ಸಿ.ರುದ್ರಪ್ಪ
ವಿಧಾನ ಸಭೆಗೆ ವಿದಾಯ ಹೇಳಿರುವ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪನವರ ಗುಣಗಾನ ನಡೆಯುತ್ತಿದೆ.ಕೆಲವರು ಅವರನ್ನು "ಹಿರಿಯ ಮುತ್ಸದ್ಧಿ"ಎಂದು ಬಣ್ಣಿಸುತ್ತಿದ್ದಾರೆ.ನಿಜವಾಗಿಯೂ ಅವರೊಬ್ಬ ಮುತ್ಸದ್ಧಿಯೇ?
ಶಿವಮೊಗ್ಗ ಜಿಲ್ಲೆಯಲ್ಲಿ ಜೀತ ವಿಮುಕ್ತರು,ಹಕ್ಕಿ ಪಿಕ್ಕಿ ಜನಾಂಗದವರು ಮತ್ತು ಅಲೆಮಾರಿಗಳ ಹೋರಾಟದ ಮೂಲಕ ಸಾರ್ವಜನಿಕ ಬದುಕನ್ನು ಪ್ರವೇಶಿಸಿದ ಯಡಿಯೂರಪ್ಪನವರು ಒಬ್ಬ ರಾಜ್ಯ ಮಟ್ಟದ ರೈತ ನಾಯಕರಾಗಿ ಬೆಳೆದಿದ್ದು ಒಂದು ರೋಚಕ ಇತಿಹಾಸ.ವಿಧಾನಸಭೆಯಲ್ಲಿ ಸದಾ ಬಹಿಷ್ಕಾರ,ಸಭಾತ್ಯಾಗ ಮತ್ತು ಧರಣಿಗಳ ಜೊತೆಗೆ ಬೆಂಕಿಯ ಉಂಡೆಯಂತಹ ಮಾತುಗಳ ಮೂಲಕ ರಾಜ್ಯದ ಗಮನ ಸೆಳೆದ ಅವರ ಬಗ್ಗೆ "ಯಡಿಯೂರಪ್ಪ ಗುಡುಗಿದರೆ ವಿಧಾನ ಸೌಧ ಗುಡುಗುವುದು"ಎಂಬ ಮಾತು ಜನಜನಿತವಾಗಿತ್ತು.ವಚನ ಭ್ರಷ್ಟತೆ ಹಿನ್ನೆಲೆಯಲ್ಲಿ ಹುತಾತ್ಮನ ಪಟ್ಟವನ್ನು ಪಡೆದುಕೊಂಡಿದ್ದ ಯಡಿಯೂರಪ್ಪನವರು 2008 ರಲ್ಲಿ ಮುಖ್ಯಮಂತ್ರಿಯಾದರು.ಆಗ ಮೋದಿ ಅಥವಾ ಹಿಂದುತ್ವದ ಅಲೆ ಇರಲಿಲ್ಲ.ಅದು,ಒಬ್ಬ ನಾಯಕನ ಹೆಸರಿನ ಮೇಲೆ ಪಕ್ಷವೊಂದು ಅಧಿಕಾರದ ದಡ ತಲುಪಿದ ಅಪರೂಪದ ರಾಜಕೀಯ ವಿದ್ಯಮಾನವಾಗಿತ್ತು.
