ಸಾಗರ ತಾಲ್ಲೂಕಿನಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲ!?


ಸಾಗರ:ಸಭ್ಯರು, ಸುಸಂಸ್ಕೃತರು ಬದುಕಿ ಬಾಳಿದ  ಸಾಗರ ತಾಲ್ಲೂಕಿನಲ್ಲಿ ಇತ್ತೀಚಿನ ದಿನದಲ್ಲಿ ರಾಜಕೀಯದ ಕೆಸರೆರಚಾಟದಿಂದಾಗಿ ಸಾಗರ ತಾಲ್ಲೂಕು ತನ್ನ ಗತ ವೈಭವವನ್ನು ಕಳಚಿಕೊಳ್ಳುತ್ತ ಸಾಗುತ್ತಿದೆ.ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ತಾಲ್ಲೂಕಿನ ಘನತೆ, ಗೌರವವನ್ನು ರಾಜ್ಯದ ಜನರ ಮುಂದೆ ಬೆತ್ತಲೆ ಮಾಡುತ್ತಿದ್ದಾರೆ.
ರಾಜಕೀಯ ನಾಯಕರ ಹಿಂಬಾಲಕರು ನಡೆಸುವಂಥ ಕೆಲ ಪ್ರವೃತ್ತಿ ಮತ್ತು ಅಹಿತಕರ ಘಟನೆಗಳು ನಾಯಕರುಗಳ ಹೆಸರಿಗೆ ಮಸಿ ಬಳಿಯುವಂತೆ ಗೋಚರಿಸುತ್ತಿದೆ.

ತಾಲ್ಲೂಕಿನಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ ಸಾಮರಸ್ಯದ ಬದುಕನ್ನು ನಡೆಸಿಕೊಂಡು ಹೋಗಲು ಶಾಂತಸಾಗರದ ವಾತಾವರಣವನ್ನು ನಿರ್ಮಾಣ ಮಾಡಬೇಕಾದ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ.

ಒಂದು ಕಾಲದಲ್ಲಿ ಸಾಗರದ ಪೊಲೀಸ್ ಇಲಾಖೆ ಶಿಸ್ತಿಗೆ ಹೆಸರಾಗಿತ್ತು, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿತ್ತು.ಆದರೆ ಇಂದು ರಾಜಕೀಯ ನಾಯಕರ ತಾಳಕ್ಕೆ ಕುಣಿಯುತ್ತಾ ತಾಲ್ಲೂಕಿನ ಶಾಂತಿ ಸುವ್ಯವಸ್ಥೆ  ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಈ ಕಾರಣದಿಂದ ತಾಲ್ಲೂಕಿನಾದ್ಯಂತ ಕೊಲೆ- ಸುಲಿಗೆ, ಹಲ್ಲೆ, ಪ್ರತೀಕಾರ,ಅಕ್ರಮ ಚಟುವಟಿಕೆಗಳು,ಭೂ ವ್ಯಾಜ್ಯಗಳು,ಪುಡಿ ರೌಡಿಗಳ ಉದ್ಭವ,ಲಾಂಗು- ಮಚ್ಚುಗಳ,ಗಾಂಜಾ ಕಳ್ಳಬಟ್ಟಿ ನಿಯಂತ್ರಣಕ್ಕೆ ಬಾರದೇ ಇರುವುದು ಓಸಿ- ಇಸ್ಪೀಟು ರಾಜಾರೋಷವಾಗಿ ಆಡುತ್ತಿರುವುದು,ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಸಾಗಾಣಿಕೆ,ಅಕ್ರಮ ಮರಳು ,ಮಣ್ಣು ಸಾಗಾಣಿಕೆ,ಗ್ರಾಮ ಗ್ರಾಮಗಳಲ್ಲಿ ಗುಂಪು- ಘರ್ಷಣೆ,ಗಲಾಟೆಗಳು ನಡೆಯುತ್ತಿವೆ.ಇವುಗಳನ್ನ ನಿಯಂತ್ರಿಸಬೇಕಾದ ಪೊಲೀಸ್ ಇಲಾಖೆ ರಾಜಕೀಯ ನಾಯಕರ ಒತ್ತಡದಿಂದ ಸಂಪೂರ್ಣ ವಿಫಲರಾಗಿದ್ದಾರೆ.
ನೊಂದವರಿಗೆ ನೆರವು ನೀಡಬೇಕಾದ ಪೋಲೀಸ್ ಇಲಾಖೆ ಈ ರೀತಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದರೆ ಹಾದಿ-ಬೀದಿಗಳಲ್ಲಿ ಹೊಡೆದಾಟಗಳು, ಬಡಿದಾಟಗಳು ರಾಜಾರೋಷವಾಗಿ ಜನಸಾಮಾನ್ಯರ ಎದುರಿನಲ್ಲೇ ನಡೆಯುತ್ತವೆ ಎಂಬುದಕ್ಕೆ ತಾಜಾ ಉದಾಹರಣೆ ಮನೋಜ್ ಕುಗ್ವೆ ಮತ್ತು ಅರುಣ್ ಕುಗ್ವೆ ಇವರ ನಡುವೆ ನಡೆದ ಗಲಾಟೆ ನಿದರ್ಶನವಾಗಿದೆ.

