ಅಕ್ರಮ ಚಟುವಟಿಕೆಗಳ ಮುಕ್ತ ರಾಣೇಬೆನ್ನೂರಾಗುವುದು ಯಾವಾಗ.!?


ಮಂದಾರ ನ್ಯೂಸ್ , ರಾಣೇಬೆನ್ನೂರು : ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೆಬೆನ್ನೂರು ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದಂತಹ ನಗರಗಳಲ್ಲಿ ಒಂದು. 

ರಾಣೆಬೆನ್ನೂರು ಪ್ರಮುಖ ವಾಣಿಜ್ಯ ನಗರಿ ಆಗಿರುವ ಕಾರಣ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ತಮ್ಮ ವ್ಯಾಪಾರ ವಹಿವಾಟಿಗಾಗಿ ಪ್ರತಿದಿನ ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದು ಹೋಗುತ್ತಾರೆ.

ರಾಣೇಬೆನ್ನೂರು ವಾಣಿಜ್ಯ ನಗರಿ ಎಂದು ಹೆಸರು ಪಡೆದಿದ್ದು ಒಂದು ಕಡೆಯಾದರೆ ,ಮತ್ತೊಂದು ಅಕ್ರಮ ಚಟುವಟಿಕೆಗಳ ತವರೂರು ಎಂಬ ಹೆಸರನ್ನು ಪಡೆದಿದೆ.

ರಾಣೆಬೆನ್ನೂರಿನಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿಲ್ಲ ಎಂಬ ಒಂದೇ ಒಂದು ಉದಾಹರಣೆಗಳು ಕಾಣಸಿಗಲಾರದು.

ತುಂಗಭದ್ರ ನದಿಯ ದಡದ ಮೇಲೆ ಇರುವ ರಾಣೇಬೆನ್ನೂರು ಅಕ್ರಮ ಮರಳು ಗಣಿಗಾರಿಕೆಗೆ ಹೆಸರಾಗಿದೆ. ನದಿಯ ದಡದ ಮೇಲೆ ಇರುವಂತಹ ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ರಾಜಾರೋಷವಾಗಿ ಯಾರ ಭಯವಿಲ್ಲದೆ ನಡೆಯುತ್ತಿದೆ.

ಈ ಅಕ್ರಮ ಮರಳು ಗಣಿಗಾರಿಕೆ  ಭ್ರಷ್ಟ ಅಧಿಕಾರಿಗಳ ಮನೆಯ ಖಜಾನೆಯನ್ನು ಲಕ್ಷ ,ಲಕ್ಷ ರೂಪದಲ್ಲಿ ತುಂಬುತ್ತಿದೆ ಎಂದರು ತಪ್ಪಾಗಲಾರದು.

ಅಕ್ರಮ ಮರಳು ಗಣಿಗಾರಿಕೆ ರಾಣೇಬೆನ್ನೂರಿನಲ್ಲಿ ನಿಲ್ಲಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ರಾಜ ರೋಷವಾಗಿ ನಡೆಯುತ್ತಿದೆ. ಈ ವಿಚಾರದಲ್ಲಿ ಭೂ ಮತ್ತು ಗಣಿ ಇಲಾಖೆ ಜಾಣ ನಡೆಯನ್ನು ಅನುಸರಿಸುತ್ತಿದೆ. ಪೋಲಿಸ್ ಇಲಾಖೆ ಅದೆಷ್ಟೇ ಒತ್ತಡವಿದ್ದರೂ ಈ ಅಕ್ರಮ ಮರಳು ಗಣಿಗಾರಿಕೆ ವಿಚಾರದಲ್ಲಿ ಮಾತ್ರ ತನ್ನ ಕೃಪಾಕಟಾಕ್ಷ ಬೀರುತ್ತಲೇ ಇರುತ್ತದೆ.

