ಪತ್ರಕರ್ತರ ವಿಚಾರದಲ್ಲಿ ಇರುವ ಕಾಳಜಿ ರೈತರ ಮೇಲೂ ಇರಲಿ: ಹರಿಹರ ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿದ್ದೇಕೆ?

ಜಿಲ್ಲಾಧಿಕಾರಿಗಳೇ, ಹರಿಹರದ ರೈತರ ಸಂಕಷ್ಟ ಕಣ್ಣಿಗೆ ಕಾಣುತ್ತಿಲ್ಲವೇ? – ಭದ್ರಾ ನೀರಿಗಾಗಿ ಹೋರಾಟ, ಮಳೆಗಾಲದ ಬೆಳೆ ನಷ್ಟದ ನಡುವೆ ರೈತರ ಅಳಲು

ಹರಿಹರ: ದಾವಣಗೆರೆ ಜಿಲ್ಲಾಧಿಕಾರಿಗಳು ಪತ್ರಕರ್ತರ ವಿಚಾರದಲ್ಲಿ ತೋರಿಸುತ್ತಿರುವ ಆಸಕ್ತಿಯಷ್ಟೇ ಕಾಳಜಿಯನ್ನು ಹರಿಹರ ತಾಲೂಕಿನ ರೈತರ ಸಮಸ್ಯೆಗಳ ವಿಚಾರದಲ್ಲಿಯೂ ತೋರಿಸಿದ್ದರೆ, ಅದೆಷ್ಟೋ ರೈತ ಕುಟುಂಬಗಳು ಸಂಕಷ್ಟದಿಂದ ಪಾರಾಗಬಹುದಿತ್ತು ಎಂಬ ಮಾತುಗಳು ಇದೀಗ ತಾಲೂಕಿನಾದ್ಯಂತ ಕೇಳಿಬರುತ್ತಿವೆ.

ಹರಿಹರ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗಿಡಲಾಗಿದ್ದು, ಈ ನಿರ್ಧಾರ ತಾಲೂಕಿನ ರೈತ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹರಿಹರ ತಾಲೂಕಿನಲ್ಲಿ ಸಮೃದ್ಧವಾಗಿ ಮಳೆಯಾಗಿದೆಯೇ? ರೈತರು ಸಮೃದ್ಧ ಸ್ಥಿತಿಯಲ್ಲಿದ್ದಾರೆಯೇ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಭದ್ರಾ ನೀರಿಗಾಗಿ ಹರಿಹರ ತಾಲೂಕಿನಲ್ಲಿ ನಿರಂತರವಾಗಿ ಹೋರಾಟಗಳು ನಡೆಯುತ್ತಿದ್ದರೂ, ರೈತರ ಸಮಸ್ಯೆಗಳು ಜಿಲ್ಲಾಡಳಿತದ ಗಮನಕ್ಕೆ ಬಂದಿಲ್ಲವೇ ಎಂಬ ಪ್ರಶ್ನೆಯೂ ಎದುರಾಗಿದೆ.

ಹರಿಹರ ತಾಲೂಕಿನ ಬಹುತೇಕ ಭದ್ರಾ ನೀರನ್ನು ಅವಲಂಬಿಸಿರುವ ಅಚ್ಚುಕಟ್ಟು ಪ್ರದೇಶದ ರೈತರು ಮಳೆಗಾಲದ ಹಂಗಾಮಿನಲ್ಲಿಯೂ ಬೆಳೆ ಬೆಳೆಯಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿನ ಕೊರತೆ, ಮಳೆಯ ಅನಿಶ್ಚಿತತೆ ಹಾಗೂ ಕೃಷಿ ಚಟುವಟಿಕೆಗಳಿಗೆ ಎದುರಾಗಿರುವ ಹಲವು ಸಮಸ್ಯೆಗಳಿಂದ ರೈತರು ಕಂಗೆಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರಾ ನೀರು ಒದಗಿಸುವಂತೆ ಆಗ್ರಹಿಸಿ ಹರಿಹರ ತಾಲೂಕಿನಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನೇತೃತ್ವದಲ್ಲಿ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಹಲವು ಹೋರಾಟಗಳು ನಡೆದಿವೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ವಿರುದ್ಧವೂ ರೈತರು ಹಾಗೂ ಹೋರಾಟಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಗಳು ಜಿಲ್ಲಾಡಳಿತದ ಗಮನಕ್ಕೂ ಬಂದಿವೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

12 ಕಿ.ಮೀ. ದೂರದ ತಾಲೂಕಿಗೆ ಭೇಟಿ ಏಕೆ ಅಪರೂಪ?

