ಇಪ್ಪತ್ತೈದು ವಸಂತಗಳನ್ನು ಪೂರೈಸಿದ ದಾವಣಗೆರೆ ಜಿಲ್ಲೆ.!! ಜಿಲ್ಲಾಡಳಿತ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಆಚರಿಸುವುದಿಲ್ಲವೇ ?

ದಾವಣಗೆರೆ:ದಾವಣಗೆರೆ ಜಿಲ್ಲೆ ರಚನೆಯಾಗಿ ಇಪ್ಪತ್ತೈದು ವಸಂತಗಳನ್ನು ಕಳೆದಿದೆ .ಬೆಳ್ಳಿ ಮಹೋತ್ಸವದ ಸಂಭ್ರಮದ ಆಚರಣೆಯನ್ನು ದಾವಣಗೆರೆ ಜಿಲ್ಲಾ ಆಡಳಿತ ಆಯೋಜಿಸಬೇಕಾಗಿತ್ತು.ಆದರೆ ಜಿಲ್ಲಾಡಳಿತ ಬೆಳ್ಳಿ ವಾಸ್ತವದ ಕಾರ್ಯಕ್ರಮ ಆಯೋಜನೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಜಿಲ್ಲೆಯ ಪ್ರಜ್ಞಾವಂತ ನಾಗರಿಕರ  ವಲಯದಿಂದ ಕೇಳಿಬರುತ್ತಿದೆ.

ದಾವಣಗೆರೆ ಜಿಲ್ಲೆ ಮೊದಲು ಚಿತ್ರದುರ್ಗ ಜಿಲ್ಲೆಗೆ ಸೇರಿತ್ತು .ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ  ಅಂದಿನ ಮುಖ್ಯಮಂತ್ರಿ ಜೆಎಚ್ ಪಟೇಲ್ ಅವರು ಮಹತ್ವದ ಘೋಷಣೆಯೊಂದನ್ನು ಹೊರಡಿಸುತ್ತಾರೆ.ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ,ಹರಿಹರ ಮತ್ತು ಜಗಳೂರು ತಾಲ್ಲೂಕುಗಳನ್ನು ಶಿವಮೊಗ್ಗ ಜಿಲ್ಲೆಯಿಂದ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳನ್ನು ಹಾಗೂ ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿ ತಾಲ್ಲೂಕುಗಳನ್ನು ಸೇರಿಸಿ ಹೊಸ ದಾವಣಗೆರೆ ಜಿಲ್ಲೆಯನ್ನು ರಚನೆ ಮಾಡಿ ಅಂದಿನ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮಹತ್ವದ ನಿರ್ಧಾರವೊಂದನ್ನು ಘೋಷಣೆ ಮಾಡುತ್ತಾರೆ.ದಾವಣಗೆರೆ  ಜಿಲ್ಲೆಯ ಜನತೆಗೆ ಬೆಣ್ಣೆ ದೋಸೆಯ ಸವಿಯನ್ನು ಅಂದು ನೀಡುತ್ತಾರೆ.

ಕುಂದುವಾಡ ಕೆರೆ ನಗರದ ವಾಯು ವಿಹಾರಿಗಳಿಗೆ ಅತ್ಯಂತ ಹತ್ತಿರವಿರುವ ಸ್ಥಳವಾಗಿದೆ.ಹರಿಹರದ ತುಂಗಭದ್ರೆ ಮತ್ತು  ಹೊಯ್ಸಳರ ಕಾಲದ ಹರಿಹರೇಶ್ವರ ದೇವಾಲಯ,ಶಾಂತಿ ಸಾಗರ,ಪುರಾತನ ಬಾಗಳಿ ಕಲ್ಲೇಶ್ವರ ದೇವಾಲಯ  ಕೊಂಡಜ್ಜಿಯ ಸಸ್ಯ ಪಾಲನಾ ಕೇಂದ್ರ,ನೀಲಗುಂದದ ಭೀಮೇಶ್ವರ ದೇವಾಲಯಗಳು, ಉಕ್ಕಡಗಾತ್ರಿ ಕರಿಬಸವೇಶ್ವರ,ಅಜ್ಜಯ್ಯ ದೇವಾಲಯ ನಂದಿಗುಡಿ, ಹಿಂದಿನ ಕಾಲದ ವೃಷಭಮಠ ,ಸಂತೇಬೆನ್ನೂರಿನ ಪುರಾತನ ಪುಷ್ಕರಣಿ ದೊಡ್ಡಬಾತಿ ಪವಿತ್ರವನ ಆನೆಕೊಂಡದ ಪುರಾತನ ಬಸವೇಶ್ವರ ಹಾಗೂ ಈಶ್ವರ ದೇವಾಲಯಗಳು ದಾವಣಗೆರೆ ಜಿಲ್ಲೆಯಲ್ಲಿ ಒಳಗೊಂಡಂಥ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಾಗಿವೆ.
ದಾವಣಗೆರೆಯ ಜಿಲ್ಲೆ ಪೂರ್ವದಲ್ಲಿ ಚಿತ್ರದುರ್ಗ ಮತ್ತು ಶಿವಮೊಗ್ಗ ಮತ್ತು ನೈರುತ್ಯದಲ್ಲಿ ಹಾವೇರಿ.ತುಂಗಭದ್ರ ನದಿ ಹೊನ್ನಾಳಿ ತಾಲ್ಲೂಕಿನಿಂದ  ಹರಿದುಕೊಂಡು ಬರುವ ಮೂಲಕ ಪಶ್ಚಿಮದಲ್ಲಿ ಹರಿಹರ ಮತ್ತು ಹರಪನಹಳ್ಳಿ ಗಡಿಗಳಲ್ಲಿ ನೈಸರ್ಗಿಕ ಗಡಿಗಳನ್ನು ರೂಪಿಸುತ್ತದೆ.ದಾವಣಗೆರೆ ಮತ್ತು ಹರಿಹರ ಪಟ್ಟಣಗಳು ರಾಷ್ಟ್ರೀಯ ಹೆದ್ದಾರಿ NH-4 ಮೂಲಕ ವಿಶಾಲವಾದ ರೈಲು ಮಾರ್ಗ ಹಾದು ಹೋಗುತ್ತದೆ.

