ಮಂದಾರ ನ್ಯೂಸ್, ಹರಿಹರ: ತಾಲೂಕಿನ ಜನತೆಯ ಹಲವು ವರ್ಷದ ಬೇಡಿಕೆಯಾದ ಹಳೆ ಪಿ ಬಿ ಲೋಕೋಪಯೋಗಿ ಇಲಾಖೆ ಮುಂಭಾಗದಿಂದ ರಾಘವೇಂದ್ರ ಸ್ವಾಮಿ ಮಠದವರೆಗಿನ ರಸ್ತೆ ಕಾಮಗಾರಿಗೆ ಶುಕ್ರವಾರ ಮುಕ್ತಿ ಸಿಗುವ ಲಕ್ಷಣ ಕಾಣುತ್ತಿದೆ.
ಕಳೆದ ಎರಡು ದಿನಗಳ ಹಿಂದೆ ಹರಿಹರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆ ಡಿ ಪಿ ಸಭೆಯಲ್ಲಿ ಹರಿಹರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಬಿಪಿ ಹರೀಶ್ ಅವರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಇನ್ನೂ ಒಂದು ವಾರದೊಳಗೆ ಹಳೆ ಪಿಬಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು.
ರಾಜಕೀಯ ಪ್ರತಿಷ್ಠೆಗಾಗಿ ಈ ರಸ್ತೆ ಕಾಮಗಾರಿ ಆರಂಭವಾಗದೇ ವಿಳಂಬವಾಗುತ್ತಲೇ ಇತ್ತು. ಕಳೆದ ಸಾರಿ ಅಂದಿನ ಶಾಸಕರಾದ ಎಸ್ ರಾಮಪ್ಪನವರ ಅವಧಿಯಲ್ಲಿ ಈ ರಸ್ತೆಗೆ ಮುಕ್ತಿ ಸಿಗಬೇಕಾಗಿತ್ತು. ಆದರೆ ರಾಜಕೀಯ ಕಾರಣದಿಂದ ಕಾಮಗಾರಿ ನಡೆಯಲಿಲ್ಲ.
ದುರಸ್ತಿಗೊಂಡ ಈ ರಸ್ತೆ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ಜಯ ಕರ್ನಾಟಕ ಸಂಘಟನೆ ಸೇರಿದಂತೆ ಹಲವು ಸಂಘಟನೆಯ ಕಾರ್ಯಕರ್ತರು ನಿರಂತರವಾದ ಹೋರಾಟವನ್ನು ಮಾಡುತ್ತಲೇ ಬಂದಿದ್ದರು. ಅದರಲ್ಲಿಯೂ ವಿಶೇಷವಾಗಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಕಳೆದ ನಾಲ್ಕು ವರ್ಷದಿಂದ ಈ ರಸ್ತೆ ಕಾಮಗಾರಿಗಾಗಿ ಹಲವು ರೀತಿಯ ಹೋರಾಟಗಳನ್ನ ನಿರಂತರವಾಗಿ ಮಾಡಿದ್ದರು. ಅವರ ಹೋರಾಟಕ್ಕೆ ಪ್ರತಿಫಲ ಸಿಗುವ ಕಾಲ ಶಾಸಕರಾದ ಬಿಪಿ ಹರೀಶ್ ಅವರ ಅವಧಿಯಲ್ಲಿ ಕೂಡಿ ಬಂದಿದೆ ಎಂದರೆ ತಪ್ಪಾಗಲಾರದು.
ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿಪಿ ಹರೀಶ್ ಅವರು ಈ ರಸ್ತೆ ಕಾಮಗಾರಿಯನ್ನು ತಾವು ಶಾಸಕರಾಗಿ ಆಯ್ಕೆಯಾದ ಆರು ತಿಂಗಳೊಳಗೆ ಮಾಡಿ ತೀರುತ್ತೇನೆ ಎಂಬ ವಾಗ್ದಾನವನ್ನು ಮಾಡಿದ್ದರು. ಅವರ ಮಾತಿನಂತೆ ಶುಕ್ರವಾರ ಅವರು ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.
ಅತ್ಯಂತ ದುರಸ್ತಗೊಂಡ ಈ ರಸ್ತೆಯಲ್ಲಿ ವಾಹನ ಸವಾರರು ಸೇರಿದಂತೆ ಪಾದಚಾರಿಗಳು ಅನೇಕ ರೀತಿಯಲ್ಲಿ ಅನಾಹುತಕ್ಕೆ ಒಳಗಾಗಿದ್ದಾರೆ. ಈ ರಸ್ತೆಯಲ್ಲಿ ಸಾವುಗಳು ಸಹ ಸಂಭವಿಸಿದೆ. ಅಧಿಕಾರಿಗಳ ನಿರ್ಲಕ್ಷ ಹಾಗೂ ಜನಪ್ರತಿನಿಧಿಗಳ ಪ್ರತಿಷ್ಠೆಗಾಗಿ ಈ ರಸ್ತೆ ಕಾಮಗಾರಿ ವಿಳಂಬವಾಗುತ್ತಿತ್ತು. ಇದರಿಂದ ಮನನೊಂದ ಅಲ್ಲಿನ ಕೆಲವು ವರ್ತಕರು ತಮ್ಮ ಸ್ವಂತ ಖರ್ಚಿನಲ್ಲೇ ರಸ್ತೆಗೆ ಮಣ್ಣನ್ನು ಹಾಕಿಸುವ ಪ್ರಯತ್ನವನ್ನ ಮಾಡಿದರು.
ಇಂದು ಹೋರಾಟಗಾರರ ಪ್ರತಿಫಲವಾಗಿ , ಶಾಸಕರ ವಾಗ್ದಾನದಂತೆ ಈ ರಸ್ತೆಗೆ ಮುಕ್ತಿ ಸಿಗುವ ಭಾಗ್ಯ ಒದಗಿ ಬಂದಿರುವುದು ತಾಲೂಕಿನ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಂತಸದ ಸುದ್ದಿಯಾಗಿದೆ.
0 Comments