ಹರಿಹರ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರದ ಸಾಮ್ರಾಜ್ಯ..!



ಮಂದಾರ ಜ್ವಾಲೆ ವಿಶೇಷ: ಒಂದು ನಗರ ಅಭಿವೃದ್ಧಿಯಾಗಬೇಕಾದರೆ ರಸ್ತೆಗಳು, ಕಟ್ಟಡಗಳು, ಸೇತುವೆಗಳು ಮಾತ್ರ ಸಾಕಾಗುವುದಿಲ್ಲ. ಆ ನಗರದ ಆಡಳಿತ ವ್ಯವಸ್ಥೆ ಪ್ರಾಮಾಣಿಕವಾಗಿರಬೇಕು. ಸರ್ಕಾರಿ ಕಚೇರಿಗಳು ಜನರ ವಿಶ್ವಾಸದ ಕೇಂದ್ರಗಳಾಗಿರಬೇಕು. ಜನರು ಯಾವುದೇ ಭಯವಿಲ್ಲದೆ, ಯಾವುದೇ ಲಂಚವಿಲ್ಲದೆ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು. ಆದರೆ ಕರ್ನಾಟಕದ ಕೇಂದ್ರ ಬಿಂದುವೆಂದು ಹೆಮ್ಮೆಪಡುವ ಹರಿಹರದಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆದಿರುವ ಬೆಳವಣಿಗೆಗಳನ್ನು ಗಮನಿಸಿದರೆ, "ಸರ್ಕಾರಿ ಕಚೇರಿಗಳು ಜನಸೇವೆಯ ಮಂದಿರಗಳಾಗಿವೆಯೇ, ಅಥವಾ ಭ್ರಷ್ಟಾಚಾರದ ಅಡ್ಡೆಗಳಾಗಿವೆಯೇ?" ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಹರಿಹರದಲ್ಲಿ ಕಳೆದ ಕೆಲವು ವರ್ಷಗಳಿಂದ ಒಂದರ ಹಿಂದೆ ಒಂದರಂತೆ ವಿವಿಧ ಸರ್ಕಾರಿ ಇಲಾಖೆಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಈ ದಾಳಿಗಳು ಕೇವಲ ಒಂದು ಇಲಾಖೆಗೆ ಸೀಮಿತವಾಗದೆ, ವಿವಿಧ ಪ್ರಮುಖ ಇಲಾಖೆಗಳವರೆಗೂ ವಿಸ್ತರಿಸಿವೆ. ಇದರಿಂದ ಹರಿಹರದ ಆಡಳಿತ ವ್ಯವಸ್ಥೆಯ ಪಾರದರ್ಶಕತೆ ಹಾಗೂ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡುವಂತಾಗಿದೆ.

