ತ್ಯಾಗರ್ತಿ ಗ್ರಾಮದ ಸುಂದರ ರಸ್ತೆಗಳಲ್ಲಿ ಶಾಸಕರ ನಡಿಗೆ ಸಾಗಲಿ.....

ಮಂದಾರ ನ್ಯೂಸ್,ಸಾಗರ: ತ್ಯಾಗರ್ತಿ ಗ್ರಾಮದ ಮುಕುಪ್ಪಿ ಸರ್ಕಲ್ ನಿಂದ ತಗ್ಗಿನ ಕೇರಿ ಮಾರ್ಗವಾಗಿ ಮೂಲೆಕೇರಿವರೆಗಿನ ಸುಂದರವಾದ ರಸ್ತೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರ ನಡಿಗೆ ಸಾಗುವಂತಾಗಲಿ, ಆ ಮೂಲಕ ಆ ಭಾಗದ ಜನರ ಸಮಸ್ಯೆಯನ್ನ ಆಲಿಸಲಿ ಎಂಬುವುದು ಗ್ರಾಮದ ಮತದಾರರ ಆಗ್ರಹವಾಗಿದೆ.

ಗ್ರಾಮದ ಮೂಲೆ ಕೇರಿ ಸ್ವತಂತ್ರ ಬಂದು 75 ವಸಂತಗಳನ್ನು ಕಳೆದರೂ ಈ ಭಾಗದ ರಸ್ತೆ ಡಾಂಬರಿಕರಣ ಕಂಡೇ ಇಲ್ಲ. ಪ್ರತಿ ಮಳೆಗಾಲದಲ್ಲಿ ಈ ಭಾಗದಲ್ಲಿ ವಾಸಿಸುವ ನಿವಾಸಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಈ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ವಾಹನಸವಾರ ಪಾಡು ಕೇಳಲೇಬೇಡಿ. 
ಹಲವು ವರ್ಷಗಳಿಂದ ಈ ಭಾಗದಲ್ಲಿ ವಾಸಿಸುವ ಜನರು ತಮಗೊಂದು ಉತ್ತಮ ರಸ್ತೆಯ ಸಂಪರ್ಕವನ್ನು ಕಲ್ಪಿಸಿಕೊಡಿ ಎಂದು ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳಿಂದ ಹಿಡಿದು ಕ್ಷೇತ್ರದ ಶಾಸಕರುಗಳ ತನಕ ತಮ್ಮ ಮನವಿಯನ್ನ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಈ ಭಾಗದ ಜನರ ಬಹುದಿನದ ಬೇಡಿಕೆ ಮಾತ್ರ ಇದುವರೆಗೂ ಈಡೇರಲೇ ಇಲ್ಲ.

ತಮ್ಮ ಕೇರಿಗೆ ಯೋಗ್ಯವಾದ ರಸ್ತೆಯ ಸಂಪರ್ಕವನ್ನು ಕಲ್ಪಿಸಿಕೊಡಿ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಕೇಳಿದರೆ ಅವರು ಉಡಾಫೆಯ ಉತ್ತರವನ್ನು ನೀಡುತ್ತಿದ್ದಾರೆ ಎಂಬ ಆರೋಪವನ್ನು ಈ ಕೇರಿಯಲ್ಲಿ ವಾಸಿಸುವ ಜನರು ಮಾಡುತ್ತಿದ್ದಾರೆ. ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿಲ್ಲ, ನಿಮಗೆ ಮೂಲಭೂತ ಸೌಲಭ್ಯ ಹೇಗೆ ಕಲ್ಪಿಸಬೇಕು. ನೋಡೋಣ ಮುಂದೆ ಯಾವುದಾದರೂ ಅನುದಾನ ಬಂದರೆ ಮಾಡೋಣ ಈಗ ಈ ಸುಂದರ ರಸ್ತೆಯಲ್ಲಿ ಸಂಚರಿಸಿ ಎಂದು ದುರಾಂಕಾರದ ಉತ್ತರವನ್ನು ನೀಡಿದ್ದಾರೆ ಎಂದು ಆ ಭಾಗದ ಕೇರಿಯ ಜನರು ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಹಂಚಿಕೊಂಡಿದ್ದಾರೆ.

ಸಾಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರು ಸಾಧ್ಯವಾದರೆ ಒಮ್ಮೆ ತಾವು ತ್ಯಾಗರ್ತಿ ಗ್ರಾಮದ ಮುಕುಪ್ಪಿ ಸರ್ಕಲ್ ನಿಂದ ಮೂಲೆಕೇರಿಯವರೆಗೆ ಇರುವ ಸುಂದರವಾದ ರಸ್ತೆಯಲ್ಲಿ ನಡಿಗೆಯ ಮೂಲಕ ಬಂದು ನಮ್ಮಗಳ ಸಮಸ್ಯೆಯನ್ನು ಆಲಿಸುವಿರಾ? ಎಂದು ಆ ಭಾಗದ ಕೇರಿಯ ಜನರು ಕೇಳುತ್ತಿದ್ದಾರೆ.
ಮತ ನೀಡಲಿ, ನೀಡದೆ ಇರಲಿ. ಜನಸಾಮಾನ್ಯರಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವುದು ಚುನಾಯಿತ ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ. ಸಮಸ್ಯೆಯನ್ನು ಹೇಳಿಕೊಂಡು ಬಂದ ಜನರಿಗೆ ಸಮಾಧಾನದ ಉತ್ತರವನ್ನು ನೀಡುವುದು ಒಬ್ಬ ಜವಾಬ್ದಾರಿಯುತ್ತಾ ಜನಪ್ರತಿನಿಧಿಯ ಲಕ್ಷಣ. ಆದರೆ ಸಮಸ್ಯೆಯನ್ನು ಹೇಳಿಕೊಂಡು ಬಂದ ಜನರಿಗೆ ಉಡಾಫೆ ಉತ್ತರ ನೀಡುವುದು ಅವರ ಸ್ಥಾನಮಾನಕ್ಕೆ ಶೋಭೆ ತರುವಂತದ್ದಲ್ಲ. ದುರಹಂಕಾರದಲ್ಲಿ ಮೆರೆದ ಅದೆಷ್ಟೋ ಜನಪ್ರತಿನಿಧಿಗಳು ಹೆಸರಿಲ್ಲದಂತೆ ಮೂಲೆ ಸೇರಿದ್ದಾರೆ. ನಮ್ಮ ಕೆಲಸ ಕಾರ್ಯಗಳು ಹೊಸ ಇತಿಹಾಸ ನಿರ್ಮಾಣ ಮಾಡುವಂತಿರಬೇಕು. ಈ ಭೂಮಿ ಮೇಲೆ ಹೊಸ ಇತಿಹಾಸವನ್ನ ನಿರ್ಮಿಸುವಂತಿರಬೇಕು. ಅದು ಬಿಟ್ಟು ಮತ ನೀಡಿದ ಮತದಾರರಿಗೆ ಅವಮಾನ ಮಾಡುವಂತಿರಬಾರದು ಅಲ್ಲವೇ?

ಸಾಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರು ತ್ಯಾಗರ್ತಿ ಗ್ರಾಮದ ಮೂಲೆ ಕೇರಿಯಲ್ಲಿ ವಾಸಿಸುವ ಜನರ ಸಮಸ್ಯೆಯನ್ನ ಆಲಿಸುವಂತಾಗಲಿ ಅವರ ಬಹುದಿನದ ಬೇಡಿಕೆಯನ್ನು ಈಡೇರಿಸಲಿ ಎಂಬುವುದೇ ನಮ್ಮ ಮಾಧ್ಯಮದ ಆಶಯವಾಗಿದೆ.

Post a Comment

0 Comments