ಕ್ಷತ್ರಿಯ ಸಮಾಜ ಒಗ್ಗೂಡಿ ಸಂಖ್ಯಾಬಲದ ಶಕ್ತಿ ಪ್ರದರ್ಶಿಸಿದಾಗ ರಾಜಕೀಯ ಸ್ಥಾನಮಾನದ ಜೊತೆಗೆ ಏಳಿಗೆ ಸಾಧ್ಯ:ಉದಯ್ ಸಿಂಗ್ ಅಭಿಮತ.

 
ದಾವಣಗೆರೆ : ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಕ್ಷತ್ರಿಯ ಸಮಾಜ ಹಿನ್ನಡೆ ಕಾಣಲು ರಾಜಕೀಯವಾಗಿ ಬಲಾಢ್ಯರಾಗಿಲ್ಲ. ಜೊತೆಗೆ ನಮ್ಮ ಸಮಾಜ ಪಂಗಡಗಳಾಗಿ ವಿಂಗಡಣೆಯಾಗುವ ಬದಲಿಗೆ ಒಗ್ಗೂಡಿ ನಮ್ಮ ಸಂಖ್ಯಾಬಲದ ಶಕ್ತಿ ಪ್ರದರ್ಶಿಸಬೇಕಿದೆ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್ ಸಮಾಜದ ಮುಖಂಡರು, ಬಾಂಧವರಿಗೆ ತಿಳಿಸಿದರು.
ಅವರು, ಇಂದು ನಗರದ ಅಶೋಕ ರಸ್ತೆಯಲ್ಲಿರುವ ಶಾಂತಿ ಪಾರ್ಕ್ ನಲ್ಲಿ ಜಿಲ್ಲೆಯಲ್ಲಿರುವ ಕ್ಷತ್ರಿಯರ ಒಗ್ಗಟ್ಟು ಹಾಗೂ ಸಂಖ್ಯೆಗನುಗುಣವಾಗಿ ರಾಜಕೀಯ ಪಾಲುದಾರಿಕೆ ಹಿನ್ನೆಲೆ ಇಂದು (ಫೆ.26) ಜಿಲ್ಲಾ ಕ್ಷತ್ರಿಯ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಬಹುದೊಡ್ಡ ಪ್ರಮಾಣದಲ್ಲಿ ಪ್ರಸ್ತುತ ಕ್ಷತ್ರಿಯ ಸಮಾಜ ರಾಜಕೀಯ ಹಿನ್ನಡೆಯನ್ನ ಕಾಣುತ್ತದೆ. ಪರಿಣಾಮ ಯಾವುದೇ ರಂಗದಲ್ಲೂ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ರಾಜಕೀಯವಾಗಿ ಏಳಿಗೆಯನ್ನ ಕಾಣಬೇಕು ಎಂಬ ಚಿಂತನೆ ನಮ್ಮ ಸಮಾಜದಲ್ಲಿ ಮರೆಯಾಗಿದೆ. ಎಂಎಲ್ಎ, ಎಂಪಿ, ಎಂಎಲ್ಸಿ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಇವುಗಳಲ್ಲಿ ಕ್ಷತ್ರಿಯ ಸಮಾಜದವರಿಗೂ ರಾಜಕೀಯ ಸ್ಥಾನಮಾನ ನೀಡುತ್ತಾರೆಂದು 16 ವರ್ಷಗಳ ಕಾಲ ಬೇರೆಯವರನ್ನು ನಂಬಿ ಅವರ ಹಿಂದೆಯೇ ನಿಂತು ಸೇವೆಯನ್ನ ಮಾಡಿದಂತಾಯಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಐತಿಹಾಸಿಕ ನಾಯಕರಗಳ ಹೆಸರು ಹೇಳಿಕೊಳ್ಳುತ್ತಾ, ಅವರುಗಳ ಜಯಂತಿಯನ್ನು ಮಾಡುತ್ತೇವಷ್ಟೇ. ರಾಷ್ಟ್ರ, ರಾಜ್ಯ, ಅಂತರಾಷ್ಟ್ರ ಮಟ್ಟದಲ್ಲಿ ಶಿವಾಜಿ ಮಹಾರಾಜರ ಹೆಸರನ್ನು ಹೇಳುತ್ತೇವೆ. ಆದರೆ ಶಿವಾಜಿ ಮಹಾರಾಜರು ನಡೆದ ಮಾರ್ಗದಲ್ಲಿ ನಾವು ನಡೆಯುವಂತ ಪ್ರಯತ್ನ ಮಾಡಿದಾಗ ಅವರಂತೆ ಮಹಾರಾಜರಾಗಿ ನಮ್ಮ ಸಮಾಜ ಹಾಗೂ ಸಮಾಜ ಬಾಂಧವರು ಬೆಳೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.
