ಇನ್ನೇನು ಎರಡು ತಿಂಗಳಲ್ಲಿ ರಾಜ್ಯದಲ್ಲಿ ಹದಿನಾರನೇ ವಿಧಾನಸಭಾ ಚುನಾವಣೆ ನಡೆಯಲಿದೆ. ಮತದಾರರು ತಮ್ಮ ಇಷ್ಟದ ಅಭ್ಯರ್ಥಿಯನ್ನ ಆಯ್ಕೆ ಮಾಡಲಿದ್ದಾರೆ. ತಂತ್ರ ಭಾರತದಲ್ಲಿ ಕರ್ನಾಟಕವು ಇಲ್ಲಿಯವರೆಗೆ 15 ವಿಧಾನಸಭೆ ಹಾಗೂ 23 ಮುಖ್ಯಮಂತ್ರಿಗಳಿಗೆ ಸಾಕ್ಷಿಯಾಗಿದೆ.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ 10,000 ಕೋಟಿ ಕುರುಡು ಕಾಂಚನ ಕುಣಿಯಲಿದೆ. ಕೆಲವೊಂದು ಯುದ್ಧ ಜಿದ್ದ-ಜಿದ್ದಿನ ಕ್ಷೇತ್ರದಲ್ಲಿ ನೂರು ಕೋಟಿಗೂ ಹೆಚ್ಚು ಹಣ ಸುರಿಮಳೆಯಾಗಲಿದೆ. ಕಾನೂನು ಎಷ್ಟೇ ಬಲಿಷ್ಠವಾದರೂ ಮತದಾರರಿಗೆ ಹಂಚಿಕೆಯಾಗುವ ಹಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಜನ ಪ್ರತಿನಿಧಿಗಳಿಗೆ ಶಿಕ್ಷೆ ಆಗಿದ್ದು ಮಾತ್ರ ಬೆರಳೆಣಿಕೆಯಷ್ಟು ಮಾತ್ರ.
ಚುನಾವಣೆಯಲ್ಲಿ ರಾಜಕಾರಣಿಗಳು ದುಡ್ಡು ಹಂಚಿದರು ಎನ್ನುವುದು ಇತ್ತೀಚಿಗೆ ಸರ್ವೇಸಾಮಾನ್ಯವಾಗಿದೆ. ಆದರೆ ಹಣ ನೀಡುವ ಭ್ರಷ್ಟ ವ್ಯವಸ್ಥೆಯ ಜತೆಗೆ ಹಣ ಪಡೆಯುವ ಮತದಾರರನ್ನು ಶಿಕ್ಷಿಸುವ ಅವಕಾಶ ಭಾರತದ ಕಾನೂನಿನಲ್ಲಿದೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿಲ್ಲ.
ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 123(1) ಹಾಗೂ ಐಪಿಸಿ 171 ( ಬಿ) ಪ್ರಕಾರ ಮತದಾನಕ್ಕಾಗಿ ಆಮಿಷಕ್ಕೊಳಗಾಗುವ ವ್ಯಕ್ತಿಗೆ ಒಂದು ವರ್ಷ ಜೈಲು ಹಾಗೂ ದಂಡ ವಿಧಿಸುವ ಅಧಿಕಾರವು ನ್ಯಾಯಾಲಯಗಳಿಗಿದೆ. ಹಾಗೆಯೇ ಮತ ಖರೀದಿಗೆ ಬರುವ ಏಜೆಂಟ್ ಅಥವಾ ರಾಜಕೀಯ ಪುಡಾರಿಯ ವಿರುದ್ಧ ಜನಪ್ರತಿನಿಧಿಗಳ ಕಾಯ್ದೆ 123 (2) ಹಾಗೂ ಐಪಿಸಿ 171(ಸಿ) ಪ್ರಕಾರ ಕಾನೂನು ಕ್ರಮ ಜರುಗಿಸಿ ಒಂದು ವರ್ಷ ಜೈಲು ಹಾಗೂ ದಂಡ ವಿಧಿಸಬಹುದಾಗಿದೆ.
ಎಚ್ಚರವಿರಲಿ ಮತದಾರ.
ಮತ ಮಾರಿಕೊಳ್ಳಬೇಡಿ ಸೂಕ್ತ- ಸಮರ್ಥ ಅಭ್ಯರ್ಥಿಯನ್ನ ಆಯ್ಕೆ ಮಾಡಿ.
0 Comments