ಮಂದಾರ ನ್ಯೂಸ್, ಹರಿಹರ: ಜನವಸತಿ ಪ್ರದೇಶಗಳಲ್ಲಿ ಅಪಾಯಕಾರಿಯಾಗುವಂತ ಯಾವುದೇ ರೀತಿಯ ವ್ಯಾಪಾರ ವಹಿವಾಟುಗಳನ್ನು ನಡೆಸಬಾರದು ಎಂಬ ಆದೇಶವಿದೆ. ಅಲ್ಲದೆ ವ್ಯಾಪಾರದ ಉದ್ದೇಶದಿಂದ ಜನವಸತಿ ಪ್ರದೇಶದಲ್ಲಿ ಅಪಾಯಕಾರಿ ವ್ಯವಹಾರ ನಡೆಸುತ್ತಿರುವುದು ಕಂಡು ಬಂದರೆ ಸ್ಥಳೀಯ ಸಂಸ್ಥೆಯವರು ಕೂಡಲೇ ಸ್ಥಳ ಪರಿಶೀಲನೆಯನ್ನ ಮಾಡಿ ನಡೆಸುತ್ತಿರುವ ವ್ಯವಹಾರದಿಂದ ಮುಂದೆ ಅಪಾಯವಿದೆ ಎಂದು ಕಂಡು ಬಂದರೆ ಅವರ ಅನುಮತಿಯನ್ನು ರದ್ದುಗೊಳಿಸುವ ಅಧಿಕಾರವನ್ನು ಹೊಂದಿರುತ್ತಾರೆ.
ಹರಿಹರ ನಗರದ ಹೃದಯ ಭಾಗವಾಗಿರುವ ಭಾರತ್ ಅಲ್ ಕಾಂಪೌಂಡ್ ,ಫಿಶ್ ಮಾರ್ಕೆಟ್ ರಸ್ತೆಯಲ್ಲಿ ಅಪಾಯಕಾರಿ ಗ್ಯಾಸ್ ಬಂಕ್ ಒಂದು ತಲೆಯೆತ್ತಿರುವುದು ಸ್ಥಳೀಯ ನಗರಸಭೆಯ ಅಧಿಕಾರಿಗಳಿಗೆ ತಿಳಿದಿದೆ.
ಒಂದು ಕಡೆ ಸರ್ಕಾರಿ ಬಸ್ ನಿಲ್ದಾಣ ,ಇನ್ನೊಂದು ಕಡೆ ರೈಲ್ವೆ ನಿಲ್ದಾಣ ,ಮತ್ತೊಂದು ಕಡೆ ಜನವಸತಿ ಪ್ರದೇಶ. ಇವುಗಳ ಮಧ್ಯೆ ಅಪಾಯಕಾರಿ ಗ್ಯಾಸ್ ಬಂಕ್ ನಿರ್ಮಾಣವಾಗಿದ್ದು ಮುಂದೊಂದು ದಿನ ಈ ಗ್ಯಾಸ್ ಬಂಕ್ ನಿಂದ ಬಹುದೊಡ್ಡ ಅನಾಹುತ ಸಂಭವಿಸಬಹುದು.
ಅನಾಹುತವಾಗುವ ಮೊದಲೇ ಹರಿಹರ ನಗರಸಭೆಯ ಪೌರಾಯುಕ್ತರು ಕೂಡಲೇ ಗ್ಯಾಸ್ ಬಂಕ್ ಅನ್ನು ಸ್ಥಳಾಂತರ ಗೊಳಿಸಲು ಸೂಚನೆ ನೀಡಬೇಕು. ಮುಂದಾಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸುವಲ್ಲಿ ಮುಂದಾಗಬೇಕು.
ಒಂದು ವೇಳೆ ಗ್ಯಾಸ್ ಬಂಕ್ ಯಾವುದೋ ಕಾರಣಕ್ಕೆ ಸೋರಿಕೆಯಾದರೆ ಅದರ ವ್ಯಾಪ್ತಿ ಊಹಿಸಲು ಸಾಧ್ಯವಿಲ್ಲ. ಬಸ್ ನಿಲ್ದಾಣಕ್ಕೆ ಪ್ರತಿದಿನ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಬಂದು ಹೋಗುತ್ತಾರೆ. ಅದೇ ರೀತಿ ರೈಲ್ವೆ ನಿಲ್ದಾಣಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಾರೆ. ಬಸ್ಸು ಮತ್ತು ರೈಲುಗಳಿಗೆ ಇಂಧನವನ್ನ ತುಂಬಿಸಿಕೊಂಡೇ ಚಾಲನೆ ಮಾಡಬೇಕಾಗುತ್ತದೆ. ಈಗಾಗಲೇ ಹರಿಹರ ನಗರಕ್ಕೆ ಒಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಾಟ ಪ್ರಾರಂಭವಾಗಿದೆ. ದಿನದಿಂದ,ದಿನಕ್ಕೆ ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾಣುತ್ತಿದೆ. ಪ್ರಯಾಣಿಕರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ವೇಳೆ ರೈಲಿಗೆ ತುಂಬಿದ ಇಂಧನ ಸೋರಿಕೆಯಾದರೂ ಅಪಾಯ ಕಾದಿಟ್ಟ ಬುತ್ತಿ.