 ಅಂತರಾಷ್ಟ್ರೀಯ ಮಟ್ಟದಲ್ಲಿ ಶಿವಾಜಿ ಮಹಾರಾಜರದಿದ್ದ ಕೌಶಲ್ಯ ಆಡಳಿತ ನೀತಿ ಬಗ್ಗೆ ಚರ್ಚೆಗಳಾಗಲಿವೆ ಅಲ್ಲದೆ, ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಇವುಗಳ ಬಗ್ಗೆ ಸಂಶೋಧನೆಗಳು ನಡೆಯಲಿದೆ. ನಮ್ಮ ದೇಶ ಒಂದು ಬಿಟ್ಟು ಅಂತರಾಷ್ಟ್ರೀಯ ಮಟ್ಟದಲ್ಲಿ ಶಿವಾಜಿ  ಮಹಾರಾಜರ ಯುದ್ಧ ಕೌಶಲ್ಯ ಆಡಳಿತ ನೀತಿ, ರಣನೀತಿ ಇವುಗಳನ್ನು ಇವತ್ತಿಗೂ ವಿದೇಶಗಳಲ್ಲಿ ಸಂಶೋಧನೆ ಜೊತೆಗೆ ಅವುಗಳ ಪಾಲನೆ ಮಾಡಲಾಗುತ್ತಿದೆ ಎಂದರು.
 2018 ರಿಂದ ಕಳೆದ ಐದು ವರ್ಷಗಳಿಂದ ಕರ್ನಾಟಕ ಕ್ಷತ್ರಿಯ ಒಕ್ಕೂಟದ ವ್ಯವಸ್ಥೆ ಅಡಿಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕ್ಷತ್ರಿಯ ಸಮಾಜದವರನ್ನು ಎಚ್ಚರಿಸುವಂತಹ ಕೆಲಸವನ್ನು ಸಮಾಜದ ಮುಖಂಡರು, ಯುವಕರು ಮಾಡಿದ್ದಾರೆ. ಇತ್ತೀಚಿಗೆ ರಾಜಧಾನಿ ಬೆಂಗಳೂರಿನಲ್ಲಿ ಕ್ಷತ್ರಿಯ ಸಮಾಜದ ಬಾಂಧವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೃಹತ್ ಸಮಾವೇಶವನ್ನು ಅದ್ದೂರಿಯಾಗಿ ನಡೆಸಲಾಯಿತು. ರಾಮಕೇನ ಕ್ಷತ್ರಿಯ ಸಮಾಜದ ಒಗ್ಗಟ್ಟು ಮತ್ತು ಸಂಖ್ಯಾ ಬಲವನ್ನ ಪ್ರದರ್ಶಿಸಲಾಗಿದೆ. ನಮ್ಮ ಸಮಾಜದ ಕಡೆ ಮುಖ್ಯಮಂತ್ರಿಗಳು ತಿರುಗಿ ನೋಡುವಂತೆ ಈ ಸಮಾವೇಶದಲ್ಲಿ ಸಮಾಜದ ಜನಸಾಗರವೇ ಹರಿದು ಬಂದು ಒಗ್ಗಟ್ಟು ಪ್ರದರ್ಶನ ಮಾಡಿದ ಪರಿಣಾಮ ಎಂದು ಹೇಳಿದರು.
