ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಸದಸ್ಯರ ಆಯ್ಕೆಯಾಗುವುದಕ್ಕೆ ಅಭ್ಯರ್ಥಿಗಳ ಪಟ್ಟಿಯಿಂದಲೇ ಬಿ.ಎಸ್.ವಿಜಯೇಂದ್ರ ಅವರು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.
ಹಾಗಾದರೆ ರಾಜ್ಯ ಸಮಿತಿಯಿಂದ ಆರಿಸಿ ಶಿಫಾರಸ್ಸು ಮಾಡಿದ್ದು ಅವಮಾನವೇ ? ಹೀಗೊಂದು ಅನುಮಾನ ಹುಟ್ಟಿದೆ.
ನಾವು ನಿಷ್ಠೂರ ಕಟ್ಟಿಕೊಳ್ಳುವುದು ಬೇಡ, ರಾಜಾ ಹುಲಿ ಗುರ್ರ್...ಅನ್ನುವುದು ಬೇಡ ಅಂತಲೇ ಇಲ್ಲಿಯ ಗುಣಾಢ್ಯರು ನಕಲಿ ಶಿಫಾರಸ್ಸು ಮಾಡಿರುತ್ತಾರೆ.ಆಟಗಾರ ಮೊದಲ ಸುತ್ತಿನ ಆಯ್ಕೆಯಲ್ಲಿಯೇ ಅರ್ಹತೆಯಿಂದ ಹೊರ ಬೀಳುತ್ತಾನೆ ಎಂಬ ಸ್ಪಷ್ಟ ಭವಿಷ್ಯ ತಿಳಿದುಕೊಂಡೇ ಕಾಟಾಚಾರದ ಶಿಫಾರಸ್ಸು ರಾಜ್ಯದ ಪಕ್ಷದ ಕೆಲ ನಾಯಕರು ಪಟ್ಟಿ ಮಾಡಿ ಕಳಿಸಿರುತ್ತಾರೆ.
ಸಮಾಧಾನ ತೆಗೆದುಕೊಳ್ಳಿ, ಸಂಯಮದಿಂದಿರಿ ಎಂದು ಸ್ವತಃ ವಿಜಯೇಂದ್ರ ಅವರು ತನ್ನ ಬೆಂಬಲಿಗರಿಗೆ ಸಂದೇಶ ಮಾಡಿದ್ದು ಕಂಡಾಗ ಅವರ ಬಗ್ಗೆ ತುಂಬಾ ಕನಿಕರ ಮೂಡಿಸುತ್ತದೆ.
ಬಿಜೆಪಿ ಹೈಕಮಾಂಡ್ ಮತ್ತು ರಾಜ್ಯ ಸಮಿತಿಯು ಕೂಡಾ ಬಹಳ ಸಂಯಮದಿಂದಲೇ ಯಡಿಯೂರಪ್ಪ ಆ್ಯಂಡ್ ಸನ್ಸ್ ರನ್ನು ಸದ್ದಿಲ್ಲದಂತೆ ತುಳಿಯುತ್ತಿದೆ.ಅದು ಸ್ವತಃ ಯಡಿಯೂರಪ್ಪನವರಿಗೂ ಹೈಕಮಾಂಡ್ ನಿಂದ ತುಳಿಸಿಕೊಳ್ಳುವ ನೋವಿನ ಅನುಭವ ಆಗುತ್ತಲೇ ಇದೆ.
ಮುಂದೆ ವಿಜಯೇಂದ್ರರಿಗೆ 2023 ರ ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಡಲೇಬೇಕಾಗುತ್ತದೆ.ಕೊಡುವುದನ್ನೂ ಮರೆಯುವುದಿಲ್ಲ.ಗೆಲ್ಲುವುದು ಏನಿದ್ದರೂ ವೈಯಕ್ತಿಕ ಖರ್ಚಿನ ಮೇಲೆ ಅವಲಂಬಿತವಾಗಿರುತ್ತದೆ ಯಾಕೆಂದರೆ, ಸೋಲಬೇಕೆಂಬ ಬಲವಾದ ಪ್ರಾರ್ಥನೆ ಪಕ್ಷದ್ದಾಗಿರುತ್ತದೆ.