"ಸಮಾಜಕ್ಕೆ ಕಂಟಕಪ್ರಾಯರಾಗಿರುವ ಅಧಿಕಾರಿಗಳು,ಭ್ರಷ್ಟ ರಾಜಕಾರಣಿಗಳು,ಗುತ್ತಿಗೆದಾರರು,ದಲ್ಲಾಳಿಗಳು ಮತ್ತು ಸಮಾಜ ಘಾತುಕ ಶಕ್ತಿಗಳು ಶಾಮೀಲಾಗಿ ಸರ್ಕಾರದ ಆಡಳಿತವನ್ನು ಒಂದು ಪ್ರಹಸನದ ಮಟ್ಟಕ್ಕೆ ಇಳಿಸಿ ಜನರ ಬದುಕನ್ನು ಅಸಹನೀಯಗೊಳಿಸುತ್ತಾ ಬಂದಿದ್ದಾರೆ.ಉಗ್ರ ಸ್ವರೂಪದ ಹೋರಾಟಗಳ ಮೂಲಕ ಫೈರ್ ಬ್ರಾಂಡ್ ನಾಯಕರಾಗಿರುವ ಯಡಿಯೂರಪ್ಪ ಇಂತಹ ದುಷ್ಟ ಶಕ್ತಿಗಳಿಗೆ ದುಸ್ವಪ್ನದಂತೆ ಕಾಡಬಹುದು" ಎಂಬ ನಿರೀಕ್ಷೆಯೊಂದಿಗೆ ಅವರಿಗೆ ರಾಜ್ಯದ ಜನರು ಮುಖ್ಯಮಂತ್ರಿ ಸ್ಥಾನವನ್ನು ದಯಪಾಲಿಸಿದರು.ಆದರೆ ಯಡಿಯೂರಪ್ಪ ಜಡ್ಡುಗಟ್ಟಿದ್ದ ಆಡಳಿತಕ್ಕೆ ಚುರುಕು ಮುಟ್ಟಿಸುವ ಬದಲು ತಾವೇ ಹಗರಣದಲ್ಲಿ ಸಿಲುಕಿಕೊಂಡರು.ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದರು.ಜೈಲು ವಾಸವನ್ನು ಅನುಭವಿಸಿದರು.ಮುಖ್ಯಮಂತ್ರಿ ಆದವರೊಬ್ಬರು ಜೈಲಿಗೆ ಹೋಗಿದ್ದರಿಂದ ರಾಜ್ಯದ ಜನರು ದೇಶದ ಮುಂದೆ ತಲೆ ತಗ್ಗಿಸುವಂತಾಯಿತು.ನಂತರ ಯಡಿಯೂರಪ್ಪ ನ್ಯಾಯಾಲಯದಲ್ಲಿ ಖುಲಾಸೆಯಾದರು.ಜನರೂ ಅವರನ್ನು ಕ್ಷಮಿಸಿದರು.ಗ್ರೀಕ್ ಪುರಾಣದ ಫಿನಿಕ್ಸ್ ಪಕ್ಷಿ ಪ್ರತಿ ಸಲ ಸುಟ್ಟು ಬೂದಿಯಾದಾಗಲೂ ಮತ್ತೆ ಮೇಲೆದ್ದು ಪುನರ್ಜನ್ಮ ಪಡೆಯುತ್ತದೆ.ಅದೇ ರೀತಿ ಯಡಿಯೂರಪ್ಪ ಕೂಡಾ ಆರೋಪ,ಅವಮಾನ,ಅಪವಾದಗಳ ಬೆಂಕಿಯ ಕುಲುಮೆಯಲ್ಲಿ ಬೆಂದು ರಾಜಕೀಯ ಪುನರ್ಜನ್ಮ ಪಡೆದು ಮತ್ತೆ ಮುಖ್ಯ ಮಂತ್ರಿಯಾದರು.ಅವರು ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಅವರನ್ನು"ರಾಜಾ ಹುಲಿ","ಛಲದಂಕ ಮಲ್ಲ","ಛಲ ಬಿಡದ ತ್ರಿವಿಕ್ರಮ"ಎಂದು ಮಾಧ್ಯಮಗಳು ಬಣ್ಣಿಸಿದವು.
