ಹರ ಜಾತ್ರೆಯಲ್ಲಿ ಮೀಸಲು ಜನ ಜಾಗೃತಿ: ಶ್ರೀ ಶ್ರೀ ಶ್ರೀ ವಚನಾನಂದ ಸ್ವಾಮೀಜಿ.

ಹರಜಾತ್ರೆಯಲ್ಲಿ ಮೀಸಲು ಜನಜಾಗೃತಿ 
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದಲೇ ಪಂಚಮಸಾಲಿ ಮೀಸಲು ಕುರಿತು ಸ್ಪಷ್ಟತೆ -ಶ್ರೀ ವಚನಾನಂದ ಸ್ವಾಮೀಜಿ ಘೋಷಣೆ.
-----
* ಮಕರ ಸಂಕ್ರಾಂತಿ ವೇಳೆ ನಡೆಯುವ ಹರಜಾತ್ರೆಗೆ ಪಂಚಮಸಾಲಿ ಜಗದ್ಗುರು ಪೀಠ ಸಜ್ಜು 
* ಎರಡು ದಿನ ಹಲವು ಕಾರ್ಯಕ್ರಮ, ರಾಜ್ಯದ ನಾನಾ ಭಾಗಗಳಿಂದ ಜನತೆ ಭಾಗಿ 
ಮಕರ ಸಂಕ್ರಾಂತಿಯು ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ದಿನ. ಮಕರ ಸಂಕ್ರಾಂತಿ- ಜನವರಿ 14, 15 ರಂದು ಹರಜಾತ್ರಾ ಮಹೋತ್ಸವಕ್ಕೆ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಸಜ್ಜಾಗುತ್ತಿದೆ.  ಹರಪೀಠದ ಆವರಣವು ನಾಲ್ಕನೇ ವರ್ಷದ ಹರಜಾತ್ರೆಯ ಅಂಗವಾಗಿ ಬೃಹತ್ ಮೀಸಲಾತಿ ಜನಜಾಗೃತಿ ಯೃಸಮಾವೇಶಕ್ಕೆ ಸಿಂಗಾರಗೊಳ್ಳುತ್ತಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ನೀಡಬೇಕು ಎಂಬ ಬೇಡಿಕೆಗೆ ಸರಕಾರ ಬೇರೊಂದು ರೀತಿಯಲ್ಲಿ ಸ್ಪಂದಿಸಿದೆ. ಈ ಸನ್ನಿವೇಶದಲ್ಲಿ  ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಯವರು ವಿಜಯ ಕರ್ನಾಟಕದೊಂದಿಗೆ ವಿವಿಧ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. 
......................
* ಹರಜಾತ್ರಾ ಮಹೋತ್ಸವವು 2ಎ ಮೀಸಲಾತಿ ಗೊಂದಲ ನಿವಾರಣೆ ಮಾಡುವುದೇ? ಈ ಕುರಿತು ನಿಮ್ಮ ಸಂದೇಶ ಏನು?
ಈ ಬಾರಿ ಹರಜಾತ್ರೆ ಉದ್ದೇಶ ಮೀಸಲಾತಿ ಜನಜಾಗೃತಿ ಮೂಡಿಸುವುದಾಗಿದೆ. ಪಂಚಮಸಾಲಿಗಳಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕವಾಗಿ ಶಕ್ತಿ ತುಂಬುವುದಾಗಿದೆ. 2ಎ ಮೀಸಲಾತಿ ಬದಲು ರಾಜ್ಯ ಸರಕಾರ 2ಡಿ ಮೀಸಲಾತಿ ಪ್ರಕಟಿಸಿರುವ ಬಗ್ಗೆ ಸಮುದಾಯದವರಲ್ಲಿ ಹಲವು ಸಂಶಯಗಳಿವೆ. ಈ ಬಗ್ಗೆ ಸಿಎಂ ಶ್ರೀ ಬಸವರಾಜ ಬೊಮ್ಮಾಯಿ ಅವರೇ ವಿವರಣೆ ನೀಡಿ ಗೊಂದಲ ನಿವಾರಿಸಲಿದ್ದಾರೆ.ಜತೆಗೆ ಸಮಸ್ತ ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಕೇಂದ್ರದಲ್ಲಿ ಓಬಿಸಿ ಸಿಗಬೇಕು.ನಮ್ಮ ಸಮುದಾಯದವರು ಐಎಎಸ್, ಐಪಿಎಸ್,ಐಎಫ್ಎಸ್ ಅಧಿಕಾರಿಗಳಾಗಬೇಕಾದರೆ ನಿಟ್,ಮೆಡಿಕಲ್ ಸೀಟ್ ಪಡೆಯಲು,ಉಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳಲು ಕೇಂದ್ರದ ಓಬಿಸಿ ಮೀಸಲು ಬಹುಮುಖ್ಯವಾಗಿದೆ. ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯಗಳ ಪ್ರವೇಶಕ್ಕೂ ಅನುಕೂಲವಾಗಲಿದೆ. 
* ಈ ಬಾರಿ ಹರಜಾತ್ರೆ ಮಹೋತ್ಸವದ ವಿಶೇಷವೇನು?
- ಹರ ಅಂದರೆ ಉತ್ಸಾಹ, ಹುಮ್ಮಸ್ಸು, ಹಾಗೇ ಪಂಚಮಾಸಾಲಿಗಳು ವರ್ಷಕ್ಕೊಂದು ಬಾರಿ ಸೇರಬೇಕು. ಚರ್ಚೆ, ಸಂವಾದ, ಚಿಂತನ ಮಂಥನ, ವಿಚಾರ ವಿನಿಮಯ ಆಗಬೇಕು. ಸೂರ್ಯ ಪಥ ಬದಲಿಸುವ ಹಾಗೇ ಸಮುದಾಯ ಕೂಡ ವರ್ಷದಿಂದ ವರ್ಷಕ್ಕೆ ನಾವು ಯಾವ ಪಥದತ್ತ ಸಾಗಬೇಕು ಎನ್ನುವ ಚರ್ಚೆ ಆಗಬೇಕು.  ನಮ್ಮ ಸಮುದಾಯ ಕೂಡ ಬೆಳಕಿನ ಕಡೆ ಸಾಗಬೇಕು. ಸಂಕ್ರಾಂತಿ ಎಳ್ಳು ಬೆಲ್ಲ ಕೊಡುವ ಸಾಮರಸ್ಯದ ಹಬ್ಬವಾಗಿದೆ. ಹಾಗೆಯೇ ಸಮುದಾಯದವರು ಈ ದಿನದಂದು ಕಹಿ ಮರೆತು ಪರಸ್ಪರ ಎಳ್ಳು ಬೆಲ್ಲ ಬೀರಲು ಹರಜಾತ್ರೆ ಸಾಮರಸ್ಯದ ವೇದಿಕೆಯಾಗಿದೆ. 2020ರಲ್ಲಿ ಆರಂಭವಾದ ಹರಜಾತ್ರೆ, ಈಗ ರಾಜ್ಯಾದ್ಯಂತ ಪಂಚಮಸಾಲಿಗರ ಮನೆ ಮಾತಾಗಿದೆ. 

