ಹರಿಹರ :-ಸಾವಿರ ಸುಳ್ಳು ಹೇಳಿಯಾದರೂ ಒಂದು ಮದುವೆ ಮಾಡು ಎಂಬ ನಾಣ್ನುಡಿಯಿದೆ.ಆದರೆ ಎಲ್ಲಿಯೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮದುವೆ ಮಾಡು ಎಂಬ ನಾಣ್ನುಡಿ ಇಲ್ಲ .ಆದರೆ ಹರಿಹರ ತಾಲ್ಲೂಕು ವಿವಾಹ ನೋಂದಣಿ ಕಚೇರಿಯಲ್ಲಿ ಸುಳ್ಳು ದಾಖಲೆಯನ್ನು ಸೃಷ್ಟಿಸಿ ವಿವಾಹ ಮಾಡಲಾಗಿದೆ.ಈ ವಿವಾಹದ ಹಿಂದೆ ಕಾಣದ ಕೈಗಳ ಕರಾಮತ್ತು ಭಾರೀ ಕೆಲಸ ಮಾಡಿದೆ ಎಂಬ ಅನುಮಾನ ಕಾಡುತ್ತಿದೆ .
ಸ್ಥಳೀಯ ಶಾಲೆಯಲ್ಲಿ ಓದದೆ ಇರುವ ಯುವತಿಯೊಬ್ಬರಿಗೆ ವಿವಾಹ ನೋಂದಾವಣೆ ಗೋಸ್ಕರ ನಕಲಿ ದಾಖಲೆ ಸೃಷ್ಟಿಸಿ ಶಾಲಾ ದೃಢೀಕರಣ ಪತ್ರ ನೀಡಿದ ಆರೋಪವನ್ನು ಹರಿಹರ ತಾಲ್ಲೂಕಿನ ರಾಮತೀರ್ಥ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಆರೋಪ ಕೇಳಿ ಬರುತ್ತಿದೆ.ಕೂಡಲೇ ರಾಮತೀರ್ಥ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ತಾಲ್ಲೂಕು ರೈತ ಮುಖಂಡ ಬೇವಿನಹಳ್ಳಿ ಮಹೇಶ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈಗಾಗಲೇ ದೂರು ಸಲ್ಲಿಸಿದ್ದಾರೆ.
ಏನಿದು ನಕಲಿ ದಾಖಲೆ ಸೃಷ್ಟಿ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ವಾಸಿ ಎನ್ನಲಾದ ಯುವತಿಯೊಬ್ಬರು ತಾವು ಪ್ರೇಮಿಸಿದ ಯುವಕನೊಂದಿಗೆ ವಿವಾಹವಾಗಲು ತಾಲ್ಲೂಕು ಉಪನೋಂದಾವಣಾಧಿಕಾರಿ ಕಚೇರಿಗೆ ಬೇಕಾದಂತಹ ಅಗತ್ಯ ದಾಖಲೆಗಳನ್ನು ಒದಗಿಸುವ ಸಲುವಾಗಿ ರಾಮನ ತೀರ್ಥ ಶಾಲೆಯಲ್ಲಿ ಓದಿರುವುದಾಗಿ ಸುಳ್ಳು ಶಾಲಾ ದೃಢೀಕರಣ ಪತ್ರವನ್ನು ಬಳಸಿಕೊಂಡಿರುವ ಅನುಮಾನವನ್ನ ಬೇವಿನಹಳ್ಳಿ ಮಹೇಶ್ ವ್ಯಕ್ತಪಡಿಸಿದ್ದಾರೆ.
