ಹರಿಹರ: "ಆರೋಗ್ಯವೇ ಮಹಾಭಾಗ್ಯ" ಎಂಬುದು ಕೇವಲ ನುಡಿಯಾಗಿ ಉಳಿಯಬೇಕೇ, ಅಥವಾ ಜನರ ಬದುಕಿನಲ್ಲಿ ಸಾಕಾರವಾಗಬೇಕೇ? ಎಂಬ ಪ್ರಶ್ನೆ ಇಂದು ಹರಿಹರ ತಾಲೂಕಿನ ಜನರನ್ನು ಕಾಡುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ತಾಯಂದಿರು ಮತ್ತು ಮಕ್ಕಳಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಸುಮಾರು ₹20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 50 ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಯಾಗಿ ಒಂದು ವರ್ಷ ಕಳೆದರೂ ಸಾರ್ವಜನಿಕರ ಸೇವೆಗೆ ಇನ್ನೂ ಬಾಗಿಲು ತೆರೆಯದಿರುವುದು ಜನರಲ್ಲಿ ತೀವ್ರ ಅಸಮಾಧಾನ, ಆಕ್ರೋಶ ಮತ್ತು ನಿರಾಸೆಗೆ ಕಾರಣವಾಗಿದೆ. ಜನರ ತೆರಿಗೆ ಹಣದಿಂದ ನಿರ್ಮಿಸಲಾದ ಈ ಆಸ್ಪತ್ರೆ ಇಂದು ಬೀಗ ಹಾಕಿದ ಕಟ್ಟಡವಾಗಿ ನಿಂತಿರುವುದು ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯ ಮೇಲೆಯೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ. ಆಸ್ಪತ್ರೆಯ ಹೊರಭಾಗದಲ್ಲಿ ದೊಡ್ಡ ದೊಡ್ಡ ನಾಮಫಲಕಗಳು, ಒಳಭಾಗದಲ್ಲಿ ಗಣ್ಯರ ಹೆಸರಿನ ಶಿಲಾಫಲಕಗಳು, ಭವ್ಯ ಕಟ್ಟಡ, ಸುಸಜ್ಜಿತ ಕೊಠಡಿಗಳು ಎಲ್ಲವೂ ಕಾಣಿಸುತ್ತವೆ. ಆದರೆ ಚಿಕಿತ್ಸೆ ಪಡೆಯಲು ರೋಗಿಗಳಿಲ್ಲ, ಸೇವೆ ಸಲ್ಲಿಸಲು ವೈದ್ಯರಿಲ್ಲ, ಆಸ್ಪತ್ರೆ ಕಾರ್ಯಾರಂಭವಾಗಿಲ್ಲ. ಈ ಸ್ಥಿತಿ ನೋಡಿದಾಗ ಸಾರ್ವಜನಿಕರು ಬೇಸರ ವ್ಯಕ್ತಪಡಿಸುವುದು ಸಹಜ.
ಈ ಮಹತ್ವಾಕಾಂಕ್ಷಿ ಯೋಜನೆಗೆ 2023ರ ಫೆಬ್ರವರಿ 26ರಂದು ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ಎ. ಬಸವರಾಜು (ಬೈರತಿ) ಅವರು ಭೂಮಿಪೂಜೆ ನೆರವೇರಿಸಿದರು. ಆ ಸಂದರ್ಭದಲ್ಲಿ ಅಂದಿನ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಹರಿಹರ ಕ್ಷೇತ್ರದ ಶಾಸಕರಾಗಿದ್ದ ರಾಮಪ್ಪ, ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಬಡ ತಾಯಂದಿರು ಮತ್ತು ಮಕ್ಕಳಿಗೆ ಆಧುನಿಕ ಆರೋಗ್ಯ ಸೇವೆ ದೊರೆಯಲಿದೆ ಎಂಬ ಆಶಯದೊಂದಿಗೆ ಯೋಜನೆಗೆ ಚಾಲನೆ ನೀಡಲಾಯಿತು. ನಂತರ ಕಾಮಗಾರಿ ಪೂರ್ಣಗೊಂಡು ಸುಮಾರು ಎರಡು ವರ್ಷ ನಾಲ್ಕು ತಿಂಗಳು ಹತ್ತು ದಿನಗಳ ಬಳಿಕ, 2025ರ ಜೂನ್ 16ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸ್ಪತ್ರೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂದಿನ ಉಪಮುಖ್ಯಮಂತ್ರಿ ಹಾಗೂ ಇಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಹರಿಹರ ಶಾಸಕ ಬಿ.ಪಿ. ಹರೀಶ್, ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಅನೇಕ ಗಣ್ಯರು ವೇದಿಕೆ ಹಂಚಿಕೊಂಡಿದ್ದರು. ಉದ್ಘಾಟನೆಯ ಸಂದರ್ಭದಲ್ಲಿ ಅಭಿವೃದ್ಧಿಯ ಬಗ್ಗೆ ದೊಡ್ಡ ದೊಡ್ಡ ಮಾತುಗಳು ಕೇಳಿಬಂದವು. ಆದರೆ ಆ ಮಾತುಗಳು ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುವುದು ಸಾರ್ವಜನಿಕರ ಬೇಸರ.