ಪೋಲಿಸ್ ಇಲಾಖೆಗೆ ಅಕ್ರಮವನ್ನು ಪ್ರಶ್ನಿಸಿ ಫೋನ್ ಕಾಲ್ ಮಾಡಿದರೆ ಅವರಿಂದ ಬರುವ ಉತ್ತರ ಭೂ ಮತ್ತು ಗಣಿ ಇಲಾಖೆಯವರಿಗೆ ತಿಳಿಸಿ ನಾವು ಎಲ್ಲವನ್ನು ನೋಡಿಕೊಳ್ಳಲು ಸಾಧ್ಯವೇ? ಅವರನ್ನ ಸಂಪರ್ಕಿಸಿ ಎಂಬ ಉತ್ತರ ಬರುತ್ತದೆ.

ಹಾಗಾದರೆ ಭೂ ಮತ್ತು ಗಣಿ ಇಲಾಖೆ ತನ್ನ ಪಾತ್ರವನ್ನ ನಿಭಾಯಿಸುವುದು ನೀವು ಹೇಳುವಂತೆ ಸತ್ಯ. ಆದರೆ ಅಕ್ರಮ ಮರಳು ಗಣಿಗಾರಿಕೆ ತಮ್ಮ ಗ್ರಾಮದಲ್ಲಿ ನಡೆಸಬೇಕು ಎಂದರೆ ಮೊದಲು ಪೋಲಿಸ್ ಇಲಾಖೆಯನ್ನು ಕಾಣಬೇಕು. ಹಾಗಾದರೆ ಇದು ಏಕೆ? ನಿಮ್ಮ ಆಶೀರ್ವಾದ ಇಲ್ಲದೆ ಅಕ್ರಮ ಮರಳು ಗಣಿಗಾರಿಕೆ ನಡೆಸಲು ಮುಂದಾದರೆ ನೀವು ಸುಮ್ಮನೆ ಬಿಡುತ್ತೀರಾ? ಆಗ ನೀವು ನಿಮ್ಮ ಅಧಿಕಾರವನ್ನು ಚಲಾಯಿಸುತ್ತೀರಾ ಅಲ್ಲವೇ? 

ಅಕ್ರಮ ಮರಳು ಗಣಿಗಾರಿಕೆ ನಡೆಯಲು ಮೂಲ ಕಾರಣ ಪೋಲಿಸ್ ಇಲಾಖೆ ಎಂದರು ತಪ್ಪಾಗಲಾರದು. ಅವರ ಆಶೀರ್ವಾದ ಇದ್ದರೆ ತುಂಗಭದ್ರ ನದಿಯ ಒಡಲನ್ನು ಸುಲಭವಾಗಿ ಬಗೆಯಬಹುದು. ಆ ನದಿಯ ಭ್ರೂಣ ಹತ್ಯೆಯನ್ನು ಮಾಡಬಹುದು. 

ನದಿಯ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆ ಬರುತ್ತಿರುವುದು ಅಕ್ರಮ ಮರಳು ಗಣಿಗಾರಿಕೆಯಿಂದ. ದೇಶದ ನೈಸರ್ಗಿಕ ಸಂಪತ್ತು ಭ್ರಷ್ಟ ಅಧಿಕಾರಿಗಳ ಮನೆಯ ಪಾಲಾಗುತ್ತಿದೆ. ನದಿಯ ಜಲಚರ ಪ್ರಾಣಿಗಳು ಲಕ್ಷ, ಲಕ್ಷ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿವೆ. ಜಲಚರ ಪ್ರಾಣಿಗಳ ಅಭಿವೃದ್ಧಿಗೆ ಬೇಕಾದ ಪೈಬಲ್ಸ್ ಬಿಡುತ್ತಿಲ್ಲ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡವರು.

