ಮಂದಾರ ನ್ಯೂಸ್ :1991ರಲ್ಲಿ, ತಮಿಳುನಾಡಿಗೆ 205 ಟಿಎಂಸಿ ಅಡಿ ನೀರು ಬಿಡುವಂತೆ ಕಾವೇರಿ ನ್ಯಾಯಾಧಿಕರಣವು ಮಧ್ಯಂತರ-ತೀರ್ಪನ್ನು ನೀಡಿತು. ಈ ತೀರ್ಪಿಗೆ ವಿರುದ್ಧವಾಗಿಯೆ ಮುಖ್ಯಮಂತ್ರಿ ಬಂಗಾರಪ್ಪನವರು ಸುಗ್ರೀವಾಜ್ಞೆ ಹೊರಡಿಸಿ ಕಾವೇರಿ ಕೊಳ್ಳದ ಅಣೆಕಟ್ಟುಗಳಲ್ಲಿನ ನೀರನ್ನು ರಕ್ಷಿಸಿ, ನಮ್ಮ ರಾಜ್ಯದ ರೈತರಿಗೇ ಉಳಿಸಿಕೊಳ್ಳುವಂತೆ ಅಣೆಕಟ್ಟುಗಳ ಉಸ್ತುವಾರಿಯ ಅಧಿಕಾರಿಗಳಿಗೆ ಆದೇಶಿಸಿದರು. ಇದರ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೋದರೂ ಬಂಗಾರಪ್ಪನವರು ಜಗ್ಗಲಿಲ್ಲ. ನಂತರ ಕೇಂದ್ರ ಸರ್ಕಾರವು ಕಾವೇರಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪನ್ನು ಗೆಜೆಟ್ ನಲ್ಲಿ ಹೊರಡಿಸಿತು. ಇದನ್ನು ಧಿಕ್ಕರಿಸಿ ಬಂಗಾರಪ್ಪನವರ ಸರ್ಕಾರವೆ 1991ನೇ ಇಸವಿ ಡಿಸೆಂಬರ್ 13ರ "ಕರ್ನಾಟಕ ಬಂದ್"ಗೆ ಬಾಹ್ಯವಾಗಿಯೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತು. ಅಲ್ಲಿಂದ ಎರಡು ವಾರ ಈ ನಮ್ಮ ರಾಜ್ಯದಲ್ಲಿ ಕನ್ನಡಿಗರ ಶಕ್ತಿಪ್ರದರ್ಶನ ಹೇಗಿತ್ತೆಂದರೆ 1,00,000 ತಮಿಳಿಗರು ಬೆಂಗಳೂರು, ಮೈಸೂರು ಮತ್ತಿತರ ಊರುಗಳಿಂದ ತಮಿಳುನಾಡು ಮತ್ತು ಕೇರಳಕ್ಕೆ ಓಡಿಹೋದರು. ದೇಶ-ವಿದೇಶಗಳ ಮಾಧ್ಯಮಗಳಿಂದ ಅಪಾರ ಟೀಕೆ ವ್ಯಕ್ತವಾದರೂ ಆಗಲೂ ಬಂಗಾರಪ್ಪನವರು ಕನ್ನಡಿಗರನ್ನ ಸಮರ್ಥಿಸಿಕೊಂಡರು. ಎಲ್ಲಿಯೂ ಬಿಟ್ಟುಕೊಡಲಿಲ್ಲ !
"ರೈತರ ತಂಟೆಗೆ ಬಂದ್ರೆ ನಿಮ್ಮ ಮನೆ ಬಳಿಯ ಗೂಟ ತೆಗೆದು ಹೊಡಿರಿ. ರೈತರಿಲ್ಲದೆ ಯಾವ ಸರ್ಕಾರವೂ ಇಲ್ಲ" ಎಂದು ಹೇಳುತ್ತಿದ್ದ ಮಹಾವ್ಯಕ್ತಿ ಎಸ್. ಬಂಗಾರಪ್ಪನವರು. ನಾಡಿನ ನೆಲ-ಜಲದ ವಿಚಾರಗಳಲ್ಲಿ ಯಾವ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳದೆ ಇಂದಿನ ನಮ್ಮ ನಾಡಿನ ರಾಜಕಾರಣಿಗಳನ್ನು ನೋಡಿದಾಗ ಬಂಗಾರಪ್ಪನವರು ಎಷ್ಟು ಎತ್ತರದಲ್ಲಿದ್ದರು ಎಂದು ನೆನಪಾಗುತ್ತಿದೆ.
0 Comments