ಮಂದಾರ ಜ್ವಾಲೆ ಬಿಗ್ ಇಂಪ್ಯಾಕ್ಟ್, ಮೂರು ವರ್ಷದ ಕನಸು ನನಸು: 20 ಕೋಟಿ ವೆಚ್ಚದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ರೋಗಿಗಳ ಸೇವೆಗೆ ಮುಕ್ತ.!

ಒಂದು ವರ್ಷದ ಬಳಿಕ ಆರಂಭವಾದ ಸೇವೆ – ಟೇಪ್ ಕತ್ತರಿಸಿ ಅಧಿಕೃತ ಚಾಲನೆ ನೀಡಿದ ಶಾಸಕ ಬಿ.ಪಿ. ಹರೀಶ್

ಹರಿಹರ: ಬಹುನಿರೀಕ್ಷಿತ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 50 ಹಾಸಿಗೆ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕೊನೆಗೂ ರೋಗಿಗಳ ಸೇವೆಗೆ ಚಾಲನೆ ದೊರೆತಿದೆ. ಸುಮಾರು ಒಂದು ವರ್ಷದ ಹಿಂದೆ ಉದ್ಘಾಟನೆಗೊಂಡಿದ್ದ ಆಸ್ಪತ್ರೆ ವಿವಿಧ ಕಾರಣಗಳಿಂದ ಕಾರ್ಯಾರಂಭ ಮಾಡಿರಲಿಲ್ಲ. ಇದೀಗ ಆಸ್ಪತ್ರೆ ಅಧಿಕೃತವಾಗಿ ಸೇವೆಗೆ ಮುಕ್ತವಾಗಿರುವುದು ಹರಿಹರ ಹಾಗೂ ಸುತ್ತಮುತ್ತಲಿನ ಜನರಿಗೆ ಸಂತಸದ ಸುದ್ದಿಯಾಗಿದೆ.

ಈ ಆಸ್ಪತ್ರೆ ನಿರ್ಮಾಣಕ್ಕೆ 2023ರ ಫೆಬ್ರವರಿ 26ರಂದು ಅಂದಿನ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಭೈರತಿ ಬಸವರಾಜ್ ಅವರು ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು.

ಬಳಿಕ 2025ರ ಜೂನ್ 16ರಂದು ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 20 ಕೋಟಿ ರೂ. ವೆಚ್ಚದ 50 ಹಾಸಿಗೆ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದ್ದರು. ಆದರೆ ಆಸ್ಪತ್ರೆ ಉದ್ಘಾಟನೆಯಾದರೂ ಸೇವೆ ಆರಂಭವಾಗಿರಲಿಲ್ಲ. ಇದೀಗ ಸುಮಾರು ಒಂದು ವರ್ಷದ ಬಳಿಕ ಆಸ್ಪತ್ರೆ ರೋಗಿಗಳ ಸೇವೆಗೆ ಚಾಲನೆ ನೀಡಿರುವುದು ಸಾರ್ವಜನಿಕರ ಬಹುಕಾಲದ ನಿರೀಕ್ಷೆಗೆ ತೆರೆ ಎಳೆದಂತಾಗಿದೆ.

ಶಾಸಕರಿಂದ ಅಧಿಕೃತ ಚಾಲನೆ

ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಪಿ. ಹರೀಶ್ ಅವರು ಟೇಪ್ ಕತ್ತರಿಸುವ ಮೂಲಕ ಆಸ್ಪತ್ರೆಯನ್ನು ಅಧಿಕೃತವಾಗಿ ರೋಗಿಗಳ ಸೇವೆಗೆ ಮುಕ್ತಗೊಳಿಸಿದರು. ಮಹಾಲಕ್ಷ್ಮಿ ಪೂಜೆಯೊಂದಿಗೆ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಆರಂಭಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಪಿ. ಹರೀಶ್, "ಮೊದಲು ಆಸ್ಪತ್ರೆಯನ್ನು ಜನರ ಸೇವೆಗೆ ಮುಕ್ತಗೊಳಿಸುವುದು ಮುಖ್ಯವಾಗಿತ್ತು. ಆಸ್ಪತ್ರೆ ಆರಂಭವಾದ ನಂತರ ಹಂತ ಹಂತವಾಗಿ ವೈದ್ಯರು, ಸಿಬ್ಬಂದಿ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು. ಹರಿಹರ ಸಾರ್ವಜನಿಕ ಆಸ್ಪತ್ರೆ ಕೇವಲ ತಾಲೂಕಿನ ಜನರಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಅನೇಕ ಗ್ರಾಮಗಳ ಜನರಿಗೂ ಆರೋಗ್ಯ ಸೇವೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಅನುದಾನವನ್ನು ತಂದು ಆಸ್ಪತ್ರೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ" ಎಂದು ಹೇಳಿದರು.

ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಪಡೆದ ನಂದಿಗಾವಿ ಶ್ರೀನಿವಾಸ.

ನಂತರ ಹರಿಹರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ ಅವರು ಆಸ್ಪತ್ರೆಗೆ ಭೇಟಿ ನೀಡಿ ಪೂಜೆಯಲ್ಲಿ ಪಾಲ್ಗೊಂಡರು. ಆಸ್ಪತ್ರೆಯಲ್ಲಿನ ಮೂಲಭೂತ ಸೌಲಭ್ಯಗಳು, ವೈದ್ಯರ ಕೊರತೆ, ಸಿಬ್ಬಂದಿ ಅವಶ್ಯಕತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

"ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು ಹಾಗೂ ಸಿಬ್ಬಂದಿಯನ್ನು ಒದಗಿಸುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸುತ್ತೇನೆ. ಆಸ್ಪತ್ರೆಯ ಅಭಿವೃದ್ಧಿಗೆ ಬೇಕಾದ ಹೆಚ್ಚುವರಿ ಅನುದಾನ ತರಲು ಸಹ ಪ್ರಯತ್ನಿಸುತ್ತೇನೆ" ಎಂದು ಅವರು ಭರವಸೆ ನೀಡಿದರು.

ಸಾರ್ವಜನಿಕರ ಬಹುವರ್ಷಗಳ ಕನಸು ನನಸು

ಹರಿಹರದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ನಿರ್ಮಾಣಗೊಂಡ ಈ ಆಸ್ಪತ್ರೆ ಕಾರ್ಯಾರಂಭ ಮಾಡಿರುವುದು ಸಾರ್ವಜನಿಕರ ಬಹುವರ್ಷಗಳ ಕನಸನ್ನು ನನಸು ಮಾಡಿದಂತಾಗಿದೆ. ಇದುವರೆಗೆ ಚಿಕಿತ್ಸೆಗಾಗಿ ದಾವಣಗೆರೆ ಸೇರಿದಂತೆ ಇತರೆ ನಗರಗಳಿಗೆ ತೆರಳಬೇಕಾಗಿದ್ದ ಅನೇಕ ರೋಗಿಗಳಿಗೆ ಈಗ ಹರಿಹರದಲ್ಲೇ ವಿಶೇಷ ಚಿಕಿತ್ಸೆ ದೊರೆಯುವ ನಿರೀಕ್ಷೆ ಮೂಡಿದೆ.

ಗಣ್ಯರ ಉಪಸ್ಥಿತಿ.

ಆಸ್ಪತ್ರೆಯ ಕಾರ್ಯಾರಂಭ ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀನಿವಾಸ, ಇತರ ವೈದ್ಯರು, ಆಡಳಿತ ಕಚೇರಿ ಸಿಬ್ಬಂದಿ, ಆಸ್ಪತ್ರೆಯ ಸಿಬ್ಬಂದಿ ವರ್ಗ, ಆರೋಗ್ಯ ರಕ್ಷಾ ಸಮಿತಿಯ ಹಾಲಿ ಹಾಗೂ ಮಾಜಿ ಸದಸ್ಯರು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ರೋಗಿಗಳ ಸೇವೆಗೆ ಆಸ್ಪತ್ರೆ ಆರಂಭವಾಗಿರುವುದು ಹರಿಹರ ನಗರದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯಗಳು ಮತ್ತು ವೈದ್ಯಕೀಯ ಸಿಬ್ಬಂದಿ ನೇಮಕಗೊಂಡರೆ ಈ ಆಸ್ಪತ್ರೆ ಇನ್ನಷ್ಟು ಪರಿಣಾಮಕಾರಿ ಆರೋಗ್ಯ ಸೇವೆ ನೀಡಲಿದೆ ಎಂಬ ವಿಶ್ವಾಸ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

Post a Comment

0 Comments