ಬಡವರ ಬದುಕಿನ ಕಡೆ ಗಮನ ಕೊಡಿ,ಹಳ್ಳದ ಮರಳು ಎತ್ತಲು ಅವಕಾಶ ನೀಡಿ: ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಬೆಳ್ಳೋಡಿ ಗ್ರಾಮಸ್ಥರಿಂದ ತಾಲ್ಲೂಕು ದಂಡಾಧಿಕಾರಿಗಳಲ್ಲಿ ಮನವಿ.


ಬಡವರ ಬದುಕಿನ ಕಡೆ ಗಮನ ಕೊಡಿ ಹಳ್ಳದ ಮರಳು ಎತ್ತಲು ಅವಕಾಶ ನೀಡಿ. ಗ್ರಾಮದಲ್ಲಿ ಬಡವರು ಮನೆ ಕಟ್ಟಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಯೋಜನೆಗಳ ಮನೆಯನ್ನ ಪಡೆದರೆ ಸರ್ಕಾರ ನೀಡುವ ಅನುದಾನದಲ್ಲಿ ಕೇವಲ ಮರಳಿಗೆ ಮಾತ್ರ ಹಣ ಸಾಕಾಗುತ್ತಿದೆ ಎಂದು ಬೆಳ್ಳೂಡಿ ಗ್ರಾಮದ ಬಡ ಹಾಗೂ ಮಧ್ಯಮ ವರ್ಗದ ಜನರು ಶಾಸಕರು ಮತ್ತು ತಾಲ್ಲೂಕು ದಂಡಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
"ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ" ಕಾರ್ಯಕ್ರಮವನ್ನು ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಪಟೇಲ್ ಗುರುಬಸಪ್ಪ ಪ್ರೌಢಶಾಲೆಯ ಆವರಣದಲ್ಲಿ ತಾಲ್ಲೂಕು ಆಡಳಿತವತಿಯಿಂದ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಬೆಳ್ಳೋಡಿ ಗ್ರಾಮದ ಗ್ರಾಮಸ್ಥರು ಶಾಸಕರು ಮತ್ತು ಅಧಿಕಾರಿಗಳನ್ನು ಉದ್ದೇಶಿಸಿ ತಮ್ಮ ಗ್ರಾಮದ ಜನರ ಸಮಸ್ಯೆಯನ್ನ ಅವರ ಮುಂದೆ ಇಡುವಂತ ಪ್ರಯತ್ನ ಮಾಡಿದರು.

