ಮಂದಾರ ನ್ಯೂಸ್, ಸಾಗರ : ಸುಸಂಸ್ಕೃತ ಜನರಿಂದ ಕೂಡಿರುವ ಸಾಗರದಲ್ಲಿ ಕೆಲ ಭ್ರಷ್ಟ ಅಧಿಕಾರಿಗಳ ಆಗಮನದಿಂದ ಸಾಗರ ಕಲುಷಿತಗೊಳ್ಳುತ್ತಿದೆ.
ಚುನಾವಣೆಯ ಪೂರ್ವದಲ್ಲಿ ಸಾಗರ ತಾಲೂಕನ್ನು ಇಂದಿರಾ- ಚಂದಿರ ಮಾಡುತ್ತೇವೆ ಎಂದು ದೊಡ್ಡ ,ದೊಡ್ಡ ವೇದಿಕೆಯಲ್ಲಿ ಭಾಷಣ ಮಾಡಿದ್ದ ನಾಯಕರಿಗೆ ಸಾಗರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕಾಣುತ್ತಿಲ್ಲವೇ?
ಚುನಾವಣೆಯ ನಂತರದ ದಿನದಲ್ಲಿ ಸಾಗರದ ಆಡಳಿತ ಕೇಂದ್ರಕ್ಕೆ ಭ್ರಷ್ಟ ಅಧಿಕಾರಿಗಳ ನಿಯೋಜನೆಯಾಗಿದೆ. ಜನಸಾಮಾನ್ಯರ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಆಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿದೆ. ಆದರೂ ಸಂಬಂಧಿಸಿದ ಜವಾಬ್ದಾರಿ ಸ್ಥಾನದ ಜನಪ್ರತಿನಿಧಿಗಳು ಮೌನಕ್ಕೆ ಜಾರಿದ್ದಾರೆ. ಇವರ ಮೌನದ ಹಿಂದಿನ ಮುಟ್ಟಾದರೂ ಏನು ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
"ಸರ್ಕಾರದ ಕೆಲಸ ದೇವರ ಕೆಲಸ "ಎಂದು ಮಾಡದೆ "ಸರ್ಕಾರದ ಕೆಲಸ ,ಭ್ರಷ್ಟಾಚಾರ ಮಾಡುವುದೇ ಕಾಯಕ" ಎಂದುಕೊಂಡು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಮೂಗುದಾರ ಹಾಕುವರು ಯಾರು? ಎಂಬ ಪ್ರಶ್ನೆ ಉದ್ಭವವಾಗಿದೆ.
ತಾಲೂಕಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಕಾಗೋಡು ಗಣಪತಪ್ಪ ಸ್ಥಾಪಿತ ರೈತ ಸಂಘದ ಕಾರ್ಯಕರ್ತರು ಕಳೆದ ನಾಲ್ಕಾರು ವರ್ಷದಿಂದ ಪ್ರಬಲವಾದ ಧ್ವನಿಯನ್ನು ಎತ್ತಿಕೊಂಡು ಬರುತ್ತಿದ್ದಾರೆ.
ತಾಲೂಕಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ತಕ್ಕ ಉತ್ತರವನ್ನು ರೈತ ಸಂಘದ ಕಾರ್ಯಕರ್ತರು ತಮ್ಮ ಹೋರಾಟದ ಮೂಲಕ ನೀಡುತ್ತಿದ್ದಾರೆ.
ಎಲ್ಲವನ್ನೂ ಬಿಟ್ಟ ದಪ್ಪ ಚರ್ಮದ ಅಧಿಕಾರಿಗಳು ರೈತರ ಸಂಘದ ಹೋರಾಟಕ್ಕೆ ಬೆದರುತ್ತಿಲ್ಲ. ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಮಾಡಿಕೊಡಬೇಕು ಎಂಬ ಇಚ್ಛೆ ಹೊಂದಿರುವುದಿಲ್ಲ .ಇದಕ್ಕೆ ಕಾರಣ ಸಮರ್ಥ ನಾಯಕ ಮತ್ತು ನಾಯಕತ್ವದ ಕೊರತೆ.