ಯುವಕ ಮತ್ತು ಯುವತಿ ಇಬ್ಬರೂ ಹರಿಹರ ತಾಲ್ಲೂಕಿನ ನಿವಾಸಿಗಳಲ್ಲ.ವಿವಾಹ ನೋಂದಣಿ ಕಚೇರಿಯಲ್ಲಿ ಮದುವೆಯ ನೋಂದಾವಣೆ ಮಾಡಿಸಲು ಇಬ್ಬರಲ್ಲಿ ಒಬ್ಬರು ಸ್ಥಳೀಯ ತಾಲ್ಲೂಕು ನಿವಾಸಿಗಳಾಗಿರಬೇಕು ಎಂಬ ನಿಯಮವಿದೆ.ಆದ ಕಾರಣ ಯುವತಿ ತಾಲ್ಲೂಕಿನ ನಿವಾಸಿ ಎಂದು ತೋರಿಸಲು ರಾಮನ ತೀರ್ಥ ಶಾಲೆಯಿಂದ ಸುಳ್ಳು ಶಾಲಾ ದಾಖಲಾತಿ ದೃಢೀಕರಣ ಪತ್ರವನ್ನು ಪಡೆದಿದ್ದಾರೆ ಎಂದು ಮಹೇಶ್ ಆರೋಪಿಸುತ್ತಾರೆ.
ಒಬ್ಬ ಶಾಲೆಯ ಮುಖ್ಯಶಿಕ್ಷಕ ತನ್ನಿಚ್ಛೆಯಂತೆ ಏನು ಬೇಕಾದರೂ ಮಾಡಲು ಅವರಿಗೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ .ಸರ್ಕಾರದ ನಿಯಮಾವಳಿ, ಸುತ್ತೋಲೆಯಂತೆ ಕಾರ್ಯನಿರ್ವಹಿಸಬೇಕಾಗುತ್ತ.ಆದರೆ ರಾಮತೀರ್ಥ ಶಾಲೆಯ ಮುಖ್ಯ ಶಿಕ್ಷಕರು ಈ ರೀತಿ ಸುಳ್ಳು ಶಾಲಾ ದಾಖಲಾತಿ ದೃಢೀಕರಣ ನೀಡಿರುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ.
ಮುಖ್ಯಶಿಕ್ಷಕರು ತನಿಖೆಯ ಸಂದರ್ಭದಲ್ಲಿ ಏನು ಬೇಕಾದರೂ ಹೇಳಬಹುದು ಆದರೆ ಸೀಲು ಮತ್ತು ಸಹಿ ಇವುಗಳು ಸುಳ್ಳು ಹೇಳಲು ಸಾಧ್ಯವೇ ?ಒಂದು ವೇಳೆ ಶಾಲೆಯ ಸೀಲು ಬೇರೆ ಯಾರಾದರೂ ತೆಗೆದುಕೊಂಡಿದ್ದರೆ ಅಥವಾ ಕಳೆದು ಹೋಗಿದ್ದರೆ ಇಷ್ಟೊತ್ತಿಗಾಗಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮುಖ್ಯಶಿಕ್ಷಕರು ದೂರು ದಾಖಲಿಸಬೇಕಿತ್ತು .ಏಕೆ ಇದುವರೆಗೂ ದೂರನ್ನು ದಾಖಲಿಸಿಲ್ಲ .ನಿಮ್ಮ ಸಹಿ ಬೇರೆ ಯಾರಾದರೂ ಫೋರ್ಜರಿ ಮಾಡಿದ್ದಾರೆ ಶಾಲೆಯ ಸೀಲು ಬೇರೆಯವರು ತೆಗೆದುಕೊಂಡಿದ್ದಾರೆ ಎಂಬ ಅನುಮಾನ ನಿಮ್ಮಲ್ಲಿದ್ದರೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿ ಆಗ ಸತ್ಯಾಸತ್ಯತೆ ಹೊರಗೆ ಬರುತ್ತದೆ.ಆ ಕೆಲಸವನ್ನ ಇದುವರೆಗೂ ಮುಖ್ಯಶಿಕ್ಷಕರು ಮಾಡಿಲ್ಲ .ಇದು ಹಲವು ಅನುಮಾನಗಳನ್ನ ಹುಟ್ಟುಹಾಕುತ್ತಿದೆ .