ಹರಿಹರ ತಾಲೂಕು ದಾವಣಗೆರೆ ಜಿಲ್ಲಾ ಕೇಂದ್ರದಿಂದ ಕೇವಲ ಸುಮಾರು 12 ಕಿಲೋಮೀಟರ್ ದೂರದಲ್ಲಿದೆ. ಇಂತಹ ಸಮೀಪದ ತಾಲೂಕು ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ರೈತರ ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ನೇರವಾಗಿ ಆಲಿಸುವುದು ಕಷ್ಟದ ಕೆಲಸವೇನಲ್ಲ. ಆದರೆ ಜಿಲ್ಲಾಧಿಕಾರಿಗಳ ಹರಿಹರ ಭೇಟಿ ಕೆಲ ನಿರ್ದಿಷ್ಟ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿರುವಂತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ವಿಶೇಷವಾಗಿ ಊರಮ್ಮನ ಜಾತ್ರೆ ಹಿನ್ನೆಲೆಯಲ್ಲಿ ಸರ್ಕಾರದಿಂದ ಮರಳು ತೆಗೆಯಲು ಗುತ್ತಿಗೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಭೇಟಿ ನೀಡಿರುವುದನ್ನು ಹೊರತುಪಡಿಸಿದರೆ, ಹರಿಹರ ತಾಲೂಕಿನ ರೈತರು ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಜಿಲ್ಲಾಧಿಕಾರಿಗಳು ಭೇಟಿ ನೀಡಿರುವುದು ಅಪರೂಪ ಎಂಬ ಮಾತುಗಳು ಕೇಳಿಬರುತ್ತಿವೆ.

ಹರಿಹರ ತಾಲೂಕು ಕಚೇರಿಗೆ ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸಿ, ತಾಲೂಕಿನ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆಯೇ ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿದೆ. ಜಿಲ್ಲಾಧಿಕಾರಿಗಳು ಅಧಿಕಾರ ವಹಿಸಿಕೊಂಡ ನಂತರ ಇದುವರೆಗೂ ಹರಿಹರ ತಾಲೂಕು ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ ಉದಾಹರಣೆಗಳು ಇಲ್ಲವೇ ಎಂಬ ಪ್ರಶ್ನೆಗೆ ಜಿಲ್ಲಾಡಳಿತವೇ ಉತ್ತರ ನೀಡಬೇಕಾಗಿದೆ.

ಬರ ಸಮೀಕ್ಷೆ ಹೇಗೆ ನಡೆಯಿತು?

ಹರಿಹರ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಆದರೆ ಈ ನಿರ್ಧಾರ ಕೈಗೊಳ್ಳುವ ಮೊದಲು ಯಾವಾಗ ಸಮೀಕ್ಷೆ ನಡೆಸಲಾಯಿತು? ಯಾವ ಯಾವ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿದರು? ಯಾವ ದಿನಾಂಕದಂದು ರೈತರನ್ನು ಭೇಟಿ ಮಾಡಲಾಯಿತು? ಸಮೀಕ್ಷೆಯ ಸಂದರ್ಭದಲ್ಲಿ ರೈತರ ಪರಿಸ್ಥಿತಿ ಹೇಗಿತ್ತು? ಅಧಿಕಾರಿಗಳ ಗಮನಕ್ಕೆ ಬಂದ ಪ್ರಮುಖ ಸಮಸ್ಯೆಗಳೇನು? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಅಗತ್ಯವಾಗಿದೆ.

ಬರ ಸಮೀಕ್ಷೆ ನಡೆಸುವ ಮುನ್ನ ತಾಲೂಕು ಮಟ್ಟದಲ್ಲಿ ಸಮರ್ಪಕ ಪೂರ್ವಭಾವಿ ಸಭೆ ನಡೆಯಬೇಕಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯ. ಶಾಸಕರ ನೇತೃತ್ವದಲ್ಲಿ ಕಾನೂನುಬದ್ಧ ಸಭೆ ನಡೆಸಿ, ಬರ ಪರಿಸ್ಥಿತಿಯ ಕುರಿತು ಚರ್ಚಿಸಿ, ನಂತರ ಸಮೀಕ್ಷೆಗೆ ಯಾವ ಯಾವ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿರಬೇಕು, ಅವರ ಜವಾಬ್ದಾರಿಗಳೇನು ಎಂಬುದನ್ನು ಸ್ಪಷ್ಟಪಡಿಸಿ, ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮರ್ಪಕವಾಗಿ ಬರ ಸಮೀಕ್ಷೆ ನಡೆಸಬೇಕಿತ್ತು.

ಆದರೆ ಈ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆದಿವೆಯೇ ಎಂಬ ಪ್ರಶ್ನೆ ಇದೀಗ ಎದ್ದಿದೆ. ಇಂತಹ ಯಾವುದೇ ಸಮಗ್ರ ಪ್ರಕ್ರಿಯೆಯ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾಗದೆ ಹರಿಹರ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಹೊರಗಿಟ್ಟಿರುವುದು ರೈತರಲ್ಲಿ ಅನುಮಾನ ಮೂಡಿಸಿದೆ.

