ಹೆಗಲ ಮೇಲೆ ಹೊತ್ತು, ಮುದ್ದಾಡಿ ಸಾಕಿದ ಮಗ ಹೆಣವಾಗಿ ಮಲಗಿದ್ದ. ಆತನ ಶವವನ್ನು ಮನೆಗೆ ತೆಗೆದುಕೊಂಡು ಹೋಗಿ ಸಂಸ್ಕಾರ ಮಾಡಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಡಿ ಎಂದು ಆಸ್ಪತ್ರೆಯ ಸಿಬ್ಬಂದಿ ಬಳಿ ಎಷ್ಟೇ ಬೇಡಿಕೊಂಡರೂ ಆ್ಯಂಬುಲೆನ್ಸ್ ಬರಲೇ ಇಲ್ಲ. ಕೊನೆಗೆ ಏನು ಮಾಡುವುದೆಂದು ತೋಚದೆ ಆ ವ್ಯಕ್ತಿ ತನ್ನ ಮಗನ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ, ಬೈಕ್ನಲ್ಲಿ ಇಟ್ಟುಕೊಂಡು 90 ಕಿ.ಮೀ. ದೂರದ ತಮ್ಮ ಮನೆಗೆ ಸಾಗಿಸಿರುವ ಮನಕಲಕುವ ಘಟನೆಯೊಂದು ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.
ತಿರುಪತಿ ಮೂಲದ ವ್ಯಕ್ತಿಯೊಬ್ಬರು ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಿಯಾ ಸರ್ಕಾರಿ ಜನರಲ್ (RUIA) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಮಗನ ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲು ಆಸ್ಪತ್ರೆ ಸಿಬ್ಬಂದಿಗೆ ಮನವಿ ಮಾಡಿದ್ದರು. ಆದರೆ, ಯಾವುದೇ ಆ್ಯಂಬುಲೆನ್ಸ್ ವ್ಯವಸ್ಥೆಯಾಗಲಿಲ್ಲ. ಕೊನೆಗೊಂದು ಆಂಬ್ಯುಲೆನ್ಸ್ ಬಂದರೂ ಅದರ ಚಾಲಕ ಆ ಹೆಣವನ್ನು ಸಾಗಿಸಲು ಭಾರೀ ಹಣ ಬೇಕೆಂದು ಬೇಡಿಕೆಯಿಟ್ಟಿದ್ದರಿಂದ ಆ ವ್ಯಕ್ತಿ ಬೈಕ್ನಲ್ಲಿ ತನ್ನ ಮಗನ ಮೃತದೇಹವನ್ನು ಸಾಗಿಸಿದ್ದಾರೆ.
ತಿರುಪತಿಯ RUIA ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಅನ್ನಮಯ್ಯ ಜಿಲ್ಲೆಯ ಚಿಟ್ವೇಲ್ ಮಂಡಲ್ ಗ್ರಾಮದ 10 ವರ್ಷದ ಬಾಲಕ ಚಿಕಿತ್ಸೆ ನಂತರ ಸಾವನ್ನಪ್ಪಿದ್ದಾನೆ. ಆತನ ಮೃತದೇಹವನ್ನು ಶವಸಂಸ್ಕಾರಕ್ಕಾಗಿ ತನ್ನ ಗ್ರಾಮಕ್ಕೆ ಸ್ಥಳಾಂತರಿಸಲು ಬಾಲಕನ ತಂದೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಪ್ರಯತ್ನಿಸಿದಾಗ, ಆಂಬ್ಯುಲೆನ್ಸ್ ಚಾಲಕ ಮತ್ತು ಕರ್ತವ್ಯದಲ್ಲಿದ್ದ ಆಸ್ಪತ್ರೆ ಸಿಬ್ಬಂದಿ ಆತನಿಂದ ಭಾರೀ ಮೊತ್ತಕ್ಕೆ ಬೇಡಿಕೆಯಿಟ್ಟರು ಎಂದು ಆರೋಪಿಸಲಾಗಿದೆ.
ಆ ವ್ಯಕ್ತಿ ಬಹಳ ಬಡವನಾಗಿದ್ದರಿಂದ ಆಸ್ಪತ್ರೆಯವರು ಕೇಳಿದ ಭಾರೀ ಶುಲ್ಕವನ್ನು ಭರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಮಗನ ಶವವನ್ನು ಬೈಕ್ನಲ್ಲಿ ಇಟ್ಟುಕೊಂಡು ತಮ್ಮ ಗ್ರಾಮಕ್ಕೆ ಹೋಗಿದ್ದಾರೆ.
0 Comments