ಗ್ರಾಮಸ್ಥರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ತಾಲ್ಲೂಕು ದಂಡಾಧಿಕಾರಿಗಳು ಕೂಡಲೇ ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಳ್ಳದ ಬದಿಯಲ್ಲಿ ಕೆಲವು ಪಾಯಿಂಟ್ಗಳನ್ನು ಗುರುತಿಸಿ ಅನುಕೂಲವಾಗುವ ಯಾವುದಾದರೂ ಒಂದು ಪಾಯಿಂಟ್ ನಲ್ಲಿ ಮರಳು ತೆಗೆಯಲು ಅನುಕೂಲ ಮಾಡಿಕೊಡಲಾಗುವುದು. ಹಳ್ಳದಿಂದ ತೆಗೆದ ಮರಳು ಗ್ರಾಮದಲ್ಲಿ ನಿರ್ಮಾಣವಾಗುವ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಸಲು ಸಾಧ್ಯ. ಇದರ ಸಂಪೂರ್ಣ ಜವಾಬ್ದಾರಿ ಗ್ರಾಮ ಪಂಚಾಯತಿದ್ದಾಗಿರುತ್ತದೆ. ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿ ಹಳ್ಳದ ಮರುಳನ್ನು ಅತಿ ಕಡಿಮೆ ದರದಲ್ಲಿ ಅಂದರೆ ಸರ್ಕಾರಕ್ಕೆ ಒಂದು ಟನ್ ಮರಳಿಗೆ 300 ರಾಜ್ಯಧನ ಪಾವತಿಸಿ ಗ್ರಾಮಸ್ಥರು ತಮ್ಮ ಊರಿನ ಅಭಿವೃದ್ಧಿಗೆ ಬಳಸಬಹುದು, ಯಾವುದೇ ಕಾರಣಕ್ಕೂ ಬೇರೆಯವರಿಗೆ ಮಾರಾಟ ಮಾಡುವಂತಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಕೂಡಲೇ ಚರ್ಚಿಸಿ ತೀರ್ಮಾನಕ್ಕೆ ಬರಲಾಗುತ್ತದೆ.ಹಳ್ಳದ ಮರಳನ್ನು ತೆಗೆಯಲು ಅನುಕೂಲ ಮಾಡಿಕೊಡಲಾಗುತ್ತದೆ ಎಂಬ ಭರವಸೆಯನ್ನ ಹರಿಹರ ತಾಲ್ಲೂಕು ದಂಡಾಧಿಕಾರಿಗಳಾದ ಡಾ. ಅಶ್ವತ್ ಎಂ.ಬಿ ಅವರು ಊರಿನ ಗ್ರಾಮಸ್ಥರಿಗೆ ಭರವಸೆಯನ್ನು ನೀಡಿದರು. 
ರೈತರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕಚೇರಿಗಳಿಗೆ ಅಲೆದಾಡುತ್ತಿದ್ದರು.ಇದನ್ನು ಗಮನಿಸಿದ ರಾಜ್ಯ ಸರ್ಕಾರ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಜಾರಿಗೆ ತಂದಿರುವುದು ಉತ್ತಮವಾಗಿದೆ ಎಂದರು.ಅಲ್ಲದೆ ಈ ಹಿಂದೆ ಬೆಳ್ಳೋಡಿ ಗ್ರಾಮದಲ್ಲಿ ಪೌತಿ ಖಾತೆ ಆಂದೋಲನವನ್ನು ನಡೆಸಲಾಯಿತು ಅನೇಕ ಜನರು ಇದರ ಅನುಕೂಲವನ್ನು ಪಡೆದುಕೊಂಡಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಸರಬರಾಜು ಆಗುತ್ತಿರುವ ಉಚಿತ ಪಡಿತರ ಅಕ್ಕಿಯು ಪೌಷ್ಟಿಕಾಂಶದಿಂದ ಕೂಡಿದ ಅಕ್ಕಿಯಾಗಿದೆ. ಅಕ್ಕಿಯಲ್ಲಿ ವಿಟಮಿನ್ ಬಿ. ಇರುವ ಅಕ್ಕಿಯನ್ನು ಬೆರೆಸಲಾಗಿದೆ ಅದು ಪ್ಲಾಸ್ಟಿಕ್ ಅಕ್ಕಿ ಅಲ್ಲ ಅದು ಪೌಷ್ಟಿಕಾಂಶದ ಅಕ್ಕಿಯಾಗಿದೆ ಅದನ್ನು ಎಲ್ಲರೂ ಬಳಸಬೇಕು ಎಂದು ಪಡಿತರ ಅಕ್ಕಿಯಲ್ಲಿ ಇರುವ ವಿಟಮಿನ್ ಬಿ ಅಕ್ಕಿಗೆ ಸಂಬಂಧಿಸಿದಂತೆ ಜನರಲ್ಲಿರುವ ಗೊಂದಲವನ್ನು ಪರಿಹರಿಸುವ ಪ್ರಯತ್ನವನ್ನು ತಾಲೂಕು ದಂಡಾಧಿಕಾರಿಗಳು ಮಾಡಿದರು. ಅದೇ ರೀತಿ ಬೆಳ್ಳೋಡಿ- ರಾಮನತೀರ್ಥ ಸೇತುವೆ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.

ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದ ಹರಿಹರದ ಜನಪ್ರಿಯ ಶಾಸಕ ಎಸ್ ರಾಮಪ್ಪನವರು ಮಾತನಾಡಿ ಬೆಳ್ಳೋಡಿ- ರಾಮನತೀರ್ಥ ಸೇತುವೆಗೆ ಈ ಹಿಂದೆ ಎರಡು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. ಆದರೆ ಈ ಅನುದಾನದಲ್ಲಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸೇತುವೆ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬುದನ್ನ ಅರಿತು ಕೂಡಲೇ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಐದು ಕೋಟಿ ರೂಪಾಯಿಯನ್ನ ಮಂಜೂರು ಮಾಡಿಸಿ ಬೆಳ್ಳೊಡಿ- ರಾಮನ ತೀರ್ಥ ಗ್ರಾಮಸ್ಥರಿಗೆ ಅನುಕೂಲವಾಗುವಂತಹ ಸೇತುವೆಯನ್ನು ಶೀಘ್ರದಲ್ಲೇ ನಿರ್ಮಿಸಿ ಕೊಡಲಾಗುವುದು ಎಂದು ಶಾಸಕ ಎಸ್ ರಾಮಪ್ಪನವರು ಗ್ರಾಮಸ್ಥರಿಗೆ ಭರವಸೆಯನ್ನು ನೀಡಿದರು.
ಬೆಳ್ಳೋಡಿ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯ ಬಿ.ಸಿದ್ದೇಶ ದುಂಡಿ ಮಾತನಾಡಿ ಮರಳು ತುಂಬಾ ದುಬಾರಿಯಾಗಿದೆ.ಆದ್ದರಿಂದ ಬಡವರು ಮನೆ ನಿರ್ಮಾಣ ಮಾಡುವುದು ಕಷ್ಟವಾಗಿದೆ ಹಳ್ಳದಲ್ಲಿ ಸಿಗುವ ಮರಳನ್ನು ತಂದು ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಅನುಮತಿಯನ್ನ ನೀಡುವಂತೆ ಶಾಸಕರು ಮತ್ತು ತಾಲೂಕ್ ದಂಡಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಕೆಲವು ಇಲಾಖೆಯ ಅಧಿಕಾರಿಗಳು ಗ್ರಾಮದ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ ಎಂಬ ಅಸಮಾಧಾನವನ್ನು ಈ ಸಂದರ್ಭದಲ್ಲಿ ತೋಡಿಕೊಂಡರು.

ಗ್ರಾಮ ವಾಸ್ತವ ಕಾರ್ಯಕ್ರಮದ ಸಂದರ್ಭದಲ್ಲಿ ಬೆಳ್ಳೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ ಸುನಿತಾ, ಉಪಾಧ್ಯಕ್ಷ ಜಿ.ಎಸ್ ಸುದೀಪ್, ಸದಸ್ಯರಾದ ಎಂ.ಎನ್ ಗೀತಾ ನಾಗರಾಜ್, ಎನ್ ವೀರೇಶ್, ರತ್ನಮ್ಮ ಸಿದ್ದೇಶ್, ಸುಧಾ ಶಿವಕುಮಾರ್, ತಾಲೂಕು ಪಂಚಾಯತ್ ಇ ಓ ಗಂಗಾಧರನ್, ಟಿಹೆಚ್ಓ ಚಂದ್ರಮೋಹನ್, ಸಹಾಯಕ ಕೃಷಿ ನಿರ್ದೇಶಕ ನಾರನಗೌಡ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ನಿರ್ಮಲ, ಅಕ್ಷರ ದಾಸೋಹ ರಾಮಕೃಷ್ಣಪ್ಪ, ಲೋಕೋಪಯೋಗಿ ಇಲಾಖೆಯ ಯೋಗೇಂದ್ರ ಲಾ, ಬೆಸ್ಕಾಂ ಇಲಾಖೆಯ ಎಇಇ ನಾಗರಾಜ ನಾಯ್ಕ, ಬೆಳ್ಳೋಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಪ್ಪ ಬೀರದಾರ್, ಸೇರಿದಂತೆ ಇಡೀ ತಾಲೂಕ ಆಡಳಿತದ ಅಧಿಕಾರಿಗಳು, ಬೆಳ್ಳೋಡಿ ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗದವರು, ಪಟೇಲ್ ಗುರುಬಸಪ್ಪ ಪ್ರೌಢಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಶಾಲಾ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕು ದಂಡಾಧಿಕಾರಿ ಡಾ.ಅಶ್ವಥ್ ಎಂ.ಬಿ ಅವರು ಗ್ರಾಮ ವಾಸ್ತವ ಕಾರ್ಯಕ್ರಮ ಉದ್ಘಾಟಿಸಿದ ನಂತರ ಪ್ರಾಸ್ತವಿಕವಾಗಿ ಮಾತಾನಾಡಿದ ನಂತರ ಇಡೀ ಬೆಳ್ಳೊಡಿ ಗ್ರಾಮ ಪ್ರದಕ್ಷಿಣೆ ಮಾಡುವ ಮೂಲಕ ಗ್ರಾಮದ ನೈಜ್ಯ ಸಮಸ್ಯೆಯನ್ನು ತಿಳಿಯುವ ಪ್ರಯತ್ನ ಮಾಡಿದರು. ಈ ಮೂಲಕ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಒಂದು ಹೊಸ ಬಾಷ್ಯ ತಾಲೂಕು ದಂಡಾಧಿಕಾರಿಗಳು ಬರೆದರು.

Post a Comment

0 Comments