ಶಿವಮೊಗ್ಗ, ಫೆಬ್ರವರಿ 24: ಶಿವಮೊಗ್ಗದ (Shivamogga) ಹೊರವಲಯದ ಸೂಳೆಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ (SSLC Exam) ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಇದೇ ಸೂಳೆಬೈಲು ಬಡಾವಣೆಯ ಸಂಕೇತ್ ವಿಶೇಷ ತರಗತಿಯನ್ನು ಮುಗಿಸಿಕೊಂಡು ವಾಪಸ್ಸು ಮನೆಯ ಕಡೆ ಹೋಗುವಾಗ ಸ್ನೇಹಿತ ಗಿರೀಶ್ ಮೇಲೆ ಅದೇ ಬಡಾವಣೆಯ ಐವರು ಬಾಲಕರು ಏಕಾಏಕಿ ಹಲ್ಲೆ ಮಾಡುತ್ತಿದ್ದರು. ಈ ನಡುವೆ ಸ್ನೇಹಿತ ಗಿರೀಶ್ನನ್ನು ಬಚಾವ್ ಮಾಡಲು ಅಲ್ಲಿಗೆ ಸಂಕೇತ್ ಹೋಗಿದ್ದಾನೆ. ಆ ಐವರು ಬಾಲಕರು ಸಂಕೇತ್ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಸಂಕೇತ್ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಗಿರೀಶ್ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಮನೆಯವರಿಗೆ ಮತ್ತು ಅಕ್ಕ-ಪಕ್ಕದವರಿಗೆ ಗಲಾಟೆ ಬಗ್ಗೆ ಮಾಹಿತಿ ಕೊಟ್ಟಿದ್ದಾನೆ. ಇದರಿಂದ ಅಕ್ಕ-ಪಕ್ಕದವರು ಅಲ್ಲಿಗೆ ಹೋಗಿ ನೋಡಿದಾಗ ಹಲ್ಲೆಗೊಳಗಾದ ಸಂಕೇತ್ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಕೆರೆದುಕೊಂಡು ಹೋಗುವ ಮಾರ್ಗ ಮಧ್ಯೆಯೇ ಆತನ ಪ್ರಾಣಪಕ್ಷಿ ಹಾರಿ ಹೋಗಿದೆ
ಘಟನೆ ವಿಷಯ ತಿಳಿಯುತ್ತಿದ್ದಂತೆಯೇ ಇರುವ ಒಬ್ಬ ಮಗನನ್ನು ಕಳೆದುಕೊಂಡ ಹೆತ್ತವರು ಆಘಾತಕ್ಕೊಳಗಾಗಿದ್ದಾರೆ. ಮಗನ ಸಾವಿನ ಸುದ್ದಿಯಿಂದ ಇಡೀ ಕುಟುಂಬಸ್ಥರು ದೊಡ್ಡ ಆಘಾತಗೊಳಗಾಗಿದ್ದಾರೆ. ಅವರ ಅಕ್ರಂದನ ಮುಗಿಲು ಮುಟ್ಟಿದೆ.
ಸೋಮವಾರ ಸಂಜೆ ಸೂಳೆಬೈಲಿನಲ್ಲಿ ನಡೆದಿದ್ದೇನು?
ಸೂಳೆಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಮಕ್ಕಳಿಗೆ ಪರೀಕ್ಷೆ ಹಿನ್ನಲೆಯಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿತ್ತು. ವಿಶೇಷ ತರಗತಿ ಮುಗಿಸಿಕೊಂಡು ಹೋಗುವಾಗ ಅದೇ ಬಡಾವಣೆಯ ಮೂವರು ಬಾಲಕರು ಕಿರಿಕ್ ಮಾಡಿದ್ದಾರೆ. ಈ ನಡುವೆ ಬಾಲಕರ ನಡುವೆ ಗಲಾಟೆಯಾಗಿದೆ. ಅನ್ಯಕೋಮಿನ ಬಾಲಕರು ಮೊದಲು ಗಿರೀಶ್ ಹಾಗೂ ನಂತರ ಸಂಕೇತ್ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಸಂಕೇತ್ ಕುಸಿದು ಬೀಳುತ್ತಿದ್ದಂತೆಯೇ ಮೂವರು ಬಾಲಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ತುಂಗಾ ನಗರ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಹಲ್ಲೆ ಮಾಡಿ ಕೊಲೆಗೆ ಕಾರಣವಾದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಕುರಿತು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ತಂಡವನ್ನು ರಚನೆ ಮಾಡಿ. ತನಿಖೆಯು ಚುರುಕುಗಳಿಸಿದ್ದಾರೆ.