ಲೋಕಾಯುಕ್ತ ದಾಳಿಗಳ ಪಟ್ಟಿ ನೋಡಿದರೆ ಅದು ಸಾಮಾನ್ಯವಲ್ಲ. ಮೊದಲಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಲೋಕಾಯುಕ್ತ ಬಲೆಗೆ ಬಿತ್ತು. ಶಿಕ್ಷಣದಂತಹ ಪವಿತ್ರ ಕ್ಷೇತ್ರದಲ್ಲಿಯೂ ಲಂಚದ ಆರೋಪ ಕೇಳಿಬಂದದ್ದು ಜನರಿಗೆ ಆಘಾತ ತಂದಿತ್ತು. ಅದರ ನಂತರ ಹರಿಹರ ನಗರಸಭೆ ಅಧಿಕಾರಿಗಳ ಮೇಲೆ ಲೋಕಾಯುಕ್ತ ಟ್ರ್ಯಾಪ್ ನಡೆಯಿತು. ನಗರಸಭೆಯ ಆಯುಕ್ತರು ಹಾಗೂ ಅಧಿಕಾರಿಗಳ ವಿರುದ್ಧದ ಕ್ರಮಗಳು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾದವು. ನಗರಸಭೆಯ ಚುನಾಯಿತ ಜನಪ್ರತಿನಿಧಿಗಳ ಹೆಸರೂ ಹಲವು ಆರೋಪಗಳಲ್ಲಿ ಕೇಳಿಬಂದದ್ದು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿತು.
ಅಲ್ಲಿಗೆ ದಾಳಿಗಳು ನಿಲ್ಲಲಿಲ್ಲ. ಅಗ್ನಿಶಾಮಕ,  ಬೆಸ್ಕಾಂ ಇಲಾಖೆ, ಸಬ್-ರಿಜಿಸ್ಟ್ರಾರ್ ಕಚೇರಿ, ಅಬಕಾರಿ ಇಲಾಖೆ, ತಾಲೂಕು ಪಂಚಾಯಿತಿ, ಭೂಮಾಪನ ಇಲಾಖೆ ಸೇರಿದಂತೆ ಒಂದರ ಹಿಂದೆ ಒಂದರಂತೆ ಹಲವು ಸರ್ಕಾರಿ ಇಲಾಖೆಗಳು ಲೋಕಾಯುಕ್ತ ತನಿಖೆಯ ವ್ಯಾಪ್ತಿಗೆ ಬಂದವು. ಅನೇಕ ಕಡೆ ಅಧಿಕಾರಿಗಳು ಸಾರ್ವಜನಿಕರಿಂದ ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿರುವುದು ದಾಖಲಾಗಿತ್ತು.
ಇದು ಕೇವಲ ಅಧಿಕಾರಿಗಳು ಸಿಕ್ಕಿಬಿದ್ದ ಪ್ರಕರಣಗಳಲ್ಲ. ಇದು ಸರ್ಕಾರಿ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೆ ಬಿದ್ದ ದೊಡ್ಡ ಹೊಡೆತವಾಗಿದೆ.

ಜನಸಾಮಾನ್ಯರ ಆರೋಪ ಏನೆಂದರೆ, ಸರ್ಕಾರಿ ಕಚೇರಿಗಳಿಗೆ ಹೋದರೆ ಮೊದಲಿಗೆ ಕೆಲಸದ ಬಗ್ಗೆ ಮಾತನಾಡುವುದಿಲ್ಲ. ಕಡತ ಎಷ್ಟು ದಿನದಲ್ಲಿ ಮುಗಿಯುತ್ತದೆ ಎಂಬುದಕ್ಕಿಂತ "ಎಷ್ಟು ಕೊಡುತ್ತೀರಿ?" ಎಂಬ ಪ್ರಶ್ನೆ ಕೇಳುವ ಸಂಸ್ಕೃತಿ ಬೆಳೆಯುತ್ತಿದೆ. ಹಕ್ಕಿನ ಕೆಲಸಕ್ಕೂ ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬುದು ಜನರ ನೋವು.
ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಭೂ ದಾಖಲೆ, ಪಹಣಿ, ನೋಂದಣಿ, ವಿದ್ಯುತ್ ಸಂಪರ್ಕ, ಕಟ್ಟಡ ಅನುಮತಿ, ತೆರಿಗೆ, ನಿವೇಶನ ದಾಖಲೆ, ವಿವಿಧ ಯೋಜನೆಗಳ ಅನುಮೋದನೆ ಸೇರಿದಂತೆ ಅನೇಕ ಕೆಲಸಗಳಿಗೆ ಜನರು ಕಚೇರಿಗಳ ಅಲೆದಾಡುತ್ತಿದ್ದಾರೆ. ಆದರೆ ಕೆಲಸಗಳು ನಿಗದಿತ ಸಮಯದಲ್ಲಿ ಆಗುತ್ತಿಲ್ಲ ಎಂಬ ದೂರುಗಳು ನಿರಂತರವಾಗಿ ಕೇಳಿಬರುತ್ತಿವೆ.