* ಕಳೆದ ವರ್ಷ ಉದ್ಯೋಗ ಮೇಳ ಆಯೋಜಿಸಿ ಯುವ ಸಮೂಹಕ್ಕೆ ಕೆಲಸ ಕೊಟ್ಟಿತು. ಏನಿದರ ಹಂಬಲ, ಆಶಯ?

- ಕಳೆದ ವರ್ಷದ ಉದ್ಯೋಗ ದಾಸೋಹದಲ್ಲಿ 6453 ಯುವಕ, ಯುವತಿಯರಿಗೆ  ಜಾತ್ಯಾತೀತವಾಗಿ ಉದ್ಯೋಗ ಸಿಕ್ಕಿದೆ, 30 ರಿಂದ 40 ಸಾವಿರ ವೇತನವಿದೆ. ಈ ಕುಟುಂಬದ ಸುಮಾರು 25 ಸಾವಿರ ಜನರು ಮೇಳವನ್ನು ನೆನಪು ಮಾಡಿಕೊಂಡು ಊಟ ಮಾಡುತ್ತಾರೆ. ಎಲ್ಲ ಮಠಗಳು ಶಿಕ್ಷಣ ಕೊಡುವ ಕೆಲಸವನ್ನು ಮಾಡುತ್ತಿವೆ, ಜತೆಗೆ ಉದ್ಯೋಗ ಕೊಡುವ ಕಾಯಕವನ್ನು ನಾವು ಆರಂಭಿಸಿದ್ದೇವೆ. ಅದರಂತೆ ರಾಜ್ಯದ ಬಾಗಲಕೋಟೆ, ವಿಜಯಪುರ, ಜಮಖಂಡಿ, ದಾವಣಗೆರೆ ಸೇರಿ ಐದಾರು ಕಡೆ ಉದ್ಯೋಗ ಮೇಳ ನಡೆಸಿ ಯುವ ಸಮುದಾಯಕ್ಕೆ ಕೆಲಸ ಕೊಡಿಸಲಾಗಿದೆ. ಉದ್ಯೋಗ ಇಲ್ಲದೆ ಯುವಕರು ಖಾಲಿ ಇರಬಾರದು ಎಂಬುದು ನಮ್ಮ ಚಿಂತನೆ. 
* ಹರಜಾತ್ರೆ ಪೂರ್ವ ತಾವು ಮಾಡಿದ ಜನಜಾಗೃತಿ ಯಾತ್ರೆಯ ಉದ್ದೇಶ ಸಾಕಾರವಾಯಿತೇ?  
- ಈಗಾಗಲೇ ನಾವು ರಾಜ್ಯದ ಗದಗ, ಹಾವೇರಿ, ವಿಜಯನಗರ, ಬಳ್ಳಾರಿ ಸೇರಿ ಹಲವು ಕಡೆ ಜನಜಾಗೃತಿ ಯಾತ್ರೆ ಮಾಡಿದ್ದೇವೆ. ಜನ ಜಾಗೃತಿಯ ಉದ್ದೇಶ 2009 ರಲ್ಲಿ ಪಂಚಮಸಾಲಿಗಳಿಗೆ 3ಬಿ ಮೀಸಲಾತಿ ಲಭಿಸಿತು. ಆದರೆ, ಈ 3ಬಿ ಮೀಸಲಾತಿಯನ್ನೇ ಸಮಾಜದ ಬಹುತೇಕರು ತೆಗೆದುಕೊಂಡಿಲ್ಲ. 13 ವರ್ಷದ ಹಿಂದೆ ಆದ ಮೀಸಲಾತಿಯ ಸೌಲಭ್ಯವನ್ನೇ ಪಡೆದಿಲ್ಲ. ಈಗ ನಾವು 2ಎ ಮೀಸಲಾತಿ ಹೋರಾಟ ಮಾಡುತ್ತಿದ್ದೇವೆ. ಆದರೆ, ಬಹುತೇಕರು ಪಂಚಮಸಾಲಿ ಜಾತಿಯ ಪ್ರಮಾಣ ಪತ್ರ ಪಡೆದಿಲ್ಲ. ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಅಂತ ಸೇರಿಸಲು ಇದ್ದ ತೊಡಕು ಕೆಲ ಕಡೆ ನಿವಾರಿಸಲಾಗುತ್ತಿದೆ. ಈ ಬಗ್ಗೆ ಸರಕಾರ ಗೆಜೆಟ್ ನೋಟಿಫಿಕೇಷನ್ ಸಹ ಹೊರಡಿಸಿದೆ. ಈ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದ್ದು, ಹರಜಾತ್ರೆಯ ಮೂಲಕವೂ ಸಮುದಾಯದವರಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. 

