ಮಂದಾರ ನ್ಯೂಸ್ ,ಹರಿಹರ: ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದೆ ಸಾರ್ವಜನಿಕರನ್ನು ಅಲೆದಾಡಿಸುತ್ತಿದ್ದ ನಗರಸಭೆಯ ಸಿಬ್ಬಂದಿಗಳ ವರ್ತನೆಗೆ ಪೌರಾಯುಕ್ತರಾದ ಬಸವರಾಜ್ ಐಗೂರವರು ಕಿಡಿ ಕಾರಿದ ಘಟನೆ ನಿನ್ನೆಯ ದಿನ ಹರಿಹರ ನಗರಸಭೆಯಲ್ಲಿ ನಡೆದಿದೆ.
ಹರಿಹರ ನಗರಸಭೆಯ ಸಿಬ್ಬಂದಿಗಳು ಮಾವನ ಮನೆಗೆ ಅಳಿಯಂದರು ಬರುವಂತೆ ತಮ್ಮ ಮನಸ್ಸಿಗೆ ಬಂದಂತೆ ಕಚೇರಿಗೆ ಬರುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ. ಹರಿಹರ ನಗರಸಭೆಯನ್ನು ಜನಸ್ನೇಹಿ ನಗರಸಭೆನ್ನಾಗಿ ಮಾಡಬೇಕು ಎಂಬ ಉದ್ದೇಶ ಇಟ್ಟುಕೊಂಡಿರುವ ಪೌರಾಯುಕ್ತರಿಗೆ ಸಿಬ್ಬಂದಿಗಳ ವರ್ತನೆಯಿಂದ ಹಿನ್ನಡೆಯಾಗುತ್ತಿದೆ.
ನಗರಸಭೆಯ ಸಿಬ್ಬಂದಿಗಳಿಗೆ ಪ್ರತಿ ಬಾರಿಯೂ ಎಚ್ಚರಿಕೆ ನೀಡಲಾಗುತ್ತಿದೆ. ನಗರಸಭೆಯ ಚುನಾಯಿತ ಸದಸ್ಯರು ಸಹ ಸಾಮಾನ್ಯ ಸಭೆಗಳಲ್ಲಿ ನಗರಸಭೆಯ ಸಿಬ್ಬಂದಿಗಳ ಬೇಜವಾಬ್ದಾರಿತನದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಆದರೆ ನಗರಸಭೆಯ ಸಿಬ್ಬಂದಿಗಳು ಮಾತ್ರ ತಮ್ಮ ವರ್ತನೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುತ್ತಿಲ್ಲ.
ನಿನ್ನೆ ಹರಿಹರ ನಗರಸಭೆಯಲ್ಲಿ ಮಧ್ಯಾಹ್ನ 3 ಗಂಟೆಯಾದರೂ ಯಾವ ಸಿಬ್ಬಂದಿಗಳು ಕಚೇರಿಯಲ್ಲಿ ಕಾಣಲಿಲ್ಲ. ಇದರಿಂದ ಸಿಡಿಮಿಡಿಗೊಂಡ ನಗರಸಭೆಯ ಆಯುಕ್ತರಾದ ಬಸವರಾಜ್ ಐಗೂರವರು ನಗರಸಭೆಯ ಸಿಬ್ಬಂದಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ನಿಮ್ಮ ಮನಸ್ಸಿಗೆ ಬಂದಾಗೆ ಕಚೇರಿಗೆ ಬಂದು ಹೋಗಲು ಇದು ನಿಮ್ಮ "ಮಾವನ ಮನೆಯೋ ಅಥವಾ ಸರ್ಕಾರಿ ಕಚೇರಿಯೋ "ಎಂದು ಆಯುಕ್ತರು ಸಿಬ್ಬಂದಿಗಳ ವಿರುದ್ಧ ಹರಿಹಾಯ್ದಿದ್ದರು.
ಹತ್ತು ದಿನಗಳ ಹಿಂದೆ ಹರಿಹರದ ಶಾಸಕರಾದ ಬಿ.ಪಿ ಹರೀಶ್ ಅವರು ಸಹ ನಗರಸಭೆಯ ಸಿಬ್ಬಂದಿಗಳ ವರ್ತನೆಗೆ ಸಂಬಂಧಿಸಿದಂತೆ 10 ದಿನಗಳ ಗಡುವು ನೀಡಿದ್ದರು.ಆಡಳಿತದಲ್ಲಿ ಸುಧಾರಣೆಯಾಗಬೇಕು, ಆಡಳಿತ ಯಂತ್ರ ಚುರುಕುಗೊಳ್ಳಬೇಕು, ಜನಸಾಮಾನ್ಯರನ್ನು ಅಲೆದಾಡಿಸದೆ ಅವರ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಮಾಡಿಕೊಡಬೇಕು ಎಂದು ಆಯುಕ್ತರಿಗೆ ಖಡಕ್ ಸೂಚನೆ ನೀಡಿದ್ದರು.