'ಮರಳು' ಗಣಿಗಾರಿಕೆ ಒಂದು ಕಡೆಯಾದರೆ 'ಮಟ್ಕಾ' ಇದು ವಾಣಿಜ್ಯ ನಗರಿಯ ಅಕ್ರಮ ದಂಧೆ ಕೋರರ ಪ್ರಮುಖ ವ್ಯವಹಾರವಾಗಿದೆ. ಅದೆಷ್ಟೋ ಕುಟುಂಬಗಳು ಬೀದಿಗೆ ಬಂದರೂ ಪರವಾಗಿಲ್ಲ ಇವರ ಕುಟುಂಬ ಚೆನ್ನಾಗಿದ್ದರೆ ಸಾಕು ಎನ್ನುವಷ್ಟರ ಮಟ್ಟಿಗೆ ತಾಲೂಕಿನ ಗ್ರಾಮ ಗ್ರಾಮಗಳಲ್ಲಿ ವಿತ್ತರಿಸಿಕೊಂಡಿದೆ.

ರಾಣೆಬೆನ್ನೂರು ತಾಲೂಕಿನ ಕೆಲವೊಂದು ಗ್ರಾಮಗಳನ್ನು ಬಿಟ್ಟರೆ ಉಳಿದೆಲ್ಲ ಗ್ರಾಮಗಳಲ್ಲೂ ಮಟ್ಕಾ ದಂಧೆಯನ್ನು ರಾಜ ರೋಷವಾಗಿ ಯಾರ ಭಯವಿಲ್ಲದೆ ಜನದಟ್ಟನೆಯ ಪ್ರದೇಶದಲ್ಲೇ ಹಗಲು ಹೊತ್ತಿನಲ್ಲೇ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಯುವಕರನ್ನು ಮನೆಯ ಯಜಮಾನನನ್ನು ಕೈ ಬಿಸಿ ಕರೆಯುತ್ತಿದೆ. 

ಮಟ್ಕಾ ಮತ್ತು ಇಸ್ಪೀಟ್ ದಂಧೆಗಳಿಂದ ಅದೆಷ್ಟೋ ಕುಟುಂಬಗಳು ಪ್ರತಿದಿನ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.

ರಾಣೇಬೆನ್ನೂರನಲ್ಲಿ ನಡೆಯುತ್ತಿರುವ ಮಟ್ಕಾ ಬಾಂಬೆಯ "ರತನ್ ಲಾಲ" ಇವರನ್ನೇ ಮೀರಿಸುವ ಮಟ್ಟಕ್ಕೆ ಬೆಳೆದಿದೆ. ಪಾನ್ ಬೀಡ ಮಾಡುವ ಅಂಗಡಿಯಿಂದ ಹಿಡಿದು ಹೈಟೆಕ್ ಹೋಟೆಲ್ ಮಳಿಗೆಗಳಲ್ಲೂ ಈ ಮಟ್ಕಾ ದಂಧೆ ನಡೆಯುತ್ತಿದೆ. 

ರಾಣೇಬೆನ್ನೂರಿನಲ್ಲಿ ನಡೆಯುತ್ತಿರುವ ಮಟ್ಕಾ ಸೂತ್ರದಾರ ಪೊಲೀಸ್ ಇಲಾಖೆಯೊಂದಿಗೆ ಕುಚುಕು,ಕುಚುಕು ಸಂಬಂಧವನ್ನು ಇಟ್ಟುಕೊಂಡಿರುವುದಿಲ್ಲವೇ? ಎಲ್ಲಿ, ಯಾವ ಜಾಗದಲ್ಲಿ ಮಟ್ಕಾ ಬರೆಯುತ್ತಿದ್ದಾರೆ ಎಂಬ ಮಾಹಿತಿ ಪೊಲೀಸ್ ಇಲಾಖೆಗೆ ಬಿಟ್ಟರೆ ಇನ್ನ್ಯಾರಿಗೆ ಗೊತ್ತಿರಲು ಸಾಧ್ಯ? ಯಾವ ವ್ಯಕ್ತಿ ,ಯಾವ ಜಾಗದಲ್ಲಿ ಪ್ರತಿದಿನ ಎಷ್ಟು ವ್ಯವಹಾರ ನಡೆಸುತ್ತಾನೆ ಎಂಬ ಇಂಚಿಂಚು ಮಾಹಿತಿ ಪೊಲೀಸ್ ಇಲಾಖೆಗೆ ಇದ್ದೇ ಇರುತ್ತದೆ ಎಂದು ಹೇಳುತ್ತಾರೆ ತಾಲೂಕಿನ ಪ್ರಜ್ಞಾವಂತ ನಾಗರಿಕರು. 

