ಮಾನ್ಯರೇ,
ಮಲೆನಾಡಿನ ವಿದ್ಯಾಕಾಂಕ್ಷಿಗಳ ಹಸಿವನ್ನು ತಣಿಸಲು, ಸುತ್ತಮುತ್ತಲಿನ ದೂರದೃಷ್ಟಿ ಹೊಂದಿದ್ದ ಹಿರಿಯರು, ದಾನಿಗಳ ಸಹಕಾರದಿಂದ ಕಳೆದ 50 ವರ್ಷಗಳ ಹಿಂದೆ ಅತ್ಯಂತ ದುಸ್ತರ ಪರಿಸ್ಥಿತಿಯಲ್ಲಿಯೂ ಪರಿಶ್ರಮ, ಶ್ರದ್ಧೆಯಿಂದ ಹುಟ್ಟುಹಾಕಿದ ಎಂ.ಡಿ.ಎಫ್ (L.B ಕಾಲೇಜು) ವಿದ್ಯಾಸಂಸ್ಥೆ ನಮ್ಮಂತಹ ಲಕ್ಷಾಂತರ ಜನರ ಬದುಕನ್ನು ಕಟ್ಟಿಕೊಟ್ಟಿರುವುದನ್ನು ನಾವು ನೆನೆಸಿಕೊಳ್ಳಲೇಬೇಕು.
ಆರಂಭದ ದಿನಗಳಲ್ಲಿ ಕೇವಲ ಲಾಲ್ ಬಹದ್ದೂರ್ ಕಾಲೇಜನ್ನು ಮಾತ್ರ ಹೊಂದಿದ್ದು ನಂತರದ ದಿನಗಳಲ್ಲಿ ಪ್ರಗತಿ ಶಾಲೆ, ತಾಳಗುಪ್ಪ ನಾಲಂದ ಪ್ರೌಢಶಾಲೆ, ಎಂ.ಡಿ.ಎಫ್ (L.B ಕಾಲೇಜು) ಪಿ.ಯು ಕಾಲೇಜು, ಬಿಇಡಿ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕಾಲೇಜು ಹೀಗೆ ತನ್ನ ಹರವನ್ನು ವಿಸ್ತರಿಸಿಕೊಳ್ಳುತ್ತಾ ಸಾಗರ ತಾಲ್ಲೂಕಿನ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಾ ಬಂದಿರುತ್ತದೆ. ಈ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಎಲ್ಲ ಸ್ತರದ ಹುದ್ದೆಗಳಲ್ಲಿ ಯಶಸ್ಸನ್ನು ಸಾಧಿಸಿದ್ದನ್ನೂ ಕಂಡಿದ್ದೇವೆ.
ಕಳೆದ ಐದು ವರ್ಷಗಳಿಂದ ಸಂಸ್ಥೆಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ತುಂಬಾ ಬೇಸರವಾಗುತ್ತಿದೆ. ಕೆಲವು ಅಂಗಸಂಸ್ಥೆಗಳ ಪರಿಸ್ಥಿತಿಯಂತೂ ತುಂಬಾ ಶೋಚನೀಯವಾಗಿರುವುದನ್ನು ಮನಗಂಡು ಸಮಾನ ಮನಸ್ಕರಾದ ನಾವುಗಳು ಸೇರಿ ಆಗಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳು ಸೇರಿ ಆಡಳಿತಯಂತ್ರವನ್ನು ಅಸ್ತವ್ಯಸ್ತ ಗೊಳಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.
ಚುನಾವಣೆಯ ಬಗ್ಗೆ ಮುಂದಾಲೋಚನೆ ಹೊಂದಿ ಅವರ ಕುಟುಂಬದ ಸದಸ್ಯರನ್ನು ಸದಸ್ಯರನ್ನಾಗಿ ಮಾಡಿಕೊಂಡು ಸಂಸ್ಥೆಯ ಅಧಿಕಾರವನ್ನು ಅಕ್ರಮವಾಗಿ ಪಡೆಯಲು ಹುನ್ನಾರ ನಡೆಸಿರುತ್ತಾರೆ. ಲೆಕ್ಕ ಪತ್ರ ತಪಾಸಣಾ ವರದಿಯಲ್ಲಿ ೭೫ಕ್ಕೂ ಮಿಕ್ಕು ಲೋಪಗಳನ್ನು ಪರಿಶೋಧಕರು ಎತ್ತಿ ತೋರಿಸಿರುತ್ತಾರೆ. ಉಪನ್ಯಾಸಕರ ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲಿಯೂ ಸಹ ಅನೇಕ ಲೋಪದೋಷಗಳು ಮತ್ತು ಹಣದ ವ್ಯವಹಾರ ನಡೆದಿರುವ ಸಂಶಯಗಳು ಉದ್ಭವವಾಗಿರುತ್ತದೆ.