ಆಸ್ಪತ್ರೆ ನಿರ್ಮಾಣದ ಮೂಲ ಉದ್ದೇಶವೇ ಹರಿಹರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಗರ್ಭಿಣಿಯರು, ಹೆರಿಗೆ ಮಹಿಳೆಯರು, ನವಜಾತ ಶಿಶುಗಳು ಮತ್ತು ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದಾಗಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಒತ್ತಡವನ್ನು ಕಡಿಮೆ ಮಾಡಿ, ವಿಶೇಷ ಚಿಕಿತ್ಸೆಯನ್ನು ಒಂದೇ ಸೂರಿನಡಿ ಒದಗಿಸಬೇಕು ಎಂಬ ಆಶಯದಿಂದ ಈ ಕಟ್ಟಡ ನಿರ್ಮಿಸಲಾಯಿತು. ಆದರೆ ಉದ್ಘಾಟನೆಯಾದ ಒಂದು ವರ್ಷದ ನಂತರವೂ ಆಸ್ಪತ್ರೆ ಕಾರ್ಯಾರಂಭವಾಗದಿರುವುದು ಸಾರ್ವಜನಿಕರ ಕನಸಿಗೆ ತಣ್ಣೀರು ಎರಚಿದಂತಾಗಿದೆ. ದಿನನಿತ್ಯ ನೂರಾರು ಗರ್ಭಿಣಿಯರು ಮತ್ತು ಮಕ್ಕಳು ಚಿಕಿತ್ಸೆಗಾಗಿ ಹರಿಹರ ಸಾರ್ವಜನಿಕ ಆಸ್ಪತ್ರೆ ಅಥವಾ ದಾವಣಗೆರೆ, ಶಿವಮೊಗ್ಗ ಸೇರಿದಂತೆ ಬೇರೆ ನಗರಗಳಿಗೆ ತೆರಳಬೇಕಾದ ಪರಿಸ್ಥಿತಿ ಇಂದಿಗೂ ಮುಂದುವರಿದಿದೆ.
ಈ ಆಸ್ಪತ್ರೆ ಕಾರ್ಯಾರಂಭವಾಗಬೇಕೆಂದು ಪತ್ರಕರ್ತರು, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಸಮಾಜಸೇವಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ನಿರಂತರವಾಗಿ ಧ್ವನಿ ಎತ್ತುತ್ತಲೇ ಬಂದಿವೆ. ಪ್ರತಿಭಟನೆಗಳು ನಡೆದಿವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಲಿಖಿತ ಮನವಿಗಳು ಸಲ್ಲಿಕೆಯಾಗಿವೆ. ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗಳು ನಡೆದಿವೆ. ಮಾಧ್ಯಮಗಳು ಅನೇಕ ಬಾರಿ ವರದಿಗಳನ್ನು ಪ್ರಕಟಿಸಿವೆ. ಆದರೂ ಅಧಿಕಾರಿಗಳಿಂದ ಯಾವುದೇ ಸ್ಪಷ್ಟ ಉತ್ತರ ಬಂದಿಲ್ಲ. ಆಸ್ಪತ್ರೆ ಯಾವಾಗ ಆರಂಭವಾಗುತ್ತದೆ ಎಂಬುದರ ಬಗ್ಗೆ ನಿಖರ ದಿನಾಂಕವಿಲ್ಲ. ಜನರ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಮೌನವೇ ಆಡಳಿತದ ಉತ್ತರವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಒಂದು ವರ್ಷದಾದರೂ ಆಸ್ಪತ್ರೆ ಆರಂಭವಾಗದಿರುವುದಕ್ಕೆ ನಿಜವಾದ ಕಾರಣವೇನು? ತಾಂತ್ರಿಕ ಸಮಸ್ಯೆಯೇ? ಸಿಬ್ಬಂದಿ ಕೊರತೆಯೇ? ವೈದ್ಯರ ನೇಮಕಾತಿ ಆಗಿಲ್ಲವೇ? ವೈದ್ಯಕೀಯ ಉಪಕರಣಗಳ ಅಳವಡಿಕೆ ಪೂರ್ಣಗೊಂಡಿಲ್ಲವೇ? ಅಥವಾ ಕಟ್ಟಡ ನಿರ್ಮಾಣದಲ್ಲಿಯೇ ಯಾವುದಾದರೂ ಅವೈಜ್ಞಾನಿಕ ದೋಷವಿದೆಯೇ? ಎಂಬ ಹಲವು ಪ್ರಶ್ನೆಗಳು ಸಾರ್ವಜನಿಕರಲ್ಲಿ ಕೇಳಿಬರುತ್ತಿವೆ. ತಾಂತ್ರಿಕ ತೊಂದರೆಗಳಿದ್ದರೆ ಅವುಗಳನ್ನು ಸರಿಪಡಿಸಲು ಒಂದು ವರ್ಷ ಬೇಕೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಸರ್ಕಾರ ಮತ್ತು ಅಧಿಕಾರಿಗಳು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡದಿರುವುದು ಅನುಮಾನಗಳಿಗೆ ಇನ್ನಷ್ಟು ಬಲ ನೀಡುತ್ತಿದೆ.
ಇತ್ತೀಚೆಗೆ ಆಸ್ಪತ್ರೆಯ ಒಳಭಾಗದಲ್ಲಿ ತೆಗೆದಿರುವ ಕೆಲವು ಚಿತ್ರಗಳು ಸಾರ್ವಜನಿಕರಲ್ಲಿ ಇನ್ನಷ್ಟು ಆತಂಕ ಮೂಡಿಸಿವೆ. ಆಸ್ಪತ್ರೆ ಆವರಣದಲ್ಲಿ ಖಾಲಿ ಮದ್ಯದ ಬಾಟಲಿಗಳು ಹಾಗೂ ಕಸದ ವಸ್ತುಗಳು ಕಂಡುಬಂದಿರುವುದು ಸಾರ್ವಜನಿಕ ಆಸ್ತಿಯ ನಿರ್ವಹಣೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆರೋಗ್ಯ ಸೇವೆಗಾಗಿ ನಿರ್ಮಿಸಲಾದ ಕಟ್ಟಡದಲ್ಲಿ ಇಂತಹ ದೃಶ್ಯಗಳು ಕಾಣಿಸಿಕೊಳ್ಳುವುದು ಖಂಡನೀಯ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆಸ್ಪತ್ರೆ ಇನ್ನೂ ಸಾರ್ವಜನಿಕರ ಬಳಕೆಗೆ ಬಂದಿಲ್ಲದಿರುವ ಸಂದರ್ಭದಲ್ಲಿ ಕಟ್ಟಡದ ಸೂಕ್ತ ನಿರ್ವಹಣೆ ಹಾಗೂ ಭದ್ರತೆ ಖಚಿತಪಡಿಸುವ ಜವಾಬ್ದಾರಿ ಸಂಬಂಧಪಟ್ಟ ಇಲಾಖೆಯ ಮೇಲಿದೆ. ನಿರ್ವಹಣೆಯ ಕೊರತೆಯಿಂದ ಸರ್ಕಾರಿ ಆಸ್ತಿ ಹಾನಿಯಾಗದಂತೆ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
ಹರಿಹರ ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ಸಮರ್ಪಕ ಆರೋಗ್ಯ ಸೇವೆ ದೊರೆಯುತ್ತಿಲ್ಲ ಎಂಬ ಆರೋಪಗಳು ನಿರಂತರವಾಗಿ ಕೇಳಿಬರುತ್ತಿವೆ. ಗರ್ಭಿಣಿಯರು, ಶಿಶುಗಳು ಮತ್ತು ಬಡ ಕುಟುಂಬಗಳು ಹೆಚ್ಚಿನ ಸೌಲಭ್ಯಕ್ಕಾಗಿ ಬೇರೆ ಜಿಲ್ಲೆಗಳ ಆಸ್ಪತ್ರೆಗಳಿಗೆ ತೆರಳಬೇಕಾಗುತ್ತಿರುವುದು ಜನರ ಆರ್ಥಿಕ ಹೊರೆ ಹೆಚ್ಚಿಸುತ್ತಿದೆ. ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ಭರಿಸಲಾಗದೆ ಅನೇಕ ಬಡ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಾರ್ಯಾರಂಭವಾಗದೇ ಬೀಗ ಹಾಕಿಕೊಂಡಿರುವುದು ಜನರ ನೋವನ್ನು ಮತ್ತಷ್ಟು ಹೆಚ್ಚಿಸಿದೆ.
