ತ್ಯಾಗರ್ತಿ ಸರ್ಕಾರಿ ಶಾಲಾ ಜಾಗ ಒತ್ತುವರಿ ಆರೋಪ .ಹಮೀದ್ ಖಾನ್ ಕ್ಯಾ ಬಾತ್ ಹೈ.?

ಸಾಗರ:-ಸಾಗರ ತಾಲ್ಲೂಕಿನ ತ್ಯಾಗರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನದ ರೂಪದಲ್ಲಿ ಸರಿಸುಮಾರು ಇಪ್ಪತ್ತು ಎಕರೆ ಹತ್ತು ಗುಂಟೆ ಜಾಗವನ್ನು ನೀಡಲಾಗಿತ್ತು, ಇದಕ್ಕೆ ಸಂಬಂಧಿಸಿದಂತೆ ಇಂದಿಗೂ ಕಂದಾಯ ಇಲಾಖೆಯ ಆರ್ ಟಿಸಿ(ಪಹಣಿ)ಯಲ್ಲಿ ಮಿಡ್ಲಿಸ್ಕೂಲ್ ಶಾಲಾ ಜಾಗ ಇಪ್ಪತ್ತು ಎಕರೆ ಹತ್ತು ಗುಂಟೆ ಎಂದು ನಮೂದಾಗಿರುತ್ತದೆ .

ಶಾಲಾ ಜಾಗ ಒತ್ತುವರಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಮೀದ್ ಖಾನ್ ಕುಟುಂಬ ಸದಸ್ಯರು ಸುಮಾರು 2ಎಕರೆಗೂ ಹೆಚ್ಚು ಜಾಗವನ್ನು ಕಬಳಿಸಿದ್ದಾರೆ , ಉಳಿದ 17 ಕ್ಕೊ ಹೆಚ್ಚು  ಎಕರೆ ಶಾಲಾ ಜಾಗವನ್ನು  ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನ ತ್ಯಾಗರ್ತಿ ಗ್ರಾಮದ ಕೆಲವು ಗ್ರಾಮಸ್ಥರು ಹಾಗೂ ಶಾಲಾ ಎಸ್ ಡಿಎಂಸಿ ಸದಸ್ಯರು ಆರೋಪಿಸಿದ್ದಾರೆ. .
ಶಾಲಾ ಜಾಗ ಒತ್ತುವರಿ ಸಂಬಂಧಿಸಿದಂತೆ ಊರಿನ ಗ್ರಾಮಸ್ಥರು ಹಾಗೂ ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು ಕಳೆದ ಹತ್ತುಹದಿನೈದು ವರ್ಷದಿಂದ ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಒತ್ತುವರಿಯಾಗಿರುವ ಶಾಲಾ ಜಾಗವನ್ನು ಪತ್ತೆಹಚ್ಚಿ ಶಾಲೆಗೆ ಬಿಡಿಸಿಕೊಡುವಂತೆ ಒತ್ತಾಯಿಸುತ್ತಿದ್ದಾರೆ .

