ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಶೈಕ್ಷಣಿಕ ಸಾಧಕರಿಗೆ ಸನ್ಮಾನ.


ಹರಿಹರ: 2025–26ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವ ಉದ್ದೇಶದಿಂದ ಹರಿಹರದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಯಶಸ್ವಿಯಾಗಿ ನಡೆಯಿತು.

ಹೊಂಗಿರಣ ಸೇವಾ ಟ್ರಸ್ಟ್ (ರಿ.), ಹರಿಹರ ಹಾಗೂ ಶ್ರೀ ನಾರೇಯಣೆ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಹಯೋಗದಲ್ಲಿ ನಗರದ ಶ್ರೀ ಐರಣಿ ಮಠ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಶ್ಲಾಘಿಸಲಾಯಿತು. ವಿವಿಧ ತರಗತಿಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿಪಿ ಹರೀಶ್ ಅವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಕೇವಲ ಅಂಕಗಳಿಕೆ ಮಾತ್ರವಲ್ಲದೆ, ಜ್ಞಾನ, ಶಿಸ್ತು, ಸಂಸ್ಕಾರ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಮೂಲಕ ತಮ್ಮ ಗುರಿಯನ್ನು ಸಾಧಿಸಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವ ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಮತ್ತಷ್ಟು ಉತ್ಸಾಹ ಮತ್ತು ಆತ್ಮವಿಶ್ವಾಸ ಮೂಡಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಎಸ್ ಬಿ ವಿಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯ ಹಿಂದೆ ಪೋಷಕರು ಹಾಗೂ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳ ಆಸಕ್ತಿ ಮತ್ತು ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ನೀಡಿದಾಗ ಮಾತ್ರ ಅವರು ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಬೆಳೆಯಲು ಸಾಧ್ಯ ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡರು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ನಂದಿಗಾವಿ ಶ್ರೀನಿವಾಸ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜದ ಮುಖಂಡರು, ಸಂಘಟನೆಯ ಪದಾಧಿಕಾರಿಗಳು, ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಸಂತಸಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು.

ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಟ್ರಸ್ಟ್ ಹಾಗೂ ಸಹಕಾರಿ ಸಂಘದ ಪದಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಸಮಾಜದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರ ಭವಿಷ್ಯಕ್ಕೆ ಬಲ ತುಂಬುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

Post a Comment

0 Comments