ನಾವುಗಳು ಆಗಿನ ಅಧ್ಯಕ್ಷರನ್ನು ಭೇಟಿ ಮಾಡಿ ಈ ಬಾರಿ ಆಡಳಿತಮಂಡಳಿಗೆ ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಕೇಳಿದಾಗ ಅನೇಕ ಲೋಪದೋಷಗಳ ಬಗ್ಗೆ ಮಾಹಿತಿ ನೀಡುತ್ತ ಆಗಿನ ಉಪಾಧ್ಯಕ್ಷರು ಸಂಸ್ಥೆಯ ದಾನಿಗಳನ್ನು ಕಡೆಗಣಿಸಿ, ಭೂ ವ್ಯವಹಾರ ನಡೆಸುವ, ಉಪನ್ಯಾಸಕರ ನೇಮಕಾತಿಯಲ್ಲಿ ಭ್ರಷ್ಟಾಚಾರ, ದಾಖಲಾತಿಗಳಿಗೆ ಬೀಗ ಜಡಿದು ಅಧ್ಯಕ್ಷರಿಗೂ ಮಾಹಿತಿ ದೊರಕದಂತೆ ಮಾಡಿ ಸಂಸ್ಥೆಯ ಆಶೋತ್ತರಗಳನ್ನು ಗಾಳಿಗೆ ತೂರುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಉಪಾಧ್ಯಕ್ಷರನ್ನು ಭೇಟಿ ಮಾಡಿ ಈ ಬಗ್ಗೆ ಪ್ರಸ್ತಾಪಿಸಲಾಗಿ, ಅಧ್ಯಕ್ಷರ ವರ್ತನೆ ವ್ಯವಹಾರಗಳು ಸರಿಯಿಲ್ಲ. ಉಳಿದ ಎಲ್ಲ ವ್ಯವಹಾರಗಳು ಸರಿಯಾಗಿರುತ್ತದೆ ಎಂಬುದಾಗಿ ದೂರಿಕೊಂಡರು.
ಇವೆಲ್ಲವುಗಳನ್ನು ಪರಾಂಬರಿಸಿದ ನಾವುಗಳು ಈ ಇಬ್ಬರ ಒಳಜಗಳದಿಂದಾಗಿ ಎಂ.ಡಿ.ಎಫ್ (L.B ಕಾಲೇಜು) ಸೊರಗಬಾರದು ಮತ್ತು ದಾನಿಗಳು ಮತ್ತು ಸಂಸ್ಥೆಯ ಆಶೋತ್ತರಗಳಿಗೆ ಕುಂದುಂಟಾಗುತ್ತಿರುವುದನ್ನು ಮನಗಂಡು, ಮಾನ್ಯ ಲೋಕಸಭಾ ಸದಸ್ಯರು ಮತ್ತು ಮಾನ್ಯ ಶಾಸಕರನ್ನು ಭೇಟಿ ಮಾಡಿ ಸಂಸ್ಥೆಯ ಏಳಿಗೆಗಾಗಿ ಈ ಇಬ್ಬರನ್ನು ಬಿಟ್ಟು ಹೊಸಬರನ್ನು ಆಯ್ಕೆ ಮಾಡಿಕೊಳ್ಳಲು ಅವರುಗಳ ಸಹಕಾರವನ್ನು ನೀಡಬೇಕೆಂದು ಕೋರಲಾಗಿತ್ತು.
ಈ ಮಹಾಸಭೆಯಲ್ಲಿ ನಾವೆಲ್ಲರೂ ಒಟ್ಟಾಗಿ ಭಾಗವಹಿಸಿ ಸಂಸ್ಥೆಯ ಪುನಶ್ಚೇತನಕ್ಕಾಗಿ ಇಬ್ಬರನ್ನೂ ಬಿಟ್ಟು ಇನ್ನೊಬ್ಬ ಹಿರಿಯ ಸಹಕಾರಿ ಧುರೀಣ, ಎಂ.ಡಿ.ಎಫ್ ನ (L.B ಕಾಲೇಜು) ಹಿತೈಷಿಗಳೂ, ಮಾಜಿ ಉಪಾಧ್ಯಕ್ಷರೂ ಆಗಿರುವ ಶ್ರೀ ಹರನಾಥರಾವ್ ಮತ್ತೀಕೊಪ್ಪ ಇವರನ್ನು ಆಯ್ಕೆ ಮಾಡುವಂತೆ ನಾವುಗಳು ಒಕ್ಕೊರಲಿನಿಂದ ಸೂಚನೆಯನ್ನು ನೀಡಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದರಲ್ಲಿ ಮಾನ್ಯ ಶಾಸಕರಾದ ಹಾಲಪ್ಪನವರ ಹಸ್ತಕ್ಷೇಪವಾಗಲೀ ಯಾವುದೇ ಹುನ್ನಾರವಾಗಲೀ ಇರುವುದಿಲ್ಲ.
ಅಂದಿನ ಮಹಾಸಭೆಯಲ್ಲಿ ನಡೆದ ಅಹಿತಕರ ಘಟನೆಗೆ ಹಿಂದಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ನಡುವಿನ ವೈಮನಸ್ಸೇ ಕಾರಣ. ಈ ಹಿಂದೆ ಉಪಾಧ್ಯಕ್ಷರು ಈಗಿರುವ ಅಧ್ಯಕ್ಷರನ್ನು ಎಳೆದುಹಾಕಿ ನಾನೇ ಮುಂದಿನ ಅಧ್ಯಕ್ಷನಾಗುವುದಾಗಿ ಹೇಳಿಕೊಂಡಿರುವುದೂ ಸಹ ಸಾಕಷ್ಟು ಸದಸ್ಯರ ಗಮನಕ್ಕೆ ಬಂದಿರುತ್ತದೆ.
ಎಂ.ಡಿ.ಎಫ್ (L.B ಕಾಲೇಜು) ಗೌರವ ರಕ್ಷಣೆ ಹಾಗೂ ಅಭಿವೃದ್ಧಿ, ವಿದ್ಯಾರ್ಥಿಗಳ ಏಳಿಗೆ, ದಾನಿಗಳು, ಮತ್ತು ಸಂಸ್ಥೆಯ ಸಂಸ್ಥಾಪಕರ, ಸದಸ್ಯರುಗಳ, ಮತ್ತು ಹಿಂದಿನ ಅಭಿಮಾನೀ ವಿದ್ಯಾರ್ಥಿಗಳ ಆಶೋತ್ತರಗಳಿಗೆ ಧಕ್ಕೆ ಬಾರದಂತೆ ಸಂಸ್ಥೆಯು ಮುನ್ನಡೆಸುವ ಉದ್ದೇಶದಿಂದ ಮಾತ್ರ ಕೈಗೊಂಡ ಈ ನಮ್ಮ ಆಯ್ಕೆಗೆ ಮಹಾ ಜನತೆಯ ಬೆಂಬಲದ ಅಗತ್ಯವೂ ಇದೆ. ಇದಕ್ಕೆ ತಾವೆಲ್ಲರೂ ಕೈಜೋಡಿಸಬೇಕಾಗಿ ಈ ಮೂಲಕ ವಿನಂತಿಸುತ್ತೇವೆ.
ವಂದನೆಗಳೊಂದಿಗೆ.
-: ತಮ್ಮ ವಿಶ್ವಾಸಿಗಳು :-
ಬಿ.ಆರ್. ಜಯಂತ್, ರವಿ ಗೌಡ್ರು ಹುಣಾಲುಮಡಿಕೆ, ಎಸ್.ಬಿ. ಮಹದೇವ್ ಸಾಗರ, ಕವಲಕೋಡು ಕೆ. ವೆಂಕಟೇಶ, ಸತ್ಯನಾರಾಯಣ ಎಂ.ಆರ್. ಮಂಚಾಲೆ, ವೆಂಕಟಗಿರಿ ಮತ್ತಿಕೊಪ್ಪ, ಟಿ.ಎಸ್. ಅರುಣ ಕುಂಟಗೋಡು, ಕೆ.ಎನ್.ವಿ. ಗಿರಿ ಬೇದೂರು, ಕೆ.ಎಂ. ಸೂರ್ಯನಾರಾಯಣ ಖಂಡಿಕ, ಅಶ್ವಿನಿ ಕುಮಾರ್, ಶರಾವತಿ ಸಿ. ರಾವ್, ಕಾಂತ್ರಿ ರಾಜೇಶ ಕೇಡಲಸರ, ಪ್ರಭಾಕರ ಮುಂಗರವಳ್ಳಿ ಮತ್ತು ಸಂಸ್ಥೆಯ ಹಿತೈಷಿಗಳು.
0 Comments