ಮಂದಾರ ನ್ಯೂಸ್, ಹರಿಹರ: ಹರಿಹರ ತಾಲೂಕು ರಾಜನಹಳ್ಳಿ ಗ್ರಾಮದಲ್ಲಿರುವ ದೇವಸ್ಥಾನಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ.
ಕಳೆದ ಎರಡು ತಿಂಗಳ ಹಿಂದೆ ಗ್ರಾಮದ ಹೃದಯ ಭಾಗದಲ್ಲಿರುವ ಚಂದ್ರಗುತ್ತಿ ಅಮ್ಮನವರ ದೇವಸ್ಥಾನದ ಹುಂಡಿ ಕಳ್ಳತನವಾಯಿತು.
ದೇವಸ್ಥಾನದ ಹುಂಡಿಯಲ್ಲಿ ಸರಿಸುಮಾರು ನಾಲ್ಕರಿಂದ ಐದು ಲಕ್ಷ ರೂಪಾಯಿ ಭಕ್ತರ ಕಾಣಿಕೆ ಹಣವಿತ್ತು. ಆದರೆ ಕಳ್ಳರು ತಡರಾತ್ರಿ ದೇವಸ್ಥಾನದ ಬೀಗವನ್ನು ಹೊಡೆದು ಹುಂಡಿಯನ್ನ ಹೊತ್ತೊಯ್ದಿದ್ದರು.
ಈ ಕಳ್ಳತನದ ಆರೋಪಿಯನ್ನ ಪತ್ತೆ ಹಚ್ಚಿ ಶ್ರೀ ಕೃಷ್ಣ ಜನ್ಮಸ್ಥಾನಕ್ಕೆ ಕಳುಹಿಸಿ ಇನ್ನು ತಿಂಗಳು ಕಳೆದಿಲ್ಲ ಆಗಲೇ ಗ್ರಾಮದ ಹೃದಯ ಭಾಗದಲ್ಲಿರುವ ಚಂದ್ರಗುತ್ತಿ ಅಮ್ಮನವರ ದೇವಸ್ಥಾನದ ಪಕ್ಕದ ಬೀರಪ್ಪ ದೇವಸ್ಥಾನವನ್ನು ಕಳ್ಳರು ಕಳ್ಳತನ ಮಾಡಿದ್ದು ದೇವರನ್ನೇ ಹೊತ್ತೊಯ್ದಿದ್ದಾರೆ.
ಜನವಸತಿ ಪ್ರದೇಶದ ಮಧ್ಯದಲ್ಲಿರುವ ದೇವಸ್ಥಾನದ ದೇವರುಗಳನ್ನೇ ಕಳ್ಳರು ಬಿಡುತ್ತಿಲ್ಲ. ಭಕ್ತರನ್ನು ರಕ್ಷಣೆ ಮಾಡಬೇಕಾದ ದೇವರುಗಳಿಗೆ ಈಗ ರಕ್ಷಣೆ ಬೇಕಾಗಿದೆ. ಊರಿನ ಗ್ರಾಮಸ್ಥರು ದೇವರುಗಳ ರಕ್ಷಣೆಗೆ ಹಗಲಿರುಳು ಕಾಯಬೇಕಾದ ಪರಿಸ್ಥಿತಿ ಬಂದೊದಗಿದೆ.
ಕಳೆದ ಎರಡು ದಿನಗಳ ಹಿಂದೆ ಗ್ರಾಮದ ಬೀರಪ್ಪ ದೇವಸ್ಥಾನ ಕಳ್ಳತನವಾಗಿದ್ದು, ದೇವಸ್ಥಾನದಲ್ಲಿದ್ದ ಎಲ್ಲಾ ಬೆಳ್ಳಿ ಆಭರಣಗಳನ್ನು ಹಾಗೂ ಬೀರಪ್ಪ ದೇವರನ್ನು ಕಳ್ಳರು ಕದ್ದುಯ್ದಿದ್ದಾರೆ. ಈಗಾಗಲೇ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸ್ ಇಲಾಖೆಯವರು ತನಿಖೆಯನ್ನು ಕೈಗೊಂಡಿದ್ದಾರೆ.
ಅದೇನೋ ಗೊತ್ತಿಲ್ಲ .ಕಳ್ಳರಿಗೆ ರಾಜನಹಳ್ಳಿ ಗ್ರಾಮದ ದೇವರುಗಳ ಮೇಲೆ ಕಣ್ಣು ಬಿದ್ದಿದೆ .ದೇವಸ್ಥಾನದ ಹುಂಡಿ ಹಣವಿರಲಿ, ದೇವರನ್ನೇ ಕದ್ದೊಯ್ಯುತ್ತಿದ್ದಾರೆ. ಕೂಡಲೇ ಪೊಲೀಸ್ ಇಲಾಖೆಯವರು ಕಳ್ಳರನ್ನು ಪತ್ತೆ ಹಚ್ಚುವುದರ ಜೊತೆಗೆ ಗ್ರಾಮಕ್ಕೆ ಹೆಚ್ಚಿನ ಬೀಟ್ ಪೊಲೀಸ್ ನೇಮಿಸಬೇಕಾಗಿದೆ.
ಗ್ರಾಮದಲ್ಲಿ ನಡೆಯುತ್ತಿರುವ ಕಳ್ಳತನಕ್ಕೆ ಬಿಟ್ ಪೊಲೀಸ್ ರವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇನ್ನು ಮುಂದಾದರೂ ಗ್ರಾಮಾಂತರ ಪೊಲೀಸ್ ಇಲಾಖೆಯವರು ಎಚ್ಚೆತ್ತುಕೊಂಡು ಗ್ರಾಮದ ಬೀಟ್ ಪೊಲೀಸ್ ಇವರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡುವ ಮೂಲಕ ಗ್ರಾಮದ ದೇವಸ್ಥಾನಗಳ ರಕ್ಷಣೆಗೆ ನಿಲ್ಲಬೇಕಾಗಿದೆ.
0 Comments