ಕುಮಟಾದಲ್ಲಿ 22ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ: ಸಾಹಿತ್ಯ, ಕಲೆ, ಜನಪದ ಮತ್ತು ಸಂಸ್ಕೃತಿಯ ವೈಭವ ಅನಾವರಣ
ಕುಮಟಾ: ಕನ್ನಡ ನಾಡು, ನುಡಿ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ವೈಭವವನ್ನು ರಾಷ್ಟ್ರಮಟ್ಟದಲ್ಲಿ ಅನಾವರಣಗೊಳಿಸುವ 22ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ–2026 ಕುಮಟಾದ ನಾದಶ್ರೀ ಕಲಾಕೇಂದ್ರದಲ್ಲಿ ಭಾನುವಾರ ಅರ್ಥಪೂರ್ಣವಾಗಿ ನಡೆಯಿತು.
ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಐಎಎಸ್ ಅವರು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡದ ಕಂಪನ್ನು ನಾಡಿನಾದ್ಯಂತ ಪಸರಿಸಲು ಪ್ರತಿಯೊಬ್ಬ ಕನ್ನಡಿಗರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕನ್ನಡಕ್ಕಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಕನ್ನಡವನ್ನು ಕೇವಲ ಅಭಿಮಾನದ ಭಾಷೆಯಾಗಿ ಉಳಿಸದೆ, ಓದು, ಬರಹ, ಮಾತುಕತೆ ಸೇರಿದಂತೆ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಬಳಸಬೇಕು. ಮುಂದಿನ ಪೀಳಿಗೆಗೆ ಕನ್ನಡದ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಕನ್ನಡಕ್ಕಾಗಿ ತಾವು ಕೈಗೊಂಡಿರುವ ವಿವಿಧ ಚಟುವಟಿಕೆಗಳನ್ನು ವಿವರಿಸಿದ ಡಾ. ಸೋಮಶೇಖರ್, ಮುಂದಿನ ದಿನಗಳಲ್ಲಿಯೂ ಹಲವು ಕನ್ನಡಪರ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುವ ಇರಾದೆ ವ್ಯಕ್ತಪಡಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಕನ್ನಡಕ್ಕೆ ವಿಶಿಷ್ಟ ಸ್ಥಾನ
ಸಮ್ಮೇಳನಾಧ್ಯಕ್ಷ ಮೈಸೂರಿನ ಖ್ಯಾತ ಕವಿ, ಗಾಯಕ ಹಾಗೂ ಸಂಶೋಧಕ ಡಾ. ಕಾ. ರಾಮೇಶ್ವರಪ್ಪ (ಸಿರಿಗಂಧ) ಅವರು ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡ ಸಂಸ್ಕೃತಿಯ ಐತಿಹಾಸಿಕ ಹಿನ್ನೆಲೆ ಹಾಗೂ ಭಾರತದ ವೈವಿಧ್ಯಮಯ ಸಂಸ್ಕೃತಿಯಲ್ಲಿ ಕನ್ನಡದ ವಿಶಿಷ್ಟ ಸ್ಥಾನವನ್ನು ವಿವರಿಸಿದರು.
ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿ, ಜೀವವೈವಿಧ್ಯ, ಜನಪದ, ಕಲೆ ಮತ್ತು ಸಾಹಿತ್ಯದ ಶ್ರೀಮಂತಿಕೆಯನ್ನು ಪ್ರಸ್ತಾಪಿಸಿದ ಅವರು, ಸಾಹಿತ್ಯ ಮತ್ತು ಸಂಸ್ಕೃತಿ ಜನಮನಗಳನ್ನು ಬೆಸೆಯುವ ಪ್ರಮುಖ ಸೇತುವೆಗಳಾಗಿವೆ ಎಂದರು.
ಕುಮಟಾದ ಸಾಹಿತ್ಯಿಕ ಮಹತ್ವವನ್ನು ಸ್ಮರಿಸಿದ ಅವರು, 1955ರಲ್ಲಿ 35ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುಮಟಾದಲ್ಲಿ ನಡೆದಿರುವುದು ಈ ನೆಲದ ಸಾಹಿತ್ಯಿಕ ಪರಂಪರೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕನ್ನಡ ಸಂಸ್ಕೃತಿ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಭಾಷೆ, ಕಲೆ, ಸಾಹಿತ್ಯ, ಜಾನಪದ, ಸಂಪ್ರದಾಯ ಹಾಗೂ ಮೌಲ್ಯಗಳ ವೈವಿಧ್ಯವನ್ನು ಒಳಗೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡದ ಅಸ್ಮಿತೆ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದು
ಮಂಜುನಾಥ್ ಎಜುಕೇಶನ್ ಟ್ರಸ್ಟ್, ರೋಟರಿ ಕ್ಲಬ್ ಕುಮಟಾ, ಕನ್ನಡ ಸಾಹಿತ್ಯ ಪರಿಷತ್ ಉತ್ತರ ಕನ್ನಡ ಹಾಗೂ ಹೃದಯವಾಹಿನಿ ಕರ್ನಾಟಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸಮ್ಮೇಳನ ಆಯೋಜಿಸಲಾಗಿತ್ತು.
ರೋಟರಿ ಕ್ಲಬ್ ಅಧ್ಯಕ್ಷ ಸಿಎ. ವಿನಾಯಕ ಹೆಗಡೆ ಮಾತನಾಡಿ, ಕುಮಟಾ ರೋಟರಿ ಕ್ಲಬ್‌ನ ಸಹಯೋಗದಲ್ಲಿ ಇಂತಹ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.
ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ರೋಹಿದಾಸ ನಾಯಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಹೃದಯವಾಹಿನಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಸಾಗರ್ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಜನಪದ, ಸಂಗೀತ, ನೃತ್ಯ, ಹಾಸ್ಯ ಹಾಗೂ ಕಾವ್ಯದ ವೈವಿಧ್ಯವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಿದ 22ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವು ಕನ್ನಡದ ಅಸ್ಮಿತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂಬ ಸಂದೇಶ ಸಾರಿದೆ ಎಂದರು.
ರಾಜ್ಯಮಟ್ಟದ ಗಾಯಕಿ ಸಂಧ್ಯಾ ಹೆಗಡೆ ಪ್ರಾರ್ಥಿಸಿದರು. ವಾಣಿಜ್ಯೋದ್ಯಮಿ ಗಣಪತಿ ಭಾಗ್ವತ ಉಪಸ್ಥಿತರಿದ್ದರು.
ಸಾಧಕರಿಗೆ ಗೌರವ
ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪುಟ್ಟು ಕುಲಕರ್ಣಿ, ಶ್ರೀಧರ ಬಳಗಾರ, ನಾಗರಾಜ ನಾಯ್ಕ ಕಾಗಾಲ, ಶಿವಸ್ವಾಮಿ ಎನ್.ಆರ್., ಭಾಷಾ ಪಟೇಲ್ ಹಾಗೂ ವಿಕ್ರಮ ಆರ್. ನಾಯ್ಕ ಅವರನ್ನು ಸಾಹಿತ್ಯ, ಸಂಶೋಧನೆ, ಸಂಘಟನೆ, ಸಮಾಜಸೇವೆ ಹಾಗೂ ಕಾನೂನು ಕ್ಷೇತ್ರಗಳ ಸಾಧನೆಗಾಗಿ ಸನ್ಮಾನಿಸಲಾಯಿತು.
ಕವಿಗೋಷ್ಠಿ, ಕೃತಿ ಲೋಕಾರ್ಪಣೆ
ಪ್ರೊ. ಟಿ.ಜಿ. ಭಟ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಪಿ.ಆರ್. ನಾಯ್ಕ, ಎನ್.ಆರ್. ಗಜು, ರವೀಂದ್ರ ಭಟ್ ಸೂರಿ, ವೆಂಕಟೇಶ್ ಬೈಲೂರು, ಎಂ.ಕೆ. ಲಕ್ಷ್ಮಿ, ಸಂಧ್ಯಾ ಭಟ್, ಗಣಪತಿ ಕೊಂಡದಕುಳಿ, ನಾಗರಾಜ ನಾಯಕ ಹಾಗೂ ಮಮತಾ ನಾಯ್ಕ ಕವನ ವಾಚಿಸಿದರು.
ಇದೇ ಸಂದರ್ಭದಲ್ಲಿ ರೋಹಿದಾಸ ನಾಯಕರ ‘ಸೌಗಂಧಿಕ’ ಕವನ ಸಂಕಲನ ಲೋಕಾರ್ಪಣೆಗೊಂಡಿತು. ಸಮ್ಮೇಳನಾಧ್ಯಕ್ಷ ಡಾ. ಕಾ. ರಾಮೇಶ್ವರಪ್ಪ ಅವರನ್ನು ಅಭಿನಂದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೆಚ್ಚುಗೆ
ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು. ಬೆಂಗಳೂರಿನ ಅಂಬಾಶ್ರೀ ನೃತ್ಯ ಮತ್ತು ಸಂಗೀತ ಶಾಲೆ ವತಿಯಿಂದ ನೃತ್ಯ-ಗಾಯನ ಕಾರ್ಯಕ್ರಮ ನಡೆಯಿತು. ಹಾಸ್ಯ ಕಲಾವಿದ ಮಹದೇವ ಸತ್ತಿಗೇರಿ ಅವರ ‘ನಗೆ ಹೊನಲು’ ಪ್ರೇಕ್ಷಕರನ್ನು ರಂಜಿಸಿತು.
ಕುಮಟಾದ ನೃತ್ಯಸ್ವರ ಕಲಾ ಟ್ರಸ್ಟ್ ವತಿಯಿಂದ ವಿದುಷಿ ವಿಜೇತಾ ಭಂಡಾರಿ ನಿರ್ದೇಶನದ ನೃತ್ಯರೂಪಕ ಪ್ರದರ್ಶನಗೊಂಡಿತು.
ಮೈಸೂರಿನ ಶ್ರೀ ಸರಸ್ವತಿ ವಾದ್ಯವೃಂದದಿಂದ ‘ಲಯ–ನಾದ–ತರಂಗ’ ಸಂಗೀತ ಕಾರ್ಯಕ್ರಮ ಹಾಗೂ ಸಂತೆಬೆನ್ನೂರಿನ ಚೈತನ್ಯ ಗುರುಕುಲ ವಿದ್ಯಾಸಂಸ್ಥೆ ವತಿಯಿಂದ ಮಲ್ಲಕಂಬ ಪ್ರದರ್ಶನವೂ ಗಮನ ಸೆಳೆಯಿತು.
ಕಾರ್ಯಕ್ರಮವನ್ನು ರವಿ ಎಂ. ಕುಲಶೇಖರ ನಿರೂಪಿಸಿದರು. ಕುಮಟಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಮೋದ ನಾಯ್ಕ ವಂದಿಸಿದರು.
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ವೈಭವವನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿದ ಸಮ್ಮೇಳನವು ಕನ್ನಡದ ಅಸ್ಮಿತೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸಂಕಲ್ಪಕ್ಕೆ ಸಾಕ್ಷಿಯಾಯಿತು.
0 Comments