ಶಾಸಕರ ಮಾತಿಗೆ ಗೌರವ ಕೊಟ್ಟು ನಗರಸಭೆಯ ಆಡಳಿತ ಯಂತ್ರದಲ್ಲಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಆಯುಕ್ತರಿಗೆ ನಗರಸಭೆಯ ಸಿಬ್ಬಂದಿಗಳು ಸರಿಯಾಗಿ ಸಹಕಾರ ನೀಡುತ್ತಿಲ್ಲ ಎಂಬುದು ನಿನ್ನೆ ದಿನ ನಡೆದ ಘಟನೆಯೇ ಸಾಕ್ಷಿಯಾಗಿದೆ.
"ದೇವರು ಕೊಟ್ಟರು ,ಪೂಜಾರಿ ಕೊಡುತ್ತಿಲ್ಲ" ಎನ್ನುವಂತೆ ಆಯುಕ್ತರು ಆದೇಶ ನೀಡಿದರು ಸಿಬ್ಬಂದಿಗಳು ಮಾತ್ರ ಅವರ ಮಾತಿಗೆ ಕ್ಯಾರೆ ಮಾಡುತ್ತಿಲ್ಲ. ಕೂಡಲೇ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಪಿ ಹರೀಶ್ ಅವರು ನಗರಸಭೆಯ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲೇಬೇಕು. ಹರಿಹರ ನಗರ ಸಭೆಯಲ್ಲಿ ಕಳೆದ 15 ಕ್ಕೂ ಹೆಚ್ಚು ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೂಡಲೇ ಶಾಸಕರು ಅಂತಹ ಸಿಬ್ಬಂದಿಗಳನ್ನ ಗುರುತಿಸಿ ತಾಲ್ಲೂಕಿನಿಂದ ವರ್ಗಾವಣೆಗೊಳಿಸಬೇಕು ಆಗ ಮಾತ್ರ ಹರಿಹರ ನಗರಸಭೆಯ ಆಡಳಿತ ಯಂತ್ರ ಸುಧಾರಿಸಲು ಸಾಧ್ಯ. ಜನಸಾಮಾನ್ಯರ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಮಾಡಿಕೊಡಲು ಸಾಧ್ಯವಾಗುತ್ತದೆ.
ಹರಿಹರ ನಗರಸಭೆಗೆ ಸಿಬ್ಬಂದಿಗಳು ಬೆಳಗ್ಗೆ 11 ಗಂಟೆಯಾದರೂ ಕಚೇರಿಗೆ ಬರುವುದಿಲ್ಲ. ಮಧ್ಯಾಹ್ನ 1 ಗಂಟೆಗೆ ಊಟಕ್ಕೆಂದು ತೆರಳಿದವರು 3:00ಯಾದರು ಕಚೇರಿಗೆ ಹಾಜರಾಗುವುದಿಲ್ಲ. ಇನ್ನು ಸಂಜೆ ನಾಲ್ಕು ಗಂಟೆ ಆಗುತ್ತಿದ್ದಂತೆ ಕಚೇರಿಯಯಿಂದ ಸದ್ದಿಲ್ಲದಂತೆ ಮನೆ ಕಡೆ ಮುಖ ಮಾಡುತ್ತಾರೆ. ಕಚೇರಿಯಲ್ಲಿ ಕುಳಿತು ಕನಿಷ್ಠ ಮೂರು ತಾಸು ಕೆಲಸ ಮಾಡುವುದಿಲ್ಲ ನಗರ ಸಭೆಯ ಸಿಬ್ಬಂದಿಗಳು.
ನಿನ್ನೆ ದಿನ ಆಯುಕ್ತರು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಮುಂದಿನ ದಿನದಲ್ಲಿ ಸಾರ್ವಜನಿಕರು ಬೀದಿಗಿಳಿದು ಎಚ್ಚರಿಕೆ ನೀಡುವ ದಿನಗಳು ದೂರ ಉಳಿದಿಲ್ಲ. ಅಷ್ಟರೊಳಗೆ ಸಿಬ್ಬಂದಿಗಳು ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡು ,ಕರ್ತವ್ಯದಲ್ಲಿ ಪ್ರಾಮಾಣಿಕತೆ ತೋರಿ, ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಮಾಡಿಕೊಟ್ಟರೆ ಒಳ್ಳೆಯದು. ಇಲ್ಲದಿದ್ದರೆ ಮುಂದಿನ ಪರಿಣಾಮ ಎದುರಿಸಲು ಸಿಬ್ಬಂದಿಗಳು ತಯಾರಾಗಿರಿ. ಎಲ್ಲಾ ಸಂದರ್ಭದಲ್ಲೂ ಕಾನೂನು ನಿಮ್ಮ ಸಹಾಯಕ್ಕೆ ಬರುವುದಿಲ್ಲ. ಕಾನೂನು- ಕಟ್ಟುಪಾಡುಗಳು ಕೇವಲ ಜನಸಾಮಾನ್ಯರಿಗೆ ಮಾತ್ರ ರೂಪಿತವಾಗಿಲ್ಲ ಎಂಬುದನ್ನ ನೆನಪಿಟ್ಟುಕೊಳ್ಳಿ.
0 Comments