ಆಹಾರ ಇಲಾಖೆಯಲ್ಲಿ 20 ರೂಪಾಯಿ ಸದ್ದು.!

ಮಂದಾರ ನ್ಯೂಸ್ ,ಹರಿಹರ: ಇತ್ತೀಚಿನ ದಿನದಲ್ಲಿ ಹರಿಹರ ತಾಲೂಕಿನಾದ್ಯಂತ ಪಡಿತರ ಚೀಟಿದಾರರಿಂದ ಕೆಲ ನ್ಯಾಯಬೆಲೆ ಅಂಗಡಿಗಳ ವಿರುದ್ಧ ರೂ.20 ಹಣ ವಸೂಲಿಯ ಸದ್ದು ಜೋರಾಗಿ ಕೇಳಿ ಬರುತ್ತಿದೆ.

ತಾಲೂಕಿನಲ್ಲಿರುವ ನಗರ ಹಾಗೂ ಗ್ರಾಮಾಂತರ ಪ್ರದೇಶದ ನ್ಯಾಯಬೆಲೆ ಅಂಗಡಿಯ ಮಾಲೀಕರು ಪಡಿತರ ಚೀಟಿದಾರರಿಂದ 20 ರೂಪಾಯಿ ಹಣವನ್ನು ಪಡೆಯುತ್ತಿದ್ದಾರೆ. ಅಲ್ಲದೆ ನಮಗೆ ನೀಡುವ ಪಡಿತರದಲ್ಲಿ ತೂಕ ಕಡಿಮೆ ಮಾಡಿ ನೀಡುತ್ತಿದ್ದಾರೆ ಎಂಬ ಆರೋಪವನ್ನು ತಾಲೂಕಿನಲ್ಲಿರುವ ಕೆಲವು ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳ ವಿರುದ್ಧ ಗಂಭೀರವಾದ ಆರೋಪವನ್ನು ಮಾಡುತ್ತಿದ್ದಾರೆ.

20 ರೂಪಾಯಿ ಹಣ ವಸೂಲಿ ಮಾಡುತ್ತಿರುವ ವಿಚಾರ ತಾಲೂಕು ಆಹಾರ ನಿರೀಕ್ಷಕರಿಗೆ ಗೊತ್ತಿದೆ. ಅವರ ಸಲಹೆ -ಸೂಚನೆಯಂತೆ ಹಣವನ್ನು ಪಡೆಯಲಾಗುತ್ತಿದೆ. ಪಡಿತರ ಚೀಟಿದಾರರಿಂದ ಪಡೆದ ಹಣವು ತಾಲೂಕು ಆಹಾರ ನಿರೀಕ್ಷಕರ ಖಜಾನೆ ತುಂಬುತ್ತಿದೆ ಎಂಬ ಮತ್ತೊಂದು ಆರೋಪ ಕೇಳಿ ಬಂದಿದೆ.

ಸರ್ಕಾರ ನಾಗರಿಕರಿಗೆ ಉಚಿತವಾಗಿ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಸಾಮಗ್ರಿಗಳನ್ನು ವಿತರಣೆ ಮಾಡುವಂತೆ ಮೌಖಿಕವಾಗಿ ಆದೇಶ ನೀಡಿದ್ದರು ನ್ಯಾಯಬೆಲೆ ಅಂಗಡಿಯವರು ಮಾತ್ರ ಸರ್ಕಾರದ ಆದೇಶಕ್ಕೆ ಬೆಲೆ ನೀಡದೆ ನಾಗರಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇಂಥ ನ್ಯಾಯಬೆಲೆ ಅಂಗಡಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಅವರ ಮೌನದ ಹಿಂದಿನ ಗುಟ್ಟೇನು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಹರಿಹರ ತಾಲೂಕು ಆಹಾರ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಹಾರ ನಿರೀಕ್ಷಕರು ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ದುರಾಂಕಾರದಲ್ಲಿ ವರ್ತಿಸುತ್ತಾರೆ. ಕಚೇರಿ ತಮ್ಮ ಮನೆಯ ಸ್ವತ್ತು ಎನ್ನುವಂತೆ ನಡೆದುಕೊಳ್ಳುತ್ತಾರೆ. ತಾವು ಮಾವನ ಮನೆಯಿಂದ ಬಳುವಳಿಯಾಗಿ ತಂದ ಹಣದಲ್ಲಿ ಪಡಿತರ ಧಾನ್ಯವನ್ನು ವಿತರಿಸುತ್ತಿದ್ದಾರೆ ಎನ್ನುವಂತೆ ನಡೆದುಕೊಳ್ಳುತ್ತಾರೆ. ಸಾರ್ವಜನಿಕರು ಪಡಿತರ ಚೀಟಿಗೆ ಸಂಬಂಧಿಸಿದ ಸಮಸ್ಯೆಯನ್ನು ಹೇಳಲು ಬಂದರೆ ಅವರನ್ನು ಗದರಿಸುತ್ತಾರೆ ಮತ್ತು ಅವರ ಮೇಲೆ ಅಧಿಕಾರದ ದಬ್ಬಾಳಿಕೆಯನ್ನು ನಡೆಸುತ್ತಿದ್ದಾರೆ ಎಂಬ ಆರೋಪವು ಸಾರ್ವಜನಿಕರಿಂದ ಪ್ರಬಲವಾಗಿ ಕೇಳಿ ಬರುತ್ತಿದೆ.