ಊರಿನ ಗ್ರಾಮಸ್ಥರು ಹಾಗೂ ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರ ಮನವಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಇದುವರೆಗೂ ಸ್ವಂದಿಸದೆ ಇರುವುದು ಅವರ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ .
ತ್ಯಾಗರ್ತಿ ಗ್ರಾಮ ಪಂಚಾಯತಿಯಲ್ಲಿ ಹಮೀದ್ ಖಾನ್ ಅಧ್ಯಕ್ಷರಾಗಿ,ಸದಸ್ಯರಾಗಿ  ಕಳೆದ ಇಪ್ಪತ್ತು ವರ್ಷದಿಂದ ಅಧಿಕಾರ ನಡೆಸಿಕೊಂಡು ಬಂದಿದ್ದು ಶಾಲೆಗೆ ಸಂಬಂಧಿಸಿದ ಜಾಗದಲ್ಲಿ ಸುಮಾರು 2ಎಕರೆಗೂ ಹೆಚ್ಚು ಜಾಗವನ್ನು ತಮ್ಮ ಕುಟುಂಬ ಸದಸ್ಯರೊಬ್ಬರ ಹೆಸರಿಗೆ ಪಹಣಿ ಮಾಡಿಸಿಕೊಂಡಿದ್ದು ಆ ಜಾಗದಲ್ಲಿ ಭೂ ಮತ್ತು ಗಣಿ ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿದ್ದಾರೆ .ಈ ಮೂಲಕ ಶಾಲಾ ಜಾಗ ಒತ್ತುವರಿ ಮಾಡಿಕೊಂಡಿದ್ದು ಅಲ್ಲದೆ ಭೂ ಮತ್ತು ಗಣಿ ಇಲಾಖೆಯ ನಿಯಮಗಳನ್ನು ಮೀರಿ ಕಾನೂನು ಬಾಹಿರವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ್ದು ಇದರ ಕುರಿತು ಸಮಗ್ರವಾದ ತನಿಖೆ ನಡೆಸುವ ಅವಶ್ಯಕತೆ ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳ ಮೇಲಿದೆ .ಆದರೆ ಸಂಬಂಧಿಸಿದ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಕಳ್ಳರೊಂದಿಗೆ ಸೇರಿಕೊಂಡು "ಕಣ್ಣಾಮುಚ್ಚಾಲೆ" ಆಟವನ್ನು ಆಡುತ್ತಿದ್ದಾರೆ.ಈ ಕಣ್ಣಾ ಮುಚ್ಚಾಲೆ ಆಟದಲ್ಲಿ ಅಧಿಕಾರಿಗಳು ಕತ್ತಲ ರಾತ್ರಿಯಲ್ಲಿ "ಕುರುಡು ಕಾಂಚಾಣ"ವನ್ನೇ ಕುಣಿಸುತ್ತಿರುವ ಆರೋಪವೂ ಕೇಳಿಬಂದಿದೆ.ವಿಶೇಷವಾಗಿ ಸರ್ವೇ ಇಲಾಖೆಯ ಅಧಿಕಾರಿಗಳು ಶಾಲಾ ಒತ್ತುವರಿ ಮಾಡಿಕೊಂಡವರೊಂದಿಗೆ ಶಾಮೀಲಾಗಿ ಅವರ ಜೊತೆ ಶಾಲಾ ಜಾಗ ಒತ್ತುವರಿ ವಿಚಾರದಲ್ಲಿ ಕಳ್ಳರಿಗೆ ಅನುಕೂಲಕರವಾದ ದಾರಿಯನ್ನ ಇವರೇ ಮಾಡಿಕೊಟ್ಟಿದ್ದಾರೆ ಎಂಬ ಮತ್ತೊಂದು ಆರೋಪವು ಸಾರ್ವಜನಿಕರ ವಲಯದಿಂದ ಕೇಳಿ ಬಂದಿದೆ .
ತ್ಯಾಗರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಜಾಗ ಒತ್ತುವರಿಗೆ ಸಂಬಂಧಿಸಿದಂತೆ ಈ ಕೆಳಕಂಡ ವರದಿಯನ್ನು ನೋಡೋಣ ಬನ್ನಿ .

ಕರ್ನಾಟಕ ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ತವರು ಜಿಲ್ಲೆ ಹಾಗೂ ಸಾಗರ ಕ್ಷೇತ್ರದ ಜನಪ್ರಿಯ ಹಾಲಿ ಶಾಸಕ ಗೋಪಾಲ ಕೃಷ್ಣ ಬೇಳೂರು ಅವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದ ತ್ಯಾಗರ್ತಿ ಸರ್ಕಾರಿ ಶಾಲಾ ಜಾಗಕ್ಕೆ ಸಂಬಂಧಿಸಿದಂತೆ ಈ ವಿಶೇಷ ಸುದ್ದಿಯನ್ನ ಪ್ರಕಟಿಸಬೇಕಾಗಿದೆ .

ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಸಾಗರ ಕ್ಷೇತ್ರದ ಹಾಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರೇ ನಿಮ್ಮೆಲ್ಲಾ ರಾಜಕೀಯವನ್ನು ಬದಿಗಿಟ್ಟು ಈ ವಿಶೇಷ ಸುದ್ದಿಯನ್ನೊಮ್ಮೆ ನೋಡಿ.

ನಿಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೆಲವು ತಿರುಬೋಕಿ ರಾಜಕಾರಣ ಮಾಡುವ ಭ್ರಷ್ಟ ಪ್ರಭಾವಿ ವ್ಯಕ್ತಿಗಳು ಹೇಗೆ ಸರ್ಕಾರಿ ಶಾಲಾ ಜಾಗವನ್ನು ಗುಳುಂ ಮಾಡುತ್ತಿದ್ದಾರೆ ಎಂದು ಒಮ್ಮೆ ನಿಮ್ಮ ಕ್ಷೇತ್ರ ವ್ಯಾಪ್ತಿ ಯಲ್ಲಿರುವ ಖಾಲಿ ಜಾಗದತ್ತ ಕಣ್ಣಾಯಿಸಿ.

ಸಾಗರ ತಾಲ್ಲೂಕಿನ ತ್ಯಾಗರ್ತಿ ಗ್ರಾಮದ ಸರ್ವೇ ನಂಬರ್ 450 ಹಾಗೂ ಖಾತೆ ನಂಬರ್ 135 ರಲ್ಲಿರುವ ಖಾಲಿ ಜಾಗವು ಸಂಪೂರ್ಣವಾಗಿ ಒತ್ತುವರಿಯಾಗಿದ್ದು,ಅದನ್ನು ತೆರವುಗೊಳಿಸುವಂತೆ ಕಳೆದ ಹತ್ತು,ಹದಿನೈದು ವರ್ಷದಿಂದ ನಡೆಯುತ್ತಿರುವ ಪತ್ರಯುದ್ಧ ಈತನಕ ಕೊನೆಗೊಂಡಿಲ್ಲ.

ತ್ಯಾಗರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನದ ರೂಪದಲ್ಲಿ ಈ ಹಿಂದೆ ಇಪ್ಪತ್ತು ಎಕರೆ ಹತ್ತು ಗುಂಟೆ ಜಾಗವನ್ನು ನೀಡಲಾಗಿತ್ತು .ಸರ್ಕಾರಿ ದಾಖಲೆಯಲ್ಲಿ ಸಹ ಈ ಬಗ್ಗೆ ಎಲ್ಲಾ ಮಾಹಿತಿ ಇದೆ .ಪಹಣಿಯಲ್ಲಿ ಸರ್ಕಾರಿ ಶಾಲಾ ಜಾಗ ಹಾಗೂ ಇಪ್ಪತ್ತು ಎಕರೆ ಹತ್ತು ಗುಂಟೆ ಎಂದು ನಮೂದಾಗಿದೆ.

2008 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಶಾಲಾ ಜಾಗ ಎಲ್ಲಿದೆ ?ಯಾರಿಂದ ಅತಿಕ್ರಮವಾಗಿದೆ ?ಎನ್ನುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಶಾಲಾ ವಶಕ್ಕೆ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಅಂದಿನಿಂದ ಇಂದಿನವರೆಗೂ ಶಾಲಾ ಜಮೀನು ವಾಪಸ್ ಪಡೆಯಲು ಅನೇಕ ಪತ್ರ ವ್ಯವಹಾರ ನಡೆದಿದೆ.ಎಲ್ಲರ ಬಾಯಲ್ಲೂ ಶಾಲೆಯ ಜಾಗ ಸಂಬಂಧಿಸಿದ ಪಂಚಾಯಿತಿ ವ್ಯಾಪ್ತಿಯ ಮಾಜಿ ಅಧ್ಯಕ್ಷರು ಸಂಬಂಧಿಕರು ಹಾಗೂ ಪ್ರಭಾವಿ ವ್ಯಕ್ತಿಗಳಿಂದ ಒತ್ತುವರಿಯಾಗಿದೆ, ಅದನ್ನು ತೆರವುಗೊಳಿಸಬೇಕು ಎನ್ನುವ ಮಾತು ತ್ಯಾಗರ್ತಿ ವ್ಯಾಪ್ತಿಯ ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿದೆಯಾದರೂ,ಶಾಲಾ ಜಾಗ ವಶಪಡಿಸುಕೊಳ್ಳುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿಲ್ಲ.

