ಬಲಿಗಾಗಿ ಬಾಯ್ತೆರೆದಿವೆ ರಸ್ತೆ ಮಧ್ಯೆ ಬಿದ್ದಿರುವ ಯಮರೂಪಿ ಗುಂಡಿಗಳು.!!


ಹರಿಹರ:ಹರಿಹರ ನಗರದ ತುಂಬೆಲ್ಲಾ ಯಮರೂಪಿ ಗುಂಡಿಗಳು ಬಲಿಗಾಗಿ ಬಾಯ್ತೆರೆದಿವೆ.ಕೂಡಲೇ ರಸ್ತೆ ಮಧ್ಯೆ ಬಿದ್ದಿರುವ ಯಮರೂಪಿ ಗುಂಡಿಗಳನ್ನ ಮುಚ್ಚುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಹಾಗೂ ಆಟೊ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ಲೋಕೋಪಯೋಗಿ ಇಲಾಖೆ ವಿರುದ್ಧ ರಸ್ತೆ ತಡೆ ನಡೆಸುವ ಮೂಲಕ ಬೇಜವಾಬ್ದಾರಿ ಇಲಾಖೆ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಹರಿಹರದ ಪ್ರಮುಖ ಹೃದಯ ಭಾಗದ ರಸ್ತೆಯಾಗಿರುವ ಹರಪನಹಳ್ಳಿ ಸರ್ಕಲ್ ನಿಂದ ರೈಲ್ವೆ ಅಂಡರ್ ಪಾಸ್ ಬ್ರಿಡ್ಜ್ ಕೆಳಗಿರುವ ರಸ್ತೆಯು ಹಲವಾರು ವರ್ಷಗಳಿಂದ ಹಾಳಾಗಿದ್ದು, ಈ ರಸ್ತೆಯ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕಾದ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯವಹಿಸುತ್ತಾ ಬಂದಿದೆ.

ಈ ರಸ್ತೆಯ ಮಾರ್ಗವಾಗಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ.ಶಾಲಾ ಮಕ್ಕಳು ವೃದ್ಧರು,ಅಂಗವಿಕಲರು ಈ ರಸ್ತೆಯ ಮಾರ್ಗದಲ್ಲೇ ಸಂಚರಿಸುತ್ತಾರೆ.ಮಳೆಗಾಲ ಬಂದರಂತೂ ಈ ರಸ್ತೆಯ ವಿಚಾರ ಕೇಳಲೇಬೇಡಿ.ರಸ್ತೆಯ ಮಧ್ಯೆ ಗುಂಡಿ ಬಿದ್ದಿದೆಯೇ? ಅಥವಾ ಗುಂಡಿಯೇ ರಸ್ತೆಯಲ್ಲಿ ಬಿದ್ದಿದೆಯೋ?ಎನ್ನುವಂತೆ ಭಾಸವಾಗುತ್ತದೆ.ಮೇಲಾಗಿ ಲೋಕೋಪಯೋಗಿ ಇಲಾಖೆಯವರು ಏನಾದರೂ ಹರಪನಹಳ್ಳಿ ರಸ್ತೆಯ ಮಧ್ಯಭಾಗದಲ್ಲಿ ಜಲ ಸಂರಕ್ಷಣೆ ಮಾಡುವ ಹಿತದೃಷ್ಟಿಯಿಂದ ಇಂಗುಗುಂಡಿಯನ್ನು ನಿರ್ಮಾಣ ಮಾಡಿದ್ದಾರೋ? ಅಥವಾ ಪ್ರವಾಸಿಗರಿಗೆ ಈಜುಕೊಳ ನಿರ್ಮಿಸಿ ಕೊಟ್ಟಿದ್ದಾರೆ ಎಂಬ ಅನುಮಾನ ಕಾಡುತ್ತದೆ.ಏಕೆಂದರೆ ಅಷ್ಟೊಂದು ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಯ ಮದ್ಯದಲ್ಲಿ ಗುಂಡಿ ಬಿದ್ದಿದ್ದಾವೆ.ರಸ್ತೆ ಮಧ್ಯೆ ಬಿದ್ದಿರುವ ಯಮರೂಪಿ ಗುಂಡಿಯ ತುಂಬೆಲ್ಲಾ ಮಳೆಯ ನೀರು ಆವರಿಸಿಕೊಂಡಿದ್ದು ವಾಹನ ಸವಾರರು ಹಾಗೂ ಪಾದಚಾರಿಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ.
