“ನಾದಸ್ವರದ ನಾದ… ಭಜನೆಯ ಸೊಬಗು; ಕಣ್ಮನ ಸೆಳೆದ ನಾಮದೇವ ಸಿಂಪಿ ಸಮಾಜದ ಗಣೇಶ ಮೆರವಣಿಗೆ”.


ಅದ್ದೂರಿಯಾಗಿ ನಡೆದ ನಾಮದೇವ ಸಿಂಪಿ ಸಮಾಜದ 6ನೇ ವರ್ಷದ ಗಣೇಶ ಪ್ರತಿಷ್ಠಾಪನಾ ಮೆರವಣಿಗೆ

ಹರಿಹರ: ಪ್ರತಿವರ್ಷದಂತೆ ಈ ವರ್ಷವೂ ನಾಮದೇವ ಸಿಂಪಿ ಸಮಾಜ ಯುವಕ ಮಂಡಳಿ ವತಿಯಿಂದ ಆಯೋಜಿಸಿದ್ದ 6ನೇ ವರ್ಷದ ಗಣೇಶ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವು ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಅದ್ದೂರಿಯಾಗಿ ನಡೆಯಿತು.
ನಗರದ ನಡುವಲ ಪೇಟೆಯಲ್ಲಿರುವ ನಾಮದೇವ ಸಿಂಪಿ ಕಲ್ಯಾಣ ಮಂಟಪ–ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಗಣೇಶ ಮೂರ್ತಿಯನ್ನು ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. ಇದಕ್ಕೂ ಮುನ್ನ ಕುಂಬಾರ ಓಣಿಯಿಂದ ದೇವಸ್ಥಾನ ರಸ್ತೆ ಮಾರ್ಗವಾಗಿ ಗಣೇಶ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.

ನಾಮದೇವ ಸಿಂಪಿ ಸಮಾಜದ ಭಜನಾ ಮಂಡಳಿಯ ನಾದಸ್ವರ ಹಾಗೂ ಭಜನಾ ಗೀತೆಗಳೊಂದಿಗೆ ಸಾಗಿದ ಮೆರವಣಿಗೆ ಭಕ್ತಿಭಾವವನ್ನು ಮೂಡಿಸಿತು. ಸಮಾಜದ ನೂರಾರು ಮಹಿಳೆಯರು ಹಾಗೂ ಭಜನಾ ಮಂಡಳಿಯ ಸದಸ್ಯರು ಭಜನಾ ಗೀತೆಗಳಿಗೆ ಧ್ವನಿಗೂಡಿಸಿ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದರು.
ದೇಶದ ಸಂಸ್ಕೃತಿ, ಆಚಾರ–ವಿಚಾರ ಹಾಗೂ ಸಾಂಪ್ರದಾಯಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಡೆದ ಗಣೇಶ ಮೂರ್ತಿಯ ಪ್ರತಿಷ್ಠಾಪನಾ ಮೆರವಣಿಗೆ ನೋಡುಗರ ಕಣ್ಮನ ಸೆಳೆಯುವಂತಿತ್ತು. ಮೆರವಣಿಗೆಯಲ್ಲಿ ನಾಮದೇವ ಸಿಂಪಿ ಸಮಾಜದ ಹಿರಿಯರು, ದೈವ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮಹಿಳಾ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಾಧು–ಸಂತರು, ಯುವಕ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ ನಿರೂಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವ್ಯವಸ್ಥಾಪಕ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.
ಡಿಜೆ ಅಬ್ಬರವಿಲ್ಲ; ಸಂಸ್ಕೃತಿಯ ಸೊಬಗು

ಗಣೇಶೋತ್ಸವದ ಸಂದರ್ಭದಲ್ಲಿ ಸಾಮಾನ್ಯವಾಗಿ ಕಂಡುಬರುವ ಡಿಜೆ ಅಬ್ಬರಕ್ಕೆ ಅವಕಾಶ ನೀಡದೆ, ಪರಿಸರ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಭಜನೆ, ನಾದಸ್ವರ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳ ಮೂಲಕ ಮೆರವಣಿಗೆ ನಡೆಸಿದ್ದು ವಿಶೇಷ ಗಮನ ಸೆಳೆಯಿತು.

ಸನಾತನ ಸಂಸ್ಕೃತಿಯ ಆಚಾರ–ವಿಚಾರ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ನಾಮದೇವ ಸಿಂಪಿ ಸಮಾಜದ ಈ ಆಚರಣೆ ಮಾದರಿಯಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಯಿತು.
ಹಬ್ಬ–ಹರಿದಿನಗಳು ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ವೇದಿಕೆಗಳಾಗಬೇಕು. ಈ ನಿಟ್ಟಿನಲ್ಲಿ ನಾಮದೇವ ಸಿಂಪಿ ಸಮಾಜದ ಗಣೇಶೋತ್ಸವದ ಆಚರಣೆ ಗಮನಾರ್ಹವಾಗಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಂಸ್ಕಾರಯುತ ಹಾಗೂ ಪರಿಸರಸ್ನೇಹಿ ಆಚರಣೆಗಳು ನಡೆಯಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

Post a Comment

0 Comments