ಒಂದು ಕ್ಷೇತ್ರದ ಅಭಿವೃದ್ಧಿಯನ್ನು ಕೇವಲ ರಸ್ತೆ, ನೀರು, ಬೆಳಕಿನಿಂದ ನಿರ್ಧರಿಸಲು ಸಾಧ್ಯವಿಲ್ಲ. ಒಂದು ಕ್ಷೇತ್ರ ಅಭಿವೃದ್ಧಿಯಾಗಿದೆ ಎಂದು ಹೇಳುವುದು ಅಲ್ಲಿನ ಶಿಕ್ಷಣ ಸಂಸ್ಥೆಗಳು , ಕೈಗಾರಿಕೆ, ಹಾಗೂ ಆ ಪ್ರದೇಶದಲ್ಲಿ ಇರುವ ನಿರೋದ್ಯೋಗ ಯುವಕರಿಗೆ ಉದ್ಯೋಗಗಳು ಸೃಷ್ಟಿಯಾದಾಗ, ಆರ್ಥಿಕವಾಗಿ ಸಮೃದ್ಧಿ ಹೊಂದಿದಾಗ ಆ ಕ್ಷೇತ್ರ ಅಭಿವೃದ್ಧಿ ಆಗಿದೆ ಎಂದು ಹೇಳಬಹುದು.
ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಬೆಳವಣಿಗೆಯಲ್ಲ, ಬದಲಾಗಿ ವ್ಯಕ್ತಿ ಅಥವಾ ಸಮಾಜದ ಜೀವನ ಮಟ್ಟದಲ್ಲಿ ಉಂಟಾಗುವ ಧನಾತ್ಮಕ, ರಚನಾತ್ಮಕ ಮತ್ತು ನಿರಂತರ ಬದಲಾವಣೆ. ಇದು ಆರೋಗ್ಯ, ಶಿಕ್ಷಣ, ಆರ್ಥಿಕತೆ ಮತ್ತು ಸಾಮಾಜಿಕ ಸೌಕರ್ಯಗಳ ಸುಧಾರಣೆಯ ಮೂಲಕ ಯೋಗಕ್ಷೇಮವನ್ನು ಹೆಚ್ಚಿಸುವ ಪ್ರಕ್ರಿಯೆಯಾಗಿದೆ. ಇದು ದೈಹಿಕ, ಮಾನಸಿಕ, ಮತ್ತು ಬೌದ್ಧಿಕ ಬೆಳವಣಿಗೆಯನ್ನು ಒಳಗೊಂಡಿರುವ, ಜೀವನದುದ್ದಕ್ಕೂ ನಡೆಯುವ ಪ್ರಕ್ರಿಯೆಯಾಗಿದೆ.ಆರೋಗ್ಯಕರ ಜೀವನ, ಶಿಕ್ಷಣದ ಲಭ್ಯತೆ, ಮತ್ತು ಉತ್ತಮ ಜೀವನ ಮಟ್ಟ.ಮೂಲಸೌಕರ್ಯ, ತಂತ್ರಜ್ಞಾನ, ಮತ್ತು ಉತ್ಪಾದಕತೆಯಲ್ಲಿ ಉತ್ತಮ ಬದಲಾವಣೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ವ್ಯವಸ್ಥೆಯ ಸಮರ್ಥತೆಯನ್ನು ಹೆಚ್ಚಿಸುತ್ತದೆ. ಅಭಿವೃದ್ಧಿಯು ಜೀವನದ ಗುಣಮಟ್ಟವನ್ನು ಸುಧಾರಿಸುವ ಮತ್ತು ಉತ್ತಮ ಭವಿಷ್ಯವನ್ನು ರೂಪಿಸುವ ಸಕಾರಾತ್ಮಕ ಪರಿವರ್ತನೆಯಾಗಿದೆ.
ಶಿಕ್ಷಣವು ಸಾಮಾಜಿಕ ಪ್ರಗತಿಯ ಅಡಿಪಾಯ. ಇದು ಕೌಶಲ್ಯಗಳನ್ನು ಬೆಳೆಸುವ ಮೂಲಕ ಬಡತನವನ್ನು ಕಡಿಮೆ ಮಾಡಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.ಆರೋಗವು ಉತ್ತಮ ಆರೋಗ್ಯ ಸೌಲಭ್ಯಗಳು ಮತ್ತು ಕಡಿಮೆ ಶಿಶು ಮರಣ ಪ್ರಮಾಣವು ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಸುಧಾರಿಸುತ್ತದೆ.
ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ, ಕೃಷಿ, ಉತ್ಪಾದನಾ ವಲಯ ಮತ್ತು ಕೈಗಾರಿಕೆಗಳ ಅಭಿವೃದ್ಧಿಯು ಜನರ ಆದಾಯವನ್ನು ಹೆಚ್ಚಿಸುತ್ತದೆ. ಅಭಿವೃದ್ಧಿಯು ಯೋಜಿತವಾಗಿ ಮತ್ತು ವೈಜ್ಞಾನಿಕವಾಗಿ ಇರಬೇಕು. ಪರಿಸರವನ್ನು ಸಂರಕ್ಷಿಸುತ್ತಾ ಮಾಡುವ ಸುಸ್ಥಿರ ಅಭಿವೃದ್ಧಿ ಇಂದಿನ ಅಗತ್ಯವಾಗಿದೆ.
ಉತ್ತಮ ಆಡಳಿತ ಮತ್ತು ರಾಜಕೀಯ ಸ್ಥಿರತೆ, ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಪಾರದರ್ಶಕ ನೀತಿಗಳು ಹೂಡಿಕೆಯನ್ನು ಆಕರ್ಷಿಸಿ ನಗರದ ಪ್ರಗತಿಗೆ ವೇಗ ನೀಡುತ್ತವೆ.
ಮಾನವ ಸಂಪನ್ಮೂಲಗಳು ಜನರ ಕೌಶಲ್ಯ, ತರಬೇತಿ ಮತ್ತು ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳುವುದು ನಗರದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಲಿಂಗ ಸಮಾನತೆ, ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ಸಾಮಾಜಿಕ ಒಳಗೊಳ್ಳುವಿಕೆ ಇದ್ದಾಗ ಮಾತ್ರ ಸಮಾಜವು ಸಾಮೂಹಿಕವಾಗಿ ಬೆಳೆಯಲು ಸಾಧ್ಯವಾಗುವುದರ ಜೊತೆಗೆ ಹರಿಹರ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ.
ಹರಿಹರ ಕ್ಷೇತ್ರದ ಅಭಿವೃದ್ಧಿಯು ಭೈರನಪಾದ ಏತ ನೀರಾವರಿ ಯೋಜನೆ, ಕೈಗಾರಿಕಾ ಪುನಶ್ಚೇತನ ಮತ್ತು ಕುಡಿಯುವ ನೀರಿನ ವ್ಯವಸ್ಥೆಯ ಮೇಲೆ ಕೇಂದ್ರೀಕರಿಸಿದೆ. ನನೆಗುದಿಗೆ ಬಿದ್ದ ಯೋಜನೆಗಳ ಅನುಷ್ಠಾನ, ಇಂಜಿನಿಯರಿಂಗ್ ಕಾಲೇಜು ಹಾಗೂ ಮೆಡಿಕಲ್ ಕಾಲೇಜ್ ಗಳನ್ನು ಆರಂಭ ಮಾಡುವುದು. ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದು ಮತ್ತು ಹರಿಹರವನ್ನು ಕೈಗಾರಿಕಾ ನಗರವಾಗಿ ಮರುರೂಪಿಸಲು ಒತ್ತು ನೀಡುವುದು. ಎಥೆನಾಲ್ ಹಾಗೂ ಯೂರಿಯಾ ಕಾರ್ಖಾನೆಗಳ ಸ್ಥಾಪನೆ ಮಾಡಿದಾಗ ಹರಿಹರ ಅಭಿವೃದ್ಧಿಯಾಗಿದೆ ಎಂದು ಹೇಳಬಹುದು.
ಹರಿಹರ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ನಾಲ್ಕು ದಿಕ್ಕುಗಳಿಗೂ ಸಮಾನವಾದ ದಾರಿಯನ್ನು ತೋರಿಸುವ ಐತಿಹಾಸಿಕ ಸ್ಥಳ. ಇಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಮತ್ತು ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಎಲ್ಲಾ ರೀತಿಯ ನೈಸರ್ಗಿಕವಾದ ಸಂಪತ್ತನ್ನು ಹೊಂದಿರುವ ಏಕೈಕ ಪ್ರದೇಶ ಹರಿಹರ ಎಂದರು ತಪ್ಪಾಗಲಾರದು. ಆದರೆ ಅಭಿವೃದ್ಧಿ ಎನ್ನುವ ವಿಚಾರದಲ್ಲಿ ಹರಿಹರ ಏಕೆ ಹಿಂದುಳಿಯುತ್ತಿದೇ? ಈ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿ ನಾವು ಸೋತಿರಬಹುದೇ? ಒಂದು ತಿಳಿಯುತ್ತಿಲ್ಲ.