ಕೆಲವರು ತಿಂಗಳುಗಟ್ಟಲೆ ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡಿದರೂ ಕೆಲಸ ಆಗುವುದಿಲ್ಲ. ಆದರೆ ಮಧ್ಯವರ್ತಿಗಳ ಮೂಲಕ ಹೋದರೆ ಅಥವಾ ಲಂಚ ನೀಡಿದರೆ ಅದೇ ಕೆಲಸ ಕೆಲವೇ ದಿನಗಳಲ್ಲಿ ಮುಗಿಯುತ್ತದೆ ಎಂಬ ಆರೋಪವನ್ನು ಸಾರ್ವಜನಿಕರು ಬಹಿರಂಗವಾಗಿ ಮಾಡುತ್ತಿದ್ದಾರೆ. ಇಂತಹ ಆರೋಪಗಳೇ ಲೋಕಾಯುಕ್ತ ದಾಳಿಗಳಿಗೆ ಪ್ರಮುಖ ಕಾರಣವಾಗಿವೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರಿ ಸೇವೆ ಎನ್ನುವುದು ಜನರ ಹಕ್ಕು. ಅಧಿಕಾರಿಗಳು ನೀಡುವ ಉಪಕಾರವಲ್ಲ. ಆದರೆ ಇಂದು ಅನೇಕ ಕಡೆಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಜನಸೇವೆ ಮಾಡುವ ಕರ್ತವ್ಯವನ್ನು ಕೆಲವರು ಹಣ ಸಂಪಾದಿಸುವ ಅವಕಾಶವನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಇದರಿಂದ ನಿಜವಾದ ನಷ್ಟವಾಗುತ್ತಿರುವುದು ಸಾಮಾನ್ಯ ನಾಗರಿಕರಿಗೆ. ದಿನಗೂಲಿ ಕಾರ್ಮಿಕ, ರೈತ, ವಿಧವೆ, ಹಿರಿಯ ನಾಗರಿಕ, ವಿದ್ಯಾರ್ಥಿ – ಎಲ್ಲರೂ ತಮ್ಮ ಕೆಲಸ ಮಾಡಿಸಿಕೊಳ್ಳಲು ಕಚೇರಿಗಳ ಮುಂದೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಕಚೇರಿಗೆ ಹೋಗುವುದು ಎಂದರೆ ಜನರಿಗೆ ಮಾನಸಿಕ ಒತ್ತಡವಾಗುತ್ತಿದೆ.

ಹರಿಹರ ನಗರ ಅಭಿವೃದ್ಧಿಯಾಗಬೇಕೆಂದರೆ ಮೊದಲು ಆಡಳಿತ ವ್ಯವಸ್ಥೆ ಅಭಿವೃದ್ಧಿಯಾಗಬೇಕು. ಆದರೆ ಇಂದು ಅಭಿವೃದ್ಧಿಗಿಂತ ಭ್ರಷ್ಟಾಚಾರದ ಸುದ್ದಿಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ನಗರಕ್ಕೆ ಹೊಸ ಯೋಜನೆಗಳು ಬರಬೇಕಾದರೆ, ಹೂಡಿಕೆದಾರರು ಬರಬೇಕಾದರೆ, ಕೈಗಾರಿಕೆಗಳು ಬೆಳೆಯಬೇಕಾದರೆ ಆಡಳಿತದ ಮೇಲೆ ವಿಶ್ವಾಸ ಇರಬೇಕು. ಭ್ರಷ್ಟಾಚಾರದ ಆರೋಪಗಳು ಹೆಚ್ಚಿದಂತೆ ಅಭಿವೃದ್ಧಿಯ ವೇಗವೂ ಕುಂಠಿತವಾಗುತ್ತದೆ.
ಜನರಿಂದ ಸಂಗ್ರಹವಾಗುವ ತೆರಿಗೆ ಹಣವೇ ಸರ್ಕಾರದ ಆದಾಯ. ಅದೇ ಹಣದಲ್ಲಿ ಅಧಿಕಾರಿಗಳಿಗೆ ಸಂಬಳ ನೀಡಲಾಗುತ್ತದೆ. ಆದರೆ ಸಾರ್ವಜನಿಕರ ಸೇವೆಗೆ ನೇಮಕಗೊಂಡ ಕೆಲ ಅಧಿಕಾರಿಗಳು ಜನರ ಜೇಬಿನ ಮೇಲೆಯೇ ಕಣ್ಣು ಹಾಕಿದರೆ ಆಡಳಿತ ವ್ಯವಸ್ಥೆಯ ಅರ್ಥವೇ ಕಳೆದುಹೋಗುತ್ತದೆ.

