ಭ್ರಷ್ಟಾಚಾರದಲ್ಲಿ ಹೊಸ ಇತಿಹಾಸ ಬರೆದ ಹರಿಹರ.!!

ಮಂದಾರ ನ್ಯೂಸ್, ಹರಿಹರ : ಹೊಯ್ಸಳರ ಕಾಲದ ವಾಸ್ತುಶಿಲೆಯನ್ನು ಹೊಂದಿದ ಹರಿ ಮತ್ತು ಹರ ಒಂದೇ ಶಿಲೆಯಲ್ಲಿ ಎರಡು ಮೂರ್ತಿಗಳಾಗಿ ಸಮಸ್ತ ಭಕ್ತರಲ್ಲಿ ಭಕ್ತಿ ಭಾವನೆ ಮೂಡಿಸಿದ್ದು ಇತಿಹಾಸ.

ಪ್ರಕೃತಿ ಮಡಿಲಲ್ಲಿ ತುಂಗೆ ಮತ್ತು ಭದ್ರೆಯಾಗಿ ಮಧ್ಯ ಕರ್ನಾಟಕದ ಹರಿಹರದಲೇ ಹರಿಯುತ್ತಿರುವುದು ಇತಿಹಾಸ.

ನದಿಯಾಗಿ ಹರಿಯುತ್ತಿರುವ ತುಂಗೆ ಮತ್ತು ಭಧ್ರೆಯರ ಮಧ್ಯದಲ್ಲಿ ಉತ್ತರ ಮತ್ತು ದಕ್ಷಿಣದ ಜನರನ್ನು ಬೆಸೆಯುವ ಕೇಂದ್ರವಾಗಿದ್ದು ಇತಿಹಾಸ.

ಒಂದೇ ನಗರದಲ್ಲಿ ಎರಡೆರಡು ಗ್ರಾಮ ದೇವತೆಗಳು ಹೊಂದಿದ್ದು ಇತಿಹಾಸ.

ಹೀಗೆ ಪ್ರಾಚೀನಕವಾಗಿ ಐತಿಹಾಸಿಕವಾಗಿ ಮತ್ತು ಪೌರಾಣಿಕವಾಗಿ ತನ್ನದೇ ಆದ ಇತಿಹಾಸವನ್ನ ಹೊಂದಿದ ಹರಿಹರ ಆಧುನಿಕವಾಗಿಯೂ ಹೊಸ ಇತಿಹಾಸವನ್ನು ಸೃಷ್ಟಿಸಲು ಹೊರಟಿದ್ದು ಮಾತ್ರ ಅತ್ಯಂತ ಬೇಸರದ ಸಂಗತಿ ಅಲ್ಲವೇ?

ತನ್ನದೇ ಆದ ಇತಿಹಾಸದ ನೆಲೆಯಲ್ಲಿ ರಾಜ್ಯ ಮತ್ತು ದೇಶದ ಗಮನವನ್ನು ಸೆಳೆದ ಹರಿಹರ ಇಂದು ಭ್ರಷ್ಟ ಅಧಿಕಾರಿಗಳ ಮೂಲಕವೂ ಹೊಸ ಇತಿಹಾಸ ಬರೆಯಲು ಹೊರಟಿರುವುದು ಮಾತ್ರ ಅತ್ಯಂತ ವಿಷಾದನೀಯ ಸಂಗತಿ.

ಕರ್ನಾಟಕ ಲೋಕಾಯುಕ್ತಕ್ಕೆ ರಾಜ್ಯ ಉಚ್ಚ ನ್ಯಾಯಾಲಯವು ಮರು ಜೀವ ನೀಡಿದ ಮೇಲೆ ರಾಜ್ಯದಲ್ಲಿ ನಡೆದ ಲೋಕಾಯುಕ್ತ ದಾಳಿಯಲ್ಲಿ ಹರಿಹರ ಹೊಸ ಇತಿಹಾಸವನ್ನು ಬರೆದಿದೆ.

ಕರ್ನಾಟಕ ರಾಜ್ಯದಲ್ಲೇ ತಾಲೂಕು ಕೇಂದ್ರ ಒಂದು ಭ್ರಷ್ಟಾಚಾರದ ಮೂಲಕ ಅತಿ ಹೆಚ್ಚು ಲೋಕಾಯುಕ್ತ ದಾಳಿ ನಡೆದ ತಾಲೂಕು ಎಂಬ ಹೆಗ್ಗಳಿಕೆ ಹರಿಹರದ್ದಾಗಿದೆ.

ಕೇವಲ ಒಂದು ವರ್ಷದ ಅವಧಿಯ ಒಳಗೆ ಸತತ ಆರು ಬಾರಿ ನಗರದ ಪ್ರಮುಖ ಇಲಾಖೆಯ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಈ ಮೂಲಕ ಹರಿಹರದ ಸರ್ಕಾರಿ ಇಲಾಖೆಗಳು ಹೊಸ ಇತಿಹಾಸವನ್ನ ಸೃಷ್ಟಿಸಲು ಹೊರಟಂತೆ ಕಾಣುತ್ತಿದೆ.

