ಮರಳು ದಂಧೆ ಕೋರರಿಂದ ಪತ್ರಕರ್ತರ ಖರೀದಿಗೆ ಯತ್ನ.!?


  
 

ಮಂದಾರ ನ್ಯೂಸ್ : ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಮಾಧ್ಯಮ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಪತ್ರಕರ್ತರು ತಮ್ಮ ಜವಾಬ್ದಾರಿಯನ್ನ ಮರೆಯಬಾರದು. ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ನಿಷ್ಪಕ್ಷಪಾತವಾಗಿ ಸುದ್ದಿಯನ್ನ ಬಿತ್ತರಿಸಬೇಕು. ನೈಜ ಹಾಗೂ ವಾಸ್ತವಂಶದ ಸುದ್ದಿಯನ್ನ ಬಿತ್ತರಿಸಬೇಕಾದರೆ ಅನೇಕ ತೊಂದರೆಗಳನ್ನು ಪತ್ರಕರ್ತರು ಎದುರಿಸಬೇಕಾಗುತ್ತದೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮಾಧ್ಯಮದ ಜವಾಬ್ದಾರಿಯನ್ನ ಪ್ರಾಮಾಣಿಕವಾಗಿ ನಿಭಾಯಿಸುವ ಮೂಲಕ ಸಮಾಜದ ಅಂಕುಡೊಂಕನ್ನ ತಿದ್ದುವ ಪ್ರಯತ್ನವನ್ನು ಪತ್ರಕರ್ತರು ಮಾಡಬೇಕು. 

