದೆ. ಅಕ್ಕಿಯ ದಂಧೆಯ ಇಂಚಿಂಚು ಮಾಹಿತಿ ಆಹಾರ ಇಲಾಖೆಯ ಶಿರಸ್ತೇದಾರ್ ಸಂಜಯ್ ಬಾಗೇವಾಡಿ ಅವರಿಗೆ ಇದೆ. ಆದರೆ ಅವರು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎಂಬ ಆರೋಪವಿದೆ.
ಸಂಜಯ್ ಬಾಗೇವಾಡಿ ಅವರನ್ನು ನಮ್ಮ ಮಾಧ್ಯಮ ಪ್ರತಿನಿಧಿಗಳು ಮಾತನಾಡಿಸಿದಾಗ ನಾವು ಒಂದು ವರ್ಷದಿಂದ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಸುಳ್ಳು ಹೇಳಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಆಡಳಿತ ಶಾಖೆಯಲ್ಲಿ ಇವರ ಬಗ್ಗೆ ವಿಚಾರಿಸಿದಾಗ ಈ ಹಿಂದೆ ಹೊನ್ನಾಳಿ ತಾಲೂಕಿನ ಆಹಾರ ಇಲಾಖೆಯ ನಿರೀಕ್ಷಕರಾಗಿ ತದನಂತರ ಹರಪನಹಳ್ಳಿ ಸೇರಿದಂತೆ ಬೇರೆ ಕಡೆ ವರ್ಗಾವಣೆಯಾಗಿ ಹೋಗಿದ್ದಾರೆ ಇವರು ಅನ್ನ ಭಾಗ್ಯ ಅಕ್ಕಿ ವಿಚಾರದಲ್ಲಿ ನ್ಯಾಯಬೆಲೆ ಅಂಗಡಿವರಿಂದ ಮಾಮೂಲು ಪಡೆಯುತ್ತಿದ್ದರು ಎಂಬ ಆರೋಪವು ಇವರ ಮೇಲೆ ಇದೆ. ಮತ್ತೆ ಇವರು ಹೊನ್ನಾಳಿ ತಾಲೂಕು ಆಹಾರ ಇಲಾಖೆಗೆ ಶಿರಸ್ತೇದಾರ್ ಆಗಿ ಬಂದಿದ್ದಾರೆ ಈಗಾಗಲೇ ಸರಿ ಸುಮಾರು ಮೂರು ವರ್ಷವನ್ನು ಇದೇ ತಾಲೂಕಿನಲ್ಲಿ ಪೂರೈಸಿದ್ದಾರೆ. ಹಾಗಾದರೆ ಇವರಿಗೆ ಅನ್ನ ಭಾಗ್ಯ ಅಕ್ಕಿಯ ಕರಾಳ ದಂಧೆಯ ಮಾಹಿತಿ ಇರುವುದಿಲ್ಲವೇ? ಎಲ್ಲಾ ಇದೆ ಆದರೂ ಏನು ಗೊತ್ತಿಲ್ಲದಂತೆ ಇದ್ದಾರೆ. ಏಕೆಂದರೆ ಇವರಿಗೆ ಅನ್ನ ಭಾಗ್ಯ ಅಕ್ಕಿ ದಂಧೆ ಕೋರರಿಂದ ಮಾಮೂಲು ಪ್ರತಿ ತಿಂಗಳು ದೊರೆಯುತ್ತಿದೆ? ಇದರ ಜೊತೆ ಲಾಭಾಂಶದಲ್ಲಿ 50 ಪರ್ಸೆಂಟ್ ಕಮಿಷನ್ ದೊರೆಯುತ್ತದೆ.? ಇಷ್ಟೆಲ್ಲಾ ಸೌಲಭ್ಯಗಳು ಸಿಗಬೇಕಾದರೆ ಅದು ಹೇಗೆ ತಾನೇ ಇವರು ತಡೆಯಲು ಮುಂದಾಗುತ್ತಾರೆ. ಇವರಿಂದ ಹೊನ್ನಾಳಿ ತಾಲ್ಲೂಕಿನಲ್ಲಿ ಅನ್ನಭಾಗ್ಯ ಅಕ್ಕಿಯ ಕರಾಳ ಅಧ್ಯಾಯ ಆರಂಭವಾಗಿದೆ. ಬೇಕಾದರೆ ಇತಿಹಾಸದ ಪುಟಗಳನ್ನು ತಿರುಗಿಸಿ ನೋಡಿ, ಇವರ ಸಾಧನೆಯ ಅಧ್ಯಾಯದ ಪುಟಗಳೇ ಕಾಣುತ್ತದೆ.
ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ, ಎಚ್ ಕದಡಕಟ್ಟೆ, ನ್ಯಾಮತಿ ರಸ್ತೆಯ ಅಕ್ಕಪಕ್ಕದ ತೋಟದ ಮಧ್ಯೆ ಗೋಡಾನ್ ಗಳು ಹಾಗೂ ಚೆನ್ನಗಿರಿ ರಸ್ತೆಯ ತೋಟದ ಮಧ್ಯೆ ಇರುವ ಗೋಡೌನ್ಗಳಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಸಂಗ್ರಹಿಸಲಾಗುತ್ತದೆ. ಇಂತಹ ಸ್ಥಳಗಳ ಮೇಲೆ ಆಹಾರ ಇಲಾಖೆಯ ಶಿರಸ್ತೇದಾರ್ ದಿಡೀರ್ ಬೇಟಿ ನೀಡಿ ಪರಿಶೀಲನೆ ಮಾಡಿದ ಉದಾಹರಣೆಗಳು ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ಇಷ್ಟೆಲ್ಲಾ ಅನ್ನ ಭಾಗ್ಯ ಅಕ್ಕಿ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರು ಹೊನ್ನಾಳಿ ತಾಲೂಕು ದಂಡಾಧಿಕಾರಿಗಳಾದ ಕವಿರಾಜ್ ಇವರಿಗೆ ಮಾಹಿತಿ ಇಲ್ಲವೇ? ಹೀಗೊಂದು ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಈ ರೀತಿ ಹಳ್ಳಹಿಡಿಯಲು ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಭ್ರಷ್ಟಾಚಾರವೇ ಕಾರಣ ಎನ್ನಲಾಗಿದೆ.
ಕಚೇರಿಯ ಹಿಂಭಾಗದಲ್ಲೇ ಅನ್ನಭಾಗ್ಯ ಅಕ್ಕಿ ಖರೀದಿ ಜೋರಾಗಿ ನಡೆಯುತ್ತಿದೆ. ಇದು ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲ ಎಂದರೆ ಯಾರು ನಂಬಲು ಸಾಧ್ಯ? ಎಲ್ಲಾ ಗೊತ್ತಿದೆ ನಡೆಯುತ್ತಿದೆ.
ಇಲ್ಲಿ ಸಂಗ್ರಹವಾಗುವ ಅಕ್ಕಿ ಪಕ್ಕದ ರಾಜ್ಯಗಳಾದ ಕೇರಳ ಮತ್ತು ಗುಜರಾತ್ ಸೇರಿದಂತೆ ಇನ್ನೂ ಅನೇಕ ರಾಜ್ಯಗಳಿಗೆ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಇದರ ಜೊತೆಗೆ ಕೆಲವು ರೈಸ್ ಮಿಲ್ಲಿನಲ್ಲಿ ಇದೆ ಅಕ್ಕಿಗೆ ಪಾಲಿಶ್ ಮಾಡಿ ಮತ್ತೆ ಜನರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಷ್ಟೆಲ್ಲಾ ರಾಜಾರೋಷವಾಗಿ ದಂಧೆ ನಡೆಯುತ್ತಿದ್ದರು ಆಹಾರ ಇಲಾಖೆಯ ನಿರೀಕ್ಷಕರು ಮತ್ತು ಶಿರಸ್ತೇದಾರ್ ಇವರು ಮೌನಕ್ಕೆ ಶರಣಾಗಿದ್ದಾರೆ. "ಸರ್ಕಾರದ ಕೆಲಸ ದೇವರ ಕೆಲಸ" ಎಂದು ಮಾಡಬೇಕಾದವರು ಲಂಚದ ಹಣಕ್ಕಾಗಿ ತಮ್ಮ ಕರ್ತವ್ಯವನ್ನೇ ಮರೆತಿದ್ದಾರೆ.
