ಮಂದಾರ ನ್ಯೂಸ್, ಹರಿಹರ: ಬೀರೂರು - ಸಮ್ಮಸಗಿ ರಾಜ್ಯ ಹೆದ್ದಾರಿ ,ರಾಘವೇಂದ್ರ ಸ್ವಾಮಿ ಮಠದ ಸಮೀಪ ಹೊಸ ತುಂಗಾಭದ್ರ ಸೇತುವೆಯಿಂದ ಲೋಕೋಪಯೋಗಿ ಇಲಾಖೆಯವರೆಗೂ ಹದಗೆಟ್ಟಿರುವ ರಸ್ತೆ ಕಾಮಗಾರಿಯನ್ನು ನಾಳೆ ಆರಂಭಿಸುವಂತೆ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಪಿ ಹರೀಶ್ ಅವರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಇಂದು ಮಧ್ಯಾಹ್ನ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ತುರ್ತು ಸಭೆ ನಡೆಸಿದ ಶಾಸಕರು. ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿ ದರ್ಗಾ ಮುಂಭಾಗದ ರಸ್ತೆ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು. ಕೆಲವು ಸಂಘಟನೆಯ ಕಾರ್ಯಕರ್ತರು ನನ್ನಿಂದ ರಸ್ತೆ ಕಾಮಗಾರಿಗೆ ಅಡ್ಡಿಯಾಗುತ್ತಿದೆ ಎಂಬ ಮಾತುಗಳನ್ನ ಆಡುತ್ತಿದ್ದಾರೆ. ನಿಜ ಹೇಳಬೇಕು ಎಂದರೆ ಇದು ಅಧಿಕಾರಿಗಳಿಂದ ಆಗುತ್ತಿರುವ ತೊಂದರೆ ಆಗಿದೆ. ಅಧಿಕಾರಿಗಳು ಸಮಗ್ರವಾದ ಮಾಹಿತಿಯನ್ನು ಪಡೆದು ವಾಸ್ತವಂಶಕ್ಕೆ ಅನುಗುಣವಾಗಿ ಕಾಮಗಾರಿಯನ್ನ ಆರಂಭಿಸಬೇಕಿತ್ತು, ಆದರೆ ಇವರ ಬೇಜವಾಬ್ದಾರಿತನದಿಂದ ಮತ್ತು ಕೆಲವು ತಾಂತ್ರಿಕ ದೋಷದಿಂದ ವಿಳಂಬವಾಗಿದೆ ವಿನ ನನ್ನಿಂದವಲ್ಲ.
ಕೆಲವರು ದರ್ಗಾವನ್ನು ಹೊಡೆಯಬೇಕು ,ರಸ್ತೆಯನ್ನು ಮಾಡಬೇಕು ಅದಕ್ಕಾಗಿ ಶಾಶಕರು ರಸ್ತೆ ಕಾಮಗಾರಿ ಆರಂಭಿಸಲು ಬಿಡುತ್ತಿಲ್ಲ ಎಂಬ ಮಾತುಗಳನ್ನು ಆಡಿದ್ದಾರೆ. ದರ್ಗಾ ಕಟ್ಟಡಕ್ಕೆ ಹಾನಿ ಉಂಟು ಮಾಡಬೇಕು ಎಂಬ ಉದ್ದೇಶವನ್ನು ನಾನು ಹೊಂದಿಲ್ಲ, ಹಾಗೆನಾದರೂ ನನ್ನ ಉದ್ದೇಶ ಇದ್ದಿದ್ದರೆ ನಾನು ಅಧಿಕಾರಿಗಳಿಗೆ ರಸ್ತೆ ಕಾಮಗಾರಿ ಆರಂಭಿಸಿ ಎಂದು ಹೇಳುತ್ತಿರಲಿಲ್ಲ.
ತಾಲೂಕು ದಂಡಾಧಿಕಾರಿಗಳು, ಲೋಕೋಪಯೋಗಿ ಇಲಾಖೆ, ನಗರಸಭೆ ಹಾಗೂ ಭೂ ದಾಖಲೆಯ ಇಲಾಖೆಯವರು ಜಂಟಿ ಸರ್ವೆಯನ್ನು ನಡೆಸಿ ಜಾಗವನ್ನ ಮಾರ್ಕ್ ಮಾಡಿ ರಸ್ತೆ ಕಾಮಗಾರಿ ಆರಂಭಿಸಿ ಎಂದು ಸಲಹೆ ನೀಡಿದ್ದೆ. ಆದರೆ ಈ ವಿಚಾರವನ್ನೇ ಮುಂದಿಟ್ಟುಕೊಂಡು ಕೆಲವರು ದರ್ಗಾ ಕಟ್ಟಡಕ್ಕೆ ಹಾನಿ ಉಂಟು ಮಾಡುವ ಉದ್ದೇಶದಿಂದ ರಸ್ತೆ ಕಾಮಗಾರಿ ಆರಂಭಿಸುತ್ತಿಲ್ಲ ಎಂಬ ಮಾತುಗಳನ್ನ ಆಡುತ್ತಿದ್ದಾರೆ.