ಆದರೆ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ ,ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗುತ್ತಿಲ್ಲ.ಪ್ರತಿ ಬಾರಿಯೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಿದ್ದೆ ಹೆಚ್ಚಾಗಿದೆ .ಅಧಿಕಾರಿಗಳು ಮಾತ್ರ ಮನವಿಪತ್ರವನ್ನು ಸ್ವೀಕರಿಸುತ್ತಾರೆ ವಿನಃ ಗುಂಡಿ ಮುಚ್ಚಬೇಕು ಎಂಬ ಮನೋಭಾವನೆ ಹೊಂದುತ್ತಿಲ್ಲ.ಆದ್ದರಿಂದ ಇಂದು ಆಟೊ ಮಾಲೀಕರು/ಚಾಲಕರು ಮತ್ತು ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ವಿರುದ್ಧ ರಸ್ತೆ ತಡೆ ನಡೆಸಬೇಕಾದಂಥ ಪರಿಸ್ಥಿತಿ ನಿರ್ಮಾಣವಾಯಿತು.

ತಾಲ್ಲೂಕ್ ಜಯಕರ್ನಾಟಕ ಸಂಘಟನೆ ಮತ್ತು ಆಟೊ ಮಾಲೀಕರು/ಚಾಲಕರ ಸಂಘದವರು ರಸ್ತೆ ತಡೆ ನಡೆಸುವ ವಿಚಾರ ಸಂಬಂಧಿಸಿದ ಇಲಾಖೆಯವರ ಗಮನಕ್ಕೆ ಬರುತ್ತಿದ್ದಂತೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ  ಪ್ರತಿಭಟನಾನಿರತರ  ಮನವೊಲಿಸುವ ಕಾರ್ಯಕ್ಕೆ ಮುಂದಾದರು.ಕೆಲ ಹೊತ್ತು ಪ್ರತಿಭಟನಕಾರರು ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದರು.ವಾಹನ ಸವಾರರಿಗೆ ಪಾದಚಾರಿಗಳಿಗೆ ತೊಂದರೆ ನೀಡಬಾರದು ಎಂಬ ಉದ್ದೇಶದಿಂದ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ತಮ್ಮ ರಸ್ತೆ ತಡೆಯನ್ನು ಕೆಲವು ಷರತ್ತುಗಳನ್ನು ಹಾಕುವ ಮೂಲಕ ಕೈಬಿಟ್ಟರು.
ಕೂಡಲೇ ರಸ್ತೆ ಮಧ್ಯೆ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು,ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅನುಕೂಲವಾಗುವಂತೆ ಶಾಶ್ವತ ರಸ್ತೆ ಕಾಮಗಾರಿಯನ್ನು ಕೈಗೊಳ್ಳಬೇಕು, ಇಲ್ಲದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಪ್ರತಿಭಟನಕಾರರು ನೀಡಿದರು.