ಇರಲಿ ಬಿಡಿ ಈ ವಿಚಾರದ ಬಗ್ಗೆ ಹೆಚ್ಚು ಹೇಳುವುದು ಬೇಡ .ಏಕೆಂದರೆ ಇದು ಪ್ರತಿದಿನ ಕಣ್ಣೀರು ಹಾಕುವ ಕುಟುಂಬದವರಿಗೆ ಗೊತ್ತಿರುವ ಮಾಹಿತಿ. ಪಾಪ ಅವರ ಕಣ್ಣೀರಿಗೆ ಬೆಲೆ ನೀಡದ ಅಧಿಕಾರಿಗಳು ಇರುವಾಗ ನಾವು ಎಷ್ಟು ಬರೆದರು ಏನು ಪ್ರಯೋಜನವಿಲ್ಲ....

ಇನ್ನೂ ಅನ್ನ ಭಾಗ್ಯ ಯೋಜನೆ ಅಕ್ಕಿ. ಹಸಿವು ಮುಕ್ತ ಕರ್ನಾಟಕ ಮಾಡಬೇಕು ಎಂಬ ಉದ್ದೇಶದಿಂದ 2013ರ ಸಿದ್ದರಾಮಯ್ಯನವರ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ತದನಂತರ ಕೇಂದ್ರ ಸರ್ಕಾರ ತಾನು ಸಹ ಗರೀಬ್ ಹಟಾವೋ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದ ನಾಗರಿಕರಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡತೊಡಗಿತ್ತು. ಕೇಂದ್ರ ಸರ್ಕಾರ 3 ಕೆಜಿ ಅಕ್ಕಿ 2 ಕೆ.ಜಿ ರಾಗಿಯನ್ನು ಪ್ರತಿ ಬಿಪಿಎಲ್ ಕುಟುಂಬದ ಸದಸ್ಯನಿಗೆ ನೀಡುತ್ತಿದೆ.

"ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ" ರಾಣೇಬೆನ್ನೂರಿನಲ್ಲಿ ರಾಜಾರೋಷವಾಗಿ ನಡೆಯುವುದರ ಜೊತೆಗೆ ಈ ಅಕ್ಕಿ ಖರೀದಿಯ ಕೇಂದ್ರ ಸ್ಥಾನವು ರಾಣೆಬೆನ್ನೂರು ಆಗಿದೆ.

ರಾಣೆಬೆನ್ನೂರುನ ಅಕ್ಕ -ಪಕ್ಕದ ತಾಲೂಕಿನ ಅಕ್ಕಿ ಮತ್ತು ರಾಗಿ ಈ ರಾಣೆಬೆನ್ನೂರಿಗೆ ಅಕ್ರಮವಾಗಿ ಸಪ್ಲೇ ಆಗುತ್ತಿದೆ. ಅಕ್ಕಿ ರಾಗಿ ಖರೋದಿ ಮಾಡುವವರು ರಾಣೇಬೆನ್ನೂರಿನ ನಗರದ ಮಧ್ಯದಲ್ಲಿ ರಾಜಾರೋಶವಾಗಿ ಪೋಲಿಸ್ ಇಲಾಖೆಯವರ ಕಣ್ಣಿಗೆ ಕಾಣುವಂತೆ ಖರೀದಿ ಮಾಡುತ್ತಿದ್ದಾರೆ ಮತ್ತು ಹೊಂದಿಕೊಂಡು ಹೋಗುತ್ತಿದ್ದಾರೆ.