"ಜನರ ರಕ್ತ ಹೀರಿ ಕಟ್ಟಿದ ಮನೆಗಳು ಕಳ್ಳರ ಅರಮನೆಗಳಾಗಿವೆ" ಎಂಬ ಮಾತು ಇಂದು ಸಾರ್ವಜನಿಕರ ಬಾಯಲ್ಲಿ ಕೇಳಿಬರುತ್ತಿದೆ. ಕಾನೂನುಬಾಹಿರವಾಗಿ ಗಳಿಸಿದ ಹಣದಲ್ಲಿ ವೈಭವದ ಜೀವನ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮವಾಗಬೇಕು ಎಂಬುದು ಜನರ ಒತ್ತಾಯವಾಗಿದೆ.
ಇಲ್ಲಿ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ. ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದ ಅಧಿಕಾರಿಗಳ ವಿರುದ್ಧ ನಂತರ ಏನಾಯಿತು?

ಸಾರ್ವಜನಿಕರ ಆರೋಪದ ಪ್ರಕಾರ, ಅನೇಕ ಅಧಿಕಾರಿಗಳು ಟ್ರ್ಯಾಪ್ ಆದ ನಂತರವೂ ಕೆಲವರು ಅದೇ ಕಚೇರಿಗಳಲ್ಲಿ ಅಥವಾ ಅದೇ ರೀತಿಯ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಜನರಲ್ಲಿ "ಲೋಕಾಯುಕ್ತ ದಾಳಿ ನಡೆದರೂ ಏನೂ ಆಗುವುದಿಲ್ಲ" ಎಂಬ ಭಾವನೆ ಮೂಡುತ್ತಿದೆ. ಟ್ರ್ಯಾಪ್ ಆದ ಅಧಿಕಾರಿಗಳ ವಿರುದ್ಧ ಇಲಾಖಾ ಮಟ್ಟದಲ್ಲಿ ತ್ವರಿತ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರದ ವಿರುದ್ಧ ಪ್ರಮುಖ ಹೋರಾಟ ನಡೆಸುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಟ್ರ್ಯಾಪ್ ಮಾಡಿದ ನಂತರ ಪ್ರಕರಣಗಳು ವರ್ಷಗಳ ಕಾಲ ನ್ಯಾಯಾಲಯಗಳಲ್ಲಿ ಬಾಕಿ ಉಳಿಯುವುದು, ಆಡಳಿತಾತ್ಮಕ ಕ್ರಮ ವಿಳಂಬವಾಗುವುದು, ತಪ್ಪಿತಸ್ಥರ ವಿರುದ್ಧ ತಕ್ಷಣದ ಶಿಸ್ತು ಕ್ರಮ ಕೈಗೊಳ್ಳದಿರುವುದು ಜನರಲ್ಲಿ ನಿರಾಸೆ ಉಂಟುಮಾಡುತ್ತಿದೆ.

ಭ್ರಷ್ಟಾಚಾರ ನಿರ್ಮೂಲನೆ ಕೇವಲ ಲೋಕಾಯುಕ್ತರ ಜವಾಬ್ದಾರಿ ಅಲ್ಲ. ಸರ್ಕಾರ, ಜಿಲ್ಲಾಡಳಿತ, ಇಲಾಖೆಯ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಎಲ್ಲರೂ ಸೇರಿ ಕೆಲಸ ಮಾಡಿದಾಗ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ.

ಹರಿಹರದಂತಹ ಐತಿಹಾಸಿಕ ನಗರ ಭ್ರಷ್ಟಾಚಾರದ ಕಾರಣಕ್ಕೆ ಸುದ್ದಿಯಾಗುವುದು ನಿಜಕ್ಕೂ ವಿಷಾದದ ಸಂಗತಿ. ಹರಿಹರ ಎಂದರೆ ಹರಿಹರೇಶ್ವರ ದೇವಾಲಯ, ಇತಿಹಾಸ, ಸಂಸ್ಕೃತಿ ಮತ್ತು ಅಭಿವೃದ್ಧಿಯ ಕನಸು ನೆನಪಾಗಬೇಕು. ಆದರೆ ಸರ್ಕಾರಿ ಇಲಾಖೆಗಳ ಮೇಲೆ ನಡೆಯುತ್ತಿರುವ ನಿರಂತರ ಲೋಕಾಯುಕ್ತ ದಾಳಿಗಳೇ ಹೆಚ್ಚು ಚರ್ಚೆಯಾಗುತ್ತಿರುವುದು ಆಡಳಿತ ವ್ಯವಸ್ಥೆಗೆ ಎಚ್ಚರಿಕೆಯ ಗಂಟೆಯಾಗಿದೆ.
ಪ್ರಾಮಾಣಿಕ ಅಧಿಕಾರಿಗಳೂ ಇದೇ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪರಿಶ್ರಮ ಮತ್ತು ನಿಷ್ಠೆ ಮರೆಮಾಚಲ್ಪಡಬಾರದು. ಆದರೆ ಕೆಲ ಭ್ರಷ್ಟ ಅಧಿಕಾರಿಗಳ ವರ್ತನೆಯಿಂದ ಇಡೀ ಇಲಾಖೆಯ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ ಭ್ರಷ್ಟರನ್ನು ರಕ್ಷಿಸುವ ಬದಲು, ಪ್ರಾಮಾಣಿಕರನ್ನು ಪ್ರೋತ್ಸಾಹಿಸುವ ಆಡಳಿತ ವ್ಯವಸ್ಥೆ ನಿರ್ಮಾಣವಾಗಬೇಕು.