ಈಗಾಗಲೇ ರಾಜ್ಯದಲ್ಲಿ ಲೋಕಾಯುಕ್ತ ದಾಳಿಯಿಂದ ಹೊಸ ಇತಿಹಾಸ ಬರೆದ ಹರಿಹರ ಇಡೀ ರಾಜ್ಯಕ್ಕೆ ತನ್ನ ಭ್ರಷ್ಟ ವ್ಯವಸ್ಥೆಯನ್ನು ಅನಾವರಣಗೊಳಿಸಿದೆ ಎಂದರು ತಪ್ಪಾಗಲಾರದು.

ದೇಶದ ಭವಿಷ್ಯ ಶಿಕ್ಷಣದ ವ್ಯವಸ್ಥೆಯ ಮೇಲೆ ನಿಂತಿದೆ. ಶಿಕ್ಷಣದ ವ್ಯವಸ್ಥೆ ಭ್ರಷ್ಟಾಚಾರದಲ್ಲಿ ಮುಳುಗಿದರೆ ಇಡೀ ವ್ಯವಸ್ಥೆಗೆ ಏರುಪೇರಾಗಲಿದೆ. ಅದರಂತೆ ಹರಿಹರವು ಸಹ ಶಿಕ್ಷಣ ಇಲಾಖೆ ಮೇಲೆ ನಡೆದ ಲೋಕಾಯುಕ್ತ ದಾಳಿಯಿಂದ ಇಂದು ಹರಿಹರದ ಇತಿಹಾಸವೇ ಬುಡಮೇಲಾಗಿದೆ.

ಆರಂಭದಲ್ಲಿ ಲೋಕಾಯುಕ್ತರ ದಾಳಿ  ಕ್ಷೇತ್ರ ಶಿಕ್ಷಣಾಧಿಕಾರಿ ಬಿಸಿ ಸಿದ್ದಪ್ಪ ಇವರಿಂದ ಆರಂಭವಾಯಿತು. ನಂತರ ಅಗ್ನಿಶಾಮಕದಳ ಸಿಬ್ಬಂದಿ, ತದನಂತರ ಬೆಸ್ಕಾಂ ಇಲಾಖೆಯ ನೌಕರ, ತದನಂತರ ಸಬ್ ರಿಜಿಸ್ಟರ್ ಕಚೇರಿಯ ಸಿಬ್ಬಂದಿ, ಅದಾದ ಕೆಳ ದಿನದಲ್ಲೇ ನಗರಸಭೆಯ ಇಂಜಿನಿಯರ್, ಇದಾದ ಕೆಲದಿನಗಳಲ್ಲೇ ತಾಲೂಕು ಪಂಚಾಯತಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ. ಹೀಗೆ ಸರ್ಕಾರಿ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸುವ ಮೂಲಕ ಹರಿಹರದ ಭ್ರಷ್ಟ ವ್ಯವಸ್ಥೆಯನ್ನು ಜಗತ್ತಿಗೆ ತೋರಿಸಲು ಹೊರಟಂತೆ ಕಾಣುತ್ತಿದೆ ಸರ್ಕಾರಿ ಇಲಾಖೆಯ ಭ್ರಷ್ಟ ಅಧಿಕಾರಿಗಳು.

ಹರಿಹರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಕಚೇರಿಯ ಭ್ರಷ್ಟ ನೌಕರರಿಂದ ಇಂದು ಹರಿಹರದ ಘನತೆ ಮತ್ತು ಗೌರವಕ್ಕೆ ಎಲ್ಲೋ ಒಂದು ಕಡೆ ಚ್ಯುತಿ ಬಂದಂತೆ ಕಾಣುತ್ತಿದೆ.

ಕ್ಷೇತ್ರದ ಚುನಾಯಿತ ಜನಪ್ರತಿನಿಧಿಗಳು ಆಡಳಿತ ಯಂತ್ರ ಸುಧಾರಣೆ ಮಾಡುವ ನಿಟ್ಟಿನಲ್ಲಿ ತಾಲೂಕಿನ ಪ್ರಮುಖ ಇಲಾಖೆಗಳಿಗೆ ಸೂಕ್ತ ಸಮರ್ಥ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು. ಕೂಡಲೇ ಹರಿಹರದ ಸರ್ಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರ ಸಮಗ್ರವಾದ ಮಾಹಿತಿಯನ್ನು ಪಡೆಯುವ ಮೂಲಕ ಆಡಳಿತ ಯಂತ್ರ ಸುಧಾರಣೆಗೆ ಶಾಸಕರು ಪ್ರಯತ್ನಿಸಬೇಕು. 

ಸರ್ಕಾರಿ ಕಚೇರಿಯ ನೌಕರಿಯಿಂದ ತಾಲೂಕಿಗೆ ಬಂದಿರುವ ಅಪಕೀರ್ತಿಯನ್ನ ದೂರಮಾಡುವ ನಿಟ್ಟಿನಲ್ಲಿ ಶಾಸಕರು ಕೂಡಲೇ ಕಾರ್ಯ ಪ್ರವೃತ್ತರಾಗಬೇಕು ಎಂಬುವುದೇ ನಮ್ಮ ಮಾಧ್ಯಮದ ಆಶಯವಾಗಿದೆ.

Post a Comment

0 Comments