ತಂದೆಯ ಅರಸೊತ್ತಿಗೆಯ ಅವಧಿಯಲ್ಲಿ ವಿಧಾನ ಸೌಧವನ್ನೇ ತನ್ನ ಹೆಬ್ಬೆಟ್ಟು, ತೋರುಬೆರಳಲ್ಲಿಯೆ ನಿಯಂತ್ರಿಸುತ್ತಿದ್ದರು ಎನ್ನುವ ಬಲವಾದ ಆರೋಪ ವಿಜಯನ್ ರವರ ಮೇಲೆ ಕೇಳಿ ಬಂದಿತ್ತು; ಅಪ್ಪನ ಹೆಸರಿನ ಮೇಲೆ ತಾನೇ ಸಹಿ ಹಾಕುತ್ತಿದ್ದರು ಎಂಬೆಲ್ಲ ಸುಳ್ಳು ಆಪಾದನೆಗಳನ್ನು ಹೈಕಮಾಂಡ್ ಒಂಚೂರೂ ಭಟ್ಟಿ ಇಳಿಸದೆನೆ ಅಕ್ಷರಕ್ಷರ ನಂಬಿದೆ.
ಬಿಜೆಪಿ ಪ್ರಭುಗಳಿಗೆ ವಿಜಯೇಂದ್ರ ಅವರ ಬೆಂಗಳೂರು ವಿಧಾನಸೌಧ ಪ್ರದೇಶಕ್ಕೆ ಪ್ರವೇಶವೇ ಬೇಡವಾಗಿದೆ.ರಾಜಾ ಹುಲಿಯ ಮಗ ಎಂದ ಮೇಲೆ ಮೈಮೇಲೆ ಎರಗುವುದನ್ನು ಬೇರೆ ಕಲಿಸಬೇಕೆಂದಿಲ್ಲ ತಾನೆ? "ಎಮ್ಮೆ ಕರುವಿಗೆ ಈಜಲು"ಕಲಿಸಬೇಕೆ? ಅನ್ನುವ ನಾಣ್ಣುಡಿಯಿದ್ದಂತೆ.
ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಸ್ಥಾನವೇನೋ ಇದೆ .ಅದು ನಳಿನ್ ಕುಮಾರ್ ಕಟೀಲಿಗೆ ಅಧ್ಯಕ್ಷ ಹುದ್ದೆಯಿದ್ದಷ್ಟೆ ..!
ಶಿಕಾರಿಪುರದಲ್ಲಿ ಬಿ.ಎಸ್.ಯಡಿಯೂರಪ್ಪನವರೂ ಒಮ್ಮೆ ಸೋತಿದ್ದಾರೆ ಎನ್ನುವ ಇತಿಹಾಸವನ್ನು ಬಹುಶಃ ವಿಜಯೇಂದ್ರ ಕೂಡಾ ಮರೆಯಲಿಕ್ಕಿಲ್ಲ ಅಥವಾ ನೆನಪಿಸಿಕೊಳ್ಳಬೇಕು.ಎದುರಾಳಿಗೆ ಬಿಜೆಪಿ ಹೈಕಮಾಂಡ್ ಆನೆ ಬಲ ಕೊಟ್ಟರೂ ಅದು ಫಲಿತಾಂಶದ ನಂತರವೇ ಬಿ.ಎಸ್.ವೈ. ಟೀಕಿಸಬೇಕಾಗುತ್ತದೆ.
