ಹರಿಹರ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ, ಕಳ್ಳತನ ಮಾಡಿದ ಇಬ್ಬರೂ ಆರೋಪಿತರ ಬಂಧನ, ಅಂದಾಜು 58.10 ಲಕ್ಷದ ರೂ ಮೌಲ್ಯದ ಸ್ವತ್ತು ವಶ.!

ಮಂದಾರ ಜ್ವಾಲೆ, ದಾವಣಗೆರೆ: ಜಿಲ್ಲೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮನೆ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಸುಮಾರು ₹58.10 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ಬೈಕ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಡಾ. ಎಚ್.ಟಿ. ಶೇಖರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಪ್ರಕರಣದ ತನಿಖೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

*ದೇವಸ್ಥಾನಕ್ಕೆ ತೆರಳಿದ್ದ ಕುಟುಂಬ – ಅವಕಾಶ ಬಳಸಿಕೊಂಡ ಕಳ್ಳರು:* ಮೇ 18 ಮತ್ತು 19ರ ಮಧ್ಯರಾತ್ರಿಯಲ್ಲಿ ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಮರಾವತಿ ಕಾಲೋನಿಯ ನಿವಾಸಿ ಪರೀಕ್ಷಿತ್ ನಾಯ್ಡು ಅವರು ಕುಟುಂಬದೊಂದಿಗೆ ದೇವಸ್ಥಾನಕ್ಕೆ ತೆರಳಿದ್ದರು. ಈ ಮಾಹಿತಿ ಅರಿತಿದ್ದ ಕಳ್ಳರು, ಮನೆಗೆ ಬೀಗ ಹಾಕಿರುವುದನ್ನು ಗಮನಿಸಿ ಸಂಚು ರೂಪಿಸಿದ್ದರು.
ಕುಟುಂಬದವರು ಮನೆಯಲ್ಲಿ ಇಲ್ಲದ ವೇಳೆ ಮನೆ ಬೀಗ ಮುರಿದು ಒಳನುಗ್ಗಿದ ಆರೋಪಿಗಳು, ಮನೆಯಲ್ಲಿದ್ದ ಸುಮಾರು 483 ಗ್ರಾಂ ಚಿನ್ನಾಭರಣ ಹಾಗೂ ₹10 ಸಾವಿರ ನಗದು ದೋಚಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸಿಸಿಟಿವಿ ಇಲ್ಲದಿದ್ದರೂ ಪೊಲೀಸರ ಚಾಣಾಕ್ಷ ಕಾರ್ಯಾಚರಣೆ : ಪ್ರಕರಣದ ತನಿಖೆ ಪೊಲೀಸರಿಗೆ ಸವಾಲಿನದ್ದಾಗಿತ್ತು. ಏಕೆಂದರೆ ಕಳ್ಳತನ ನಡೆದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿರಲಿಲ್ಲ. ಅಲ್ಲದೆ ಘಟನೆಯನ್ನು ನೇರವಾಗಿ ಕಂಡ ಸಾಕ್ಷಿದಾರರೂ ಇರಲಿಲ್ಲ. ಆದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ದಾವಣಗೆರೆ ಗ್ರಾಮಾಂತರ ಡಿಎಸ್ಪಿ ಬಿ.ಎಸ್. ಬಸವರಾಜ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದರು.
ತಂಡದಲ್ಲಿ ಹರಿಹರ ಗ್ರಾಮಾಂತರ ಠಾಣೆಯ ವೃತ ನಿರೀಕ್ಷಕರಾದ ಸುರೇಶ್ ಸಗರಿ ಹಾಗೂ ನಗರ ಠಾಣೆಯ ವೃತ್ತ ನಿರೀಕ್ಷಕರಾದ ಆರ್ ಎಫ್ ದೇಸಾಯಿ ಮುಂದಾಳತ್ವದಲ್ಲಿ ಹರಿಹರ ಗ್ರಾಮಾಂತರ ಠಾಣೆಯ ಉಪ-ನಿರೀಕ್ಷಕರಾದ ಯುವರಾಜ್ ಕಂಬಳಿ, ಮಲೆಬೆನ್ನೂರು ಉಪ-ನಿರೀಕ್ಷಕರಾದ ಹಾರೂನ್ ಅಖ್ತರ್, ಶ್ರೀಪತಿ ಗಿನ್ನಿ ಹಾಗೂ ಶ್ವಾನದಳ ಹಾಗೂ ಸೈಬರ್ ಕ್ರೈಂ ಸಿಬ್ಬಂದಿ ಭಾಗವಹಿಸಿದ್ದರು.
*ಚೆಕ್‌ಪೋಸ್ಟ್‌ನಲ್ಲಿ ಸಿಕ್ಕಿಬಿದ್ದ ಆರೋಪಿಗಳು :* ಪ್ರಕರಣದ ಸುಳಿವು ಪತ್ತೆಹಚ್ಚಲು ಪೊಲೀಸರು ವಿವಿಧೆಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಇದೇ ವೇಳೆ ಬೈಕ್‌ನಲ್ಲಿ ಬರುತ್ತಿದ್ದ ಇಬ್ಬರು ವ್ಯಕ್ತಿಗಳು ಪೊಲೀಸರನ್ನು ಕಂಡು ಗಾಬರಿಗೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಅವರನ್ನು ಬೆನ್ನಟ್ಟಿ ವಶಕ್ಕೆ ಪಡೆದಿದ್ದಾರೆ. ನಂತರ ನಡೆಸಿದ ವಿಚಾರಣೆಯಲ್ಲಿ ಆರೋಪಿಗಳು ಹರಿಹರದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.
*ಬಂಧಿತ ಆರೋಪಿಗಳು ಯಾರು? :* ಬಂಧಿತ ಆರೋಪಿಗಳನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ನಿವಾಸಿಗಳಾದ ಶ್ರೀಕಾಂತ್ (30), ರಮೇಶ್ (27) ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಶ್ರೀಕಾಂತ್ ವಿರುದ್ಧ ಈಗಾಗಲೇ ಆರು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಗದಗ, ದಾವಣಗೆರೆ, ಹಾವೇರಿ, ಮುನಿರಾಬಾದ್ ಹಾಗೂ ಹೊಸಪೇಟೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಅವನ ವಿರುದ್ಧ ಪ್ರಕರಣಗಳಿವೆ. ರಮೇಶ್ ವಿರುದ್ಧವೂ ಎರಡು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ

₹57,40,800 ಲಕ್ಷ ಮೌಲ್ಯದ ಮಾಲು ವಶ : ಬಂಧಿತರಿಂದ ಪೊಲೀಸರು ಕೆಳಕಂಡ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 409.5 ಗ್ರಾಂ ಚಿನ್ನಾಭರಣ, ₹10,000 ನಗದು, ಹೀರೋ ಹೊಂಡಾ ಬೈಕ್, 2 ಮೊಬೈಲ್ ಫೋನ್‌ಗಳು ಒಟ್ಟು ₹67,40,800 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಸಂಬಂಧ ಇನ್ನಷ್ಟು ತನಿಖೆ ಮುಂದುವರಿದಿದ್ದು, ಆರೋಪಿಗಳು ಇತರ ಕಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಕಳವಾಗಿದ್ದ ಬಹುತೇಕ ಚಿನ್ನಾಭರಣವನ್ನು ಮರುಪಡೆಯಲು ಸಾಧ್ಯವಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

Post a Comment

0 Comments