ಸರ್ಕಾರದ ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಅದು ಕೇವಲ ಭೂಮಿಪೂಜೆ ಅಥವಾ ಉದ್ಘಾಟನೆಯಿಂದಲ್ಲ; ಜನರಿಗೆ ಸೇವೆ ನೀಡುವ ಮೂಲಕವೇ ಅದರ ಉದ್ದೇಶ ಸಾರ್ಥಕವಾಗುತ್ತದೆ. ಭವ್ಯ ಕಟ್ಟಡ ನಿರ್ಮಿಸಿ, ಶಿಲಾಫಲಕ ಅನಾವರಣ ಮಾಡಿ, ಫೋಟೋ ತೆಗೆಸಿಕೊಂಡರೆ ಮಾತ್ರ ಅಭಿವೃದ್ಧಿಯಾಗುವುದಿಲ್ಲ. ಆ ಕಟ್ಟಡದಲ್ಲಿ ಜನರಿಗೆ ಸೇವೆ ದೊರೆಯಬೇಕು. ಆಗ ಮಾತ್ರ ಸರ್ಕಾರದ ವೆಚ್ಚಕ್ಕೂ, ಜನರ ತೆರಿಗೆ ಹಣಕ್ಕೂ ನ್ಯಾಯ ಸಿಗುತ್ತದೆ. ಇಲ್ಲವಾದರೆ ಅದು ಕೇವಲ ಕಾಗದದ ಮೇಲಿನ ಅಭಿವೃದ್ಧಿಯಾಗಿ ಉಳಿಯುತ್ತದೆ.
ಜನರಿಂದ ಸಂಗ್ರಹವಾಗುವ ತೆರಿಗೆ ಹಣವೇ ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಮೂಲ ಬಂಡವಾಳ. ಆ ಹಣದಲ್ಲಿ ನಿರ್ಮಿಸಲಾದ ಆಸ್ಪತ್ರೆಗಳು, ಶಾಲೆಗಳು, ರಸ್ತೆ, ಸೇತುವೆಗಳು ಮತ್ತು ಇತರೆ ಮೂಲಸೌಕರ್ಯಗಳು ಜನರ ಉಪಯೋಗಕ್ಕೆ ಬರಬೇಕೇ ಹೊರತು, ಬೀಗ ಹಾಕಿಕೊಂಡು ಧೂಳು ತಿನ್ನಲು ಅಲ್ಲ. ಆರೋಗ್ಯದಂತಹ ಅತ್ಯಂತ ಸೂಕ್ಷ್ಮ ಕ್ಷೇತ್ರದಲ್ಲಿ ಇಂತಹ ವಿಳಂಬವನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲಾಗುವುದಿಲ್ಲ. ಜನರ ಜೀವದ ಪ್ರಶ್ನೆ ಬಂದಾಗ ಸರ್ಕಾರ ಮತ್ತು ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು. ಆಸ್ಪತ್ರೆ ಆರಂಭವಾಗದಿರುವುದರಿಂದ ಸಂಭವಿಸುವ ತೊಂದರೆಗಳನ್ನು ಅಂಕಿ-ಅಂಶಗಳಿಂದ ಅಳೆಯಲು ಸಾಧ್ಯವಿಲ್ಲ; ಅದು ನೇರವಾಗಿ ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತದೆ.
