ರೈತರ ಬದುಕಿಗಾಗಿ ‘ಮಾಡು ಇಲ್ಲವೇ ಮಡಿ’ ಹೋರಾಟ: ಎಚ್.ಎಸ್. ಶಿವಶಂಕರ್.

ಮಂದಾರ ಜ್ವಾಲೆ | ಹರಿಹರ

ಹರಿಹರ ವಿಧಾನಸಭಾ ಕ್ಷೇತ್ರದ ರೈತರ ಹಿತಕ್ಕಾಗಿ ಕೂಡಲೇ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಎನ್‌ಡಿಎ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕರಾದ ಬಿ.ಪಿ. ಹರೀಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ರೈತ ಸಂಘಟನೆಗಳು ಹಾಗೂ ವಿವಿಧ ಜನಪರ ಸಂಘಟನೆಗಳ ಸಹಯೋಗದಲ್ಲಿ ರೈತರ ಪರವಾಗಿ ಹೋರಾಟ ನಡೆಸಲಾಗುವುದು ಎಂದರು.

ತಾಲೂಕಿನ ರೈತರಿಗೆ ತಕ್ಷಣ ನೀರು ಒದಗಿಸಬೇಕಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿಳಂಬದ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಶಿವಶಂಕರ್, ಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆ ಇದ್ದರೂ ರೈತರ ಬೆಳೆಗಳಿಗೆ ಅಗತ್ಯ ನೀರು ನೀಡದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತರೀಕೆರೆ ಭಾಗಕ್ಕೆ ಮೂರು ಟಿಎಂಸಿ ನೀರನ್ನು ಹೊಸ ಪೈಪ್‌ಲೈನ್ ಮೂಲಕ ತೆಗೆದುಕೊಂಡು ಹೋಗಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಟ್ರಯಲ್ ರನ್‌ಗೆ ಆದೇಶಿಸಿರುವ ವಿಚಾರವನ್ನು ಪ್ರಸ್ತಾಪಿಸಿದ ಅವರು, ಜಲಾಶಯದಲ್ಲಿ ಹೆಚ್ಚುವರಿ ನೀರು ಲಭ್ಯವಿದ್ದರೆ ಅದನ್ನು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಹರಿಹರ ತಾಲೂಕಿನ ರೈತರ ಬೆಳೆಗಳಿಗೆ ಅಗತ್ಯ ನೀರು ದೊರೆಯದ ಸಂದರ್ಭದಲ್ಲಿ ಬೇರೆಡೆಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳುವುದು ರೈತರಲ್ಲಿ ಅಸಮಾಧಾನ ಮೂಡಿಸಿದೆ ಎಂದರು.

“ನಮ್ಮ ರೈತರಿಗೆ ನೀರು ಕೊಡುವುದರಲ್ಲಿ ವಿಳಂಬ ಏಕೆ?” ಎಂಬ ಪ್ರಶ್ನೆ ಎತ್ತಿದ ಅವರು, ಜಿಲ್ಲೆಯ ಇಬ್ಬರು ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಕೂಡಲೇ ಭದ್ರಾ ನೀರು ಬಿಡುಗಡೆ ಮಾಡಿಸಬೇಕು ಎಂದು ಆಗ್ರಹಿಸಿದರು.

ರಾಜಕೀಯ ಬಣಗಳು, ಗುಂಪುಗಳು ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಜಿಲ್ಲೆಯ ರೈತರ ಬದುಕಿನ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ರಾಜಕೀಯ ಲೆಕ್ಕಾಚಾರ ಬದಿಗಿಟ್ಟು ರೈತರ ಪರವಾಗಿ ನಿಲ್ಲಬೇಕು ಎಂದು ಅವರು ಹೇಳಿದರು.

ರೈತರು ಸಾವು–ಬದುಕಿನ ಹೋರಾಟದಲ್ಲಿದ್ದಾರೆ

ರೈತರು ಬದುಕುಳಿದರೆ ಮಾತ್ರ ಸಮಾಜ ಬದುಕಲು ಸಾಧ್ಯ. ರೈತರೇ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಅವರ ಬೆನ್ನಿಗೆ ನಿಲ್ಲುವುದು ಪ್ರತಿಯೊಬ್ಬರ ಜವಾಬ್ದಾರಿ. ರೈತರ ಬೆಳೆಗಳಿಗೆ ನೀರು ದೊರೆಯದಿದ್ದರೆ ಅವರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಶಿವಶಂಕರ್ ಎಚ್ಚರಿಸಿದರು.

ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ತಾಲೂಕಿನ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು, ರೈತ ಮುಖಂಡರು, ಕನ್ನಡಪರ ಸಂಘಟನೆಗಳು, ಜನಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಪ್ರಗತಿಪರ ಹೋರಾಟಗಾರರು ಪಕ್ಷಾತೀತವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಕಾವೇರಿ ನೀರು ತಮಿಳುನಾಡಿಗೆ ಬಿಡುವ ವಿಚಾರ ಬಂದಾಗ ಕನ್ನಡಪರ ಸಂಘಟನೆಗಳು ರೈತರ ಪರವಾಗಿ ಬೀದಿಗಿಳಿದು ಹೋರಾಟ ನಡೆಸುತ್ತವೆ. ಅದೇ ರೀತಿ ಇದೀಗ ಹರಿಹರ ತಾಲೂಕಿನ ರೈತರ ಬದುಕಿಗಾಗಿ ನಡೆಯುತ್ತಿರುವ ಹೋರಾಟಕ್ಕೂ ಕನ್ನಡಪರ ಸಂಘಟನೆಗಳು ಬೆಂಬಲ ನೀಡಬೇಕು. ತಾಲೂಕಿನ ರೈತರ ಹಿತಕ್ಕಾಗಿ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.

ಮಠಾಧೀಶರಿಗೂ ಹೋರಾಟಕ್ಕೆ ಆಹ್ವಾನ

ರೈತರ ಬದುಕು ಮತ್ತು ನೀರಿನ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ತಾಲೂಕಿನ ವಿವಿಧ ಮಠಾಧೀಶರು ಹಾಗೂ ಪೀಠಾಧಿಪತಿಗಳು ಭಾಗವಹಿಸಬೇಕು ಎಂದು ಶಿವಶಂಕರ್ ಮನವಿ ಮಾಡಿದರು. ಈಗಾಗಲೇ ಹಲವು ಮಠಗಳ ಸ್ವಾಮೀಜಿಗಳನ್ನು ಭೇಟಿಯಾಗಿ ಹೋರಾಟಕ್ಕೆ ಆಗಮಿಸುವಂತೆ ಮನವಿ ಮಾಡಿದ್ದು, ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ನಾಳೆ ಬೆಳಗ್ಗೆ 11 ಗಂಟೆಗೆ ನಗರದ ನೀರಾವರಿ ಇಲಾಖೆಯ ಕಚೇರಿ ಮುಂಭಾಗದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ರೈತರ ಹಕ್ಕಿಗಾಗಿ ನಡೆಯುವ ಈ ಹೋರಾಟದಲ್ಲಿ ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.

“ಇದು ರೈತರಿಗಾಗಿ ಮಾಡು ಇಲ್ಲವೇ ಮಡಿ ಹೋರಾಟ”

ನಾಳೆಯ ಹೋರಾಟ ಕೇವಲ ಪ್ರತಿಭಟನೆಯಲ್ಲ; ತಾಲೂಕಿನ ರೈತರ ಬದುಕು ಮತ್ತು ಭವಿಷ್ಯಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ. ರೈತರ ಹಿತ ಕಾಪಾಡಲು ಯಾವುದೇ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ. ರೈತರೊಂದಿಗೆ ಸದಾ ನಿಲ್ಲುತ್ತೇವೆ ಎಂದು ಎಚ್.ಎಸ್. ಶಿವಶಂಕರ್ ಘೋಷಿಸಿದರು.

ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ 170 ಅಡಿಗೂ ಅಧಿಕವಿದ್ದು, ಮುಂದಿನ ಬೆಳೆ ಹಾಗೂ ಬೇಸಿಗೆ ಅವಧಿಗೆ ಅಗತ್ಯವಿರುವಷ್ಟು ನೀರು ಲಭ್ಯವಿದೆ ಎಂದು ಅವರು ಹೇಳಿದರು. ಇಂತಹ ಸಂದರ್ಭದಲ್ಲಿ ರೈತರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವುದು ಅಥವಾ ಬಣಗಳನ್ನು ನಿರ್ಮಿಸುವ ಪ್ರಯತ್ನಗಳು ನಡೆಯಬಾರದು. ನೀರಿನ ವಿಚಾರದಲ್ಲಿ ರೈತರನ್ನು ಒಗ್ಗೂಡಿಸಿ ನ್ಯಾಯಯುತವಾಗಿ ನೀರು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ವಿಳಂಬ ಮಾಡದೆ ಕೂಡಲೇ ಹರಿಹರ ತಾಲೂಕಿನ ರೈತರ ಬೆಳೆಗಳಿಗೆ ಅಗತ್ಯವಿರುವ ಭದ್ರಾ ನೀರನ್ನು ಬಿಡುಗಡೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ರೈತರ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಶಿವಶಂಕರ್ ಎಚ್ಚರಿಕೆ ನೀಡಿದರು.

“ರೈತರ ಬದುಕು ಉಳಿಯಬೇಕು. ಬೆಳೆ ಉಳಿಯಬೇಕು. ಭದ್ರಾ ನೀರು ಹರಿಯಬೇಕು. ಇದಕ್ಕಾಗಿ ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಹೋರಾಟಕ್ಕೆ ಕೈಜೋಡಿಸಬೇಕು” ಎಂದು ಅವರು ಮನವಿ ಮಾಡಿದರು.


Post a Comment

0 Comments