ತಿಮ್ಮನಕಟ್ಟೆ:ಜೂ-28.ಬದುಕಿ ಬಾಳುವ ಮನುಷ್ಯನಿಗೆ ಸಂಸ್ಕಾರ ಸದ್ವಿಚಾರಗಳ ಅವಶ್ಯಕತೆಯಿದೆ. ಧರ್ಮದ ಪವಿತ್ರ ಆಚರಣೆಯಲ್ಲಿ ಮನುಷ್ಯ ಮುನ್ನೆಡೆದಾಗ ಸುಖಮಯ ಜೀವನ ಪ್ರಾಪ್ತವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ರಾಣೆಬೆನ್ನೂರು ತಾಲ್ಲೂಕಿನ ಪತ್ತೆಪುರ ಗ್ರಾಮದಲ್ಲಿ ಜರುಗಿದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಮಂಡಲ ಮಹಾಪೂಜೆ ಹಾಗೂ ಕೋಡಿಯಾಲ ಹೊಸಪೇಟೆಯ ಪುಣ್ಯಕೋಟಿ ಮಠದ ಶ್ರೀ ಅವರ ಮೌನ ಅನುಷ್ಠಾನ ಮಂಗಲದ ಅಂಗವಾಗಿ ಜರುಗಿದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮಾನವೀಯತೆಯ ಉದಾತ್ತ ಮೌಲ್ಯಗಳನ್ನು ಕಾಲಕಾಲದಲ್ಲಿ ಧರ್ಮಪೀಠಗಳು ಮಾರ್ಗದರ್ಶನ ನೀಡುತ್ತಾ ಬಂದಿವೆ. ಪತ್ತೆಪುರ ಗ್ರಾಮ ಚಿಕ್ಕದಾಗಿದ್ದರೂ ವೀರ ಆಂಜನಯ್ಯ ಭವ್ಯ ಶಿಲಾ ದೇವಾಲಯ ನಿರ್ಮಿಸಿದ್ದು ತಮ್ಮೆಲ್ಲರ ಧರ್ಮ ,ಶ್ರದ್ಧೆ, ಸ್ವಾಭಿಮಾನಕ್ಕೆ ಸಾಕ್ಷಿಯಾಗಿದೆ. ತುಂಗಭದ್ರಾ ತೀರದಲ್ಲಿ ಲೋಕಕಲ್ಯಾಣ ಮತ್ತು ಗ್ರಾಮದ ಅಭ್ಯುದಯಕ್ಕಾಗಿ ಕೋಡಿಯಾಲ-ಹೊಸಪೇಟೆ ಪುಣ್ಯಕೋಟಿ ಮಠದ ಜಗದೀಶ್ವರ ಶ್ರೀಗಳು ಹನ್ನೊಂದು ದಿನಗಳ ಕಾಲ ಅನುಷ್ಠಾನ ಕೈಗೊಂಡು ಇಂದು ಮಂಗಳಗೊಳಿಸುತ್ತಿರುವುದು ಅವರಿಗಿರುವಂತಹ ಪೂಜಾ ಶಕ್ತಿಯ ಒಲವನ್ನು ಕಾಣುತ್ತೇವೆ.ಸರಳತೆಯ ಸಾಕಾರ ಮೂರ್ತಿ ಗಳಾದ ಶ್ರೀಗಳವರ ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿ ಕಂಡು ಅತ್ಯಂತ ಹರ್ಷವಾಗುತ್ತಿದೆ.ಭವಿಷ್ಯತ್ತಿನ ದಿನಗಳಲ್ಲಿ ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಪಟ್ಟಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವುದು ಹೆಮ್ಮೆಯ ಸಂಗತಿ ಎಂದು ಆಶಿಸಿ ಶ್ರೀ ಪೀಠದಿಂದ ರೇಷ್ಮೆ ಮಾಡಿ ಹೊದಿಸಿ ಫಲ ಪುಷ್ಪವಿತ್ತು ಶುಭ ಹಾರೈಸಿದರು.
