ಪಿಜಿ ಮಾಲೀಕಿ ಸೇರಿ ನಾಲ್ವರು ಮಹಿಳೆಯರ ಬಂಧನ; ಶಿಕಾರಿಪುರದಲ್ಲಿ ಬೆಚ್ಚಿಬೀಳಿಸಿದ ನಾಪತ್ತೆ ಪ್ರಕರಣದ ಕರಾಳ ಸತ್ಯ ಬಯಲು
ಶಿಕಾರಿಪುರ: ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎಂಬ ಕನಸಿನೊಂದಿಗೆ ಮನೆ ಬಿಟ್ಟು ಕೆಲಸ ಅರಸಿ ಬಂದಿದ್ದ 14 ವರ್ಷದ ಅಪ್ರಾಪ್ತ ಬಾಲಕಿಯ ಬದುಕು ದುರಂತ ಅಂತ್ಯ ಕಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬೆಳಕಿಗೆ ಬಂದಿದೆ. ಕಳೆದೊಂದು ವರ್ಷದಿಂದ ನಾಪತ್ತೆಯಾಗಿದ್ದ ಬಾಲಕಿಯ ಪ್ರಕರಣದಲ್ಲಿ ಶಿಕಾರಿಪುರ ಟೌನ್ ಪೊಲೀಸರು ಪಿಜಿ (ಪೇಯಿಂಗ್ ಗೆಸ್ಟ್) ಮಾಲೀಕಿ ಸೇರಿದಂತೆ ನಾಲ್ವರು ಮಹಿಳೆಯರನ್ನು ಬಂಧಿಸಿದ್ದು, ವರ್ಷದ ಬಳಿಕ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಾವಿನಗುಂಡಿ ಕಂದಕದಲ್ಲಿ ಬಾಲಕಿಯ ಅಸ್ಥಿಪಂಜರ ಪತ್ತೆಯಾಗಿರುವುದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ತಾಯಿಯನ್ನು ಕಳೆದುಕೊಂಡಿದ್ದ ಹಾಗೂ ತಂದೆಯ ಮದ್ಯದ ಚಟದಿಂದ ಬೇಸತ್ತಿದ್ದ ಬಾಲಕಿ ಎಂಟನೇ ತರಗತಿಯಲ್ಲೇ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಕೆಲಸ ಹುಡುಕಿಕೊಂಡು ಶಿಕಾರಿಪುರಕ್ಕೆ ಬಂದಿದ್ದಳು ಎಂದು ತಿಳಿಸಿದರು. ಅಲ್ಲಿ ಆರೋಪಿ ಸೌಭಾಗ್ಯ ಅವರ ಮಾಲೀಕತ್ವದ ಪೇಯಿಂಗ್ ಗೆಸ್ಟ್‌ನಲ್ಲಿ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದಳು.
2025ರ ಮೇ 18ರಂದು ಪಿಜಿಯಲ್ಲಿದ್ದ ಗಂಗಾನಾಯ್ಕ್, ಸೌಭಾಗ್ಯ ಹಾಗೂ ರಂಜಿತಾ ಅವರೊಂದಿಗೆ ಬಾಲಕಿಗೆ ಗಲಾಟೆಯಾಗಿತ್ತು. ಆರೋಪಿಗಳ ವಿಚಾರಣೆ ವೇಳೆ ದೊರೆತ ಮಾಹಿತಿಯಂತೆ, ಅದೇ ದಿನ ಬಾಲಕಿ ಪಿಜಿಯ ಬಾತ್‌ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಆದರೆ, ಈ ಘಟನೆ ಬಹಿರಂಗವಾದರೆ ಪಿಜಿಗೆ ಕೆಟ್ಟ ಹೆಸರು ಬಂದು ವ್ಯವಹಾರಕ್ಕೆ ಧಕ್ಕೆಯಾಗಬಹುದು ಎಂಬ ಆತಂಕದಿಂದ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡದೆ, ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಕಾರಿನಲ್ಲಿ ಸಾಗಿಸಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಾವಿನಗುಂಡಿ ಕಂದಕಕ್ಕೆ ಎಸೆದು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ ಎಂದು ಎಸ್‌ಪಿ ವಿವರಿಸಿದರು.
ಬಾಲಕಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಆಕೆಯ ತಂದೆ ನೀಡಿದ್ದ ದೂರಿನ ಮೇರೆಗೆ ಶಿಕಾರಿಪುರ ಟೌನ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದರು. ಇತ್ತೀಚೆಗೆ ಆರೋಪಿಗಳ ನಡುವೆ ವೈಯಕ್ತಿಕ ಕಾರಣಕ್ಕೆ ಉಂಟಾದ ಜಗಳದ ವೇಳೆ ಈ ಪ್ರಕರಣದ ರಹಸ್ಯ ಹೊರಬಿದ್ದಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಂಪೂರ್ಣ ಕೃತ್ಯ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಜಿ ಮಾಲೀಕಿ ಸೌಭಾಗ್ಯ, ಗಂಗಾನಾಯ್ಕ್, ರಂಜಿತಾ ಹಾಗೂ ಪ್ರಿಯಾ ನಾಯ್ಕ್ ಅವರನ್ನು ಬಂಧಿಸಲಾಗಿದೆ. ಆರೋಪಿಗಳ ಮಾಹಿತಿಯಂತೆ ಪೊಲೀಸರು ಮಾವಿನಗುಂಡಿ ಕಂದಕದಲ್ಲಿ ಸ್ಥಳ ಮಹಜರು ನಡೆಸಿದ ವೇಳೆ ಬಾಲಕಿಯ ತಲೆಬುರುಡೆ ಹಾಗೂ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ರವಾನಿಸಲಾಗಿದೆ. ವರದಿ ಬಂದ ಬಳಿಕ ಸಾವಿನ ನಿಖರ ಕಾರಣದ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬದುಕನ್ನು ಕಟ್ಟಿಕೊಳ್ಳುವ ಕನಸಿನೊಂದಿಗೆ ಮನೆಬಿಟ್ಟು ಬಂದಿದ್ದ ಅಪ್ರಾಪ್ತ ಬಾಲಕಿಯ ಬದುಕು ಹೀಗೆ ದುರಂತ ಅಂತ್ಯ ಕಂಡಿರುವುದು ಸಮಾಜವನ್ನು ತಲ್ಲಣಗೊಳಿಸಿದೆ. ಆತ್ಮಹತ್ಯೆಯಾಗಿರಲಿ ಅಥವಾ ಬೇರೆ ಯಾವುದೇ ಕಾರಣವಾಗಿರಲಿ, ಒಂದು ಜೀವ ಕಳೆದುಹೋದ ಬಳಿಕ ಕಾನೂನಿಗೆ ಮಾಹಿತಿ ನೀಡದೇ ಶವವನ್ನು ಮರೆಮಾಚಿ ಸಾಕ್ಷ್ಯ ನಾಶಕ್ಕೆ ಯತ್ನಿಸಿರುವ ಆರೋಪ ಅತ್ಯಂತ ಅಮಾನವೀಯವಾಗಿದೆ. ಪ್ರಕರಣದ ಕುರಿತು ಸಮಗ್ರ ತನಿಖೆ ಮುಂದುವರಿದಿದ್ದು, ಸತ್ಯಾಂಶ ಸಂಪೂರ್ಣವಾಗಿ ಹೊರಬಂದು ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
0 Comments