ಇಂಥ ಸೂಕ್ಷ್ಮ ಪ್ರದೇಶದ ಸುತ್ತ ಇಂತಿಷ್ಟು ಮೀಟರ್ ಗಳ ಅಂತರದಲ್ಲಿ ಯಾವುದೇ ಅಪಾಯಕಾರಿ ವ್ಯಾಪಾರ- ವ್ಯವಹಾರಗಳನ್ನು ನಡೆಸಬಾರದು ಎಂಬ ಕಟ್ಟುಪಾಡಿದೆ.
ಆದರೆ ಸ್ಥಳೀಯ ನಗರಸಭೆಯವರು ಅಪಾಯಕಾರಿ ಗ್ಯಾಸ್ ಬಂಕ್ ಗೆ ಜನವಸತಿ ಪ್ರದೇಶದ ಮಧ್ಯದಲ್ಲಿ ನಡೆಸಲು ಅನುಮತಿ ನೀಡಿರುವುದು ಅನೇಕ ಅನುಮಾನಗಳನ್ನ ಹುಟ್ಟು ಹಾಕಿದೆ.
ಈ ಹಿಂದಿನ ಹರಿಹರ ನಗರಸಭೆಯ ಆಯುಕ್ತರು ಯಾವುದೇ ಮುಂದಾಲೋಚನೆ ಮಾಡದೆ, ಜನವಸತಿ ಪ್ರದೇಶದ ಮಧ್ಯದಲ್ಲಿ ಗ್ಯಾಸ್ ಬಂಕ್ ಗೆ ಅನುಮತಿ ನೀಡುವ ಮೂಲಕ ಸರ್ಕಾರದ ಆದೇಶ ಮತ್ತು ಕಾನೂನುಗಳನ್ನ ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂಬ ಆರೋಪವನ್ನು ಸ್ಥಳೀಯ ನಾಗರಿಕರು ಮಾಡುತ್ತಿದ್ದಾರೆ.
ಈ ಹಿಂದಿನ ಆಯುಕ್ತರು ಮಾಡಿರುವ ತಪ್ಪಿನಿಂದ ಮುಂದೊಂದು ದಿನ ಈ ಗ್ಯಾಸ್ ಬಂಕ್ ನಿಂದ ಹೆಚ್ಚಿನ ಅನಾಹುತ ಆಗುವ ಸಾಧ್ಯತೆ ಹೆಚ್ಚಾಗಿದೆ .ಕೂಡಲೇ ಜನ ವಸತಿ ಪ್ರದೇಶದ ಮಧ್ಯೆ ಇರುವ ಗ್ಯಾಸ್ ಬಂಕ್ ಅನ್ನು ತೆರೆವುಗೊಳಿಸುವ ಮೂಲಕ ಮುಂದಾಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸುವಂತೆ ನಗರಸಭೆಯ ಅಧಿಕಾರಿಗಳಲ್ಲಿ ಸ್ಥಳೀಯ ನಾಗರಿಕರು ಮನವಿ ಮಾಡಿಕೊಂಡಿದ್ದಾರೆ.
ಹರಿಹರ ನಗರಸಭೆಯ ಪೌರಾಯುಕ್ತರಾದ ಬಸವರಾಜ್ ಐಗೂರು ಇವರು ಗ್ಯಾಸ್ ಬಂಕಿಗೆ ಸಂಬಂಧಿಸಿದಂತೆ 18 ಇಲಾಖೆಯ ಅನುಮತಿ ಪತ್ರವನ್ನು ಪರಿಶೀಲನೆ ಮಾಡಬೇಕು. ನಂತರ ತಮ್ಮ ಇಲಾಖೆಯವರು ಯಾವ ಆಧಾರದ ಮೇಲೆ ಅನುಮತಿ ನೀಡಿದ್ದಾರೆ ಎಂದು ತಿಳಿದುಕೊಳ್ಳಬೇಕು. ತದನಂತರ ಗ್ಯಾಸ್ ಬಂಕ್ ನಿರ್ಮಾಣದಲ್ಲಿ ಕಾನೂನು ಉಲ್ಲಂಘನೆಯಾಗಿದ್ದರೆ ಕೂಡಲೇ ಅವರ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು. ಅದಕ್ಕೂ ಮೊದಲು ಗ್ಯಾಸ್ ಬಂಕ್ ಸ್ಥಳಾಂತರಿಸಲು ಸಂಬಂಧಿಸಿದ ಗ್ಯಾಸ್ ಬಂಕ್ ಮಾಲೀಕರಿಗೆ ಲಿಖಿತ ರೂಪದಲ್ಲಿ ತುರ್ತು ಸೂಚನೆ ನೀಡಬೇಕು ಎಂಬುವುದೇ ನಮ್ಮ ಮಾಧ್ಯಮದ ಆಶಯವಾಗಿದೆ.
0 Comments