ಈಗಾಗಲೇ ದಾವಣಗೆರೆ ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಮಧುಸೂಧನ್ ಅವರಿಗೆ ನಮ್ಮ ಮಾಧ್ಯಮವು ಮಾಹಿತಿಯನ್ನು ನೀಡಿದೆ. ಹೊನ್ನಾಳಿ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಅಕ್ಕಿ ದಂಧೆಗೆ ಸಂಬಂಧಿಸಿದಂತೆ ಇಂಚಿಂಚು ಮಾಹಿತಿಯನ್ನು ಈಗಾಗಲೇ ನೀಡಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಬರಹದ ರೂಪದಲ್ಲಿ ಅರ್ಜಿಯನ್ನು ನೀಡಲಾಗಿದೆ. ಅದೇ ರೀತಿ ಕೆಲವು ವಿಡಿಯೋ ತುಣುಕುಗಳನ್ನು ಕಳುಹಿಸಲಾಗಿದೆ. ಅವರು ಇದರ ಬಗ್ಗೆ ಪರಿಶೀಲನೆ ಮಾಡಿ ಸಮಗ್ರ ವರದಿಯನ್ನು ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈಗಾಗಲೇ ಭರವಸೆ ನೀಡಿ ಒಂದು ವಾರ ಕಳೆದಿದೆ ಇದುವರೆಗೂ ಕ್ರಮವಿಲ್ಲ.
ಬಡವರ ಅಕ್ಕಿಯ ಮೇಲೆ ಅಧಿಕಾರವನ್ನು ನಡೆಸುತ್ತಿರುವ ಆಹಾರ ಇಲಾಖೆಯ ಹೊನ್ನಾಳಿ ತಾಲೂಕಿನ ಆಹಾರ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇಂತಹ ಅಧಿಕಾರಿಗಳನ್ನು ತಾಲ್ಲೂಕಿನಿಂದ ವರ್ಗಾವಣೆ ಮಾಡಬೇಕು. ಇದು ಆಹಾರ ಇಲಾಖೆಯವರಿಂದ ಸಾಧ್ಯವಾಗದಿದ್ದರೆ ಲೋಕಾಯುಕ್ತ ತನಿಖೆಗೆ ಎಲ್ಲಾ ಸಾಕ್ಷಿಗಳೊಂದಿಗೆ ನಮ್ಮ ಮಾಧ್ಯಮವು ದೂರು ನೀಡುವ ಮೂಲಕ ತನಿಖೆ ಮಾಧ್ಯಮದ ಮೂಲಕ ಒತ್ತಾಯಿಸಲಾಗುವುದು.
ಹೊನ್ನಾಳಿ ತಾಲೂಕಿನಲ್ಲಿ ಬೀಡುಬಿಟ್ಟಿರುವ ಈ ಅನ್ನ ಭಾಗ್ಯ ಅಕ್ಕಿಯ ದಂಧೆಯನ್ನು ಬುಡ ಸಮೇತ ಕಿತ್ತು ಹಾಕಬೇಕಾಗಿದೆ.ಆ ಜವಾಬ್ದಾರಿಯನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹೋರಬೇಕಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ ಇಂತಹ ಚಟುವಟಿಕೆಗಳಿಗೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.
ದಾವಣಗೆರೆ ಜಿಲ್ಲಾಧಿಕಾರಿಗಳು ಕೂಡಲೇ ಆಹಾರ ಇಲಾಖೆಯಲ್ಲಿ ನಡೆಯುತ್ತಿರುವ ಇಂತಹ ದಂಧೆಗಳಿಗೆ ಕೂಡಲೇ ಕಡಿವಾಣ ಹಾಕಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇವರ ಸೇವಾ ಅವಧಿಯನ್ನು ಪರಿಗಣಿಸಿ ಇವರನ್ನು ವರ್ಗಾವಣೆ ಮಾಡಬೇಕು. ಈಗಾಗಲೇ ಸಂಜಯ್ ಬಾಗೇವಾಡಿ ಅವರು ಅತಿ ಹೆಚ್ಚು ವರ್ಷಗಳ ಕಾಲ ಹೊನ್ನಾಳಿ ತಾಲೂಕಿನಲ್ಲೇ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಇವರು ಇಲ್ಲಿ ಇರುವವರೆಗೂ ಈ ದಂಧೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎನ್ನುತ್ತಾರೆ ಸಾರ್ವಜನಿಕರು. ಕೂಡಲೆ ಇವರನ್ನು ವರ್ಗಾವಣೆ ಮಾಡಬೇಕು.. ಈ ವಿಚಾರದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು.