ಒಂದು ಕಾಲದಲ್ಲಿ ಹರಿಹರ ಗತವೈಭವದಿಂದ ಮೆರೆಯುತ್ತಿತ್ತು. ಅದಕ್ಕೆ ಕಾರಣ ಮೈಸೂರ್ ಕಿರ್ಲೋಸ್ಕರ್ ಕಂಪನಿ. ಈ ಕಂಪನಿ ಸಾವಿರಾರು ಉದ್ಯೋಗಿಗಳಿಗೆ ಜೀವನಾಧಾರವಾಗಿತ್ತು. ಅಂದು ಹರಿಹರದ ಆರ್ಥಿಕ ಚಟುವಟಿಕೆಗಳು ಉತ್ತುಂಗ ಸ್ಥಿತಿಯಲ್ಲಿತ್ತು. ದೇಶ ವಿದೇಶದಲ್ಲಿ ಹರಿಹರದ ಹೆಸರು ಹರಿದಾಡುತ್ತಿತ್ತು. (ಈಗಲೂ ಕೆಲವು ಕಾರ್ಖಾನೆಗಳಿಂದ ಮತ್ತು ಕಾರ್ಖಾನೆಗಳು ತಯಾರು ಮಾಡುವ ಕೆಲವು ವಸ್ತುಗಳಿಂದ ಹರಿಹರದ ಹೆಸರು ಹರಿದಾಡುತ್ತಿದೆ.)
ಮೈಸೂರ್ ಕಿರ್ಲೋಸ್ಕರ್ ಕಂಪನಿ ಬಾಗಿಲು ಮುಚ್ಚುತ್ತಿದ್ದಂತೆ ಸಾವಿರಾರು ಉದ್ಯೋಗಿಗಳು ಬೀದಿ ಪಾಲಾದರು. ಕಂಪನಿಯನ್ನು ನಂಬಿ ಬದುಕುತ್ತಿದ್ದ ಕುಟುಂಬಗಳು ಬೀದಿಗೆ ಬಂದವು. ಹರಿಹರದ ಆರ್ಥಿಕ ಚಟುವಟಿಕೆಗಳು ಕುಸಿಯಲು ಆರಂಭಿಸಿತ್ತು. ಈಗಲೂ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಬದಲಾದ ರಾಜಕೀಯ ವ್ಯವಸ್ಥೆಯ ಕಾರಣದಿಂದ ಹರಿಹರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಇದ್ದರೂ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಮನಸ್ಸು ಮಾಡಬೇಕಾದ ಜನಪ್ರತಿನಿಧಿಗಳು ಅಬ್ಬರದ ಭಾಷಣಕ್ಕೆ ಸೀಮಿತರಾದರು. ಅಭಿವೃದ್ಧಿಯ ಮಂತ್ರವನ್ನು ಮುಂದಿಟ್ಟುಕೊಂಡು ಮತ ಕೇಳಿದವರು, ನಂತರ ಅಭಿವೃದ್ಧಿ ಎಂಬ ಮಂತ್ರವನ್ನು ಮರೆತರು. ಈಗಲೂ ಹರಿಹರ ಅಭಿವೃದ್ಧಿಯ ಮಂತ್ರದಲ್ಲೇ ಸಾಗುತ್ತಿದೆ...