1997 ನೇ ಇಸವಿಯಲ್ಲಿ ಮುಖ್ಯಮಂತ್ರಿ ದಿವಂಗತ ಜೆ.ಎಚ್ ಪಟೇಲ್ ದಾವಣಗೆರೆಯನ್ನು ಸ್ವತಂತ್ರ ಜಿಲ್ಲೆಯನ್ನಾಗಿ ರಚನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಇದಕ್ಕೂ ಮೊದಲು ದಾವಣಗೆರೆಯೂ ಚಿತ್ರದುರ್ಗ ಜಿಲ್ಲೆಯ ತಾಲ್ಲೂಕುಗಳಲ್ಲೊಂದಾಗಿತ್ತು.ದಾವಣಗೆರೆ  ಜಿಲ್ಲೆಯ 6ತಾಲ್ಲೂಕುಗಳಿಂದ ಕೂಡಿದ್ದು ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ.ಹಿಂದೆ ಜವಳಿ ಉದ್ಯಮದಲ್ಲಿ ದೇಶದಲ್ಲೆ ಗಮನಸೆಳೆದ ಜಿಲ್ಲೆ ದಾವಣಗೆರೆಯಾಗಿತ್ತು.
ಸ್ವಾತಂತ್ರ ಅಮೃತ ಮಹೋತ್ಸವ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆ ರಚನೆಯ ಬೆಳ್ಳಿ ಮಹೋತ್ಸವದ ಸಂಭ್ರಮದ ಕಾರ್ಯಕ್ರಮವನ್ನು ಜಿಲ್ಲಾಡಳಿತ ಆಯೋಜನೆ ಮಾಡಬೇಕಾಗಿತ್ತು. ಆದರೆ ಜಿಲ್ಲಾ ಆಡಳಿತ ನಿರ್ಲಕ್ಷ್ಯ ವಹಿಸಿದೆ.ಇದು ಎಷ್ಟರಮಟ್ಟಿಗೆ ಸರಿ ? ಜಿಲ್ಲೆಯ ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ.

ಕರ್ನಾಟಕ ರಾಜ್ಯದ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲಾ ಕೇಂದ್ರವಾಗಿರುವ ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ.ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ ಪ್ರಸಿದ್ಧವಾದುದು.ಅಲ್ಲದೆ ಬೆಣ್ಣೆದೋಸೆ ಅತ್ಯಂತ ಪ್ರಸಿದ್ಧವಾದ ತಿನಿಸು.

ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ದಾವಣಗೆರೆ ಹತ್ತಿ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ ಜೋಳ ಅಕ್ಕಿ/ ಭತ್ತ,ಇತರ ಪ್ರಮುಖ ವಾಣಿಜ್ಯ ಬೆಳೆಗಳನ್ನು ಜಿಲ್ಲೆಯಲ್ಲಿ ತಂದು ಮಾರುತ್ತಾರೆ.

