ಜಂಟಿ ಸರ್ವೆ ನಡೆಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಿ: ಕರವೇ ಆಗ್ರಹ.

ಮಂದಾರ ನ್ಯೂಸ್ ,ಹರಿಹರ : ಕಳೆದ ಏಳು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿಯ ರಾಘವೇಂದ್ರ ಸ್ವಾಮಿ ಮಠದಿಂದ ಲೋಕೋಪಯೋಗಿ ಇಲಾಖೆ ಕಚೇರಿ ವರೆಗೆ ಹದಗೆಟ್ಟಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುವ ಮೊದಲು ಜಂಟಿ ಸರ್ವೆಯನ್ನು ನಡೆಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಆಗ್ರಹಿಸಿದರು.

ಇಂದು ನಗರಸಭೆಯ ಪೌರಾಯುಕ್ತರು ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಹೋರಾಟವನ್ನು ಚುರುಕುಗೊಳಿಸಿದ್ದಾರೆ.

ಕೂಡಲೆ ಮಾನ್ಯ ನಗರಸಭೆಯ ಪೌರಾಯುಕ್ತರು ತಾಲೂಕು ದಂಡಾಧಿಕಾರಿಗಳು ಭೂ ದಾಖಲೆಯ ಇಲಾಖೆಯ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ರಾಘವೇಂದ್ರ ಸ್ವಾಮಿ ಮಠದಿಂದ ಲೋಕೋಪಯೋಗಿ ಇಲಾಖೆಯ ಮುಂಭಾಗದ ರಸ್ತೆಯನ್ನು ಜಂಟಿ ಸರ್ವೆ ನಡೆಸಿ ರಸ್ತೆಯನ್ನು ಅಳತೆ ಮಾಡಿ ನಂತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂಬ ಒಂದೇ ಒಂದು ಕಾರಣವನ್ನು ಮುಂದಿಟ್ಟುಕೊಂಡು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬಾರದು. ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಜಂಟಿ ಸರ್ವೆಯನ್ನು ನಡೆಸಿ ರಸ್ತೆ ಅಭಿವೃದ್ಧಿಪಡಿಸಿದರೆ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ನಡೆಯಲಿ. ಅದು ಬಿಟ್ಟು ಜನಸಾಮಾನ್ಯರ ತೊಂದರೆ ಎಂಬ ವಿಚಾರ ಮುಂದಿಟ್ಟು ರಸ್ತೆಯನ್ನ ಒತ್ತುವರಿ ಮಾಡಿಕೊಳ್ಳುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನ ಸಂಘಟನೆಯ ಕಾರ್ಯಕರ್ತರು ತಮ್ಮ ಲಿಖಿತ ರೂಪದ ಮನವಿ ಪತ್ರದ ಮೂಲಕ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಸಲ್ಲಿಸಿದ್ದಾರೆ.

ಏನೇ ಹೇಳಿ ರಸ್ತೆ ಅಭಿವೃದ್ಧಿ ಕಾಮಗಾರಿ ಎಂಬುದು ರಾಜಕೀಯದ ಪ್ರತಿಷ್ಠೆಯ ಕೇಂದ್ರಬಿಂದುವಾಗಿದೆ. ರಸ್ತೆಯಲ್ಲಿ ರಾಜಕೀಯದ ಕೆಸರಾಟ ನಡೆಯುತ್ತಿದೆ. ಸದ್ಯ ತಾಲೂಕಿನ ಮತದಾರರ ಗಮನ ಸೆಳೆಯಲು ಬೇರೆ ಯಾವ ವಿಚಾರವೂ ಇಲ್ಲದ ಕಾರಣ ಈ ರಸ್ತೆ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲು ಹೊರಟಂತೆ ಕಾಣುತ್ತಿದೆ. ಸಂಘಟನೆಗಳ ಹೋರಾಟವನ್ನು ದಾರಿ ತಪ್ಪಿಸುವ ನಿಟ್ಟಿನಲ್ಲಿ ಕೆಲವರು ಅನಾವಶ್ಯಕವಾಗಿ ಪ್ರವೇಶ ಮಾಡುತ್ತಿದ್ದಾರೆ. ಇದರಿಂದ ನಿಜವಾದ ಹೋರಾಟ ಮತ್ತು ಹೋರಾಟಗಾರರಿಗೆ ಅವಮಾನ ಮಾಡಿದಂತೆ ಅಲ್ಲವೇ? ಹೋರಾಟಗಾರರಿಗೆ ರಾಜಕೀಯ ಪಕ್ಷದ ಬೆಂಬಲದ ಅವಶ್ಯಕತೆ ಇರುವುದಿಲ್ಲ, ಮೇಲಾಗಿ ಪ್ರಜ್ಞಾವಂತ ನಾಗರಿಕರು ಮತ್ತು ಜವಾಬ್ದಾರಿಯುತ ಸಂಘಟನೆಗಳ ಬೆಂಬಲದ ಅವಶ್ಯಕತೆ ಇರುತ್ತದೆ. ಹೋರಾಟದಲ್ಲಿ ರಾಜಕೀಯ ಪ್ರವೇಶ ಮಾಡಿದಾಗ ಹೋರಾಟ ದಾರಿ ತಪ್ಪುತ್ತದೆ. ಈಗ ಅದೇ ರೀತಿ ಆಗಿದೆಯೇ? ಎಂಬ ಅನುಮಾನ ಕಾಡುತ್ತಿದೆ.

ಒಟ್ಟಾರೆಯಾಗಿ ರಸ್ತೆಯಲ್ಲಿ ರಾಜಕೀಯದ ಕೆಸರಾಟ ನಡೆಯುತ್ತಿದ್ದು ತಾಲೂಕಿನ ಜನರಿಗೆ ಪುಕ್ಕಟೆ ಮನರಂಜನೆ ದೊರೆಯುತ್ತಿದೆ.

ಈ ಸಂದರ್ಭದಲ್ಲಿ ಹರಿಹರ ತಾಲೂಕು ಅಧ್ಯಕ್ಷರಾದ ರಮೇಶ್ ಮಾನೆ ನಗರ ಘಟಕ ಅಧ್ಯಕ್ಷರಾದ ಪ್ರೀತಮ್ ಬಾಬು ಗೌರವಾಧ್ಯಕ್ಷರಾದ ಸಿದ್ದಪ್ಪ, ಉಪಾಧ್ಯಕ್ಷರಾದ ಶಂಕರ್ ದುರ್ಗೋಜಿ, ಸದಸ್ಯರುಗಳಾದ  ರಮೇಶ್ ಮಡಿವಾಳ ,ರಾಜು, ರುದ್ರೇಶ್, ಗಣೇಶ್, ವಿಜಯ್, ರಾಮಪ್ಪ, ಗೀತಮ್ಮ, ವಿನಾಯಕ ರಾಮು ಉಪಸ್ಥಿತರಿದ್ದರು*

Post a Comment

0 Comments