ಹರಿಹರ:ನ್ಯಾ. ಹೆಚ್ ಎನ್ ನಾಗಮೋಹನದಾಸ್ ಆಯೋಗದ ವರದಿಯಂತೆ ಒಳ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ದಾವಣಗೆರೆಯ ಹರಿಹರ ನಗರದಲ್ಲಿ ಇಂದು (ಮಾ.27) ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ಹಾಗೂ ಮಾನವ ಸರಪಳಿ ರಚಿಸಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಜಿ ಸಂತೋಷ್ ಕುಮಾರ್‌ಗೆ ಮನವಿ ನೀಡಿದರು.
ಕದಸಂಸ ತಾಲೂಕು ಸಂಚಾಲಕ ಪಿ ಜೆ ಮಹಾಂತೇಶ್ ಮಾತನಾಡಿ, “ಸಂವಿಧಾನದ ಆಶಯಕ್ಕೆ ಪೂರಕವಾಗಿರುವ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲು ಜಾರಿಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಒಳಮೀಸಲಾತಿ ಕಲ್ಪಿಸಲು ಸುಪ್ರೀಂ ಕೋರ್ಟ್ನ 7 ನ್ಯಾಯಾಧೀಶರ ಪೀಠ ಆದೇಶ ನೀಡಿ 2 ವರ್ಷ ಕಳೆದಿದೆ. ಆಯೋಗದ ವರದಿಯನ್ನು ಸಚಿವ ಸಂಪುಟ ಅನುಮೋದಿಸಿದೆ. ರಾಜ್ಯಪಾಲರ ಅಂಕಿತವೂ ಸಿಕ್ಕಿದೆ. ಆದರೂ, ಒಳಮೀಸಲಾತಿ ಕಲ್ಪಿಸದೆ ಉದ್ಯೋಗ ನೇಮಕಾತಿಯ ಸುತ್ತೋಲೆ ಹೊರಡಿಸಿರುವುದು ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ಎಸಗಿದ ಘೋರ ದ್ರೋಹವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕದಸಂಸ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ ಮಾತನಾಡಿ, “ಒಳ ಮೀಸಲಾತಿ ಜಾರಿಗೊಳಿಸುವ ಕುರಿತು ಚರ್ಚಿಸಿ ಕ್ರಮಕೈಗೊಳ್ಳಲು ಮಾ.27 ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯ ಸಚಿವ ಸಂಪುಟದ ಸಭೆಯನ್ನು ಉಪ ಚುನಾವಣೆಯ ಕುಂಟು ನೆಪ ಹೇಳಿ ಮುಂದೂಡಿರುವುದನ್ನೂ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ತಕ್ಷಣವೆ ಸದರಿ ನೇಮಕಾತಿ ಆದೇಶವನ್ನು ರದ್ದುಪಡಿಸಿ, ಒಳಮೀಸಲಾತಿ ಸಂಪೂರ್ಣವಾಗಿ ಜಾರಿ ಮಾಡಿದ ನಂತರವೇ ಸರ್ಕಾರಿ ಹುದ್ದೆಗಳ ನೇಮಕಾತಿ ಆದೇಶ ಜಾರಿ ಮಾಡಬೇಕು. ಅತಿ ಹಿಂದುಳಿದವರಲ್ಲೆ ಅತಿ ಹಿಂದುಳಿದವರ ಹಿತವನ್ನು ಕಾಯುವ ಮಹತ್ವದ ಕಾಯಕವನ್ನು ಮಾಡಬೇಕೆಂದು ಈ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತೇವೆ” ಎಂದರು.
“ಫೆ.26 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಳೆ ಮೀಸಲಾತಿ ಪ್ರಕಾರವೆ ಎಡಗೈ ಮಾದಿಗ ಸಮುದಾಯಕ್ಕೆ ಮರಣ ಶಾಸನ ಎನಿಸಿದ 56,432 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಹೊರಟಿರುವುದು ಅತ್ಯಂತ ಖಂಡನೀಯ. ರಾಜ್ಯದ ಬಹುಸಂಖ್ಯಾತ ಸಮಾಜವಾಗಿರುವ ಎಡಗೈ ಮಾದಿಗ ಸಮಾಜಕ್ಕೆ ಆಡಳಿತ ಸರ್ಕಾರವು ಬಗೆದ ಮಹಾ ದ್ರೋಹವಾಗಲಿದೆ. ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮೂಲೆಗುಂಪು ಮಾಡುವುದು ನಿಶ್ಚಿತ. ಒಳಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ಕೈಗೊಂಡಿದ್ದ ಕೋಡಿಹಳ್ಳಿ ಆದಿಜಾಂಬವ ಗುರುಪೀಠದ ಷಡಕ್ಷರಮುನಿ ದೇಶೀಕೇಂದ್ರ ಸ್ವಾಮೀಜಿಯವರು ಹಾಗೂ ಪಾದಯಾತ್ರಿಗಳನ್ನು ಬಂಧಿಸಿರುವ ಸರ್ಕಾರದ ಕ್ರಮ ಅಕ್ಷಮ್ಯ” ಎಂದರು.
ಗಾಂಧಿ ಸರ್ಕಲ್ ನಲ್ಲಿ ಪ್ರತಿಭಟನಾಕಾರರು ಕೆಲ ಸಮಯ ಮಾನವ ಸರಪಳಿ ರಚಿಸಿದರು. ಈ ಸಂದರ್ಭದಲ್ಲಿ ಕೊಕ್ಕನೂರು ಗ್ರಾಮದ ಎಂ.ಎಸ್.ಮಂಜುನಾಥ್, ಆಂಜಿನಪ್ಪ, ಗ್ರಾಪಂ ಸದಸ್ಯ ಹನುಮಂತಪ್ಪ, ಹಿಂಡಸಘಟ್ಟದ ಡಿ.ಎಸ್.ರಮೇಶ್, ಮರಿಯಾ, ಅರುಣ್, ಧನುಷ್, ಗುಳದಹಳ್ಳಿಯ ಮಂಜಪ್ಪ, ಹನುಮಂತ, ಕೆಂಚನಹಳ್ಳಿಯ ಸುರೇಶ್ ಡಿ., ಆನಂದಪ್ಪ, ಚಂದ್ರಪ್ಪ, ನಿಂಗಪ್ಪ, ಕೆಂಚಪ್ಪ, ರಮೇಶ್, ವಾಸನದ ಗದಿಗೆಪ್ಪ ಬಿ., ಹನುಮಂತಪ್ಪ, ಕಡ್ಲೆಗೊಂದಿ ತಿಮ್ಮಣ್ಣ, ಲೋಕೇಶ್, ಕೆ.ಬೇವಿನಹಳ್ಳಿ ವಿಜಯ್ ಕುಮಾರ್, ಭಾನುವಲ್ಳಿಯ ಚೌಡಪ್ಪ ಸಿ.ರಾಜಪ್ಪ, ಜಿಗಳಿಯ ಜಯಪ್ಪ, ಚೌಡಪ್ಪ, ಬೇತೂರು ಹನುಮಂತ, ಪರಶುರಾಮ ಹೊಸಪಾಳ್ಯ, ಮಂಜುನಾಥ ನಡುವಲಕೇರಿ ಹಾಗೂ ಇತರರಿದ್ದರು.
0 Comments