ಈಗಾಗಲೇ ಆಹಾರ ನಿರೀಕ್ಷಕರ ಬೇಜವಾಬ್ದಾರಿತನ ಮತ್ತು ಅವರ ವರ್ತನೆಗೆ ಸಂಬಂಧಿಸಿದಂತೆ ತಾಲೂಕಿನ ಪಡಿತರ ಚೀಟಿದಾರರು ಹಾಗೂ ಗುತ್ತೂರಿನ ಪಡಿತರ ಚೀಟಿದಾರರು ತಮ್ಮ ಆಕ್ರೋಶವನ್ನು ಕಚೇರಿಯಲ್ಲಿ ವ್ಯಕ್ತಪಡಿಸಿದ್ದು ಆಹಾರ ನಿರೀಕ್ಷಕರಿಗೂ ಇದು ತಿಳಿದ ವಿಚಾರವಾಗಿದೆ.

ಮದವೇರಿದ ಆನೆಯಂತೆ ವರ್ತಿಸುತ್ತಿರುವ ಆಹಾರ ಇಲಾಖೆಯ ನಿರೀಕ್ಷಕರನ್ನು ಈ ಕೂಡಲೇ ತಾಲೂಕಿನಿಂದ ವರ್ಗಾವಣೆ ಮಾಡಿ ಅವರ ಜಾಗಕ್ಕೆ ಜನಸಾಮಾನ್ಯರಿಗೆ ಸ್ಪಂದಿಸುವ ಅಧಿಕಾರಿಗಳನ್ನು ನೇಮಕ ಮಾಡುವಂತೆ ತಾಲೂಕಿನ ಶಾಸಕರಲ್ಲಿ ಕ್ಷೇತ್ರದ ಜನರು ಮನವಿ ಮಾಡಿಕೊಂಡಿದ್ದಾರೆ.

ಹರಿಹರ ತಾಲ್ಲೂಕಿನಾದ್ಯಂತ ಕಾಳ ಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟವಾಗುತ್ತಿದೆ. ಅಕ್ಕಿ ಮಾರಾಟ ಹೊಸ ರೂಪವನ್ನು ಪಡೆದು ಇದೀಗ ತಾಲೂಕಿನ ಗ್ರಾಮಗಳಲ್ಲೂ ಅಕ್ಕಿ ಖರೀದಿ ಜೋರಾಗಿ ನಡೆಯುತ್ತಿದೆ. 2 ಕೆಜಿ ಅಕ್ಕಿಯನ್ನು ಪಡೆದು ಒಂದು ಕೆಜಿ ಗೋಧಿ ಒಂದು ಕೆಜಿ ಜೋಳ ಕೊಡುವ ಹೊಸ ರೀತಿಯ ದಂಧೆ ಶುರುವಾಗಿದೆ. ಇದು ಆಹಾರ ನಿರೀಕ್ಷಕರ ಕುಮ್ಮಕ್ಕಿನಿಂದ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಎಂದು ಹೆಸರು ಹೇಳಲು ಇಷ್ಟಪಡದ ಸಾರ್ವಜನಿಕರೊಬ್ಬರು ತಮ್ಮ ಅಭಿಪ್ರಾಯವನ್ನು ನಮ್ಮ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
ಆಹಾರ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಹಾರ ನಿರೀಕ್ಷಕರು ತಮ್ಮ ಕುರ್ಚಿಗೆ ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳುವುದನ್ನು ಮರೆತು ಸಾರ್ವಜನಿಕರೊಂದಿಗೆ ಮಾತಿನ ವಾಗ್ವಾದಕ್ಕೆ ಇಳಿಯುತ್ತಿರುವುದು, ಅಕ್ರಮವನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಎಲ್ಲೋ ಒಂದು ಕಡೆ ಇವರ ಹೆಜ್ಜೆಯ ಮೇಲೆ ಅನುಮಾನ ಮೂಡುತ್ತಿದೆ.