ಇತ್ತೀಚಿನ ದಿನದಲ್ಲಿ ಅಕ್ರಮ ದಂಧೆ ಕೋರರು ಪತ್ರಕರ್ತರನ್ನು ವಿವಿಧ ರೀತಿಯಲ್ಲಿ ಟಾರ್ಗೆಟ್ ಮಾಡುತ್ತಿದ್ದಾರೆ. ಯಾವುದಾದರೂ ಒಂದು ರೂಪದಲ್ಲಿ ಪತ್ರಕರ್ತರನ್ನು ತಮ್ಮ ಬುಟ್ಟಿಗೆ ಹಾಕಿಸಿಕೊಳ್ಳುವ ಪ್ರಯತ್ನವನ್ನು ತೆರೆಮರೆಯಲ್ಲಿ ಮಾಡುತ್ತಲೇ ಇರುತ್ತಾರೆ. ಈ ವಿಚಾರದಲ್ಲಿ ಅಧಿಕಾರಿಗಳ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಏಕೆ ಈ ವಿಚಾರವನ್ನು ನಿಮ್ಮ ಮುಂದೆ ಬರಹದ ರೂಪದಲ್ಲಿ ಮುಂದಿಡುತ್ತಿದ್ದೇನೆ ಎಂಬ ಗೊಂದಲವೇ? ಅಪಾರ ಪ್ರಕೃತಿಯ ಸೌಂದರ್ಯವನ್ನು ಹೊಂದಿರುವ ಶರಾವತಿ ನದಿ ನೀರಿನ ಒಡಲಿನಲ್ಲಿರುವ ಹೊಸನಗರ ತಾಲೂಕಿನ ಅಕ್ರಮ ಮರಳು ದಂಧೆಯ ಕರಾಳ ಇತಿಹಾಸವನ್ನು ನಿಮ್ಮ ಮುಂದೆ ಇರುವ ಪ್ರಯತ್ನವನ್ನ ಮಾಡುತ್ತಿದ್ದೇನೆ. ಅಕ್ರಮ ಮರಳು ದಂಧೆಯಲ್ಲಿ ತೊಡಗಿಕೊಂಡ ಖದೀಮರು ಪತ್ರಕರ್ತರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನವನ್ನು ತೆರೆಮರೆಯಲ್ಲಿ ಮಾಡುತ್ತಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಹೊಸನಗರ ತಾಲೂಕಿನಾದ್ಯಂತ ಅಕ್ರಮ ಮರಳು ಸಾಗಾಟವನ್ನು ಬುಡ ಸಮೇತ ಕಿತ್ತು ಹಾಕಬೇಕೆಂಬ ಸಂಕಲ್ಪದಲ್ಲಿರುವ ಜನಸಂಗ್ರಾಮ ಪರಿಷತ್ ನ ಗಿರೀಶ್ ಆಚಾರ್ ಹೋರಾಟಕ್ಕೆ ತಾಲೂಕಿನ ನೈಜ ಪತ್ರಕರ್ತರು ಬೆಂಬಲವಾಗಿ ನಿಂತಿದ್ದಾರೆ.
ಇದರಿಂದ ತಾಲೂಕಿನಾದ್ಯಂತ ಅಕ್ರಮ ಮರಳು ಸಾಗಾಟ ಕಡಿಮೆಯಾಗಿದ್ದು ಮರಳು ದಂಧೆಕೋರರ ನಿದ್ದೆಗೆಡಿಸಿದೆ ಈ ಹಿನ್ನಲೆಯಲ್ಲಿ ಹೊಸನಗರದಲ್ಲಿ ಗುರುವಾರ ಮರಳು ದಂಧೆಕೋರರ ರಹಸ್ಯ ಸಭೆ ನಡೆದಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಈ ರಹಸ್ಯ ಸಭೆಯಲ್ಲಿ ಹೊಸನಗರ ತಾಲೂಕಿನ ಕೆಲವು ಪತ್ರಕರ್ತರುಗಳಿಗೆ ಕಪ್ಪ ಕಾಣಿಕೆಯನ್ನು ಮುಟ್ಟಿಸೋಣ ಗಿರೀಶ್ ಆಚಾರ್ ಒಬ್ಬನೇ ಹೋರಾಟ ಮಾಡಿಕೊಂಡಿರಲಿ ಎಂಬ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಸರ್ಕಾರದ ನಾಲ್ಕನೇ ಅಂಗವನ್ನೆ ಖರೀದಿಗೆ ಹೊರಟಿದ್ದಾರೆ ಎಂದರೆ ಮರಳು ದಂಧೆಕೋರರ ಅಕ್ರಮಗಳ ಬಾಹುಳ್ಯ ಎಷ್ಟಿರಬಹುದು....

ಈಗಾಗಲೇ ಖಡಕ್ ಪೊಲೀಸ್ ಅಧಿಕಾರಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಮಾರ್ಗದರ್ಶನದಲ್ಲಿ ಹೊಸನಗರ ಪಿಎಸ್‌ಐ ಶಿವಾನಂದ್ ಕೆ ಹಾಗೂ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಮರಳು ದಂಧೆಗೆ ಕಡಿವಾಣ ಹಾಕಿದ್ದು ಹೊಸನಗರ ಹಾಗೂ ರಿಪ್ಪನ್‌ಪೇಟೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ.

ಒಟ್ಟಾರೆಯಾಗಿ ಅಕ್ರಮಗಳನ್ನು ಪ್ರಶ್ನಿಸುವ ಪತ್ರಕರ್ತರನ್ನು ಆಮಿಷಕ್ಕೆ ಒಳಪಡಿಸಿ ಸಾಮಾಜಿಕ ಹೋರಾಟಗಾರ ಗಿರೀಶ್ ಆಚಾರ್ ರಂತವರನ್ನು ಮಟ್ಟಹಾಕಬೇಕೆಂಬ ಮರಳು ದಂಧೆಕೋರರ ಪ್ರಯತ್ನ ಫಲಿಸುತ್ತದೆಯೋ‌ ಇಲ್ಲವೋ ಕಾದು ನೀಡಬೇಕಾಗಿದೆ.

Post a Comment

0 Comments