ಒಂದು ಮಾತು ನೆನಪಿಟ್ಟುಕೊಳ್ಳಿ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಕೆಇಬಿ ಹತ್ತಿರ ಇರುವ ಗಣೇಶನ ದೇವಸ್ಥಾನ ಮತ್ತು ರಾಘವೇಂದ್ರ ಸ್ವಾಮಿ ಮಠಕ್ಕೆ ಹಾನಿ ಉಂಟುಮಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರು. ರಸ್ತೆ ಅಭಿವೃದ್ಧಿ ಕಾಮಗಾರಿ ಆಗಬೇಕು ಎಂಬ ಉದ್ದೇಶದಿಂದ ಒಂದು ಸಮುದಾಯದ ಜನ ಎಲ್ಲವನ್ನು ಸಹಿಸಿಕೊಂಡು ಸಹಕಾರವನ್ನು ನೀಡಿದ್ದರು. ಅದೇ ರೀತಿ ಈಗ ಸಹ ದರ್ಗಾ ಮುಂಬಾಗದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಬೇಕು, ವಾಹನ ಸವಾರರು ಮತ್ತು ಪಾದಾಚಾರಿಗಳಿಗೆ ಅನುಕೂಲವಾಗಬೇಕು ಎಂಬ ಉದ್ದೇಶವನ್ನ ಹೊಂದಿ ಅವರು ಸಹ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಹಕಾರ ನೀಡಲಿ ಎಂಬ ಉದ್ದೇಶವಿತ್ತು .ಆದರೆ ಇದನ್ನೇ ಅಪಾರ್ಥವಾಗಿ ಮಾಡಿಕೊಂಡು ಕೆಲವರು ಶಾಸಕರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದರು.
ಈಗಲೂ ನಾನು ಹೇಳುತ್ತಿದ್ದೇನೆ ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಿ, ಈ ಕೆಲಸ ನಾಳೆಯೇ ಆರಂಭವಾಗಬೇಕು. ಹೊಸ ಸೇತುವೆಗೆ ಹೊಂದಿಕೊಳ್ಳುವ ರೀತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಮಾಡಿ ಮುಗಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮತ್ತು ಸರ್ವೇ ಇಲಾಖೆಯ ಅಧಿಕಾರಿಗಳಿಗೆ ದಂಡಾಧಿಕಾರಿಗಳ ಸಮ್ಮುಖದಲ್ಲಿ ಖಡಕ್ ಸೂಚನೆಯನ್ನು ಶಾಸಕರು ಇಂದು ನಡೆದ ತುರ್ತು ಸಭೆಯಲ್ಲಿ ನೀಡಿದರು.
ಶಾಸಕರು ಇಂದು ನೀಡಿರುವ ಸೂಚನೆಯಿಂದ ತಾಲೂಕಿನ ಜನರಿಗೆ ಒಂದು ಸ್ಪಷ್ಟವಾದ ಸಂದೇಶ ರವಾನೆಯಾಗಿದೆ. ಅಭಿವೃದ್ಧಿ ಕಾಮಗಾರಿಯಲ್ಲಿ ಶಾಸಕರು ಜನಸಾಮಾನ್ಯರ ಜೊತೆ ಕೈಜೋಡಿಸಿದ್ದಾರೆ. ಅಭಿವೃದ್ಧಿ ಕಾಮಗಾರಿಯಾಗಬೇಕು ಎಂಬುದು ಶಾಸಕರ ಅಭಿಲಾಷೆಯು ಆಗಿದೆ. ಅದರಂತೆ ಇಂದು ಶಾಸಕರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನೀಡಿರುವ ಸಂದೇಶವೇ ಸಾಕ್ಷಿಯಾಗಿದೆ.
ಸರ್ಕಾರಿ ಇಲಾಖೆಯ ಅಧಿಕಾರಿಗಳ ವಿಳಂಬ ಮತ್ತು ಬೇಜವಾಬ್ದಾರಿತನದಿಂದ ಕ್ಷೇತ್ರದ ಶಾಸಕರ ಜನಪ್ರಿಯತೆಗೆ ಧಕ್ಕೆ ತರುವಂತ ಕೆಲಸ ನಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಶಾಸಕರು ಇಂದು ನೀಡಿರುವ ಸೂಚನೆಯಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಾಳೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಬೇಕು ಅಲ್ಲವೇ ?ಶಾಸಕರು ನೀಡಿರುವ ಸೂಚನೆಯನ್ನು ಅಧಿಕಾರಿಗಳು ಎಷ್ಟರಮಟ್ಟಿಗೆ ಪಾಲನೆ ಮಾಡುತ್ತಾರೆ ಎಂಬುದು ನಾಳೆಯವರೆಗೂ ಕಾದು ನೋಡೋಣ..........
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಗುರು ಬಸವರಾಜ್, ಲೋಕೋಪಯೋಗಿ ಇಲಾಖೆಯ ಶಿವಮೂರ್ತಿ, ನಗರಸಭೆಯ ಆಯುಕ್ತರಾದ ಬಸವರಾಜ್ ಐಗೂರ್. ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
0 Comments