ಇಲಾಖೆಯ ಅಧಿಕಾರಿಗಳು ಒಮ್ಮೆ ಯೋಚನೆ ಮಾಡಬೇಕು, ಸಂಘಟನೆಯ ಕಾರ್ಯಕರ್ತರು, ಸಾರ್ವಜನಿಕರು ಹೋರಾಟ ಮಾಡುವ ಮೊದಲು ಎಚ್ಚೆತ್ತುಕೊಳ್ಳಬೇಕು.ತಮ್ಮ ಗಮನಕ್ಕೆ ಬಂದ ನಗರದ ಎಲ್ಲ ರಸ್ತೆಗಳ ಮಧ್ಯೆ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಬೇಕು.ಇದು ನಿಮ್ಮ ಜವಾಬ್ದಾರಿ ಎಂಬುದನ್ನು ಅರಿಯಬೇಕು.ಹೋರಾಟ ಮಾಡಿದ ಮೇಲೆ ಎದ್ದೆನೋ, ಬಿದ್ದೆನೋ ಎಂದು ಸ್ಥಳಕ್ಕೆ ದೌಡಾಯಿಸಿ ಮನವಿಯನ್ನು ಸ್ವೀಕರಿಸಿ ನಂತರ ಕಾಮಗಾರಿ ಕೈಗೊಳ್ಳುವುದು ಸರಿ ಕಾಣುವುದಿಲ್ಲ .ಪ್ರತಿಯೊಂದು ಕೆಲಸಕ್ಕೂ ಹೋರಾಟ ಮಾಡಿ ಪರಿಹಾರ ಕಂಡುಕೊಳ್ಳಬೇಕೆ? ಒಮ್ಮೆ ಯೋಚನೆ ಮಾಡಿ.!ಏಕೆ ನಿಮ್ಮ ಗಮನಕ್ಕೆ ಇದ್ಯಾವುದೂ ಬರುತ್ತಿಲ್ಲವೇ ?ಹೋರಾಟದ ಮೂಲಕ ,ಪ್ರತಿಭಟನೆಯ ಮೂಲಕ ,ಮನವಿ ನೀಡುವುದರ ಮೂಲಕ  ಜನ ಸಾಮಾನ್ಯರ ಅಗತ್ಯ ಸೌಲಭ್ಯ ಪಡೆಯಬೇಕಾದಂಥ ಪರಿಸ್ಥಿತಿ ಬಂದಿದೆ.ಇದು ನಿಮ್ಮ ಕರ್ತವ್ಯ ನಿಷ್ಠೆಗೆ ಶೋಭೆ ತರುವಂಥದ್ದಲ್ಲ.
ಇನ್ನು ಮುಂದಾದರೂ ಇದ್ಯಾವುದಕ್ಕು ಅವಕಾಶ ಮಾಡಿಕೊಡದೆ ನಗರದ ತುಂಬೆಲ್ಲ ರಸ್ತೆ ಮಧ್ಯೆ ಬಿದ್ದಿರುವ ಗುಂಡಿಗಳನ್ನು ಮುಚ್ಚುವತ್ತ  ಗಮನಹರಿಸಿ.ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಗರದ ಜನತೆಗೆ ಬೇಕಾಗಿರುವಂಥ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿ ಎಂಬುದು ನಮ್ಮ ಮಾಧ್ಯಮದ ಆಶಯವಾಗಿದೆ.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಅಸಿಸ್ಟೆಂಟ್ ಎಂಜಿನಿಯರ್ ರಾಜು,ನಗರಸಭೆಯ ಪೌರಾಯುಕ್ತರಾದ ಬಸವರಾಜ್ ಐ ,ನಗರ ಠಾಣಾ ಪಿಎಸ್ಸೈ ಶಂಕರಗೌಡ ಪಾಟೀಲ್ ,ಜೈ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ರಾದ ಗೋವಿಂದ ,ಪ್ರಧಾನ ಕಾರ್ಯದರ್ಶಿ ಸುನೀಲ್ ಪಿ.ಎಚ್, ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ,ರಾಜು,ಪ್ರವೀಣ್ ,ಆಟೊ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷರಾದ ಮೋಹನ್ ಗೌಡ ,ಗೌರವಾಧ್ಯಕ್ಷರಾದ ಸಿದ್ದಲಿಂಗ ಸ್ವಾಮಿ ,ಬಿಎಸ್ ಪಿ ತಾಲ್ಲೂಕು ಅಧ್ಯಕ್ಷರಾದ ಕೇಶವ್ ,ಹಾಗೂ ಜಯಕರ್ನಾಟಕ ಸಂಘಟನೆಯ ಎಲ್ಲ ಪದಾಧಿಕಾರಿಗಳು ಮತ್ತು ಆಟೊ ಚಾಲಕರು ಹಾಗೂ ಮಾಲೀಕರ ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments