ಪಾನಿಪೂರಿ ಸೇವಿಸಿ ಅಸ್ವಸ್ಥಗೊಂಡಿದ್ದ 19 ಮಕ್ಕಳು: ಚಿಕಿತ್ಸೆ ಫಲಕಾರಿಯಾಗದೇ ಓರ್ವ ಬಾಲಕನ ಸಾವು.!


ಮಂದಾರ ನ್ಯೂಸ್,ಹರಿಹರ : ಹರಿಹರ ತಾಲೂಕಿನ ಮಲೇಬೆನ್ನೂರು ಪುರಸಭಾ ವ್ಯಾಪ್ತಿಯ ಜಾಮಿಯಾ ಮಸೀದಿ ಮುಂಭಾಗದ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಪಾನಿಪುರಿ ಸೇವಿಸಿದ 19 ಮಕ್ಕಳು ಅಸ್ವಸ್ಥ ಗೊಂಡಿದ್ದು, ಅದರಲ್ಲಿ ಓರ್ವ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ.

ಮಲೇಬೆನ್ನೂರಿನ ಇರ್ಫಾನ್ ಎಂಬುವವರ ಪುತ್ರ ಹಜರತ್ ಬಿಲಾಲ್  (6) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬಾಲಕನಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.

ಹಜರತ್ ಬಿಲಾಲ್ ಸಹ ಪಾನಿಪೂರಿ ಸೇವಿಸಿ ಅಸ್ವಸ್ಥಗೊಂಡಿದ್ದ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಕಾರಣಕ್ಕೆ ಮಲೇಬೆನ್ನೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರಿಸ್ಥಿತಿ ಗಂಭೀರ ಎಂದು ಅರಿತ ಪೋಷಕರು ದಾವಣಗೆರೆ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬಾಲಕ ಮೃತಪಟ್ಟಿದ್ದಾನೆ.

ಮಾರ್ಚ್ 15ರಂದು ಹರಿಹರ ತಾಲೂಕಿನ ಮಲೇಬೆನ್ನೂರಿನಲ್ಲಿ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳು ಉಪವಾಸ ಮಾಡಿದ್ದರು. ವ್ರತ ಇದ್ದ ಮಕ್ಕಳು ಉಪವಾಸ ಅಂತ್ಯ ಮಾಡಿ ಮಲೇಬೆನ್ನೂರಿನ ಜಾಮೀಯಾ ಮಸೀದಿ ಬಳಿ ಪಾನಿಪೂರಿ ಸೇವಿಸಿದ್ದ ಮಕ್ಕಳ ಪೈಕಿ 19 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದರು. ಈ ಪೈಕಿ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕರೆದುಕೊಂಡು ಬಂದಿದ್ದರು.

ಪಾನಿಪೂರಿ ಸೇವಿಸಿದ್ದ ಮಕ್ಕಳು ವಾಂತಿ ಭೇದಿ, ಹೊಟ್ಟೆ ನೋವಿನಿಂದ ಬಳಲಿದ್ದರು. ಅಸ್ವಸ್ಥಗೊಂಡಿದ್ದ ಮಕ್ಕಳ ಪೈಕಿ ನಾಲ್ವರು ಗಂಭೀರವಾಗಿದ್ದರು. ಅದೃಷ್ಟವಶಾತ್ ಇನ್ನು ಮೂವರು ಮಕ್ಕಳು ಚೇತರಿಸಿಕೊಂಡಿದ್ದಾರೆ. ಮಲೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಘಟನೆ ಬಳಿಕ ಪೋಷಕರು ಪಾನಿಪೂರಿ ಮಾಲೀಕನ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಘಟನೆ ನಡೆದ ದಿನ ಹರಿಹರ ತಾಲೂಕು ದಂಡಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯವನ್ನು ವಿಚಾರಿಸಿದ್ದರು. ಈ ಸಂದರ್ಭದಲ್ಲಿ ಮಲೇಬೆನ್ನೂರು ಪುರಸಭೆಯ ಮುಖ್ಯಾಧಿಕಾರಿ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು ಮಕ್ಕಳ ಯೋಗಕ್ಷೇಮವನ್ನು ವಿಚಾರಿಸಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದರು.

ಪೋಷಕರೆ ರಸ್ತೆ ಬದಿಯ ಪಾನಿಪುರಿ ಮತ್ತು ಗೋಬಿ ಮಂಚೂರಿ ತಿನ್ನುವಾಗ ಯಾವುದಕ್ಕೂ ಎಚ್ಚರವಾಗಿರಿ.

Post a Comment

0 Comments