*ಹರಿಹರ ನಗರಕ್ಕೆ ಬೇಕಾಗಿದೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು:*
ಒಂದು ಇಂಜಿನಿಯರಿಂಗ್ ಕಾಲೇಜು ಹರಿಹರಕ್ಕೆ ಬಂದರೆ ಅದರಿಂದ ಹರಿಹರ ಅಭಿವೃದ್ಧಿಗೆ ನಾನಾ ರೀತಿಯಲ್ಲಿ ಸಹಾಯವಾಗುತ್ತದೆ. ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತದೆ. ಬೀದಿಬದಿ ವ್ಯಾಪಾರಿಯಿಂದ ಹಿಡಿದು ಆಟೋ, ಪಿಜಿ, ಮಾಲ್ ಗಳು, ಹಾಲು, ಹೋಟೆಲ್ ಸೇರಿದಂತೆ ಎಲ್ಲಾ ವರ್ಗದ, ಎಲ್ಲಾ ಉದ್ಯಮಗಳು ಚೇತರಿಸಿಕೊಳ್ಳುತ್ತವೆ. ಆಗ ಹರಿಹರ ತನಗರಿವಿಲ್ಲದಂತೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ. ಹರಿಹರ ಅಭಿವೃದ್ಧಿ ಪಥದಲ್ಲಿ ಸಾಗಿದಾಗ ನಾವು ಅದನ್ನು ಅಭಿವೃದ್ಧಿ ಎಂದು ಹೇಳಬಹುದು. ಕೇವಲ ರಸ್ತೆ ,ನೀರು, ಬೆಳಕು, ಇವುಗಳನ್ನು ನೀಡಿದರೆ ಅಭಿವೃದ್ಧಿಯಾಗುವುದಿಲ್ಲ. ಅಭಿವೃದ್ಧಿಗೆ ಬೇಕಾದಂತಹ ದೊಡ್ಡ ,ದೊಡ್ಡ ಯೋಚನೆಗಳನ್ನು ಮಾಡಿದಾಗ ಮಾತ್ರ ಹರಿಹರ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಅಂತಹ ದೊಡ್ಡ ಯೋಚನೆಗಳನ್ನು ಜನಪ್ರತಿನಿಧಿಗಳು ಮಾಡಬೇಕು. ಇದು ಅವರಿಂದ ಸಾಧ್ಯ. ಜನಪ್ರತಿನಿಧಿಗಳು ಕಂಡ ಕನಸುಗಳನ್ನು ನನಸು ಮಾಡಲು ಎಲ್ಲಾ ರೀತಿಯಲ್ಲಿ ಸಾಧ್ಯವಿದೆ. ಆದರೆ ಅವರಲ್ಲಿ ಇಚ್ಚಾಶಕ್ತಿ ಇರಬೇಕು.
ವಿಧಾನಸಭೆ ಚುನಾವಣೆ ಆರಂಭದ ಮೊದಲ ವರ್ಷದಲ್ಲಿ ಮಾತ್ರ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜಿಗಾಗಿ ಹೋರಾಟ ಮಾಡುತ್ತಾರೆ. ಅದೇ ವಿಧಾನಸಭೆ ಚುನಾವಣೆ ಮುಗಿದ ನಂತರ ಆ ಹೋರಾಟಗಳನ್ನು ಮರೆಯುತ್ತಾರೆ. ಅದಾಗಬಾರದು ಚುನಾವಣೆಗಳು ಐದು ವರ್ಷಕ್ಕೊಮ್ಮೆ ಬರುತ್ತವೆ, ಹೋಗುತ್ತವೆ . ಆದರೆ ನೀವು ಸದಾ ಜನರ ಜೊತೆ ಇರಬೇಕು ಮತ್ತು ಇರುತ್ತೀರಾ. ನೀವು ನೀಡುವ ಆಶ್ವಾಸನೆಗಳು ಚುನಾವಣೆಗೆ ಮಾತ್ರ ಸೀಮಿತವಾಗಬಾರದು. ಚುನಾವಣೆಯ ನಂತರವೂ ಅದು ಮುಂದುವರಿಯಬೇಕು. ಪ್ರಯತ್ನ ಪಡಬೇಕು.
ನನ್ನ ಹರಿಹರ ಅಭಿವೃದ್ಧಿಯಾಗಬೇಕು ಎಂಬ ಸದೃಢವಾದ ಮನಸ್ಸು ನಿಮ್ಮಲ್ಲಿ ಇರಬೇಕು. ಸರ್ಕಾರ ಯಾವುದಾದರೇನು, ಅನುದಾನವನ್ನು ತರುವಂತಹ ಚಾಣಕ್ಷತೆ ನಿಮ್ಮಲ್ಲಿ ಇರಬೇಕು ಅಲ್ಲವೇ? ಆ ಚಾಣಾಕ್ಷತೆ ಇದ್ದರೂ ನೀವು ಮನಸ್ಸು ಮಾಡುತ್ತಿಲ್ಲ. ಇದರಿಂದಾಗಿ ಹರಿಹರ ವಿಧಾನಸಭಾ ಕ್ಷೇತ್ರಕ್ಕೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ತರುವ ವಿಚಾರದಲ್ಲಿ ನೀವು ಸೋಲುತ್ತಿರಬಹುದೇ? ಹೀಗೊಂದು ಪ್ರಶ್ನೆ ಮತದಾರರಲ್ಲಿ ಕಾಡುತ್ತಿದೆ.