ದೇಶ ಮತ್ತು ಧರ್ಮದ ಉಳಿವಿನ ವಿಚಾರವಾಗಿ ಬಂದರೆ ಕ್ಷತ್ರಿಯ ಸಮಾಜ ಎಂದಿಗೂ ಮೇಲುಗೈ ಸಾಧಿಸಲಿದೆ. ಸೃಷ್ಟಿಯ ಜೊತೆಗೆ ಭಗವಂತನೇ ಸೃಷ್ಟಿ ಮಾಡಿದ ಸಮಾಜವಿದ್ದರೆ ಅದು ಕ್ಷತ್ರಿಯ ಸಮಾಜ. ನಮ್ಮ ಕ್ಷತ್ರಿಯ ಸಮಾಜದಲ್ಲಿ ನೂರಾರು ಸಾವಿರಾರು ಮಹನೀಯರುಗಳು ಇದ್ದಾರೆ. ನಮ್ಮ ಸಮಾಜದಲ್ಲಿ ಸ್ವಾರ್ಥತೆ ಎಂಬುದು ಇಲ್ಲ. ದೇಶ ಮತ್ತು ಧರ್ಮದ ಉಳಿವಿಗಾಗಿ ಶ್ರಮಿಸಲು ನಮ್ಮ ಸಮಾಜ ಮುಂಚೂಣಿಯಲ್ಲಿರಲಿದೆ. ಈ ಕೆಲಸವನ್ನೇ ಮಾಡುವ ಏಕೈಕ ಸಿದ್ಧಾಂತ ಹೊಂದಿ ಬದುಕುವ ಸಮಾಜ ರಾಜ್ಯದಲ್ಲಿದ್ದರೆ ಅದು ಕ್ಷತ್ರಿಯ ಸಮಾಜ. ಬಹುದೊಡ್ಡ ಐತಿಹಾಸಿಕ ಹಿನ್ನೆಲೆಯುಳ್ಳ ಸಮಾಜವೇ ನಮ್ಮ ಕ್ಷತ್ರಿಯ ಸಮಾಜ. ಭರತ ಖಂಡದಲ್ಲಿ ಈ ರೀತಿಯಾದಂತ ಸಿದ್ಧಾಂತ ಹೊಂದಿದ ಸಮಾಜವಿದ್ದರೆ ಅದು ಕ್ಷತ್ರಿಯ ಸಮಾಜ. ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಕ್ಷತ್ರಿಯ ಸಮಾಜ ಹಿನ್ನಡೆಯನ್ನು ಕಂಡಿರುವ ಬಗ್ಗೆ ಪ್ರತಿಯೊಬ್ಬ ನಾಯಕರು ಮತ್ತು ಸಾಮಾನ್ಯರ ಬಾಯಿಯಲ್ಲಿ ಬರಲಿದೆ ಎಂದರು.
ಕ್ಷತ್ರಿಯ ಸಮಾಜದ ಮುಖಂಡ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾದವ್ ಮಾತನಾಡಿ, ಇತಿಹಾಸವುಳ್ಳ ನಮ್ಮ ಕ್ಷತ್ರಿಯ ಸಮಾಜಕ್ಕೆ ತನ್ನದೇ ಆದ ಗುರುತಿಸುವಿಕೆ ಇದೆ. ಛತ್ರಪತಿ ಶಿವಾಜಿ ಮಹಾರಾಜರು, ರಾಣ ಪ್ರತಾಪ ಸಿಂಹ, ಸ್ವಾಮಿ ವಿವೇಕಾನಂದ ಇವರೆಲ್ಲರೂ ಕೂಡ ಕ್ಷತ್ರಿಯ ಕುಲದಲ್ಲಿ ಬೆಳೆದಂತವರು. ನಾವುಗಳೆಲ್ಲರೂ ಕೂಡ ಕ್ಷತ್ರಿಯರು ನಾವು ಒಗ್ಗೂಡಿದರೆ ಯಾವುದೂ ಕಷ್ಟವಲ್ಲ. ಪ್ರಸ್ತುತ ಕ್ಷತ್ರಿಯ ಸಮಾಜ ಪಂಗಡಗಳಾಗಿ ವಿಂಗಡಣೆ ಆಗಿರುವುದರಿಂದ ಅರ್ಧ ಹಂಚಿ ಹೋದಂತಾಗಿದೆ. ನಾವುಗಳು ಒಗ್ಗಟ್ಟು ಇಲ್ಲದಿರುವುದೇ ರಾಜಕೀಯವಾಗಿ ಜುಟ್ಟು ಹಿಡಿದು ಅಲ್ಲಾಡಿಸಲು ಅನುಕೂಲ ಮಾಡಿಕೊಟ್ಟಂತಾಗಿದೆ. ಕಾರಣ ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷರಾದ ಉದಯ ಸಿಂಗ್ ಅವರ ನೇತೃತ್ವದಲ್ಲಿ ಪಂಗಡಗಳಾಗಿ ವಿಂಗಡಗಣೆಯಾಗಿರುವ ನಮ್ಮ ಎಲ್ಲಾ ಕ್ಷತ್ರಿಯ ಸಮಾಜದವರು ಸಂಘಟಿತರಾಗಿ ಒಗ್ಗೂಡಬೇಕಾಗಿದೆ. ತಮಗಾಗಿ ಅಲ್ಲದೆ ಸಮಾಜಕ್ಕಾಗಿ ಶ್ರಮಿಸುತ್ತಿರುವ ಉದಯ ಸಿಂಗ್ ಅವರ ಕೈ ಬಲಪಡಿಸುವ ಕೆಲಸ ನಾವು ಮಾಡಬೇಕು. ಆ ಮುಖೇನ ರಾಜಕೀಯವಾಗಿ ಬೆಳೆಯಬೇಕು ಎಂದು ಆಶಿಸಿದರು.
ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಶಶಿಕುಮಾರ ಮೆಹರವಾಡೆ ಮಾತನಾಡಿ, ನಮ್ಮ ಸಮಾಜದ ಪ್ರಮುಖರು ಮುಖ್ಯವಾದ ವ್ಯಕ್ತಿಗಳಾಗಿದ್ದರು ಸಹ ನಮ್ಮ ಕೈಯಲ್ಲಿ ಅಧಿಕಾರ ಇಲ್ಲವಾಗಿದೆ. ಕಾರಣ ನಮ್ಮ ಸಮಾಜ ಬೇರೆಯವರ ಏಳಿಗೆಗಾಗಿ ಶ್ರಮಿಸುತ್ತಿದೆ ಹೊರತು ಕ್ಷತ್ರಿಯ ಸಮಾಜದ ಗುಣವನ್ನು ಅನುಸರಿಸುತ್ತಿಲ್ಲ. ನಮ್ಮ ಕ್ಷತ್ರಿಯ ಸಮಾಜದ ದೊಡ್ಡ ಸಂಖ್ಯೆಯನ್ನು ಬೇರೆ ಬೇರೆಯಾಗಿಸಿಕೊಂಡು ಸಣ್ಣ ಸಣ್ಣ ಪಂಗಡಗಳಾಗಿ ಮಾಡಿಕೊಂಡಿದ್ದೇವೆ. ನಾವೆಲ್ಲ ಕ್ಷತ್ರಿಯರು ಒಗ್ಗೂಡಿ ದೊಡ್ಡ ಸಂಖ್ಯೆಯಲ್ಲಿ ಹೊರಹೊಮ್ಮುವ ಕಾಲ ಇದೀಗ ಕೂಡಿಬಂದಿದೆ. ಕರ್ನಾಟಕದಲ್ಲಿ ಅತಿ ದೊಡ್ಡ ಸಂಖ್ಯೆ ಇರುವ ಜನಾಂಗವಿದ್ದರೆ ಅದು ನಮ್ಮ ಕ್ಷತ್ರಿಯ ಸಮಾಜ. ನಮ್ಮಲ್ಲಿ ಒಗ್ಗಟ್ಟು ಇಲ್ಲದೆ ಇರುವ ಕಾರಣ ಕೈ ತಪ್ಪುವಂತಾಗಿದೆ. ಕ್ಷತ್ರಿಯ ಸಮಾಜದವರೆಲ್ಲರೂ ಒಗ್ಗಟ್ಟಾಗುವಂತ ಕಾಲ ಇದೀಗ ಬಂದಿದೆ. ನಮ್ಮ ಕ್ಷತ್ರಿಯ ಸಮಾಜದ ಮುಖಂಡರು ಪ್ರತಿಯೊಂದು ತಾಲೂಕಿನಲ್ಲಿ ಎಂಎಲ್ಎ ಆಗಬೇಕೆಂಬ ಕನಸು ಇದೆ. ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ರಾಜಕೀಯ ಸ್ಥಾನಮಾನ ಕಾಣದಂತಾಗಿದೆ. ಇದಕ್ಕೆ ಕ್ಷತ್ರಿಯ ಸಮಾಜ ಸಣ್ಣ ಸಣ್ಣ ಪಂಗಡಗಳಾಗಿ ವಿಂಗಡಣೆಯಾಗಿರುವುದೇ ಕಾರಣವಾಗಿದೆ ಎಂದರು.