ಇಂಥ ಭ್ರಷ್ಟ ಅಧಿಕಾರಿಗಳಿಗೆ ಚಾಟಿ ಏಟು ಬೀಸಲು ರೈತರ ಸಂಘದಂತ ಹೋರಾಟದ ಅವಶ್ಯಕತೆ ತುಂಬಾ ಇದೆ.
ಹಣವಂತರ, ಅಧಿಕಾರಸ್ಥರ ಪರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಭ್ರಷ್ಟ ಅಧಿಕಾರಿಗಳಿಗೆ ರೈತ ಸಂಘದ ಕಾರ್ಯಕರ್ತರು ಕಳೆದ ಎರಡು ದಿನಗಳ ಹಿಂದೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.
ತಾಲೂಕು ಕಚೇರಿಗೆ ಬೀಗ ಹಾಕುವ ಮೂಲಕ ರೈತ ಸಂಘದ ಕಾರ್ಯಕರ್ತರು ಭ್ರಷ್ಟ ಅಧಿಕಾರಿಗಳ ವಿರುದ್ಧ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ಸಾಗರ ತಾಲೂಕಿನಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದೇ ಹೋಗಿದೆ.
ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಕಚೇರಿಯ ಒಳಗಡೆ ಕೂಡಿಹಾಕಿ ಗೇಟ್ಗೆ ಬೀಗ ಹಾಕುವ ಮೂಲಕ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆಯನ್ನ ನಡೆಸಿದರು.
ದಿನೇಶ್ ಶಿರವಾಳ ಸಾರಥ್ಯದ ರೈತ ಸಂಘದ ಕಾರ್ಯಕರ್ತರು ಕಳೆದ ನಾಲ್ಕಾರು ವರ್ಷದಿಂದ ತಾಲೂಕಿನ ಭ್ರಷ್ಟಾ ವ್ಯವಸ್ಥೆಯ ವಿರುದ್ಧ ನಿರಂತರ ಹೋರಾಟ ಮಾಡುತ್ತಲೇ ಬಂದಿದ್ದಾರೆ. ರೈತರ, ಶೋಷಿತ ಜನರ, ಬಡ ಹಾಗೂ ಮಧ್ಯಮ ವರ್ಗದ ಧ್ವನಿಯಾಗಿ ಪ್ರಬಲವಾದ ಹೋರಾಟವನ್ನು ರೈತ ಸಂಘದ ಕಾರ್ಯಕರ್ತರು ಮಾಡುತ್ತಿರುವುದು ಆಶಾದಾಯಕವಾಗಿದ್ದರು,ಅದರೆ ಎಲ್ಲೋ ಒಂದುಕಡೆ ವ್ಯವಸ್ಥೆಯಲ್ಲಿ ಬದಲಾವಣೆಯ ಗಾಳಿ ಬೀಸಬೇಕಾಗಿತ್ತು. ಆದರೆ ಅದಾಗುತ್ತಿಲ್ಲ.
ಕಳೆದ ಎರಡು ದಿನಗಳ ಹಿಂದೆ ರೈತ ಸಂಘದ ಕಾರ್ಯಕರ್ತರು ನಡೆಸಿದ ಹೋರಾಟ ಇಡೀ ರಾಜ್ಯದ ಗಮನ ಸೆಳೆದಿದ್ದು, ಸಾಗರ ತಾಲೂಕು ದಂಡಾಧಿಕಾರಿಗಳ ಕಚೇರಿ 'ಭ್ರಷ್ಟಾಚಾರದ ಶಕ್ತಿ ಕೇಂದ್ರವಾಗಿದೆ 'ಎಂಬುದು ಸಾಬೀತಾಗಿದೆ.
ಕೂಡಲೇ ಸಾಗರ ವಿಧಾನಸಭಾ ಕ್ಷೇತ್ರದ ವರ್ಣರಂಜಿತ ರಾಜಕಾರಣಿ ಗೋಪಾಲಕೃಷ್ಣ ಬೇಳೂರು ಅವರು ತಮ್ಮ ತಾಲೂಕಿನ ಜನರ ಕಣ್ಣೀರನ್ನು ಒರೆಸುವ ನಿಟ್ಟಿನಲ್ಲಾದರೂ ಭ್ರಷ್ಟ ಅಧಿಕಾರಿಗಳಿಗೆ ಚಳಿ ಬಿಡಿಸಬೇಕಾಗಿದೆ.