ಸರ್ಕಾರ ಬದಲಾಗಬಹುದು, ಸಚಿವರು ಬದಲಾಗಬಹುದು, ಅಧಿಕಾರಿಗಳು ವರ್ಗಾವಣೆ ಆಗಬಹುದು. ಆದರೆ ಜನರ ಸಮಸ್ಯೆಗಳು ಹಾಗೆಯೇ ಉಳಿಯಬಾರದು. ಅಭಿವೃದ್ಧಿಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕಟ್ಟಡ ನಿರ್ಮಿಸಿ ನಂತರ ಅದನ್ನು ಬಳಸದೇ ಬಿಡುವುದು ಜನರ ವಿಶ್ವಾಸಕ್ಕೆ ಧಕ್ಕೆ ತರುವಂತದ್ದು. ಆರೋಗ್ಯ ಸೇವೆ ಎಂಬುದು ರಾಜಕೀಯಕ್ಕಿಂತ ಮೇಲಿನ ವಿಷಯ. ಈ ವಿಚಾರದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷ ಎನ್ನುವ ಭೇದ ಇರಬಾರದು. ಜನರ ಹಿತವೇ ಮೊದಲ ಆದ್ಯತೆಯಾಗಬೇಕು.
"ಮಂದಾರ ಜ್ವಾಲೆ" ವಾರಪತ್ರಿಕೆಯ ಸ್ಪಷ್ಟ ಆಗ್ರಹವೇನೆಂದರೆ, ಹರಿಹರದ ₹20 ಕೋಟಿ ವೆಚ್ಚದ 50 ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣ ಕಾರ್ಯಾರಂಭಗೊಳಿಸಬೇಕು. ಆಸ್ಪತ್ರೆ ಆರಂಭವಾಗದಿರುವ ನಿಜವಾದ ಕಾರಣವನ್ನು ಸರ್ಕಾರ ಮತ್ತು ಆರೋಗ್ಯ ಇಲಾಖೆ ಸಾರ್ವಜನಿಕರ ಮುಂದೆ ಪಾರದರ್ಶಕವಾಗಿ ಬಹಿರಂಗಪಡಿಸಬೇಕು. ತಾಂತ್ರಿಕ ಅಥವಾ ಆಡಳಿತಾತ್ಮಕ ಸಮಸ್ಯೆಗಳಿದ್ದರೆ ಅವುಗಳನ್ನು ತಕ್ಷಣ ಪರಿಹರಿಸಬೇಕು. ನಿರ್ಮಾಣ ಕಾಮಗಾರಿಯಲ್ಲಿ ಗುಣಮಟ್ಟದ ಕೊರತೆ ಅಥವಾ ಅವೈಜ್ಞಾನಿಕತೆ ಕಂಡುಬಂದರೆ ಸಮಗ್ರ ತನಿಖೆ ನಡೆಸಿ ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯ ಆವರಣವನ್ನು ಸೂಕ್ತ ಭದ್ರತೆಯೊಂದಿಗೆ ಸಂರಕ್ಷಿಸಿ ಸಾರ್ವಜನಿಕ ಆಸ್ತಿಯ ದುರುಪಯೋಗವನ್ನು ತಡೆಯಬೇಕು. ಜನರ ತೆರಿಗೆ ಹಣಕ್ಕೆ ನ್ಯಾಯ ಸಿಗಬೇಕು. ಬಡ ಹಾಗೂ ಮಧ್ಯಮ ವರ್ಗದ ತಾಯಂದಿರು ಮತ್ತು ಮಕ್ಕಳಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು. "ಸರ್ಕಾರದ ಕೆಲಸ ದೇವರ ಕೆಲಸ" ಹಾಗೂ "ವೈದ್ಯೋ ನಾರಾಯಣೋ ಹರಿ" ಎಂಬ ನುಡಿಗಳು ಕೇವಲ ಭಾಷಣಗಳಲ್ಲಿ ಅಲ್ಲ, ಹರಿಹರದ ಈ ಆಸ್ಪತ್ರೆಯ ಕಾರ್ಯಾರಂಭದ ಮೂಲಕವೂ ಸಾರ್ಥಕವಾಗಲಿ ಎಂಬುದು "ಮಂದಾರ ಜ್ವಾಲೆ" ವಾರಪತ್ರಿಕೆಯ ಕಳಕಳಿಯಾಗಿದೆ.
0 Comments