"ಯಡಿಯೂರಪ್ಪ ಹಿಂದಿನ ಕಹಿ ಘಟನೆಗಳಿಂದ ಪಾಠ ಕಲಿತಿರಬಹುದು;ಅವಾಂತರಕಾರೀ,ಅನಾಹುತಕಾರೀ ಮತ್ತು ಅನರ್ಥಕಾರೀ ನಡವಳಿಕೆಗಳ ಬದಲು ಪರಿಶುದ್ಧ,ಸಮರ್ಥ ಮತ್ತು ಜನಪರ ಆಡಳಿತವನ್ನು ನೀಡಬಹುದು,ಹೋರಾಟಗಾರರೂ ಪ್ರಚಂಡ ರಾಜಕಾರಣಿಯೂ ಆಗಿರುವ ಯಡಿಯೂರಪ್ಪ ತಮ್ಮ ಬದುಕಿನ ಇಳಿಗಾಲದಲ್ಲಿಯಾದರೂ ಒಬ್ಬ ಮುತ್ಸದ್ಧಿಯೂ ಆಗಬಹುದು"ಎಂದು ಜನರು ನಿರೀಕ್ಷಿಸಿದರು.ಆದರೆ ಇಂತಹ ಪ್ರತಾಪಶಾಲೀ ನಾಯಕ ಕೇವಲ ಒಂದು ವರ್ಷದಲ್ಲಿಯೇ ವಿಧಾನ ಸಭೆಯಲ್ಲಿ ತಮ್ಮ ಕುಟುಂಬದವರ ಮೇಲೆ ಭ್ರಷ್ಟಾಚಾರದ ಆರೋಪವನ್ನು ಎದುರಿಸುವ ಪರಿಸ್ಥಿತಿಯನ್ನು ತಂದುಕೊಂಡರು.ವರ್ಗಾವಣೆ ದಂಧೆ,ಆಡಳಿತದಲ್ಲಿ ಮುಖ್ಯಮಂತ್ರಿಯವರ ಕುಟುಂಬದವರ ಹಸ್ತಕ್ಷೇಪ,ಭ್ರಷ್ಟಾಚಾರದ ಹಗರಣಗಳು ಮತ್ತೆ ಸದ್ದು ಮಾಡತೊಡಗಿದವು.ವಿಶೇಷವಾಗಿ ಆಡಳಿತದಲ್ಲಿ ಅವರ ಪುತ್ರನ ಹಸ್ತಕ್ಷೇಪದ ಬಗ್ಗೆ ದೂರುಗಳು ದೆಹಲಿಯ ವರಿಷ್ಠರನ್ನು ತಲುಪಿದವು."ಯಡಿಯೂರಪ್ಪನವರ ಹೋರಾಟ ಕೇವಲ ರಾಜಕೀಯ ಬಂಡವಾಳ ಮಾಡಿಕೊಳ್ಳುವುದಕ್ಕೆ ಸೀಮಿತವಾಯಿತೇ?";"ನಾವು ನಿರ್ಮಿಸಿಕೊಂಡಿರುವ ಯಡಿಯೂರಪ್ಪ ಎಂಬ ಪ್ರತಿಮೆ ಭಗ್ನ ಗೊಳ್ಳುತ್ತಿದೆಯೇ?",ಎಂಬ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಮೂಡಿದ್ದರೆ ಯಾರೂ ಆಶ್ಚರ್ಯ ಪಡಬೇಕಿಲ್ಲ.ಇದೇ ವೇಳೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಬೇಕಾಯಿತು,
ಈಗ ಅವರು ವಿಧಾನಸಭೆಯಿಂದ ನಿರ್ಗಮಿಸಿದ್ದಾರೆ."ಇಡೀ ರಾಜ್ಯವನ್ನು ಸುತ್ತಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ಘೋಷಿಸಿದ್ದಾರೆ.ಆದರೆ ಜನರು ಅವರನ್ನು ಮತ್ತೊಮ್ಮೆ ಕ್ಷಮಿಸುತ್ತಾರೆಯೇ?ಕಾದು ನೋಡಬೇಕಾಗಿದೆ.
0 Comments