ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ 228 ಮತಗಟ್ಟೆಗಳಿದ್ದು 22.01.2024 ರ ವರೆಗೆ 209780 ಮತದಾರರಿದ್ದಾರೆ : ಭಾವನಾ ಬಸವರಾಜ್.

ಮಂದಾರ ನ್ಯೂಸ್,ಹರಿಹರ : 18 ನೇ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯು ತ್ತಿದೆ. ಆಯೋಗವು ವೇಳಾಪಟ್ಟಿ ಪ್ರಕಟಿಸಿದ್ದು ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಸಾರ್ವಜನಿಕರು ಕಡ್ಡಾಯವಾಗಿ ಮಾದರಿ ನೀತಿ ಸಂಹಿತೆ ಪಾಲನೆ ಮಾಡುವಂತೆ  ಹರಿಹರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಭಾವನಾ ಬಸವರಾಜ್ ತಿಳಿಸಿದರು.

ತಾಲೂಕ ಆಡಳಿತ ಕಛೇರಿಯ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಅವರು, ವೇಳಾಪಟ್ಟಿಯಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮಗಳು, ಸಭೆ – ಸಮಾರಂಭ, ಶಂಕುಸ್ಥಾಪನೆ, ಹೊಸ ಯೋಜನೆಗಳ ಘೋಷಣೆ ಮಾಡುವಂತಿಲ್ಲ ಮತ್ತು ರಾಜಕೀಯ ಪಕ್ಷಗಳು ಸಭೆ, ರ್ಯಾಲಿ ಗಳನ್ನು ಆಯೋಜಿಸಲು, ಪೋಸ್ಟರ್, ಬ್ಯಾನರ್ ಅಳವಡಿಸಲು ಅಯಾ ಸಮಾರಂಭದ ಅವಧಿಗೆ ಮುಂಚಿತವಾಗಿ ಅನುಮತಿ ಪಡೆಯಬೇಕಾಗುತ್ತದೆ.ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡುವುದು ನಿಷಿದ್ದವಾಗಿದೆ ಎಂದರು.
    ದಾವಣಗೆರೆ ಲೋಕಸಭೆಯ ಹರಿಹರ ವಿಧಾನಸಭಾ  ಕ್ಷೇತ್ರದಲ್ಲಿ 228 ಮತಗಟ್ಟೆಗಳಿದ್ದು 22.01.2024 ರ ವರೆಗೆ 2,09,780 ಮತದಾರರಿದ್ದಾರೆ. ಇದರಲ್ಲಿ 4,968 ಹೊಸ ಮತದಾರ ರಿದ್ದಾರೆ. ಪ್ರಸ್ತುತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪ್ರಗತಿ ಯಲ್ಲಿದ್ದು ನಾಮಪತ್ರ ಸಲ್ಲಿಕೆ ಕೊನೆಯ ದಿನದ ಹಿಂದಿನ 10 ದಿನಗಳವರೆಗೆ ತಿದ್ದುಪಡಿ, ಸೇರ್ಪಡೆಗೆ ಅವಕಾಶ ಇರುತ್ತದೆ.
    ಹರಿಹರ ವಿಧಾನಸಭಾ ಕ್ಷೇತ್ರದ ಒಟ್ಟು 2,09,780 ಮತದಾರ ರಲ್ಲಿ 1,04,348 ಪುರುಷ ಮತದಾರರು, 1,05,343 ಮಹಿಳಾ ಮತದಾರರು, 17 ಇತರ ಮತದಾರರು ಮತ್ತು 72 ಮತದಾರರು ಚುನಾವಣಾ ಆಯೋಗ ಅಧಿ ಸೂಚಿಸಿರುವ 16 ಇಲಾಖೆಗಳ ಅಧಿಕಾರಿ ಮತ್ತು ನೌಕರರು ಇರುತ್ತಾರೆ. ಈ ಬಾರಿ ಹರಿಹರ ಕ್ಷೇತ್ರದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಹೆಚ್ಚಾಗಿರುವುದು ವಿಶೇಷವಾಗಿದೆ ಎಂದರು.
   ಏಪ್ರಿಲ್ 1 ಕ್ಕೆ 18 ವರ್ಷ ತುಂಬುವವರನ್ನು ಮತದಾರರ ಪಟ್ಟಿ ಯಲ್ಲಿ ಸೇರ್ಪಡೆಗೆ ಸ್ವೀಪ್ ಕಾರ್ಯಕ್ರಮಗಳ ಮೂಲಕ ಹೊಸದಾಗಿ ನೊಂದಾಯಿಸಲಾಗಿದೆ. ಇದರಲ್ಲಿ 2579 ಪುರುಷ ಮತದಾರರು, 2389 ಮಹಿಳಾ ಮತದಾರರಿದ್ದು ಒಟ್ಟು 4968 ಮತದಾರರು ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿಸಿ ಕೊಳ್ಳಲು ಇನ್ನು ಕಾಲಾವಕಾಶವಿದೆ.ನಾಮಪತ್ರ ಸಲ್ಲಿಕೆಯು ಏಪ್ರಿಲ್ 12 ರಿಂದ 19 ರ ವರೆಗೆ, ಏ.20 ಪರಿಶೀಲನೆ, ಏ.22 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು ಮೇ. 7 ರಂದು ಮತದಾನ ಮತ್ತು ಎಣಿಕೆಯು ಜೂನ್ 4 ರಂದು ನಡೆಯಲಿದೆ ಎಂಬ ಮಾಹಿತಿ ನೀಡಿದರು.