ಕೂಡಲೆ ಆಹಾರ ಸಚಿವರು ಹರಿಹರ ತಾಲೂಕಿನಲ್ಲಿ ನಡೆಯುತ್ತಿರುವ ಮತ್ತು ಕೇಳಿ ಬಂದಿರುವ ಟ್ವೆಂಟಿ - ಟ್ವೆಂಟಿ ಸದ್ದು ಈ ವಿಚಾರದ ಕುರಿತು ಸಮಗ್ರವಾದ ತನಿಖೆಯನ್ನು ನಡೆಸಿ ವಿಸ್ತಾರವಾದ ವರದಿಯನ್ನು ಪಡೆದು ಸಂಬಂಧ ಪಟ್ಟವರ ಮೇಲೆ ಕಾನೂನು ವ್ಯಾಪ್ತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂಬುದು ನಮ್ಮ ಮಾಧ್ಯಮದ ಆಶಯವಾಗಿದೆ.

"ಸರ್ಕಾರದ ಕೆಲಸ ದೇವರ ಕೆಲಸ" ಅದನ್ನು ಮರೆತು ಬೇರೆ ಕೆಲಸ ಮಾಡುವ ಅಧಿಕಾರಿಗಳನ್ನು ಕ್ಷೇತ್ರದಿಂದ ವರ್ಗಾವಣೆ ಮಾಡಿಕೊಂಡು ಹೋಗಲು ಚುನಾಯಿತ ಜನಪ್ರತಿನಿಧಿಗಳು ಖಡಕ್ ತಾಕಿತ್ತು ಮಾಡಬೇಕು. ತಾಲೂಕಿನ ಸರ್ಕಾರಿ ಕಚೇರಿಗಳು ಜನಸಾಮಾನ್ಯರ ಧ್ವನಿಯಾಗಿ ಅವರ ನೋವಿಗೆ ಸ್ಪಂದಿಸುವ ಆಡಳಿತ ಯಂತ್ರವಾಗಿ ಕರ್ತವ್ಯ ನಿರ್ವಹಿಸಿಕೊಂಡು ಹೋಗುವ ನಿಟ್ಟಿನಲ್ಲಿ ಚುನಾಯಿತ ಜನಪ್ರತಿನಿಧಿಗಳು ಕೂಡಲೇ ತಮ್ಮ ಜವಾಬ್ದಾರಿಯನ್ನ ನಿಭಾಯಿಸಬೇಕಾಗಿದೆ. 

ಕ್ಷೇತ್ರದ ಮತದಾರರು ತಮ್ಮ ಮೇಲೆ ಅಪಾರವಾದ ಗೌರವ ಮತ್ತು ನಂಬಿಕೆಯನ್ನು ಇಟ್ಟು ನಿಮ್ಮನ್ನು ಚುನಾವಣೆಯಲ್ಲಿ ಅಧಿಕ ಮತದಿಂದ ಗೆಲ್ಲಿಸಿ ಕಳುಹಿಸಿದ್ದಾರೆ. ಈಗ ನೀವು ಜನಸಾಮಾನ್ಯರ ಧ್ವನಿಯಾಗಿ ನಿಮ್ಮ ಜವಾಬ್ದಾರಿಯನ್ನು ನಿಭಾಯಿಸುವ ಅವಕಾಶ ಒದಗಿ ಬಂದಿದೆ.ಅ ಅವಕಾಶವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೀರ ಎಂಬ ನಂಬಿಕೆ ಜನಸಾಮಾನ್ಯರಲ್ಲಿ ಇದೆ.

ಕೂಡಲೇ ಆಹಾರ ಇಲಾಖೆಯ ವಿರುದ್ಧ ಸಾರ್ವಜನಿಕರಿಂದ ಕೇಳಿ ಬಂದ ಆರೋಪ ಮತ್ತು ನ್ಯಾಯಬೆಲೆ ಅಂಗಡಿಯವರು 20 ರೂಪಾಯಿ ಹಣ ಪಡೆಯುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಂತಹ ನ್ಯಾಯಬೆಲೆ ಅಂಗಡಿಯನ್ನು ಅಮಾನತ್ತಿನಲ್ಲಿ ಇಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮತ್ತೊಮ್ಮೆ ತಾಲೂಕಿನಲ್ಲಿ ವೃಕ್ಷ ಗುರು ವೀರಾಚಾರಿ ಅವರ ಘಟನೆ ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾಧಿಕಾರಿಗಳ ಮೇಲೆ ಇದೆ ಅವರು ಆ ಜವಾಬ್ದಾರಿಯನ್ನ ಎಷ್ಟರಮಟ್ಟಿಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡೋಣ.

Post a Comment

0 Comments