ಆಯುರ್ವೇದ ವೈದ್ಯ ಶಾಸ್ತ್ರವಷ್ಟೇ ಅಲ್ಲ, ಜೀವನ ಪದ್ಧತಿಯೂ ಹೌದು: ಪೇಜಾವರ ಶ್ರೀ


ದಾವಣಗೆರೆ: ತಾಲ್ಲೂಕಿನ ದೊಡ್ಡಬಾತಿಯಲ್ಲಿರುವ ತಪೋವನ ವೈದ್ಯಕೀಯ ಕಾಲೇಜು ಮತ್ತು ಯೋಗಾಸ್ಪತ್ರೆ, ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ ನೀಡಿದರು. ಈ ವೇಳೆ ತಪೋವನ ಮುಖ್ಯಸ್ಥರಾದ ಡಾ. ಶಶಿಕುಮಾರ್ ಅವರನ್ನು ಶಾಲು ಹೊದಿಸಿ ಶ್ರೀಗಳು ಸನ್ಮಾನಿಸಿದರು. 

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಪ್ರಪಂಚದ ಅತ್ಯಂತ ಪ್ರಾಚೀನವಾಗಿರುವ, ಭಾರತದ ನೆಲದಲ್ಲಿ ಹುಟ್ಟಿರುವಂತಹ ವೈದ್ಯ ಪದ್ಧತಿ ಅಭ್ಯಸಿಸಲು ಎಲ್ಲರೂ ಸೇರಿದ್ದೀರಾ. ಮುಂದಿನ ಭವಿಷ್ಯ ಉಜ್ವಲವಾಗಿರಲಿ, ಸಾಂಗವಾಗಿ ವಿದ್ಯಾಭ್ಯಾಸ ನಡೆಯಲಿ. ಆಯುರ್ವೇದ ಕೇವಲ ವೈದ್ಯ ಶಾಸ್ತ್ರ ಅಷ್ಟೇ ಅಲ್ಲ. ಜೀವನ ಪದ್ಧತಿ ತಿಳಿಸುವಂಥ ಶಾಸ್ತ್ರವಾಗಿದೆ. ಕೆಸರಿನಲ್ಲಿ ಕೈ ಹಾಕಿದರೆ ತೊಳೆದುಕೊಳ್ಳಬೇಕಾಗುತ್ತದೆ. ಕೆಸರೇ ಅಂಟದ ಹಾಗೆ ನೋಡಿಕೊಂಡರೆ ತೊಳೆದುಕೊಳ್ಳುವ ಪ್ರಮೇಯವೇ ಬರುವುದಿಲ್ಲ. ರೋಗ ಬಾರದ ಹಾಗೆ ನೋಡಿಕೊಳ್ಳಬೇಕಾದರೆ ಆಯುರ್ವೇದ ಪದ್ಧತಿ ಅನುಸರಿಸಬೇಕು ಎಂದು ತಿಳಿಸಿದರು. 
ತಪೋವನ ಆಯುರ್ವೇದ ವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಅಭಿನಂದನೆಗೆ ಅರ್ಹರು. ಆಯುರ್ವೇದ ಅಧ್ಯಯನದಿಂದ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಪಾರಂಪರಿಕ ಪದ್ಧತಿ ಉಳಿಸಿ ಬೆಳೆಸುವ ಕೆಲಸ ಆಗಲಿದೆ. ಡಾ. ಶಶಿಕುಮಾರ್ ಅವರ ಈ ಕಾರ್ಯ ನಿಜಕ್ಕೂ ಪ್ರಶಂಸನಾರ್ಹ ಎಂದು  ಶ್ರೀಗಳು ಹೇಳಿದರು. 

ತಪೋವನದ ಮುಖ್ಯಸ್ಥರಾದ ಡಾ. ಶಶಿಕುಮಾರ್ ಮಾತನಾಡಿ, ಪೇಜಾವರ ಶ್ರೀಗಳು ತಪೋವನ ವೈದ್ಯಕೀಯ ಕಾಲೇಜು ಮತ್ತು ಯೋಗಾಸ್ಪತ್ರೆ, ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದ್ದು ತುಂಬಾ ಖುಷಿ ತಂದಿದೆ. ತಪೋವನದಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡಲಾಗುತ್ತಿದೆ. ಪುರಾತನ ಕಾಲದ ವೈದ್ಯ ಪರಂಪರೆ ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆದಿದೆ. ತಪೋವನದಿಂದ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಸಿಕ್ಕಿದೆ. ಶ್ರೀಗಳ ಆಶೀರ್ವಾದ ನಮ್ಮ ಮೇಲಿರಲಿ. ಅವರ ಅನುಗ್ರಹ ಇದ್ದರೆ ಮತ್ತಷ್ಟು ಸಾಧನೆ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. 


ಪ್ರಾಚಾರ್ಯರಾದ ಡಾ. ಶ್ರೀಕಾಂತ್, ಡಾ. ಸುಮನಾ ಭಟ್ ಸೇರಿದಂತೆ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Post a Comment

0 Comments