 ಜಿಲ್ಲೆಯಲ್ಲಿ ನಮ್ಮ ಕ್ಷತ್ರಿಯರ ಸಂಘಟನೆ ಮತ್ತು ಸಂಖ್ಯಾಬಲವನ್ನು ತೋರಿಸುವಂತ ದೊಡ್ಡ ಸಮಾವೇಶ ಆಗಬೇಕಾಗಿದೆ ಎಂದ ಅವರು, ರಾಜ್ಯದಲ್ಲಿ ನಮ್ಮ ಸಮಾಜದಿಂದ 30 ರಿಂದ 40 ಮಂದಿ ಎಮ್ಎಲ್ಎಗಳು, 8 ರಿಂದ 10 ಮಂದಿ ಎಂಪಿ ಗಳನ್ನು ಆಯ್ಕೆ ಮಾಡಿ ಅವರಿಗೆ ಗೌರವಿಸುವಂತ ಕೆಲಸ ಆಗಬೇಕು ಎಂಬ ಆಶಯ ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷರಾದ ಉದಯ ಸಿಂಗ್ ಅವರದ್ದಾಗಿದೆ. ಕ್ಷತ್ರಿಯ ಸಮಾಜವನ್ನು ಒಗ್ಗೂಡಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ದೊಡ್ಡ ಶಕ್ತಿಯಾಗಿ ಉದಯ್ ಸಿಂಗ್ ಅವರು ನಿಂತಿದ್ದಾರೆ ಎಂದರು.
 ಸಭೆಯಲ್ಲಿ ಮುಖಂಡರುಗಳಾದ ಸವಿತಾ ನಾಯ್ಕ, ಹನುಮಂತ ನಾಯ್ಕ, ನಾಮದೇವ ಸಿಂಪಿ ಸಮಾಜದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಐರಣಿ, ಜರಿಕಟ್ಟೆ ಹನುಮಂತಪ್ಪ, ಅನಿಲ್ ಕುಮಾರ್, ಶಂಕರ್, ರೂಪ ಕಾಟವೆ, ಎಸ್ ಎಸ್ ಕೆ ಸಮಾಜದ ಮುಖಂಡರಾದ ಅಂಬುಜಬಾಯಿ, ಕೌಶಲ್ಯ ಬಾಯಿ ರೂಕಡೆ, ಸುಧಾ ಸವಳಂಕಿ, ಮಂಜುನಾಥ್ ಪಿಸೆ, ರಶ್ಮಿ ಮೆಹರ್ವಾಡೆ, ಭಾರತಿ ದಿವಟೆ, ಚನ್ನಗಿರಿ ರಾಜಣ್ಣ, ರವಿ ನಾಯ್ಕ, ಮಂಜು ನಾಯ್ಕ, ಗಂಗಾಧರ್ ನಾಯ್ಕ, ವೆಂಕಟೇಶ್ ನಾಯ್ಕ, ನೇಕಾರ ಸಮಾಜದ ಮುಖಂಡರಾದ ಗೋಪಿ, ಶ್ರೀನಿವಾಸ್ ಇಂಡಿ, ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ವಿಠಲ್, ನರೇಂದ್ರ, ಮಂಜುನಾಥ್ ಗಢಾಳೆ, ರಾಜು ರೂಕಡೆ, ನಾಗರಾಜ್ ಮೆಹರ್ವಾಡೆ, ಮೋಹನ್ ಶಿರೋಜಿ, ಮಂಜುನಾಥ್ ಸರ್ವೋದಯ ಸೇರಿದಂತೆ ಜಿಲ್ಲೆಯ ಕ್ಷತ್ರಿಯ ಸಮಾಜದ ಪ್ರಮುಖರು, ಮುಖಂಡರು ಇತರರು ಇದ್ದರು. ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡಾ ಆನಂದ್ ರಾಜ್ ಸ್ವಾಗತಿಸಿ ನಿರೂಪಿಸಿದರು.

ಬಾಕ್ಸ್......