ಈ ಹಿಂದೆ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸಭಾಂಗಣದಲ್ಲಿ ಹಲ್ಲೆಯಂಥ  ಘಟನೆ ಪೋಲಿಸ್ ಇಲಾಖೆಯ ಸಮ್ಮುಖದಲ್ಲೇ ನಡೆದಾಗ, ಅವರ ಮೇಲೆ ಕ್ರಮ ಕೈಗೊಳ್ಳುವಲ್ಲಿ ಪೋಲಿಸ್ ಇಲಾಖೆ ವಿಫಲವಾದಾಗ ,ಪೊಲೀಸ್ ಇಲಾಖೆಯ ಮೇಲೆ ಇದ್ದ ಅಲ್ಪ ಸ್ವಲ್ಪ ಭಯ ಜನರಿಂದ ದೂರವಾದಾಗ .ಈ ರೀತಿ ಹಾದಿ ಬೀದಿಯಲ್ಲಿ ಹೊಡೆದಾಟ- ಬಡೆದಾಟಗಳು ರಾಜಾರೋಷವಾಗಿ ನಡೆಯುತ್ತವೆ.ಲಾಂಗು ಮಚ್ಚುಗಳು ಚಲಪಲಿಸುತ್ತವೆ.

ಕಳೆದ 6ತಿಂಗಳಿನಿಂದ ಈಕೆ ತಾಲ್ಲೂಕಿನಾದ್ಯಂತ ಎಲ್ಲಿ ನೋಡಿದರಲ್ಲಿ ರಾಜಕೀಯ ನಾಯಕರ ಕೆಸರಾಟದಿಂದ  ಹೊಡೆದಾಟ ಬಡಿದಾಟಗಳ ಸುದ್ದಿ ಕೇಳುತ್ತಿದ್ದೇವೆ.
ಖಡಕ್ ಐಪಿಎಸ್ ರೋಹನ್ ಜಗದೀಶ್ ಇದ್ದರು ಸಹ ಈ ರೀತಿಯ ಹಲ್ಲೆಯಂಥ ಘಟನೆಗಳು ಆಗಿಂದಾಗೆ ಏಕೆ ನಡೆಯುತ್ತಿವೆ?ಈ ರೀತಿ ಮೇಲಿಂದ ಮೇಲೆ ಇಂಥ ಅಹಿತಕರ ಘಟನೆಗಳು ತಾಲ್ಲೂಕಿನಲ್ಲಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಏಕೆ ಕಣ್ಣು ಮುಚ್ಚಿ ಕುಳಿತಿದೆ?ಇವರ ಮೇಲೆ ನಿರ್ಧಾಕ್ಷಣವಾಗಿ ಕ್ರಮ ಕೈಗೊಳ್ಳುವಲ್ಲಿ ಪೋಲಿಸ್ ಇಲಾಖೆಯ ಮೇಲಿರುವ ಒತ್ತಡವಾದರೂ ಏನು ?ಒಬ್ಬ ಐಪಿಎಸ್ ಅಧಿಕಾರಿ ತಾಲ್ಲೂಕಿನಲ್ಲಿ ಇದ್ದರೂ ಸಹ ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದರೆ ಇದರ ಅರ್ಥವೇನು ?ಹೀಗೆಲ್ಲಾ ಪ್ರಶ್ನೆಗಳು ಸಾರ್ವಜನಿಕರ ವಲಯದಲ್ಲಿ ಹುಟ್ಟಿಕೊಳ್ಳುತ್ತಿವೆ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.

ಹೇಳಿ,ಕೇಳಿ ಇದು ಚುನಾವಣೆ ವರ್ಷ ಈ ಸಂದರ್ಭದಲ್ಲಿ ಹೆಚ್ಚಿನ ಗಲಾಟೆ ಗದ್ದಲಗಳು ನಡೆಯುತ್ತವೆ ಇವುಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸಜ್ಜಾಗಬೇಕಾಗುತ್ತದೆ.ತನ್ನ ಪೊಲೀಸ್ ಇಲಾಖೆಗೆ ಚುರುಕು ಮುಟ್ಟಿಸುವಂತಹ ಅಧಿಕಾರಿಯ ಅವಶ್ಯಕತೆ ಈ ಸಂದರ್ಭದಲ್ಲಿ ತುಂಬಾ ಇದೆ .ಈ ಹಿಂದೆ ಅರುಣ್ ಚಕ್ರವರ್ತಿ ಅವರಂಥ ದಕ್ಷ ಪ್ರಾಮಾಣಿಕ ಅಧಿಕಾರಿಯ ಅವಶ್ಯಕತೆ ತಾಲ್ಲೂಕಿಗೆ ತುಂಬಾ ಇದೆ.ಆ ನಿಟ್ಟಿನಲ್ಲಿ ಸಂಬಂಧಿಸಿದ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳ ತುರ್ತಾಗಿ ತಾಲ್ಲೂಕಿಗೆ ಒಬ್ಬ ಖಡಕ್ ಅಧಿಕಾರಿಯನ್ನು ನೇಮಕ ಮಾಡಬೇಕಾಗಿದೆ .ಆ ನಿಟ್ಟಿನಲ್ಲಿ ಸಾಗರ ತಾಲ್ಲೂಕಿನಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊರಬೇಕಾಗಿದೆ .ಮುಂದಿನ ದಿನದಲ್ಲಿ ನಡೆಯಬಹುದಾದಂಥ ಅಹಿತಕರ ಘಟನೆಗಳನ್ನು ನಿಯಂತ್ರಿಸುವ ದೃಷ್ಟಿಯಿಂದಲಾದರೂ ಒಬ್ಬ ದಕ್ಷ ಅಧಿಕಾರಿಯನ್ನು ತಾಲ್ಲೂಕಿಗೆ ನೇಮಕ ಮಾಡುವ ಮೂಲಕ ತಾಲ್ಲೂಕಿನ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂಬುದು ನಮ್ಮ ಮಾಧ್ಯಮದ ಆಶಯವಾಗಿದೆ.

ಪ್ರಕಾಶ್ ಮಂದಾರ.
ಸಂಪಾದಕರು.
8880499904

Post a Comment

0 Comments