ಕೋಮು ಗಲಭೆ ಸಂಭವಿಸದಂತೆ ಪೊಲೀಸ್ ಕಟ್ಟೆಚ್ಚರ:
ಬಾಲಕನ ಕೊಲೆಯ ನಂತರ, ನಗರದಲ್ಲಿ ಕೋಮು ಗಲಭೆ ಆಗದಂತೆ ಜಿಲ್ಲಾ ಪೊಲೀಸರು ಎಲ್ಲ ರೀತಿಯ ಮುಂಜಾಗ್ರತೆ ವಹಿಸಿದ್ದಾರೆ. ಘಟನಾ ಸ್ಥಳ, ಮೆಗ್ಗಾನ್ ಜಿಲ್ಲಾಸ್ಪತ್ರೆ ಸೇರಿದಂತೆ ನಗರದಲ್ಲಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈಗಾಗಲೇ ಶಿವಮೊಗ್ಗದ ಮಾರಿಕಾಂಬ ದೇವಿ ಜಾತ್ರೆ ಆರಂಭವಾಗಿದೆ. ಪೊಲೀಸರಿಗೆ ಈಗ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ದೊಡ್ಡ ಸವಾಲಾಗಿದೆ.
ಗಿರೀಶ್ ಮತ್ತು ಸಂಕೇತ್ ಉತ್ತಮ ಸ್ನೇಹಿತರಾಗಿದ್ದರು. ಸ್ನೇಹಿತನ ಮೇಲೆ ನಡೆಯುತ್ತಿರುವ ಗಲಾಟೆಯನ್ನು ಬಿಡಿಸಲು ಹೋಗಿ ಸಂಕೇತ ಪ್ರಾಣ ಕಳೆದುಕೊಂಡಿದ್ದಾನೆ. ಸ್ನೇಹಿತ ಗಿರೀಶನಿಗಾಗಿ ತಾನು ಕೊಲೆಯಾಗಬೇಕಾಗಿ ಬಂದಿತು.
ಈ ಹಿನ್ನಲೆಯಲ್ಲಿ ಗಿರೀಶ್ ಮೇಲೆ ಅನ್ಯಕೋಮಿನ ಬಾಲಕರು ಹಲ್ಲೆ ಮಾಡುವ ಸಂದರ್ಭದಲ್ಲಿ ಸ್ನೇಹಿತನ ಬಚಾವ್ ಮಾಡಲು ಸಂಕೇತ್ ಎಂಟ್ರಿಕೊಟ್ಟಿದ್ದ. ಗಿರೀಶ್ನನ್ನು ಬಚಾವ್ ಮಾಡುವ ಸಂದರ್ಭದಲ್ಲಿ ಬಾಲಕರು ಗಿರೀಶ್ನನ್ನು ಬಿಟ್ಟು ಸಂಕೇತ್ ಮೇಲೆ ಹಲ್ಲೆ ಮಾಡಿದ್ದಾರೆ. ಎದೆ, ಮುಖ, ಹೊಟ್ಟೆ ಮೇಲೆ ಹೊಡೆದಿದ್ದಾರೆ. ಇದರಿಂದ ಸಂಕೇತ್ ಅಸ್ವಸ್ಥಗೊಂಡು ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ದಾಖಲಿಸುವ ಮೊದಲೇ ಅಸುನೀಗಿದ್ದಾನೆ.