ಸಮಾಜದ ಸಂಖ್ಯಾಬಲವೇ ನಮಗೆ ಅಸ್ತ್ರ : ಯಾವುದೇ ನಾಯಕರು ಸಹ ನಮ್ಮನ್ನು ನಾಯಕರನ್ನಾಗಿ ಮಾಡಲು ಸಾಧ್ಯವಿಲ್ಲ. ಬೇರೆಯವರ ನಂಬಿ ಎಂಎಲ್ಎ, ಎಂಪಿ, ಎಂಎಲ್ಸಿ ಸೇರಿದಂತೆ ರಾಜಕೀಯ ಸ್ಥಾನಮಾನಗಳನ್ನ ಅಭಿಲಾಷೆ ಇದ್ದರೆ ಅದು ಸುಳ್ಳು. ಹತ್ತಾರು ವರ್ಷಗಳ ನೋಡಿ ಆಯಿತು. ಇನ್ನು ಎಷ್ಟು ದಿನ ಈ ನಂಬಿಕೆಯ ಮೇಲೆ ಜೀವನ ನಡೆಸುತ್ತೀರಾ. ಸಮುದಾಯದ ಶಕ್ತಿ ಇದ್ದರೆ ಮುಖ್ಯಮಂತ್ರಿ ಕೂಡ ಆಗಬಹುದು. ಮೊದಲು ಕ್ಷತ್ರಿಯ ಸಮಾಜದವರು ಪಂಗಡಗಳಾಗಿ ವಿಂಗಡಣೆಯಾಗಿರುವುದನ್ನು ಬಿಟ್ಟು ಎಲ್ಲರೂ ಕ್ಷತ್ರಿಯ ಸಮಾಜದವರಾಗಿ ಒಗ್ಗಟ್ಟು ಪ್ರದರ್ಶಿಸಿದಾಗ ನಮ್ಮ ಜನಸಂಖ್ಯಾ ಬಲ ಹೆಚ್ಚಾಗಲಿದೆ. ರಾಜಕೀಯ ಸ್ಥಾನಮಾನವನ್ನ ಪಡೆಯಲು ಸಂಖ್ಯಾಬಲವೇ ನಮಗೆ ಅಸ್ತ್ರವಾಗಿದೆ. ಆ ಮುಖೇನ ರಾಜಕೀಯ ಸ್ಥಾನಮಾನದ ಜೊತೆ ಜೊತೆಗೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ನಾವು ಬಲವನ್ನ ಕಾಣಲು ಸಾಧ್ಯ. ಯಾವುದೇ ಪಕ್ಷದಲ್ಲಿದ್ದರೂ, ಯಾವುದೇ ನಾಯಕರ ಜೊತೆಗಿದ್ದರೂ ಸಹ ಹುಟ್ಟಿದ ಕುಲವನ್ನು ಮಾತ್ರ ಎಂದಿಗೂ ಮರೆಯಬಾರದು. ಸಮಾಜದ ಏಳಿಗೆಗಾಗಿ ಶ್ರಮಿಸುವಂತಹ ಪ್ರಯತ್ನ ಮಾಡಬೇಕು. ನಾವು ಬಿಡು ಕೇವಲ ಬೇರೆಯವರ ಬೆಳೆಸಲು ಫ್ಲೆಕ್ಸ್, ಬಂಟಿಂಗ್ಸ್ ಕಟ್ಟುವವರಾಗಬಾರದು. ಪಲ್ಲಕ್ಕಿ ಹೊತ್ತು ಸಾಗುವವರಾಗದೆ ಆ ಪಲ್ಲಕ್ಕಿಯಲ್ಲಿ ನಾವು ಸಾಗುವಂತವರಾಗಬೇಕು. ಕನಿಷ್ಠ 50 ಸೀಟುಗಳನ್ನು ನಮ್ಮ ಸಮಾಜಕ್ಕೆ ನೀಡಿ ರಾಜಕೀಯ ಸ್ಥಾನಮಾನವನ್ನು ನೀಡಬೇಕು. ಹಾಗಿದ್ದರೆ ನಮ್ಮ ಸಮಾಜ ಅಂತಹ ಪಕ್ಷದ ಜೊತೆ ಬೆಂಬಲವಾಗಿ ನಿಲ್ಲಲಿದೆ. ಇಲ್ಲವಾದರೆ ನಮ್ಮ ನಾಯಕರುಗಳ ಜೊತೆಗಿರಲಿದೆ ಎಂಬ ನಿರ್ಧಾರವನ್ನು ರವಾನಿಸಿದ್ದೆವೆ. ಇದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಂಡು ನಮ್ಮ ಕಡೆ  ಗಮನವಿಟ್ಟಿವೆ. ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಹೋಗಿ  ನಮ್ಮ ಸಮಾಜವನ್ನು ಎಚ್ಚರಿಸುವಂತಹ ಕೆಲಸ ಮಾಡಲಾಗುತ್ತದೆ.
- ಉದಯ್ ಸಿಂಗ್, ರಾಜ್ಯಾಧ್ಯಕ್ಷ, ಕರ್ನಾಟಕ ಕ್ಷತ್ರಿಯ ಒಕ್ಕೂಟ.

Post a Comment

0 Comments