* ಜ್ಞಾನಯೋಗಿಗೆ ನುಡಿನಮನ ಹಮ್ಮಿಕೊಂಡಿದ್ದೀರಿ.....
- ನಮ್ಮ ಪೀಠದ ಪ್ರಥಮ ಹರಜಾತ್ರೆಗೆ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿ, ಸಮುದಾಯದವರಿಗೆ ಸಂದೇಶ ನೀಡಿದ್ದರು. ಸಿದ್ದೇಶ್ವರ ಶ್ರೀಗಳು ನಮಗೆ ಬಾಲ್ಯದಿಂದಲೂ ಸ್ಪೂರ್ತಿ ಚಿಲುಮೆ. ಹರಜಾತ್ರೆ ಮಾಡುವ ಬಗ್ಗೆ ನಮಗೆ ಸಲಹೆ ಕೊಟ್ಟಿದ್ದು ಸಿದ್ದೇಶ್ವರ ಶ್ರೀಗಳು. ಕೃಷಿಯನ್ನೇ ಅವಲಂಭಿಸಿರುವ ಪಂಚಮಸಾಲಿಗರ ಸಮಸ್ಯೆಗಳ ಆಲಿಸಲು ನನಗೆ ಗ್ರಾಮ ದರ್ಶನ ಮಾಡುವಂತೆ ಸಲಹೆ ನೀಡಿದ್ದರು. ಅದರಂತೆ ಗ್ರಾಮದರ್ಶನ ಮಾಡಿ ಸಮಾಜದವರ ಸಮಸ್ಯೆ, ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ಇಂತಹ ಗುರುವಿಗೆ ನುಡಿ ನಮನ ಸಲ್ಲಿಸುವ ಕೆಲಸವನ್ನು ಈ ಹರಜಾತ್ರೆಯಲ್ಲಿ ಮಾಡಲಾಗುತ್ತಿದೆ. ಇದರ ಜತೆಗೆ ರೈತ ರತ್ನ ಸಮಾವೇಶದಲ್ಲಿ ಸಮಕಾಲೀನ ಸಮಸ್ಯೆಗಳು, ಸರಕಾರದ ಸವಲತ್ತುಗಳ ಬಗ್ಗೆ ಸಮುದಾಯದವರಿಗೆ ಕೃಷಿ ತಜ್ಞರಿಂದ ತಿಳಿಸಿಕೊಡಲಾಗುತ್ತದೆ. ನಂತರ ಪಂಚಮ ಪೀಠಾರೋಹಣ, ಮಾತೆಯರಿಂದ ಕುಂಭಮೇಳ, ರೊಟ್ಟಿ ಬುತ್ತಿ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹರಜಾತ್ರೆಗೆ ನಾಡಿನ ಮಠಾಧೀಶರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಚಿತ್ರನಟ ಡಾಲಿ ಧನಂಜಯ, ಬಿಜೆಪಿ ಯುವ ಮುಖಂಡ ಬಿ.ವೈ. ವಿಜಯೇಂದ್ರ ಸೇರಿ ಕೃಷಿ ತಜ್ಞರು, ಕೇಂದ್ರದ,ರಾಜ್ಯದ ಸಚಿವರು, ಶಾಸಕರು,ಉದ್ಯಮಿಗಳು ಭಾಗವಹಿಸುವರು.

Post a Comment

0 Comments