ಮಂದಾರ ನ್ಯೂಸ್ : ಈ ಮಧ್ಯೆ ಜೆಡಿಎಸ್ ರಾಜ್ಯಾಧ್ಯಕ್ಷ,ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜನವರಿ ೧೭ ಇಲ್ಲವೇ ೧೮ ರಂದು ದಿಲ್ಲಿಗೆ ದೌಡಾಯಿಸಲಿದ್ದಾರೆ.ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನೆಗೂ ಮುನ್ನ ದಿಲ್ಲಿಗೆ ಬನ್ನಿ ಅಂತ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಆಹ್ವಾನ ಇದಕ್ಕೆ ಕಾರಣ.
ಹೀಗೆ ಪ್ರಧಾನಿ ಮೋದಿ ನೀಡಿರುವ ಆಹ್ವಾನದ ಹಿನ್ನೆಲೆಯಲ್ಲಿ ದಿಲ್ಲಿಗೆ ಹೋಗಲು ಕುಮಾರಸ್ವಾಮಿ ಅಣಿಯಾಗುತ್ತಿದ್ದಂತೆಯೇ ರಾಜಕೀಯ ವಲಯಗಳಲ್ಲಿ ಕುತೂಹಲಕಾರಿ ಚರ್ಚೆ ಆರಂಭವಾಗಿದೆ.ಜನವರಿ೨೨ ರ ನಂತರ ವಿಸ್ತರಣೆಯಾಗಲಿರುವ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಮಂತ್ರಿ ಮಂಡಲದಲ್ಲಿ ಕುಮಾರಸ್ವಾಮಿ ಸೇರಬಹುದೇ?ಎಂಬುದು ಈ ಚರ್ಚೆಯ ಮುಖ್ಯ ವಿಷಯ.
ಅಂದ ಹಾಗೆ ವಿಸ್ತರಣೆಯಾಗಲಿರುವ ಮೋದಿ ಸಂಪುಟಕ್ಕೆ ದೇಶದ ನಾಲ್ಕು ಮಂದಿ ಮಾಜಿ ಮುಖ್ಯಮಂತ್ರಿಗಳು ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ಸಹಜವಾಗಿಯೇ ಈ ಪಟ್ಟಿಯಲ್ಲಿಕುಮಾರಸ್ವಾಮಿ ಹೆಸರಿರಬಹುದೇ?ಎಂಬ ಕುತೂಹಲ ಹಲವರಲ್ಲಿ ಆರಂಭವಾಗಿದೆ.
ಹೀಗಾಗಿ ಈ ಸಲ ದಿಲ್ಲಿಗೆ ಹೋಗಲಿರುವ ಕುಮಾರಸ್ವಾಮಿ ವಾಪಸ್ಸು ಬೆಂಗಳೂರಿಗೆ ಬರುವ ಹೊತ್ತಿಗೆ ಕೇಂದ್ರ ಮಂತ್ರಿಯಾಗುವುದು ನಿಕ್ಕಿಯಾಗಿರುತ್ತದೆ ಎಂಬುದು ಇಂತವರ ಮಾತು.ಅದೇನೇ ಇರಲಿ,ಆದರೆ ಸಧ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರನ್ನು ಕಂಡರೆ ಕುಮಾರಸ್ವಾಮಿ ಅವರಿಗೆ ತುಂಬ ಗೌರವ.
೨೦೧೮ ರಲ್ಲಿ ಕಾಂಗ್ರೆಸ್ ಜತೆ ಸೇರಿ ಮೈತ್ರಿ ಸರ್ಕಾರ ರಚಿಸಿದ ನಂತರದ ದಿನಗಳಲ್ಲಿ ಒಮ್ಮೆ ತಮ್ಮನ್ನು ದೆಹಲಿಗೆ ಕರೆಸಿಕೊಂಡಿದ್ದ ಮೋದಿಯವರು:ನಿಮ್ಮ ಮೈತ್ರಿ ಪಕ್ಷ ನಿಮಗೆ ಕೈ ಕೊಡುತ್ತದೆ.ಹೀಗಾಗಿ ನಮ್ಮ ಬೆಂಬಲ ಪಡೆಯಿರಿ.ಐದು ವರ್ಷ ಮುಖ್ಯಮಂತ್ರಿಯಾಗಿರಿ ಎಂದು ಗಿಣಿಗೆ ಹೇಳಿದಂತೆ ಹೇಳಿದ್ದರು.ಆದರೆ ಅವತ್ತು ನಾನೇ ಹಿಂಜರಿದೆ.ಪರಿಣಾಮ?ಕಾಂಗ್ರೆಸ್ ನಾಯಕರ ಹೊಡೆತದಿಂದ ಸರ್ಕಾರ ಬಿದ್ದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಿತು ಎಂಬುದು ಕುಮಾರಸ್ವಾಮಿ ನೋವು.
ಅದೇ ರೀತಿ ಈ ಸಲ ಬಿಜೆಪಿ ಜತೆಗಿನ ಮೈತ್ರಿ ಮಾತುಕತೆ ಸಂದರ್ಭದಲ್ಲಿ ಮೋದಿಯವರು ಹೇಳಿದ ಒಂದು ಮಾತು ಕುಮಾರಸ್ವಾಮಿ ಅವರ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತು ಬಿಟ್ಟಿದೆ.ಅದೆಂದರೆ,ಯಾವ ಕಾರಣಕ್ಕೂ ನೀವು ನನ್ನಿಂದ ದೂರ ಹೋಗಬೇಡಿ.ನಿಮ್ಮನ್ನು ತುಂಬ ಎತ್ತರದ ಸ್ಥಾನಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನದು ಎಂಬುದು.
ಹೀಗಾಗಿ ಇಷ್ಟವೋ?ಕಷ್ಟವೋ?ಇನ್ನು ಮುಂದೆ ನರೇಂದ್ರಮೋದಿ ಏನು ಹೇಳುತ್ತಾರೋ?ಅದನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂಬ ನಿರ್ಧಾರಕ್ಕೆ ಕುಮಾರಸ್ವಾಮಿ ಬಂದಿದ್ದಾರೆ.ಇಂತಹ ಮನ:ಸ್ಥಿತಿಯಲ್ಲಿರುವ ಕುಮಾರಸ್ವಾಮಿ ಅವರನ್ನು ಮೋದಿ ಈಗಲೇ ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡು ಪಾರ್ಲಿಮೆಂಟ್ ಚುನಾವಣೆಯ ಅಖಾಡಕ್ಕೆ ಇಳಿಸುತ್ತಾರೋ?ಅಥವಾ ಮೊದಲು ಅಖಾಡಕ್ಕಿಳಿಸಿ ಪಾರ್ಲಿಮೆಂಟ್ ಚುನಾವಣೆಯ ನಂತರ ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳುತ್ತಾರೋ?ಎಂಬುದು ಸಧ್ಯದ ಕುತೂಹಲ.
ಮುಂದೇನು ಕತೆಯೋ?
ಆರ್.ಟಿ.ವಿಠ್ಠಲಮೂರ್ತಿ
0 Comments