ಮಲತಾಯಿ ಧೋರಣೆಯ ಆರೋಪಕ್ಕೆ ಉತ್ತರ ಯಾರು?

ಹರಿಹರ ತಾಲೂಕಿನ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಜಿಲ್ಲಾಡಳಿತ ನಿರೀಕ್ಷಿತ ಮಟ್ಟದ ಆಸಕ್ತಿ ತೋರಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಇದರಿಂದ ಜಿಲ್ಲಾಡಳಿತವು ತಾಲೂಕಿನ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆಯೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬಂದಿದೆ.

ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹರಿಹರ ಹೊರಗುಳಿದಿರುವುದರಿಂದ ರೈತರಿಗೆ ಸರ್ಕಾರದಿಂದ ದೊರೆಯಬಹುದಾದ ಹಲವು ಸೌಲಭ್ಯಗಳು ಹಾಗೂ ಪರಿಹಾರ ಕ್ರಮಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಆತಂಕ ರೈತ ಸಮುದಾಯದಲ್ಲಿದೆ. ಈಗಾಗಲೇ ಮಳೆಗಾಲದಲ್ಲಿಯೂ ಬೆಳೆ ಬೆಳೆಯಲು ಸಾಧ್ಯವಾಗದೆ ಸಂಕಷ್ಟದಲ್ಲಿರುವ ರೈತರಿಗೆ ಈ ನಿರ್ಧಾರ ಮತ್ತಷ್ಟು ಹೊರೆ ತಂದಂತಾಗಿದೆ.

ಪತ್ರಕರ್ತರ ವಿಚಾರದಲ್ಲಿ ಇರುವ ಆಸಕ್ತಿ ರೈತರ ಮೇಲೂ ಇರಲಿ.

ಮತದಾರರ ಪಟ್ಟಿ ಪರಿಷ್ಕರಣೆಯ ಸಂದರ್ಭದಲ್ಲಿ ಪತ್ರಕರ್ತರ ಕುರಿತು ಜಿಲ್ಲಾಧಿಕಾರಿಗಳು ನೀಡುವ ಹೇಳಿಕೆಗಳಲ್ಲಿ ತೋರಿಸುವ ಆಸಕ್ತಿಯಷ್ಟೇ ತಾಲೂಕಿನ ಜನರು ಹಾಗೂ ರೈತ ಸಮುದಾಯದ ಸಮಸ್ಯೆಗಳ ವಿಚಾರದಲ್ಲಿಯೂ ತೋರಿಸಿದ್ದರೆ, ಅದೆಷ್ಟೋ ರೈತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿರಲಿಲ್ಲ ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲಾಧಿಕಾರಿಗಳು ಪತ್ರಕರ್ತರ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಹೊಂದಿರುವಂತೆಯೇ, ಸಂವಿಧಾನದ 19ನೇ ವಿಧಿಯಡಿ ನಾಗರಿಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದು, ವ್ಯವಸ್ಥೆಯನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಒಂದು ಪ್ರಮುಖ ಭಾಗ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ವ್ಯವಸ್ಥೆಯ ಲೋಪಗಳನ್ನು ಪ್ರಶ್ನಿಸುವ ಪತ್ರಕರ್ತರ ಧ್ವನಿಯನ್ನು ವಿರೋಧವಾಗಿ ನೋಡದೆ, ಅದನ್ನು ಆಡಳಿತ ಸುಧಾರಣೆಗೆ ಸಹಕಾರಿಯಾಗುವ ಧ್ವನಿಯಾಗಿ ಪರಿಗಣಿಸಬೇಕಾಗಿದೆ.

ಜಿಲ್ಲಾಧಿಕಾರಿಗಳೇ, ಈಗಲೂ ಕಾಲ ಮಿಂಚಿಲ್ಲ

ಹರಿಹರ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗಿಡುವ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂಬುದು ರೈತರು ಹಾಗೂ ಸಾರ್ವಜನಿಕರ ಆಗ್ರಹವಾಗಿದೆ. ಜಿಲ್ಲಾಧಿಕಾರಿಗಳು ಹರಿಹರ ತಾಲೂಕಿನ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ರೈತರ ಪರಿಸ್ಥಿತಿಯನ್ನು ಆಲಿಸಬೇಕು. ವಾಸ್ತವಿಕ ಪರಿಸ್ಥಿತಿಯನ್ನು ಆಧರಿಸಿ ಪ್ರಾಮಾಣಿಕ ಹಾಗೂ ಪಾರದರ್ಶಕ ಬರ ಸಮೀಕ್ಷೆ ನಡೆಸಿ, ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಅಗತ್ಯವಿದ್ದರೆ ಹರಿಹರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಕ್ರಮ ಕೈಗೊಳ್ಳಬೇಕು.

