ಹರಿಹರ: ಗಣಪತಿ ವಿಸರ್ಜನೆಯ ದಿನಾಂಕಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ದಿನಗಳಿಂದ ಹರಿಹರದಲ್ಲಿ ಉಂಟಾಗಿದ್ದ ಗೊಂದಲಕ್ಕೆ ಇದೀಗ ತೆರೆ ಬಿದ್ದಿದೆ.
ಹರಿಹರದ ಶಾಸಕರ ನೇತೃತ್ವದಲ್ಲಿ ಅವರ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಹಿಂದೂ ಮಹಾ ಗಣಪತಿ ಹಾಗೂ ಸಾರ್ವಜನಿಕ ವಿನಾಯಕ ಸಂಘದ ಗಣಪತಿ ಉತ್ಸವ ಸಮಿತಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಒಂದೇ ವೇದಿಕೆಯಲ್ಲಿ ಸಭೆ ಸೇರಿ ವಿಸರ್ಜನೆಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿದರು.
ಸಭೆಯ ಬಳಿಕ ಅಕ್ಟೋಬರ್ 4, 2026ರ ಭಾನುವಾರದಂದು ಎರಡೂ ಗಣಪತಿಗಳ ವಿಸರ್ಜನೆ ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
ಆದರೆ, ವಿಸರ್ಜನೆಯ ಸಮಯವನ್ನು ಪ್ರತ್ಯೇಕವಾಗಿ ನಿಗದಿಪಡಿಸಿಕೊಳ್ಳಲು ಎರಡೂ ಸಂಘಟನೆಗಳು ಒಪ್ಪಿಕೊಂಡಿವೆ.
ನಾಲ್ಕು ದಿನಗಳ ಗೊಂದಲಕ್ಕೆ ಅಂತ್ಯ!
ವಿಸರ್ಜನೆಯ ದಿನಾಂಕದ ವಿಚಾರವಾಗಿ ಕಳೆದ ನಾಲ್ಕು ದಿನಗಳಿಂದ ಸಾರ್ವಜನಿಕ ವಲಯದಲ್ಲಿ ಮೂಡಿದ್ದ ಹಲವು ಗೊಂದಲಗಳಿಗೆ ಇದೀಗ ಪರಿಹಾರ ದೊರೆತಿದೆ. ಒಂದೇ ದಿನ, ಒಂದೇ ದಿನಾಂಕದಲ್ಲಿ ಗಣಪತಿ ವಿಸರ್ಜನೆ ನಡೆಯಲಿದ್ದು, ಸಮಯದಲ್ಲಿ ಮಾತ್ರ ಬದಲಾವಣೆ ಮಾಡಿಕೊಳ್ಳುವ ಮೂಲಕ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶವಾಗದಂತೆ ಎರಡೂ ಸಂಘಟನೆಗಳು ನಿರ್ಧರಿಸಿವೆ.
ಸಭೆಯ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗಣಪತಿ ವಿಸರ್ಜನೆಗೆ ಸಂಬಂಧಿಸಿದಂತೆ ಸಂಘಟನೆಗಳು ಲಿಖಿತ ಮನವಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಹರಿಹರದ ಇತಿಹಾಸದಲ್ಲಿ ಇದೇ ಮೊದಲು!
ಹಿಂದೂ ಮಹಾ ಗಣಪತಿ ಹಾಗೂ ಸಾರ್ವಜನಿಕ ವಿನಾಯಕ ಸಂಘದ ಗಣಪತಿಯ ವಿಸರ್ಜನೆ ಒಂದೇ ದಿನ ನಡೆಯುತ್ತಿರುವುದು ಹರಿಹರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬುದು ವಿಶೇಷ.
ವಿಸರ್ಜನಾ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಕಲಾತಂಡಗಳು ಭಾಗವಹಿಸುವ ಸಾಧ್ಯತೆಯಿದ್ದು, ಭಕ್ತಾದಿಗಳಿಗಾಗಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಎಲ್ಲ ಭಕ್ತರು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಶಾಂತಿ, ಸೌಹಾರ್ದತೆ ಹಾಗೂ ಭಕ್ತಿಭಾವದಿಂದ ಹಬ್ಬವನ್ನು ಆಚರಿಸುವಂತೆ ಶಾಸಕರು ಮನವಿ ಮಾಡಿದ್ದಾರೆ.
ಇಂದು ಬೆಳಗ್ಗೆ 11ಕ್ಕೆ ಜಂಟಿ ಪತ್ರಿಕಾಗೋಷ್ಠಿ
ಇನ್ನು ಎರಡೂ ಸಂಘಟನೆಗಳ ವತಿಯಿಂದ ಇಂದು ಬೆಳಗ್ಗೆ 11 ಗಂಟೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಯಲಿದ್ದು, ವಿಸರ್ಜನೆಯ ಸಮಯ, ಮೆರವಣಿಗೆಯ ರೂಪುರೇಷೆ, ಭದ್ರತಾ ವ್ಯವಸ್ಥೆ ಹಾಗೂ ಇತರ ಪ್ರಮುಖ ವಿಚಾರಗಳ ಕುರಿತು ಅಧಿಕೃತ ಮಾಹಿತಿ ನೀಡುವ ನಿರೀಕ್ಷೆಯಿದೆ.
ವಿಸರ್ಜನಾ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳ ಕಲಾತಂಡಗಳು ಭಾಗವಹಿಸಲಿದ್ದು, ಡಿಜೆ ಬಳಕೆಯ ಕುರಿತಾಗಿಯೂ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಈ ಕುರಿತು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ.
ಒಟ್ಟಾರೆ…
ಗೊಂದಲಕ್ಕೆ ತೆರೆ — ಒಗ್ಗಟ್ಟಿಗೆ ಮುನ್ನುಡಿ!
ಒಂದೇ ದಿನ…
ಒಂದೇ ದಿನಾಂಕ…
ಸಮಯ ಮಾತ್ರ ಬೇರೆ…
ಹರಿಹರದಲ್ಲಿ ಶಾಂತಿ, ಸೌಹಾರ್ದತೆಯೊಂದಿಗೆ ಗಣಪತಿ ವಿಸರ್ಜನೆಗೆ ಸಜ್ಜು!
ಮಂದಾರ ಜ್ವಾಲೆ | ಮಂದಾರ ವೆಬ್ ಪೋರ್ಟಲ್
0 Comments