ದಾವಣಗೆರೆ ಜಿಲ್ಲೆ ಇತ್ತೀಚಿನ ದಿನದಲ್ಲಿ ರಾಜ್ಯದ ಪ್ರಮುಖ ವಿದ್ಯಾಕೇಂದ್ರವಾಗಿ ಬೆಳೆದಿದ್ದು, ಇಲ್ಲಿ ಚಿತ್ರಕಲೆ, ವಸ್ತ್ರವಿನ್ಯಾಸ ಶಾಸ್ತ್ರ, ಎಂಜಿನಿಯರಿಂಗ್(ಅಭಿಯಂತರ ಶಾಸ್ತ್ರ) ವೈದ್ಯಕೀಯ, ಕಲೆ, ವಾಣಿಜ್ಯ ಹಾಗು ಇತರ ವಿದ್ಯಾ ವಿಭಾಗಗಳನ್ನು ಹೊಂದಿರುವ ಮಹಾವಿದ್ಯಾಲಯಗಳು ನಮ್ಮ ಜಿಲ್ಲೆಯಲ್ಲಿರುವುದು ಜಿಲ್ಲೆಯ ಮುಕುಟಕ್ಕೆ ಹಿಡಿದಿರುವ ಕನ್ನಡಿಯಾಗಿದೆ.
ಹಲವು ಮಠಗಳ ಸಂಗಮ ದಾವಣಗೆರೆ .ಈ ಜಿಲ್ಲೆಯನ್ನು  "ದೇವನಗರಿ"ಎಂದೂ ಕರೆಯುತ್ತಾರೆ.ರಾಜಕೀಯದ ಕೇಂದ್ರಬಿಂದು ದಾವಣಗೆರೆ ಜಿಲ್ಲೆ. ರಾಷ್ಟ್ರ ಹಾಗೂ ರಾಜ್ಯ ನಾಯಕರು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಲು ಪ್ರತಿಷ್ಠೆಯ ಕಾರ್ಯಕ್ರಮವನ್ನು ನಡೆಸುವುದು ಮತ್ತು ಪ್ರಾರಂಭ ಮಾಡುವುದು ದಾವಣಗೆರೆ  ಜಿಲ್ಲೆಯಿಂದಲೇ.ಮೊನ್ನೆ ತಾನೆ ರಾಜ್ಯದ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ತಮ್ಮ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲೆಯಲ್ಲೇ ಆಚರಿಸಿಕೊಂಡಿರುವುದು ತಮಗೆಲ್ಲ ಗೊತ್ತಿರುವ ವಿಚಾರವೇ ಆಗಿದೆ.ದಾಸೋಹಕ್ಕೆ ಮತ್ತೊಂದು ಹೆಸರು ದಾವಣಗೆರೆ.ಇಷ್ಟೆಲ್ಲಾ ಸಂಪತ್ತನ್ನ ಹೊಂದಿರುವಂಥ ದಾವಣಗೆರೆ  ಜಿಲ್ಲೆ ಇಂದು ಇಪ್ಪತ್ತೈದರ ಸಂಭ್ರಮದಲ್ಲಿದೆ.ಯೌವನಾವಸ್ಥೆಯಲ್ಲಿರುವ ಬಿಸಿರಕ್ತದಲ್ಲಿ ಪುಟಿಯುತ್ತಿರುವ ದಾವಣಗೆರೆ  ಜಿಲ್ಲೆ ಇಂದು ಬೆಳ್ಳಿ ಮಹೋತ್ಸವ ಕಾರ್ಯಕ್ರಮದ ಆಚರಣೆಯ ಸಂಭ್ರಮದಲ್ಲಿ ಇಲ್ಲಿನ ಜನತೆ ಮಿಂದೇಳಬೇಕಾಗಿತ್ತು.

ಜಿಲ್ಲಾಡಳಿತ ಎಚ್ಚೆತ್ತುಕೊಂಡು ದಾವಣಗೆರೆ  ಜಿಲ್ಲೆ ರಚನೆಯ ಬೆಳ್ಳಿ ಮಹೋತ್ಸವದ ಕಾರ್ಯಕ್ರಮವನ್ನು ಅರ್ಥಗರ್ಭಿತವಾಗಿ ಆಚರಿಸುವಂತಾಗಲಿ ಎಂಬುದು ನಮ್ಮ ಮಾಧ್ಯಮದ ಆಶಯವಾಗಿದೆ.ಇದಕ್ಕೆ ಜಿಲ್ಲೆಯ ಸಮಸ್ತ ನಾಗರಿಕರು ಪಕ್ಷಾತೀತವಾಗಿ ದೊಡ್ಡ ಮಟ್ಟದಲ್ಲಿ ಧ್ವನಿ ಮೊಳಗಿಸಬೇಕಾಗಿದೆ.

ಪ್ರಕಾಶ್ ಮಂದಾರ 
ಸಂಪಾದಕರು 
8880499904

Post a Comment

0 Comments