ಬಡವರ ಹಸಿವನ್ನು ತುಂಬಬೇಕಾದ ಅಕ್ಕಿ ಭ್ರಷ್ಟ ಅಧಿಕಾರಿಗಳ ಮನೆಯ ಖಜಾನೆಯನ್ನು ತುಂಬುತ್ತಿದೆ. ಬಡವರ ಅಕ್ಕಿಗೆ ಕನ್ನ ಹಾಕಿದ ಯಾರೇ ಇರಲಿ ಅವರು ಮುಂದೊಂದು ದಿನ ಅದರ ನೋವನ್ನ ಅನುಭವಿಸೇ ತೀರುತ್ತಾರೆ. ತಾತ್ಕಾಲಿಕ ಸುಖಕ್ಕಾಗಿ ಬಡವರ ಅಕ್ಕಿಗೆ ಕನ್ನ ಹಾಕುತ್ತಿರಲ್ಲ ನಾಚಿಕೆಯಾಗುವುದಿಲ್ಲವೇ? ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹಣದ ಆಸೆಯನ್ನ ತೋರಿಸಿ ಅನ್ನ ಭಾಗ್ಯ ಅಕ್ಕಿಯನ್ನು ಖರೀದಿ ಮಾಡುತ್ತಿದ್ದೀರಲ್ಲ. ಇದನ್ನು ನಿಯಂತ್ರಿಸಬೇಕಾದವರು ಗಾಢ ನಿದ್ದೆಗೆ ಹೋಗಿದ್ದಾರೆ. ಆಹಾರ ಇಲಾಖೆ ಯಾವ ಗೋಡನಿನಲ್ಲಿ ಹೆಗ್ಗಣ ವಾಗಿ ಅಕ್ಕಿಯನ್ನು ತಿನ್ನಲು ಹೋಗಿದ್ದಾರೋ ಗೊತ್ತಿಲ್ಲ..

ಹಾಗಾದರೆ ರಾಣೇಬೆನ್ನೂರು ಅಕ್ರಮ ಚಟುವಟಿಕೆಗಳಿಂದ ಮುಕ್ತವಾಗುವುದು ಯಾವಾಗ?

ಮಾಧ್ಯಮದವರು ಬರೆದಾಗ, ಪ್ರಜ್ಞಾವಂತ ನಾಗರಿಕರು ಹೋರಾಟ ಮಾಡಿದಾಗ, ಅಧಿಕಾರಿಗಳು "ಸರ್ಕಾರದ ಕೆಲಸ ದೇವರ ಕೆಲಸ' ಎಂದು ಮಾಡಿದಾಗ. ಸಾರ್ವಜನಿಕರು ಎಚ್ಚೆತ್ತುಕೊಂಡು ಬೀದಿಗಿಳಿದು ಹೋರಾಟ ಮಾಡಿದಾಗ. ಜನಪ್ರತಿನಿಧಿಗಳು ನಿಯಂತ್ರಿಸಬೇಕು ಎಂಬ ಇಚ್ಛಾಶಕ್ತಿ ಹೊಂದಿದಾಗ, ಆಳುವಂತಹ ಸರ್ಕಾರಗಳು ಕಠಿಣ ಕಾನೂನು ತಂದಾಗ, ಗುಪ್ತಚರ ಇಲಾಖೆ ತನ್ನ ಕರ್ತವ್ಯವನ್ನ ಪ್ರಾಮಾಣಿಕವಾಗಿ ನಿಭಾಯಿಸಿದಾಗ ಈ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ಆಗ "ರಾಣಿಬೆನ್ನೂರು ಅಕ್ರಮ ಚಟುವಟಿಕೆಗಳ ಮುಕ್ತ" ತಾಲೂಕ್ಕಾಗಿ ಇಡೀ ರಾಜ್ಯದ ಗಮನ ಸೆಳೆಯುತ್ತದೆ. ಇದಾಗಬೇಕಾದರೆ ಮೊದಲು ನಾವು ಅಂದರೆ 'ಮಾಧ್ಯಮದವರು ಎಲ್ಲರ ಗಮನವನ್ನು ಸೆಳೆಯುವಂತ ಬರಹವನ್ನು ಮಾಡಬೇಕು' ಪತ್ರಿಕಾ ಧರ್ಮದ ಸಿದ್ಧಾಂತಗಳನ್ನು ಎತ್ತಿ ಹಿಡಿಯಬೇಕು. 

ಸಮಾಜದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಆಳುವಂತ ಸರ್ಕಾರದ ಕಾವಲು ನಾಯಿಯಾಗಿ ಕರ್ತವ್ಯ ನಿರ್ವಹಿಸಬೇಕು. ಪ್ರತಿ ವಿಚಾರವನ್ನು ಮುಕ್ತವಾಗಿ, ನಿರ್ಭೀತಿಯಿಂದ, ವಸ್ತುನಿಷ್ಠ ವರದಿಯನ್ನು ಓದುಗರ ಮಿತ್ರರ ಮುಂದೆ ಮಂಡಿಸಿದಾಗ ಮಾತ್ರ ಈ ಅಕ್ರಮ ಚಟುವಟಿಕೆಗಳು ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತದೆ. ಇದಾಗಬೇಕು.. 
ಟಿ ಆರ್ ಪಿ ಗೋಸ್ಕರ ಸುದ್ದಿಯನ್ನ ಮಾಡುವುದನ್ನು ಬಿಟ್ಟು ಜನಸಾಮಾನ್ಯನ ಧ್ವನಿಯಾಗಿ ಸುದ್ದಿ ಮಾಡಿದಾಗ ಅಕ್ರಮ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದೇ ಬರುತ್ತದೆ.

ರಾಣೆಬೆನ್ನೂರು ತಾಲೂಕಿನ ಬಡ ಹಾಗೂ ಮಧ್ಯಮ ವರ್ಗದ ಜನರ ಕಣ್ಣೀರನ್ನು ಒರೆಸುವುದರ ಜೊತೆಗೆ ಪ್ರಕೃತಿ ಮಾತೆಯನ್ನ ಪೂಜಿಸುವುದರೊಂದಿಗೆ ಕೃಷಿಕನಿಗೆ ಬೆನ್ನೆಲುಬಾಗಿ ನಿಲ್ಲುವುದರೊಂದಿಗೆ ನಮ್ಮ ಬರಹ ಮುಂದುವರಿದಾಗ ನಾವು ಬಳಸುವ ಪೆನ್ನಿಗೂ ಮತ್ತು ಹಾಳೆಗೂ ಒಂದು ಗೌರವ ಬರುತ್ತದೆ ಅಲ್ಲವೇ? 

ರಾಣೆಬೆನ್ನೂರಿನ ಪ್ರಜ್ಞಾವಂತ ನಾಗರಿಕರಿಗೆ ಹಾಗೂ ಬಡ ಹಾಗೂ ಮಾಧ್ಯಮ ವರ್ಗದ ಜನತೆಗೆ ಈ ಬರವಣಿಗೆ ಅರ್ಪಣೆ.

ಇನ್ನು ವಿಸ್ತಾರವಾದ ಸುದ್ದಿಯನ್ನ ಮುಂದಿನ ಸಂಚಿಕೆಯಲ್ಲಿ ಬರೆಯಲು ಇಷ್ಟಪಡುತ್ತೇನೆ.

ಪ್ರಕಾಶ್ ಮಂದಾರ.
8880499904

Post a Comment

0 Comments