ಫೆಬ್ರವರಿ 8 ಮತ್ತು 9 ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ : ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಸ್ವಾಮೀಜಿ.

ಮಂದಾರ ನ್ಯೂಸ್ ಹರಿಹರ,ಫೆ1: ಲೋಕಕಲ್ಯಾಣಕ್ಕಾಗಿ ರಾಮಾಯಣ ಮಹಾ ಕಾವ್ಯವನ್ನು ಕೊಟ್ಟವರು ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿ. ಅಂತಹ ಮಹಾನ್ ಪುರುಷನ ಹೆಸರಿನಲ್ಲಿ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ1998 ಫೆಬ್ರವರಿ 9ರಂದು ವಾಲ್ಮೀಕಿ ಮಹಾ ಸಂಸ್ಥಾನ ಮಠವನ್ನು ಸ್ಥಾಪನೆ ಮಾಡಲಾಯಿತು. ದಿವಂಗತ ಪೂಜ್ಯ ಪುಣ್ಯಾನಂದ ಸ್ವಾಮೀಜಿಯವರು 9 ವರ್ಷಗಳ ಕಾಲ ಅಹೋರಾತ್ರಿ ಹಳ್ಳಿಗೆ ಏಕ ರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ ಎಂಬ ತತ್ವದ ಅಡಿಯಲ್ಲಿ ಧರ್ಮ ಸಂಘಟನೆ ಮಾಡಿರುವುದರಿಂದ ಹಿಂದೂ ವಾಲ್ಮೀಕಿ ಸಂಘಟನೆ ಮತ್ತು ಜಾತ್ರೆ ಅದ್ದೂರಿಯಾಗಿ ನಡೆಯಲು ಕಾರಣವಾಗಿದೆ ಎಂದು ವಾಲ್ಮೀಕಿ ಗುರುಪೀಠದ ಪೀಠಾಧಿಪತಿಗಳಾದ ಪ್ರಥಮಾನಂದಪುರಿ ಮಹಾ ಸ್ವಾಮೀಜಿ ಅವರು ಹೇಳಿದರು.
ಫೆಬ್ರವರಿ 8 ಮತ್ತು 9ರಂದು ಎರಡು ದಿನಗಳ ಕಾಲ ಶ್ರೀಮಠದ ಆವರಣದಲ್ಲಿ ನಡೆಯುವ 25ನೇ ವಾರ್ಷಿಕೋತ್ಸವ ಲಿಂಗೈಕ್ಯ ಶ್ರೀ ಪುಣ್ಯಾನಂದಪುರಿ ಮಹಾ ಸ್ವಾಮೀಜಿಯವರ ಹದಿನಾರನೇ ವರ್ಷದ ಪುಣ್ಯಾರಾದನೆ ಹಾಗೂ ಆದಿಕವಿ ವಾಲ್ಮೀಕಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು 2023ನೇ ವಾಲ್ಮೀಕಿ ಜಾತ್ರಾ ಮಹೋತ್ಸವದ ಕುರಿತು ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದರು.

ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಜಗಳೂರು ಶಾಸಕ ಎಸ್ ವಿ ರಾಮಚಂದ್ರಪ್ಪ ಮಾತನಾಡಿ ದಿ 8 ಮತ್ತು 9 ರಂದು ರಾಜ್ಯದ ವಾಲ್ಮೀಕಿ ಸಮಾಜದ ಸಮಸ್ತ ಕುಲಬಾಂಧವರು ತಪ್ಪದೆ ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಬೇಕು, ಶ್ರೀಮಠದ ಪೀಠಾಧಿಪತಿಗಳಾದ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ 15ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಜೊತೆಗೆ ಈ ವರ್ಷದಿಂದ ಜಾತ್ರೆಯ ದಿನದಂದು ವಾಲ್ಮೀಕಿ ರಥೋತ್ಸವವನ್ನು, ಸರ್ವಧರ್ಮ ವಿವಾಹ ಮಹೋತ್ಸವ, ಉದ್ಯೋಗ ಮೇಳ, ಮಹಿಳಾ ಗೋಷ್ಠಿ, ರೈತ ಗೋಷ್ಠಿ, ಜನಜಾಗೃತಿ ಮಹೋತ್ಸವವನ್ನು ನಡೆಸಲು ಶ್ರೀ ಮಠದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿಸಿದರು.

ಜಾತ್ರಾ ಮಹೋತ್ಸವದ ಸಂಚಾಲಕ ಕೆಪಿ ಪಾಲಯ್ಯ, ಗುರು ಪೀಠದ ಆಡಳಿತಾಧಿಕಾರಿ ಟಿ ಓಬಳಪ್ಪ, ಕೆಪಿಎಸ್ಸಿ ಮಾಜಿ ಸದಸ್ಯ ಜಿಟಿ ಚಂದ್ರಶೇಖರಪ್ಪ, ವೀರೇಂದ್ರ ಸಿಂಹ, ರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಲಂಕೇಶ್, ಪತ್ರಕರ್ತ ಜಿಗಣಿ ಪ್ರಕಾಶ್, ನಾಗರಾಜ್ ಪಾಳೆಗಾರ್, ಕುಂಬಳೂರು ವಾಸು,ಗೌರಮ್ಮ, ಪಾರ್ವತಿ ಹಾಗೂ ಮಠದ ಸದ್ಭಕ್ತರು ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Post a Comment

0 Comments