ಆಸ್ಪತ್ರೆಗೆ ಶಾಸಕ ಚನ್ನಬಸಪ್ಪ ಭೇಟಿ:
ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಗಿರೀಶ್ನ ಆರೋಗ್ಯ ವಿಚಾರಿಸಿ, ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ. ಏತನ್ಮಧ್ಯೆ, ಸಂಕೇತ್ ಸಾವಿನ ಕುರಿತು ಶಾಸಕರು ಸರಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸ್ ಇಲಾಖೆ ಅಂದರೆ "ಹಿಂದೂಗಳ ಹೆಣಹೊರುವ" ಇಲಾಖೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಹಿಂದೂಗಳ ಜೀವ ಹೋಗಿದೆ. ಇದಕ್ಕೆ ಹೊಣೆ ಯಾರು? ಎಂದು ಪ್ರಶ್ನೆ ಮಾಡಿದ್ಧಾರೆ.
ಮಕ್ಕಳಿಗೆ ನಾವು ಉತ್ತಮ ಶಿಕ್ಷಣ ನೀಡಿದರು ಇಂತಹ ಘಟನೆಗಳು ಸಂಭವಿಸುತ್ತಿವೆ. ಇತ್ತೀಚಿನ ದಿನದಲ್ಲಿ ಟಿವಿ ಹಾಗೂ ಸಿನಿಮಾಗಳಲ್ಲಿ ಬರುವ ಕೆಲವು ದೃಶ್ಯಗಳನ್ನು ಮಕ್ಕಳು ಅನುಕರಣೆ ಮಾಡಿ ಇಂತಹ ಕೃತ್ಯಕ್ಕೆ ಇಳಿಯುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆಯು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ. ಹೆತ್ತವರು ಇದರ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಬದುಕಿ ಬಾಳಬೇಕಾದ ಮಕ್ಕಳು ಈ ರೀತಿ ಕೊಲೆಯಾಗುತ್ತಿದ್ದಾರೆ ಎಂದರೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದರ್ಥವಲ್ಲವೇ? ರಾಜಕೀಯ ಪಕ್ಷಗಳು ಇಂತಹ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಒಂದು ನಿರ್ಧಾರಕ್ಕೆ ಬರಬೇಕಾಗಿದೆ. ಹೆತ್ತವರು ಮಕ್ಕಳ ಚಲನ - ವಲನಗಳ ಮೇಲೆ ಒಂದು ನಿಗಾ ಇಡುವುದು ಒಳ್ಳೆಯದು.
ಒಬ್ಬರು ಮಕ್ಕಳನ್ನು ಹೊಂದಿರುವ ಕುಟುಂಬದವರು ಇಂತಹ ಘಟನೆಗಳಿಂದ ತೀವ್ರ ಆಘಾತಕ್ಕೆ ಒಳಗಾಗುತ್ತಾರೆ. ತಮ್ಮ ಕಣ್ಮುಂದೆ ತಾವು ಹೆತ್ತು, ಹೊತ್ತು, ಬೆಳೆಸಿದ ಮಗ ಸಾವನ್ನಪ್ಪಿರುವ ದೃಶ್ಯವನ್ನು ಕಂಡರೆ ಕುಟುಂಬದವರಿಗೆ ಹೇಗಾಗಬಾರದು. ಪೋಲಿಸ್ ಇಲಾಖೆ ಇಂತಹ ವಿಚಾರದಲ್ಲಿ ರಾಜಕೀಯ ಒತ್ತಡಕ್ಕೆ ಒಳಗಾಗದೆ, ಮಾನವೀಯ ದೃಷ್ಟಿಯಿಂದ ಘಟನೆಯನ್ನು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ದಿಟ್ಟವಾದ ಹೆಜ್ಜೆ ಇಡಬೇಕಾಗಿದೆ.
0 Comments