ಬಡವರಿಗಾಗಿ ತಂದ ಯೋಜನೆಗಳು ಸಮರ್ಪಕ ಬಳಕೆಗಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಹಣದ ಆಮಿಷವನ್ನು ನೀಡಿ ಕಡಿಮೆ ಬೆಲೆಗೆ ಪಡಿತರ ಚೀಟಿದಾರರಿಗೆ ದಾರಿ ತಪ್ಪಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇನ್ನು ಹೊನ್ನಾಳಿ ತಾಲ್ಲೂಕಿನ ಕೆಲವು ನ್ಯಾಯಬೆಲೆ ಅಂಗಡಿಯವರು ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಂಧೆ ಕೋರರಿಗೆ ನೀಡುತ್ತಾ ಬಂದಿದ್ದಾರೆ. ಕೂಡಲೇ ಅಂತ ಅಂಗಡಿಯನ್ನು ಪತ್ತೆ ಹಚ್ಚಿ ಅಂಗಡಿಗಳ ಅನುಮತಿಯನ್ನು ಅಮಾನತ್ತು ಮಾಡಬೇಕು. ನ್ಯಾಯಬೆಲೆ ಅಂಗಡಿಗಳ ಸುತ್ತ ಸಿ ಸಿ ಕ್ಯಾಮೆರಾ ಗಳನ್ನು ಅಳವಡಿಸುವಂತೆ ಸೂಚನೆ ನೀಡಬೇಕು. ದಾಸ್ತಾನು ಮಳಿಗೆಯಿಂದ ಯಾವ ಪ್ರಮಾಣದಲ್ಲಿ ಅಕ್ಕಿಯನ್ನು ನ್ಯಾಯ ಬೆಲೆ ಅಂಗಡಿವರು ತೆಗೆದುಕೊಂಡು ಬಂದಿದ್ದಾರೆ ಮತ್ತು ಅಧಿಕಾರಿಗಳು ಎಷ್ಟರಮಟ್ಟಿಗೆ ಪರಿಶೀಲನೆ ನಡೆಸಿದ್ದಾರೆ ಎಂಬ ವರದಿಯನ್ನು ಪಡೆಯಬೇಕು.
ಅಕ್ಕಿ ದಂಧೆಯ ಮೇಲೆ ಅಧಿಕಾರ ನಡೆಸುತ್ತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಿ. ಬಡವರ ಹೊಟ್ಟೆಯನ್ನು ತುಂಬಿಸುವ ಕೆಲಸ ಜಿಲ್ಲಾಧಿಕಾರಿಗಳು ಮಾಡಲಿ.
ಬಡವರಿಗಾಗಿ ರೂಪಿಸಲಾದ ಯೋಜನೆಗಳು ಮಧ್ಯವರ್ತಿಗಳ ಪಾಲಾಗಬಾರದು. ಅರ್ಹ ಫಲಾನುಭವಿಗಳ ಹಕ್ಕನ್ನು ರಕ್ಷಿಸುವುದು ಸರ್ಕಾರ ಮತ್ತು ಆಡಳಿತದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು, ಅಕ್ರಮಗಳಿಗೆ ಕಡಿವಾಣ ಹಾಕುವುದು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
ಹೊನ್ನಾಳಿ ತಾಲೂಕಿನ ಅನ್ನಭಾಗ್ಯ ಅಕ್ಕಿಯ ಕುರಿತು ಕೇಳಿಬರುತ್ತಿರುವ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗಬೇಕಾಗಿದೆ. ಪಾರದರ್ಶಕ ತನಿಖೆ ಮೂಲಕ ಸತ್ಯಾಂಶ ಹೊರಬಂದು, ಸಾರ್ವಜನಿಕರ ವಿಶ್ವಾಸ ಮತ್ತಷ್ಟು ಬಲವಾಗಬೇಕು ಎಂಬುದು ಜನರ ನಿರೀಕ್ಷೆಯಾಗಿದೆ.
ಅನ್ನಭಾಗ್ಯದ ಪ್ರತಿಯೊಂದು ಅಕ್ಕಿಯ ಕಾಳಿನ ಹಿಂದೆ ಬಡ ಕುಟುಂಬದ ಬದುಕಿನ ನಿರೀಕ್ಷೆ ಅಡಗಿದೆ. ಆದ್ದರಿಂದ ಆ ಯೋಜನೆಯ ಉದ್ದೇಶಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ.
ಮಂದಾರ ಜ್ವಾಲೆ ವಾರಪತ್ರಿಕೆಯ ಆಶಯವೂ ಇದೇ — ಜನರ ಹಕ್ಕುಗಳ ರಕ್ಷಣೆ, ಉತ್ತಮ ಆಡಳಿತಕ್ಕಾಗಿ ಪ್ರಶ್ನೆ ಮತ್ತು ಸತ್ಯದ ಪರವಾದ ಧ್ವನಿ.
0 Comments