ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟ, ಏಪ್ರಿಲ್ 19 ಮೊದಲ ಹಂತದ ಚುನಾವಣೆ.


ಮಂದಾರ ನ್ಯೂಸ್,ನವದೆಹಲಿ: 18ನೇ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 4ಕ್ಕೆ ರಿಸಲ್ಟ್ ಸಿಗಲಿದೆ. ಕರ್ನಾಟಕದಲ್ಲಿ ಏಪ್ರಿಲ್ 26, ಮೇ 7ಕ್ಕೆ ಚುನಾವಣೆ ನಡೆಯಲಿದೆ. ದೇಶದಲ್ಲಿ ಏಪ್ರಿಲ್ 19ರಿಂದ ಜೂನ್ 1ರವರೆಗೆ ಮತದಾನ ನಡೆಯಲಿದೆ ಎಂದು‌ ಕೇಂದ್ರ ಚುನಾವಣಾ ಆಯೋಗದ‌ ಮುಖ್ಯ ಆಯುಕ್ತ ರಾಜೀವ್‌ ಕುಮಾರ್ ತಿಳಿಸಿದರು.

543‌ ಲೋಕಸಭಾ ಕ್ಷೇತ್ರಗಳ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದೆ. ಲೋಕಸಭಾ ಚುನಾವಣೆ ಪ್ರಕ್ರಿಯೆ ಮಾರ್ಚ್‌ನಿಂದ ಆರಂಭವಾಗಲಿದೆ. ಜೂನ್ 4ರಂದು ಎಣಿಕೆ ನಡೆಯಲಿದೆ. ಏಪ್ರಿಲ್ 19ರಂದು ಮೊದಲ‌, ಏಪ್ರಿಲ್ 26ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಮೂರನೇ ಹಂತ ಮೇ 7, ನಾಲ್ಕನೇ ಹಂತ ಮೇ 13, ಐದನೇ ಹಂತ ಮೇ 20, ಆರನೇ ಹಂತ ಮೇ 25, ಏಳನೇ ಹಂತ‌ ಜೂನ್ 1ರಂದು ನಡೆಯಲಿದೆ.

ಕರ್ನಾಟಕದ ಸುರಪುರ ಸೇರಿ‌ 26 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯೂ ಲೋಕಸಭಾ ಚುನಾವಣೆ ಜತೆಯೇ ನಡೆಯಲಿದೆ. ಮೇ 23ರಂದು ಆಂದ್ರಪ್ರದೇಶದ ವಿಧಾನಸಭಾ ಚುನಾವಣೆ ನಡೆಯಲಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ಶನಿವಾರ ಮಧ್ಯಾಹ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 10.05 ಲಕ್ಷ ಮತಗಟ್ಟೆ ಸ್ಥಾಪಿಸಲಾಗಿದೆ. 97 ಕೋಟಿ ಮತದಾರರು ಈ‌ ಬಾರಿ ಮತದಾನ ಮಾಡಲಿದ್ದಾರೆ. 1.8 ಕೋಟಿ ಮತದಾರರು ಇದೇ ಮೊದಲ ಬಾರಿ ಮತದಾನ ಮಾಡಲಿದ್ದಾರೆ. 19.74 ಕೋಟಿ ಯುವ ಮತದಾರರಿದ್ದಾರೆ. 85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರಿದ್ದಾರೆ. 2.18 ಲಕ್ಷ ಶತಾಯುಷಿ ಮತದಾರರಿದ್ದಾರೆ.

55 ಲಕ್ಷ ಇವಿಎಂ‌ಗಳನ್ನು ಸಿದ್ಧಗೊಳಿಸಲಾಗಿದೆ. 1.5 ಕೋಟಿ ಸಿಬ್ಬಂದಿ ಚುನಾವಣಾ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಪುರುಷ ಮತದಾರರಿಗಿಂತ ಮಹಿಳಾ‌ ಮತದಾರರೇ ಹೆಚ್ಚಿದ್ದಾರೆ. 12 ರಾಜ್ಯಗಳಲ್ಲಿ ಮಹಿಳಾ ಮತದಾರರು ಹೆಚ್ಚಿದ್ದಾರೆ. 47.1 ಕೋಟಿ‌ ಮಹಿಳಾ ಮತದಾರರು ಮತದಾನ ಮಾಡಲಿದ್ದಾರೆ. 48 ಸಾವಿರ ತೃತೀಯ ಲಿಂಗಿ ಮತದಾರರು ಮತ ಚಲಾಯಿಸಲಿದ್ದಾರೆ. ಶೇ.40ಕ್ಕೂ ಹೆಚ್ಚು ವಿಶೇಷಚೇತನರು ಮನೆಯಿಂದಲೇ ಮತ ಚಲಾಯಿಸಲಿದ್ದಾರೆ.

80 ವರ್ಷ ಮೇಲ್ಪಟ್ಟವರನ್ನು ಮತಗಟ್ಟೆಗೆ ಕರೆತರಲು ವಾಹನ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಲ್ಲಿ‌ ಹೆಲ್ಪ್ ಡೆಸ್ಕ್, ವೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ.

ಪ್ರತಿ‌ ಚುನಾವಣೆಯೂ ನಮಗೆ ಪರೀಕ್ಷೆ ಇದ್ದಂತೆ. ಇಂತಹ ಪರೀಕ್ಷೆ ಎದುರಿಸಲು ನಾವು ಸಿದ್ಧವಾಗಿದ್ದು, ನೀವೂ‌ ನಮ್ಮ ಜತೆ ಸೇರಿಕೊಳ್ಳಿ ಎಂದು‌ ಮತದಾರರಿಗೆ ಕರೆ ನೀಡಿದರು.

ಅಭ್ಯರ್ಥಿಗಳು ಮೇಲೆ‌ ಕ್ರಿಮಿನಲ್ ಕೇಸ್ ಇದ್ದರೆ‌ ಮೊದಲೇ ಆಯೋಗಕ್ಕೆ ಮಾಹಿತಿ‌ ನೀಡುವುದು ಕಡ್ಡಾಯ. ಗಡಿಗಳಲ್ಲಿ ಡ್ರೋನ್ ಮೂಲಕ ನಿಗಾ ವಹಿಸಲಾಗುವುದು. ಪ್ರತಿ ಜಿಲ್ಲೆಯಲ್ಲಿ ಚುನಾವಣಾ ಕಂಟ್ರೋಲ್‌ ರೂಂ ಸ್ಥಾಪಿಸಲಾಗುವುದು.

Post a Comment

0 Comments