ಇದಕ್ಕೂ ಪೂರ್ವದಲ್ಲಿ ಶಾಲಾ ಮುಖ್ಯಶಿಕ್ಷಕರು 25/01/2008 ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದು ಶಾಲೆಗೆ ಇಪ್ಪತ್ತು ಎಕರೆ ಹತ್ತು ಗುಂಟೆ ಜಾಗವು ದಾನಪತ್ರದ ಮೂಲಕ ಬಂದಿದ್ದು ,ಇದು ಹೀಗೆ ಬೇರೆ ಬೇರೆ ಕಾರಣಗಳಿಂದಾಗಿ ಒತ್ತುವರಿಯಾಗಿದೆ.ಈಗ ಶಾಲೆಗೆ ಉಳಿದಿರುವುದು ಕೇವಲ 2ರಿಂದ 3ಎಕರೆ ಜಾಗ ಮಾತ್ರ .

 ಶಾಲಾ ಕಟ್ಟಡ,ಆಟದ ಮೈದಾನ ಹೊರತುಪಡಿಸಿದರೆ ಶಾಲೆಯನ್ನ ವಿಸ್ತರಿಸಲು ,ಸರ್ಕಾರದಿಂದ ಮಂಜೂರಾಗಿರುವ ಪಬ್ಲಿಕ್ ಇಂಗ್ಲಿಷ್ ಮಿಡಿಯಂ ಶಾಲೆಯನ್ನು ಪ್ರಾರಂಭಿಸಲು ಅಗತ್ಯವಾಗಿ ಬೇಕಾಗಿರುವ ಜಾಗ ಶಾಲೆಗೆ ಇಲ್ಲವಾಗಿದೆ.
ಅಂದಾಜು ಎರಡರಿಂದ 3ಎಕರೆ ಜಮೀನು ಮಾತ್ರ ಉಳಿದಿದೆ ಎನ್ನುವ ಪತ್ರ ಬರೆದು ಈ ಬಗ್ಗೆ ಕ್ರಮ ಜರೂರಾಗಿ ಜರುಗಿಸಬೇಕು ಎನ್ನುವ ವೇದಾಂತಿಯ ಲಿಖಿತ ರೂಪದ ಮನವಿಯನ್ನ ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಿದ್ದರು,ಸಂಬಂಧಿಸಿದ ಇಲಾಖೆಯ ದಪ್ಪಚರ್ಮದ, ಒರಟು ಬುದ್ದಿಯ ಅಧಿಕಾರಿಗಳು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು,ಶಾಲಾ ಜಾಗವನ್ನ ಗುರುತಿಸುವಲ್ಲಿ ವಿಳಂಬ ತಂತ್ರ ಅನುಸರಿಸುತ್ತ ಬಂದಿದ್ದಾರೆ.

ಇದರ ಜೊತೆಗೆ ಆಯಾಯ ಕಾಲಕ್ಕೆ ಬರುವ ಶಾಲಾ ಮೇಲುಸ್ತುವಾರಿ ಸಮಿತಿಗಳು ಶಾಲಾ ಜಾಗವನ್ನು ಶಾಲೆಗೆ ಹಿಂದಿರುಗಿಸಿ ಕೊಡುವಂತೆ ಕಂದಾಯ ಇಲಾಖೆಯ ಬೇಜವಾಬ್ದಾರಿ ಅಧಿಕಾರಿಗಳಿಗೆ ಪತ್ರ ಬರೆಯುತ್ತಲೇ ಬಂದಿದ್ದಾರೆ .

ಎಮ್ಮೆಯ ಚರ್ಮದಿಂದ ತಮ್ಮ ಮೈಯನ್ನು ಮುಚ್ಚಿಕೊಂಡಿರುವ,ಸಂವಿಧಾನ ಹಾಗೂ ಕಾನೂನಿನ ಅರಿವಿಲ್ಲದ ನಿರ್ಲಕ್ಷ್ಯ ಹಾಗೂ ಸೋಮಾರಿತನ ತೋರುವ ಅಧಿಕಾರಿಗಳಿಗೆ ಬರೆದ ಪತ್ರಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಇತ್ತೀಚಿನ ವರ್ಷಗಳಲ್ಲಿ ಈ ಪತ್ರ ವ್ಯವಹಾರ ಸಹ ಕಡಿಮೆಯಾಗುತ್ತ ಬಂದಿದೆ .