    
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಬಳಕೆ ಮಾಡುತ್ತಿದ್ದು ಕ್ಷೇತ್ರದಲ್ಲಿ ಎಂ.3 ಮೇಕ್ 2023 ಮಾದರಿಯ ಮತಯಂತ್ರಗಳ ಬಳಕೆ ಮಾಡಲಾಗುತ್ತಿದೆ. ಹರಿಹರ ವ್ಯಾಪ್ತಿಯಲ್ಲಿ ಒಟ್ಟು 228 ಮತಗಟ್ಟೆಗಳಿದ್ದು ಇವುಗಳಲ್ಲಿ 167 ಸಾಮಾನ್ಯ ಮತಗಟ್ಟೆಗಳು, 53 ಸೂಕ್ಷ್ಮ ಮತಗಟ್ಟೆಗಳು ಹಾಗೂ 8 ಅತಿ ಸೂಕ್ಷ್ಮ ಮತಗಟ್ಟೆಗಳಿರಲಿವೆ. ಅಲ್ಲದೆ 5 ಸಖಿ ಮತಗಟ್ಟೆಗಳು,1 ವಿಶೇಷ ಚೇತನರ ನಿರ್ವಹಣೆಯ ಮತಗಟ್ಟೆ,1 ಯುವಜನ ನಿರ್ವಹಣೆ ಮತಗಟ್ಟೆ, 1ಧ್ಯೇಯ ಆಧಾರಿತ ಮತಗಟ್ಟೆ ಹಾಗು 1 ಸಾಂಪ್ರದಾಯಿಕ ಮತಗಟ್ಟೆಗಳಾಗಿ ವಿಶೇಷವಾಗಿ ನಿರ್ಮಾಣ ಮಾಡಲಾಗುವುದು ಎಂಬ ವಿವರವಾದ ಮಾಹಿತಿ ನೀಡಿದರು.
    ಗೋಷ್ಠಿಯಲ್ಲಿ ಉಪಸ್ಥಿತರಿದ್ದ ತಹಸಿಲ್ದಾರ್ ಕೆ.ಎಮ್.ಗುರು ಬಸವರಾಜ್ ಮಾತನಾಡಿ ಮುಕ್ತ ನ್ಯಾಯ ಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗವು ಸಿ-ವಿಜಿಲ್(C-vigil) ಎಂಬ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದು ಸಾರ್ವಜನಿಕರು ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳ ಮುಖಂಡರು ಮತದಾನ ಮಾಡಲು ಯಾವುದೇ ಆಮಿಷ,ಲಂಚ, ಉಡುಗೊರೆ ನೀಡಿದ್ದಲ್ಲಿ ಸಾರ್ವಜನಿಕರು ಛಾಯಾಚಿತ್ರ ಅಥವಾ ವಿಡಿಯೋ ಸೆರೆಹಿಡಿದು ದೂರು ಸಲ್ಲಿಸಬಹುದಾಗಿದೆ.
     ಹರಿಹರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹರಿಹರ ನಗರ ಠಾಣೆಯ ವ್ಯಾಪ್ತಿಯ ಶ್ರೀ ರಾಘವೇಂದ್ರ ಮಠ,ಹರಿಹರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 4 ರ ಹಲಸ ಬಾಳು ಕ್ರಾಸ್ ಬಳಿ  ಕುರುಬರಹಳ್ಳಿ ಹಾಗೂ ಮಲೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ನಂದಿಗುಡಿಯಲ್ಲಿ ಒಟ್ಟು ನಾಲ್ಕು ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಪ್ರತಿ ಚೆಕ್ ಪೋಸ್ಟ್ ಗಳಲ್ಲಿ 3 ಸಿಬ್ಬಂದಿಗಳು 3 ಪಾಳಯದಲ್ಲಿ 24*7 ಕರ್ತವ್ಯ ನಿರ್ವಹಿಸುವರು ಎಂಬ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಚುನಾವಣಾ ಶಾಖೆಯ ಸಿಬ್ಬಂದಿಗಳು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
   

Post a Comment

0 Comments