ಮಳೆಗಾಗಿ ಕತ್ತೆಗಳ ಮದುವೆ: ಗುತ್ತೂರು ಗ್ರಾಮದಲ್ಲಿ ಹಿಂದೂ ಸಂಪ್ರದಾಯದಂತೆ ವಿಶೇಷ ಪೂಜೆ.!


ಹರಿಹರ: ಈ ಬಾರಿ ಮುಂಗಾರು ಮಳೆ ಸಮರ್ಪಕವಾಗಿ ಸುರಿಯದ ಕಾರಣ ರೈತ ಸಮುದಾಯ ಆತಂಕಕ್ಕೆ ಒಳಗಾಗಿದೆ. ಉತ್ತಮ ಮಳೆ ಸುರಿದು ಬೆಳೆ ಸಮೃದ್ಧಿಯಾಗಲಿ ಎಂಬ ಆಶಯದೊಂದಿಗೆ ಹರಿಹರ ತಾಲೂಕಿನ ಗುತ್ತೂರು ಗ್ರಾಮದಲ್ಲಿ ಗ್ರಾಮಸ್ಥರು ಸಂಪ್ರದಾಯಬದ್ಧವಾಗಿ ಕತ್ತೆಗಳ ಮದುವೆ ನಡೆಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಹಿಂದೂ ಸಂಪ್ರದಾಯದಂತೆ ಕತ್ತೆಗಳನ್ನು ವಧು-ವರರಂತೆ ಅಲಂಕರಿಸಿ, ಮಂತ್ರೋಚ್ಚಾರ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗ್ರಾಮಸ್ಥರು ಮದುವೆ ನೆರವೇರಿಸಿದರು. ಬಳಿಕ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿದರು.

ಗ್ರಾಮಸ್ಥರ ಪ್ರಕಾರ, ಈ ಆಚರಣೆಯನ್ನು ಪೂರ್ವಜರ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಕತ್ತೆಗಳ ಮದುವೆ ಮಾಡಿದರೆ ಸಮೃದ್ಧಿಯಾಗಿ ಮಳೆ ಸುರಿದು, ಉತ್ತಮ ಬೆಳೆ ಬರುತ್ತದೆ ಎಂಬ ನಂಬಿಕೆ ಗ್ರಾಮೀಣ ಜನರಲ್ಲಿ ಇಂದಿಗೂ ಬೇರೂರಿದೆ. ಅದೇ ಕಾರಣದಿಂದ ಮಳೆ ಕೊರತೆಯ ಸಂದರ್ಭದಲ್ಲಿ ಇಂತಹ ಸಂಪ್ರದಾಯಗಳನ್ನು ಆಚರಿಸಲಾಗುತ್ತದೆ.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ರೈತರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪ್ರಕೃತಿ ಕೃಪೆ ದೊರೆಯಲಿ ಹಾಗೂ ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿದರು. ಗ್ರಾಮೀಣ ಭಾಗದ ಈ ವಿಶಿಷ್ಟ ಆಚರಣೆ ಸ್ಥಳೀಯರ ಗಮನ ಸೆಳೆಯಿತು.

Post a Comment

0 Comments