2023 ಜನವರಿ ತಿಂಗಳಿನಲ್ಲಿ ಕೇಂದ್ರವು ಭಾರೀ ದೊಡ್ಡ ಕೊಡುಗೆಯೊಂದನ್ನು ಲಿಂಗಾಯತ ಸಮುದಾಯಕ್ಕೆ ಕೊಡಲಿದೆ.ಅದು ಯಡಿಯೂರಪ್ಪ ಅವರ ಬಲಕ್ಕೆ ಶಾಕ್ ಹೊಡೆದಂತೆ.
ಮಠಾಧೀಶರಿಗೆಲ್ಲ ರಾಜ್ಯದ ಹಿತಾಸಕ್ತಿಯಿದ್ದರೂ, ಇರದೆ ಇದ್ದರೂ ಲಿಂಗಾಯತ ಸಮುದಾಯ, ಸಮಾಜಕ್ಕೆ ಮತ್ತು ಮಠಕ್ಕೆ ಧಾರಾಳತೆಯನ್ನು ಯಾವುದೇ ಸರಕಾರ ತೋರಿಸಿದರೆ ಸಾಕು.ಅದುವೇ ಬೇಕಾಗಿರೋದು ಕೂಡಾ.
ಜನಸಾಮಾನ್ಯರ ಮುಖ್ಯಮಂತ್ರಿ ಬೊಮ್ಮಾಯಿ ಹೇಳುವುದೆಲ್ಲವೂ,ಮಾಡಿಸುವುದೆಲ್ಲವೂ ಬಿ.ಎಸ್.ವೈ ಮತ್ತು ವಿಜಯೇಂದ್ರ ಇಬ್ಬರ ನಿರ್ದೇಶನದಂತೆ ಎಂಬುದು ನಾಡಿನ ಪ್ರತಿಯೊಬ್ಬನಿಗೂ ಗೊತ್ತಾಗಿರುವಾಗ ಹೈಕಮಾಂಡಿಗೂ ತಿಳಿದಿರುವುದಿಲ್ಲವೇ.? ರಾಜ್ಯ ಬಿಜೆಪಿಯ ಎಲ್ಲ ಸಮಿತಿಗಳೂ ಮೊದಲಾಗಿ ಹೈಕಮಾಂಡಿಗೆ ಸಲ್ಲಿಸುವ ವರದಿ ಬೊಮ್ಮಾಯಿ ಮತ್ತು ಬಿಎಸ್ ವೈಯವರ ನಡುವೆ ಇರುವ ಡೈಲಿ ಸಂಪರ್ಕ/ಸಂಬಂಧ ವಿವರ.
2023 ಚುನಾವಣೆ ಸಂದರ್ಭದಲ್ಲಿ ಸರಕಾರ ರಚನೆಗೆ ಕಿಂಗ್ ಮೇಕರ್ ಜೆಡಿಎಸ್ ಅಲ್ಲ, ಬಿಎಸ್ ವೈ ಗುಂಪು ಎಂಬ ಅರಿವೂ ಅಮಿತ್ ಶಾಗಿದೆ.ಲೋಕವೇ ಹೇಳಿದೆಯಲ್ಲವೇ ಅವರೊಬ್ಬ ಪಕ್ಷದ ಚಾಣಕ್ಯ ! ಎಂದು.
ಆ ಕಾರಣಕ್ಕಾಗಿ ಯಡಿಯೂರಪ್ಪನವರ ಆಪ್ತರು ಮತ್ತು ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎಲ್ಲಾ ಬೆಂಬಲಿಗರಿಗೆ ಖಂಡಿತವಾಗಿಯೂ ಟಿಕೆಟ್ ಕೊಡುವುದಿಲ್ಲ.ಒಂದು ವೇಳೆ ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರಿಗೆ ಟಿಕೆಟ್ ನೀಡಿದರೆ ಮುಂದೆ ಯಡಿಯೂರಪ್ಪನವರು ಅವರ ಬೆಂಬಲಿಗರ ಶಾಸಕರೊಂದಿಗೆ ಸರಿಸುಮಾರು ಮೂವತ್ತೈದು ಶಾಕರನ್ನು ಜೊತೆ ಮಾಡಿಕೊಂಡು ಕಾಂಗ್ರೆಸ್ಸಿಗೂ ಅಥವಾ ಬೇರೊಂದು ಪಕ್ಷದೊಂದಿಗೆ ಸರಕಾರ ಮಾಡಿಯೇ ಮಾಡಿಯೇ ತೀರುತ್ತಾರೆ.