ಮಾಜಿ ವಿಧಾನಸಭಾಧ್ಯಕ್ಷ ಕೆ ಬಿ ಕೋಳಿವಾಡ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಜನ ಸಮುದಾಯದಲ್ಲಿ ಧರ್ಮದ ಪ್ರಜ್ಞೆ ಸಂಸ್ಕಾರ ನೀಡಲು ಮಠಗಳ ಅವಶ್ಯಕತೆ ಬಹಳಷ್ಟಿದೆ .ಇಂತಹ ಸಮಾರಂಭಗಳು ಹೆಚ್ಚು ಹೆಚ್ಚಾಗಿ ಎಲ್ಲಾ ಕಡೆ ನಡೆದು ಸಮಾಜದಲ್ಲಿ ಸದ್ಭಾವನೆ ಮೂಡಿಸಲೆಂದರು.
ಶ್ರೀ ರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿ ಬಹಳ ಪ್ರಾಚೀನ ಕಾಲದಿಂದಲೂ ಋಷಿ ಮುನಿಗಳು ,ಆಚಾರ್ಯರು ತಮ್ಮ ಬೋಧನೆಯ ಮೂಲಕ ಜನಸಮುದಾಯವನ್ನು ತಿದ್ದಿ ತೀಡಿದ್ದಾರೆ.ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಆದರ್ಶ ಮೌಲ್ಯಗಳನ್ನು ಮರೆತು ಸ್ವಾರ್ಥಕ್ಕಾಗಿ ಸಮಾಜವನ್ನು ಒಡೆಯುವ ಮತ್ತು ಕಲುಷಿತಗೊಳಿಸುವ ಕೆಲಸ ಮಾಡುತ್ತಿದ್ದಾನೆ.ಹಿಂದೂ ಸಂಸ್ಕೃತಿ ಉಳಿದು ಬೆಳೆದು ಬಂದರೆ ದೇಶ ಬೆಳೆದು ಬರಲು ಸಾಧ್ಯವಾಗುತ್ತದೆ ಪ್ರತಿಯೊಬ್ಬರಲ್ಲಿ ರಾಷ್ಟ್ರಪ್ರೇಮ ಧರ್ಮಾಭಿಮಾನ ಬೆಳೆದು ಬರಬೇಕೆಂದರು.
ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ರಾಣೇಬೆನ್ನೂರಿನ ಹಿರೇಮಠದ, ಮಣಕೂರು ಹಿರೇಮಠದ, ಸಂಗೊಳ್ಳಿ ಹಿರೇಮಠದ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಉಪಸ್ಥಿತರಿದ್ದರು.
ಮಂಜುನಾಥ್ ಗೌಡ ,ಹಳ್ಳಳ್ಳಿ ನಾಗರಾಜಪ್ಪ, ಮಂಜಣ್ಣ ಗೌಡ್ರ, ಹನುಮಂತಪ್ಪ ಕಣದಾಳ ಇದ್ದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಎಚ್ ಪಾಟೀಲ ಸ್ವಾಗತಿಸಿದರು.ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. 11 ದಿನಗಳ ಕಾಲ ರನ್ನ ಬೆಳಗಲಿ ಸಿದ್ರಾಮಣ್ಣ ಶಾಸ್ತ್ರಿಗಳು ಜೀವನ ದರ್ಶನ ಪ್ರವಚನ ಮಾಡಿದರು.ಅನುಷ್ಠಾನ ಮಂಗಲದ ಅಂಗವಾಗಿ ವೀರ ಆಂಜನೇಯಸ್ವಾಮಿ ದೇವಸ್ಥಾನದ ಮಂಡಲ ಪೂಜೆ ಹೋಮ ಹವನಾದಿ ಪೂಜಾ ಕಾರ್ಯಗಳು ಜರುಗಿದವು.ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಅಲಂಕೃತ ಸಾರೋಟದಲ್ಲಿ ಬರಮಾಡಿಕೊಂಡರು. ಪೂರ್ಣಕುಂಭ ಕಳಸ ,ಕನ್ನಡಿ ಹಾಗೂ ವಾದ್ಯಮೇಳಗಳು ಪಾಲ್ಗೊಂಡಿದ್ದವು.
ಪ್ರಕಾಶ್ ಮಂದಾರ
ಸಂಪಾದಕರು.
0 Comments