(ಜನಪ್ರತಿನಿಧಿಗಳು, ಜನನಾಯಕರು, ಮುಖಂಡರು) ನಿಮ್ಮಿಂದ ಪ್ರಬಲವಾದ ಹೋರಾಟಗಳು ನಡೆದಾಗ ಹರಿಹರ ವಿಧಾನಸಭಾ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ತರಲು ಸಾಧ್ಯವಾಗದಿದ್ದರೂ ಇಂಜಿನಿಯರಿಂಗ್ ಕಾಲೇಜು ತರಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ನಿಮ್ಮ ಪ್ರಯತ್ನಗಳು ನಡೆಯಬೇಕು ಅಷ್ಟೇ.
ಹರಿಹರದ ಪ್ರಜ್ಞಾವಂತ ನಾಗರಿಕರು 2021 ಮತ್ತು 22ರ ಸಮಯದಲ್ಲಿ ಮೆಡಿಕಲ್ ಕಾಲೇಜ್ ಮತ್ತು ಇಂಜಿನಿಯರಿಂಗ್ ಕಾಲೇಜಿಗಾಗಿ ಪ್ರಬಲವಾದ ಹೋರಾಟಗಳನ್ನು ನಡೆಸಿದರು. ಜನಪ್ರತಿನಿಧಿಗಳ ಗಮನಗಳನ್ನು ಸೆಳೆಯುವ ಪ್ರಯತ್ನವನ್ನು ಮಾಡಿದರು. ಚುನಾವಣೆಯ ಪೂರ್ವದಲ್ಲಿ ನಡೆದ ಹೋರಾಟಗಳಾಗಿರುವ ಕಾರಣ ಕೆಲವರು ಆಶ್ವಾಸನೆಯನ್ನು ನೀಡಿದರು. ಚುನಾವಣೆಯ ನಂತರ ಬದಲಾದ ರಾಜಕೀಯದ ಚಿತ್ರಣವನ್ನು ಮತದಾರರ ಮುಂದೆ ಇಟ್ಟು ಜಾರಿಕೊಳ್ಳುವ ಪ್ರಯತ್ನ ಮಾಡಿದರು, ಮಾಡುತ್ತಿದ್ದಾರೆ. ಅಲ್ಲಿಗೆ ಹರಿಹರಕ್ಕೆ ಬೇಕಾದ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜು ಕನಸಾಗಿ ಉಳಿಯಿತು.
ಈ ಬಾರಿ ಆ ರೀತಿ ಆಗಬಾರದು. ಹರಿಹರಕ್ಕೆ ಮೆಡಿಕಲ್ ಕಾಲೇಜ್ ತರುವುದು ಸ್ವಲ್ಪ ಕಷ್ಟವಾಗಬಹುದು ಆದರೆ ಇಂಜಿನಿಯರಿಂಗ್ ಕಾಲೇಜು ತರುವ ಬೇಕಾದ ಎಲ್ಲಾ ಅವಕಾಶಗಳು ಇದೆ. ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳು ನಡೆದರೆ ಕಾಲೇಜ್ ಬಂದೇ ಬರುತ್ತದೆ.
ಒಂದು ವೇಳೆ ಹರಿಹರ ವಿಧಾನಸಭಾ ಕ್ಷೇತ್ರಕ್ಕೆ ಇಂಜಿನಿಯರಿಂಗ್ ಕಾಲೇಜ್ ಯಾರೇ ತರಲಿ ಅವರು ಮುಂದಿನ 20 ವರ್ಷಗಳ ಕಾಲ ಹರಿಹರ ತಾಲೂಕಿನ ಮತದಾರರ ಮನಸ್ಸಿನಲ್ಲಿ ಅಜರಾಮರಾಗಿ ಉಳಿಯುತ್ತಾರೆ ಮತ್ತು ಶಾಸಕರಾಗಿ ಆಯ್ಕೆಯಾಗುತ್ತಾರೆ. ಈ ಮಾತನ್ನು ಬೇಕಾದರೆ ಬರೆದು ಇಟ್ಟುಕೊಳ್ಳಿ.
ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜಿನ ಜೊತೆ,ಜೊತೆಗೆ ಹರಿಹರಕ್ಕೆ ದೊಡ್ಡ, ದೊಡ್ಡ (ಯೂರಿಯಾ ಮತ್ತು ಎಥೆನಾಲ್) ಕೈಗಾರಿಕೆಗಳನ್ನು ತರುವ ಮೂಲಕ ಇಲ್ಲಿನ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈಗ ಇರುವಂತಹ (ಕಾರ್ಗಿಲ್ ಹಾಗೂ ಬಿರ್ಲಾ) ಕೈಗಾರಿಕೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕು. ಈಗ ಇರುವ ಕೈಗಾರಿಕೆಗಳಿಗೆ ಬೇಕಾಗುವಂತ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅವರಿಗೆ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಒಮ್ಮೆ ಹರಿಹರ ನಗರಕ್ಕೆ ದೊಡ್ಡ, ದೊಡ್ಡ ಕಾರ್ಖಾನೆಗಳು ಬಂದರೆ ಅವು ಮುಂದಿನ 50 ವರ್ಷಗಳ ಕಾಲ ಜನರಿಗೆ ಜೀವನಾಧಾರವಾಗುತ್ತದೆ. ಇಲ್ಲಿನ ನಿರುದ್ಯೋಗ ಯುವಕರಿಗೆ ಭವಿಷ್ಯ ಕಟ್ಟಿಕೊಟ್ಟಂತಾಗುತ್ತದೆ. ಇಂತಹ ಉತ್ತಮ ಕಾರ್ಯಗಳಿಂದ ಹರಿಹರ ಅಭಿವೃದ್ಧಿಯಾಗಿದೆ ಎಂದು ಹೇಳಲು ಸಾಧ್ಯವಾಗುತ್ತದೆ.
ಯಾವುದೇ ಕ್ಷೇತ್ರ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಆರ್ಥಿಕವಾಗಿ ಸದೃಢವಾದಾಗ ಮಾತ್ರ ಆ ಕ್ಷೇತ್ರ ಅಭಿವೃದ್ಧಿಯಾಗಿದೆ ಎಂದು ಹೇಳಬಹುದು.
ಸದ್ಯ ಹರಿಹರದ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ನಿರುದ್ಯೋಗ ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದೆ. ಕೃಷಿ ಚಟುವಟಿಕೆಗಳಿಂದ ಅಲ್ಪಸ್ವಲ್ಪ ವ್ಯಾಪಾರ ವಹಿವಾಟುಗಳು ನಡೆಯುತ್ತಿದೆ. ಶೈಕ್ಷಣಿಕವಾಗಿ ಅಂತಹ ಹೇಳಿಕೊಳ್ಳುವಂತ ಶಿಕ್ಷಣ ಸಂಸ್ಥೆಗಳು ಹರಿಹರದಲ್ಲಿ ಇಲ್ಲದಂತಾಗಿದೆ. ಔದ್ಯೋಗಿಕವಾಗಿ ಹೇಳಿಕೊಳ್ಳುವಂತಹ ಕೈಗಾರಿಕೆಗಳು ಇಲ್ಲವಾಗಿದೆ. ಎಲ್ಲಾ ಸೌಲಭ್ಯಗಳು ಇದ್ದರು ಇಲ್ಲದಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಮುಂದಿನ ಜನಾಂಗ ನಮ್ಮ ಹರಿಹರದಲ್ಲಿ ಎಲ್ಲಾ ಇದೆ ಎಂಬ ಮಾತುಗಳನ್ನು ಕೇಳುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಆ ನಿಟ್ಟಿನಲ್ಲಿ ರಾಜಕಾರಣಿಗಳ ಪ್ರಯತ್ನಗಳು ನಿರಂತರವಾಗಿ ಸಾಗಲಿ. ಹರಿಹರದ ಅಭಿವೃದ್ಧಿಯ ವಿಚಾರದಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಸಲಿ ಎಂಬುದು ನಮ್ಮ ಬರಹದ ಉದ್ದೇಶವಾಗಿದೆ....
ಮಂಜುಳ. ಜಿ ಬೊಂಗಾಳೆ.
0 Comments