ಏನೇ ಮಾಡಿದರೂ ತಿಪ್ಪರಲಾಗ ಹೊಡೆದರೂ,ಶಾಲಾ ಜಾಗವನ್ನು ಒತ್ತುವರಿ ಮಾಡಿಕೊಂಡ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷನ ಕುಟುಂಬ ಸದಸ್ಯರಿಂದ ಹಾಗೂ ಪ್ರಭಾವಿ ವ್ಯಕ್ತಿಗಳಿಂದ ಬಿಡಿಸಿ ಕೊಳ್ಳಲು ಸಾಧ್ಯವಾಗುತ್ತಿಲ್ಲ .

ಈ ಪ್ರಭಾವಿ ವ್ಯಕ್ತಿಗಳಿಗೆ ಆಗಾಗ ಆಯ್ಕೆಯಾಗಿ ಬರುವ  ಚುನಾಯಿತ ಕೆಲವು ಜನಪ್ರತಿನಿಧಿಗಳ ಬೆಂಬಲವೂ ಇದೆ ?ಎಂಬ ಮಾತು ಕೇಳಿಬರುತ್ತಿದೆ.ಇವರ ಬೆಂಬಲ ಇರುವ ತನಕ ಶಾಲಾ ಜಾಗವನ್ನು ಶಾಲೆಗೆ ಪಡೆಯಲು ಸಾಧ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಶಾಲೆಯ ಮೇಲುಸ್ತುವಾರಿ ಸಮಿತಿ ಹಾಗೂ ಊರಿನ ಕೆಲ ಗ್ರಾಮಸ್ಥರು ಬಂದಂತೆ ಕಾಣುತ್ತಿದೆ.ಏಕೆಂದರೆ ಹಲವಾರು ವರ್ಷಗಳಿಂದ ಸ್ಥಳೀಯ ನಾಗರಿಕರು ತ್ಯಾಗರ್ತಿ ಶಾಲಾ ಜಾಗ ಒತ್ತುವರಿ ಮಾಡಿಕೊಂಡಿರುವರ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿದ್ದರೂ ಈ ದಪ್ಪ ಚರ್ಮದ,ಭ್ರಷ್ಟ ಅಧಿಕಾರಿಗಳು ಇದನ್ನು ಗಮನಿಸುವ ಹಾಗೂ ಸರ್ವೆ ಮಾಡುವ ಗೋಜಿಗೆ ಹೋಗುತ್ತಿಲ್ಲ ,ಸಂಬಂಧಪಟ್ಟವರ ಮೇಲೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುವ ಕೆಲಸವನ್ನ ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಮಾಡುತ್ತಿಲ್ಲ .ಇದರಿಂದಾಗಿ ಶಾಲಾ ಜಾಗ ಯಾವುದು ಎಂದು ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಮುಂದಾದರೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಗೋಪಾಲಕೃಷ್ಣ ಬೇಳೂರು, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಸೋಮಶೇಖರ್ ಲಾವಿಗ್ಗೆರಿ ಇತ್ತ ಗಮನಹರಿಸಿ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೆ?ಅಥವಾ ಈ ಹಿಂದಿನಂತೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಶಾಲಾ ಜಾಗ ವಿಚಾರಕ್ಕೆ ಕೈ ಹಾಕದೆ ಸುಮ್ಮನಿರುತ್ತಾರಾ ಕಾದು ನೋಡಬೇಕಾಗಿದೆ.
ಏನೇ ಹೇಳಿ ಆಳುವಂಥ ಜನಪ್ರತಿನಿಧಿಗಳು ಊರಿನ ಅಭಿವೃದ್ಧಿಗೆ ಸಹಕಾರ ನೀಡಿದಂತೆ ಈ ರೀತಿ ಅತಿಕ್ರಮವಾಗಿ ಒತ್ತುವರಿ ಮಾಡಿಕೊಂಡ ಜಾಗದ ಕಡೆ ಗಮನಹರಿಸಬೇಕು.ಹಾಗೆ ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ಕಾರದ ದಾಖಲೆಯಲ್ಲಿ ನಮೂದಾಗಿರುವ  ಶಾಲಾ ಜಾಗವನ್ನು ಸರ್ವೆ ಮಾಡುವತ್ತ ಗಮನಹರಿಸಬೇಕು.ಅದು ಬಿಟ್ಟು ದಾನದ ಪತ್ರ ತನ್ನಿ ಆ ದಾಖಲೆ ತನ್ನಿ ಈ ದಾಖಲೆ ತನ್ನಿ ಎಂದು ಸಾರ್ವಜನಿಕರಿಗೆ ಪ್ರಶ್ನೆ ಮಾಡಬಾರದು .ಸಾರ್ವಜನಿಕರೇ ಎಲ್ಲಾ ದಾಖಲೆಯನ್ನು ನೀಡುವುದಾದರೆ ನಿಮಗೆ ಏಕೆ ಅಧಿಕಾರದ ಕುರ್ಚಿ ಬೇಕು ? ಜನರ ತೆರಿಗೆಯ ಹಣದಲ್ಲಿ ಬದುಕುವ ನೀವು ಸಾರ್ವಜನಿಕರ ಸ್ವತ್ತುಗಳನ್ನು ರಕ್ಷಣೆ ಮಾಡುವತ್ತ ಗಮನ ಹರಿಸುವ ಜವಾಬ್ದಾರಿಯನ್ನ ಹೊಂದಬೇಕು .

ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಸಾರ್ವಜನಿಕ ಸೊತ್ತುಗಳ ರಕ್ಷಣೆ ಜವಾಬ್ದಾರಿ ಸಂಬಂಧಿಸಿದ ಗ್ರಾಮ ಪಂಚಾಯತ್ ಅಧಿಕಾರಿಗಳದ್ದಾಗಿರುತ್ತದೆ .ಅವರು ಸಹ ಇರುವಷ್ಟು ದಿನ ಮುತುವರ್ಜಿವಹಿಸಿ ಸರ್ಕಾರಿ ಸಾರ್ವಜನಿಕರ ಶಾಲಾ ಜಾಗ ರಕ್ಷಣೆ ಮಾಡುವತ್ತ ಗಮನ ನೀಡಬೇಕು .ಸುಮ್ಮನೆ ಸುಣ್ಣ ಬಣ್ಣ ಹಚ್ಚಿ ತಾನೊಬ್ಬ ದಕ್ಷ ಅಧಿಕಾರಿಗಳು ಎಂದು ತೋರಿಸಿಕೊಳ್ಳುವ ಗೋಜಿಗೆ ಹೋಗಬಾರದು.

 ತ್ಯಾಗರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ ಎಲ್ಲಾ ಹಳೆಯ ವಿದ್ಯಾರ್ಥಿಗಳು ಒತ್ತುವರಿಯಾಗಿರುವ ನಮ್ಮ ಶಾಲಾ ಜಾಗ ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟಕ್ಕೆ ಇಳಿಯಬೇಕು .ಆ ಮೂಲಕ ನಾವು ಶಿಕ್ಷಣ ಪಡೆದ ಶಾಲೆಯ ಋಣ ತೀರಿಸುವ ತೀರಿಸಬೇಕು.ಆ ನಿಟ್ಟಿನಲ್ಲಿ ಈಗಿನಿಂದಲೇ ಎಲ್ಲರೂ ಕೈಜೋಡಿಸೋಣ ಶಾಲೆ ಜಾಗವನ್ನ ಬಿಡಿಸಿಕೊಳ್ಳೋಣ ಎಂಬುದು ನಮ್ಮ ವರದಿಯ ಆಶಯವಾಗಿದೆ .

ಪ್ರಕಾಶ್ ಮಂದಾರ 
ಸಂಪಾದಕರು .

Post a Comment

0 Comments