ರೈತ ಮುಖಂಡ ಕೆ.ಬೇವಿನಹಳ್ಳಿ ಮಹೇಶ್ ಅವರ ದೂರಿನ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿಆರ್ಪಿ ಪ್ರಾರ್ಥಮಿಕ ಪರಿಶೀಲನೆಗೆ ರಾಮನ ತೀರ್ಥ ಶಾಲೆಗೆ ಭೇಟಿ ನೀಡಿ ದಾಖಲಾತಿಯ ಲೆಡ್ಜರ್ ಪರಿಶೀಲಿಸಿದರು. ಶಾಲಾ ದೃಢೀಕರಣದಲ್ಲಿರುವ ಅಂಕಿ- ಸಂಖ್ಯೆಗೂ ಲೆಡ್ಜರ್ ನಲ್ಲಿರುವ ಅಂಕಿ -ಸಂಖ್ಯೆಗೂ ತಾಳೆಯಾಗುತ್ತಿಲ್ಲ ಎಂಬ ಪ್ರಾಥಮಿಕ ತನಿಖೆಯ ವರದಿಯನ್ನು ಸಂಬಂಧಿಸಿದ ಮೇಲಧಿಕಾರಿಗಳಿಗೆ ನೀಡಿದ್ದಾರೆ.ಅಂದರೆ ಮೇಲ್ನೋಟಕ್ಕೆ ಸುಳ್ಳು ಶಾಲಾ ದಾಖಲಾತಿ ಸೃಷ್ಟಿಸಿದ್ದಾರೆ ಎಂಬುದು ಕಂಡುಬಂದಿದೆ.
ಈಗಾಗಲೇ ಡಿಡಿಪಿಐ ಜಿ ಆರ್ ತಿಪ್ಪೇಶಪ್ಪ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದು ವಿವಾಹ ನೋಂದಾವಣೆಗಾಗಿ ಶಾಲಾ ದೃಢೀಕರಣ ಪತ್ರದ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ವಿವಾಹ ನೋಂದಾವಣೆಗಾಗಿ ಅಧಿಕಾರಿಗಳಿಗೆ ಸಲ್ಲಿಸಿರುವ ಅರ್ಜಿಗಳ ನೈಜತೆ ತಿಳಿಯಲು ಇಲ್ಲಿನ ಹಿರಿಯ ಉಪ ನೋಂದಾವಣಾಧಿಕಾರಿ ಅವರು ಸದರಿ ಶಾಲಾ ದಾಖಲಾತಿ ದೃಢೀಕರಣದ ನೈಜತೆ ತಿಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿಯೂ ಪತ್ರಿಕೆಗೆ ಲಭ್ಯವಾಗಿದೆ.
ಈಗಾಗಲೇ ಈ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ವಿವಾಹವಾಗಿರುವ ಪ್ರೇಮಿಗಳ ಸುದ್ದಿ ಇಡೀ ತಾಲ್ಲೂಕಿನಾದ್ಯಂತ ಕಾಡ್ಗಿಚ್ಚಿನಂತೆ ಒಬ್ಬರಿಂದ ಒಬ್ಬರಿಗೆ ಮನೆಮಾತಾಗಿ ಹರಿದಾಡುತ್ತಿದೆ.
ಕ್ಷೇತ್ರ ಶಿಕ್ಷ ಣಾಧಿಕಾರಿಗಳ ತನಿಖೆಯಿಂದ ಸತ್ಯಾಸತ್ಯತೆಯ ವರದಿಯಿಂದ ಮಾತ್ರ ಯಾವುದು ಸುಳ್ಳು ಯಾವುದು ಸತ್ಯ ಎಂಬುದು ಮುಂದಿನ ದಿನದಲ್ಲಿ ತಿಳಿಯಲು ಸಾಧ್ಯ.ಒಟ್ಟಾರೆಯಾಗಿ ನೂರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಒಂದು ಮದುವೆ ಮಾಡು ಎಂಬುದು ಆಧುನಿಕ ಭಾರತದ ಗಾದೆಯಾಗಿದೆ.
ಪ್ರಕಾಶ್ ಮಂದಾರ
ಸಂಪಾದಕರು
0 Comments