ಜಿಲ್ಲಾಧಿಕಾರಿಗಳೇ, ಹರಿಹರ ದಾವಣಗೆರೆ ಜಿಲ್ಲೆಯಿಂದ ದೂರದ ತಾಲೂಕಲ್ಲ. ರೈತರ ಸಮಸ್ಯೆಗಳನ್ನು ಅರಿಯಲು ಗ್ರಾಮಗಳಿಗೆ ಭೇಟಿ ನೀಡುವುದು ಆಡಳಿತದ ಪ್ರಮುಖ ಜವಾಬ್ದಾರಿಯಾಗಿದೆ. ನಗರಸಭೆ ಅಥವಾ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸಿ, ಸರ್ಕಾರಿ ಕಚೇರಿಗಳಿಂದ ಜನರಿಗೆ ಆಗುತ್ತಿರುವ ತೊಂದರೆಗಳು ಹಾಗೂ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಬೇಕು.

ಜನಸಾಮಾನ್ಯರ ತೆರಿಗೆ ಹಣದಿಂದ ಸಂಬಳ ಪಡೆಯುವ ಅಧಿಕಾರಿಗಳು ಜನಸಾಮಾನ್ಯರ ಸೇವಕರು ಎಂಬುದನ್ನು ಮರೆಯಬಾರದು. ಜಿಲ್ಲೆಯ ಎಲ್ಲ ತಾಲೂಕುಗಳ ಜನರೂ ಆಡಳಿತದ ದೃಷ್ಟಿಯಲ್ಲಿ ಸಮಾನರು. ಯಾವ ತಾಲೂಕಿನ ಜನರಿಗೂ ತಾರತಮ್ಯವಾಗಬಾರದು. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು.

ರೈತರು ಈ ದೇಶದ ಬೆನ್ನೆಲುಬು. ರೈತರು ಬೆಳೆದ ಬೆಳೆ ಇಲ್ಲದೆ ಸಮಾಜದ ಯಾವುದೇ ವರ್ಗವೂ ಬದುಕಲು ಸಾಧ್ಯವಿಲ್ಲ. ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ದೇಶದ ಸಮಗ್ರ ಪ್ರಗತಿಯ ಹಿಂದೆ ಕೃಷಿ ಹಾಗೂ ರೈತ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ರೈತರ ಸಮಸ್ಯೆಗಳನ್ನು ಕೇವಲ ಮನವಿ ಅಥವಾ ಹೋರಾಟದ ವಿಷಯವಾಗಿ ನೋಡದೆ, ಆಡಳಿತದ ಆದ್ಯತೆಯ ವಿಷಯವಾಗಿ ಪರಿಗಣಿಸಬೇಕಾಗಿದೆ.

“ಸರ್ಕಾರದ ಕೆಲಸ ದೇವರ ಕೆಲಸ” ಎಂಬ ಆಶಯದೊಂದಿಗೆ ಅಧಿಕಾರಿಗಳು ಕಾರ್ಯನಿರ್ವಹಿಸಿದರೆ ಮಾತ್ರ ಜನರಲ್ಲಿ ಆಡಳಿತದ ಮೇಲಿನ ವಿಶ್ವಾಸ ಮತ್ತಷ್ಟು ಬಲವಾಗುತ್ತದೆ. ಜಿಲ್ಲಾಧಿಕಾರಿಗಳು ಹರಿಹರ ತಾಲೂಕಿನ ರೈತರ ನೋವು-ನಲಿವುಗಳನ್ನು ಅರಿತು, ಗ್ರಾಮಗಳಿಗೆ ಭೇಟಿ ನೀಡಿ, ವಾಸ್ತವಿಕ ಪರಿಸ್ಥಿತಿಯನ್ನು ಪರಿಶೀಲಿಸಿ, ಅರ್ಹ ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು.

ಹರಿಹರದ ಅಭಿವೃದ್ಧಿ, ರೈತರ ಬದುಕು ಹಾಗೂ ಜನಸಾಮಾನ್ಯರ ಹಿತದ ವಿಚಾರದಲ್ಲಿ ಜಿಲ್ಲಾಡಳಿತದ ಕಾಳಜಿ ಸ್ಪಷ್ಟವಾಗಿ ಕಾಣಬೇಕು. ಅಧಿಕಾರಿಗಳು ಇರುವ ಅವಧಿಯಲ್ಲಿ ಜನರಿಗೆ ನೀಡುವ ಸೇವೆ ಜನರ ನೆನಪಿನಲ್ಲಿ ಉಳಿಯುವಂತಿರಲಿ ಎಂಬುದು ‘ಮಂದಾರ ಜ್ವಾಲೆ’ ವಾರಪತ್ರಿಕೆಯ ಕಳಕಳಿ.

Post a Comment

0 Comments