ಸರಕಾರ ತಮ ಕೈಯಲಿದ್ದರೆ ಕೇಂದ್ರದ ಕೆಲವು ಗೊಡ್ಡು ಬೆದರಿಕೆಗಳಿಗೆ ಅಷ್ಟೊಂದು ಹೆದರುವ ಆವಶ್ಯಕತೆ ಬರುವುದಿಲ್ಲ ಎಂಬ ನಂಬಿಕೆ ಇದ್ದೇ ಇರುತ್ತದೆ.
ಇದೀಗ ಬಿ.ಎಸ್.ವೈ ಕುಟುಂಬವು ರಾಜಕೀಯ ಭವಿಷ್ಯತ್ತಿನ ನಿರ್ಮಾಣ ಕಾಮಗಾರಿಗಾಗಿ ಈಗಾಗಲೇ ಗುದ್ದಲಿ ಪೂಜೆ ಮಾಡುವ ಆಲೋಚನೆಯಲ್ಲಿದೆ. ಅಷ್ಟಮಂಗಲ ಪ್ರಶ್ನೆ ಇಡುವುದಕ್ಕೆ ವಿಜಯೇಂದ್ರ ಕಿಕ್ಕೌಟ್ ಪ್ರಸಂಗ ಮೂಹೂರ್ತ ಕೊಟ್ಟಿದೆ.
ರಾಜಾಹುಲಿಯ ಮಗ ಮುಂದೆ ಅಧಿಕಾರಕ್ಕೇರುವ ಪಕ್ಷಕ್ಕೆ ಕಿಂಗ್ ಮೇಕರ್ ಆಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.ಇದೆಲ್ಲವನ್ನು ಮನಗಂಡಿರುವ ಹೈಕಮಾಂಡ್ ಯಡಿಯೂರಪ್ಪನವರನ್ನೇ ಪಕ್ಷದಿಂದ ದೂರ ಪ್ರಯತ್ನವನ್ನ ಬಿ ಎಲ್ ಸಂತೋಷ್ ಅವರ ಮೂಲಕ ಮಾಡಿಸುತ್ತಿದೆ.
ಬಿ.ಎಲ್ ಸಂತೋಷ್ ಮೈಸೂರಿನ ಸಭೆಯೊಂದರಲ್ಲಿ ಮಾತನಾಡಿರುವ ಮಾತು ಈಗ ಅಕ್ಷರಶಃ ಸತ್ಯವಾಗುತ್ತಿದೆ.ಪಕ್ಷದ ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುವುದು ಇದರಿಂದ ಮುಂದಿನ ದಿನದಲ್ಲಿ ಪಕ್ಷದಲ್ಲಿ ಭಾರೀ ಬದಲಾವಣೆ ತರುವುದು ಬಿಜೆಪಿ ಉದ್ದೇಶವಾಗಿದೆ .ಆ ನಿಟ್ಟಿನಲ್ಲಿ ಕರ್ನಾಟಕ ಪ್ರಯೋಗವಾಗಲಿದೆ.
ಮುಂದಿನ ಚುನಾವಣೆ ಹೊತ್ತಿನವರೆಗೆ ಏನೆಲ್ಲ ಬದಲಾವಣೆ ಕಾದಿದೆಯೋ ನೋಡೋಣ.....
ಪ್ರಕಾಶ್ ಮಂದಾರ
ಸಂಪಾದಕರು.
0 Comments