ಇಂದು ಹರಿಹರದ ಜನರು ಒಂದೇ ಪ್ರಶ್ನೆ ಕೇಳುತ್ತಿದ್ದಾರೆ – "ಲೋಕಾಯುಕ್ತ ದಾಳಿಗಳು ಮುಂದುವರಿಯುತ್ತಿವೆ. ಆದರೆ ಭ್ರಷ್ಟಾಚಾರ ಏಕೆ ಕಡಿಮೆಯಾಗುತ್ತಿಲ್ಲ?" ಈ ಪ್ರಶ್ನೆಗೆ ಉತ್ತರ ನೀಡಬೇಕಿರುವುದು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳೇ.

ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಈಗಾಗಲೇ ಹರಿಹರದ ಅನೇಕ ಪ್ರಮುಖ ಗ್ರೇಡ್–1 ಇಲಾಖೆಗಳು ಲೋಕಾಯುಕ್ತ ತನಿಖೆಯ ವ್ಯಾಪ್ತಿಗೆ ಬಂದಿವೆ. ಮುಂದಿನ ದಿನಗಳಲ್ಲಿ ಇನ್ನಾವ ಇಲಾಖೆ ಲೋಕಾಯುಕ್ತ ಬಲೆಗೆ ಬೀಳಬಹುದು ಎಂಬ ಕುತೂಹಲವೂ ಜನರಲ್ಲಿ ಮನೆ ಮಾಡಿದೆ.

ಹರಿಹರ ಅಭಿವೃದ್ಧಿಯ ಕನಸು ನನಸಾಗಬೇಕಾದರೆ ಮೊದಲು ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ಬರಬೇಕು. ಜನರ ಕೆಲಸಗಳು ನಿಗದಿತ ಸಮಯದಲ್ಲಿ ಆಗಬೇಕು. ಮಧ್ಯವರ್ತಿಗಳ ಹಾವಳಿ ನಿಲ್ಲಬೇಕು. ಲಂಚ ಕೇಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಬೇಕು. ಲೋಕಾಯುಕ್ತ ದಾಳಿಗಳು ಕೇವಲ ಸುದ್ದಿಯಾಗದೆ, ಆಡಳಿತದಲ್ಲಿ ಶಾಶ್ವತ ಬದಲಾವಣೆ ತರಬೇಕು. ಆಗ ಮಾತ್ರ ಜನರು ಮತ್ತೆ ಸರ್ಕಾರಿ ವ್ಯವಸ್ಥೆಯ ಮೇಲೆ ವಿಶ್ವಾಸ ಇಡುತ್ತಾರೆ.
ಕಳ್ಳರ ಅರಮನೆಗಳಿಗೆ ಬೀಗ ಹಾಕುವ ಸಮಯ ಈಗ ಬಂದಿದೆ. ಇಲ್ಲವಾದರೆ ಅಭಿವೃದ್ಧಿಯ ಕನಸು ಕಾಗದದಲ್ಲೇ ಉಳಿದು, ಜನರ ಆಶೆಗಳು ಭ್ರಷ್ಟಾಚಾರದ ಕತ್ತಲಲ್ಲಿ ಕಣ್ಮರೆಯಾಗುವ ಅಪಾಯವಿದೆ.

Post a Comment

0 Comments