ತಾಲೂಕಿನಲ್ಲಿ ಹಲವು ವರ್ಷದಿಂದ ಬೀಡು ಬಿಟ್ಟಿರುವ ಅಧಿಕಾರಿಗಳನ್ನು ಕೂಡಲೆ ವರ್ಗಾವಣೆ ಮಾಡಿಸುವತ್ತ ಗಮನಹರಿಸಿ. ನಿಮ್ಮ ಮತ ಕ್ಷೇತ್ರದ ಜನರ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಆಗುತ್ತಿಲ್ಲ, ಹಣ ಕೊಟ್ಟರೆ ಮಾತ್ರ ಕೆಲಸ ಎಂಬುವಂತಾಗಿದೆ. ಮತದಾರರು ನಿಮ್ಮ ಮೇಲೆ ಅಪಾರವಾದ ನಂಬಿಕೆ ಮತ್ತು ಭರವಸೆಯನ್ನ ಇಟ್ಟು ಅವರೇ ತಮ್ಮ ಕೈಯಾರೆ ಹಣವನ್ನ ಹಾಕಿ ಚುನಾವಣೆಯಲ್ಲಿ ನಿಮ್ಮನ್ನು ಗೆಲ್ಲಿಸಿ ಕಳುಹಿಸಿದ್ದಾರೆ ಎಂಬುದನ್ನು ಮರೆಯಬೇಡಿ.
ಹಣಬಲ ಹಾಗೂ ಸ್ವಾಭಿಮಾನದ ನೆಲೆಯ ಮೇಲೆ ನಡೆದ ಚುನಾವಣೆಯಲ್ಲಿ ತಾವು ಮತದಾರರ ನೆಚ್ಚಿನ ನಾಯಕರಾಗಿ ಚುನಾವಣೆಯಲ್ಲಿ ಗೆದ್ದಿರುತ್ತೀರಾ. ಚುನಾವಣೆಯ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳು , ಭರವಸೆಗಳನ್ನು ಈಡೇರಿಸುವ ಜವಾಬ್ದಾರಿ ಹೊಂದಿರುತ್ತೀರಾ. ಜನರು ನಿಮ್ಮಿಂದ ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂಬುದನ್ನು ಮರೆಯಬೇಡಿ.
ಒಂದು ಹೋರಾಟ ತಾಲೂಕಿನಲ್ಲಿ ನಡೆಯುತ್ತಿದೆ ಎಂದರೆ ಎಲ್ಲೋ ಒಂದು ಕಡೆ ಆಡಳಿತ ಯಂತ್ರ ದುರ್ಬಲವಾಗಿದೆ ಎಂದರ್ಥ ಅಲ್ಲವೇ? ಆಡಳಿತ ಯಂತ್ರವನ್ನು ಚುರುಕು ಮುಟ್ಟಿಸುವ ನಿಟ್ಟಿನಲ್ಲಾದರೂ ತಾವು ತಮ್ಮ ಜವಾಬ್ದಾರಿಯನ್ನ ನಿಭಾಯಿಸಬೇಕು. ತಮ್ಮ ಜವಾಬ್ದಾರಿ ನಿಭಾಯಿಸುವ ಸಂದರ್ಭದಲ್ಲಿ ಯಾವುದೇ ವ್ಯಾಮೋಹಕ್ಕೆ ಒಳಗಾಗಬಾರದು. ನಿರ್ದಾಕ್ಷಿಣ್ಯವಾಗಿ ಬೇಜವಾಬ್ದಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲೇಬೇಕು.
ಶಾಸಕರೇ ಕೂಡಲೇ ತಾಲೂಕು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡುವ ಮೂಲಕ ರೈತ ಸಂಘದ ಹೋರಾಟಕ್ಕೆ ಗೌರವ ನೀಡಿ.
ಸಾಗರ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೆ ಹೆಸರಾಗಬೇಕೆ ವಿನಹ, ಭ್ರಷ್ಟಾಚಾರಕ್ಕೆ ಅಲ್ಲ.
0 Comments