ಬಂಡಾಯಕ್ಕೆ ರೆಡಿಯಾದರು ಈಶ್ವರಪ್ಪ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ.


ಮಂದಾರ ನ್ಯೂಸ್ : ಕಳೆದ ವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದಿಲ್ಲಿಗೆ ಹೋದರು.ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಪುತ್ರ ವಿಜಯೇಂದ್ರ,ಬಸವರಾಜ ಬೊಮ್ಮಾಯಿ ಮತ್ತಿತರರ ಜತೆ ಸೇರಿ ಅಮಿತ್ ಷಾ ಮತ್ತು ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿದರು.
ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಲ್ಲಿ ಯಾರು ಕ್ಯಾಂಡಿಡೇಟುಗಳಾಗಬೇಕು ಅಂತ ಸಲಹೆ ಪಡೆಯಲು ಬುಧವಾರ ನಡೆದ ಸಭೆಯಲ್ಲಿ ಯಡಿಯೂರಪ್ಪ ಸಮಾಧಾನದಿಂದಲೇ ಮಾತನಾಡಿದ್ದಾರೆ.ಆದರೆ ಸಭೆಯಲ್ಲಿ ಮಾತನಾಡಿದ ಅಮಿತ್ ಷಾ ಮತ್ತು ನಡ್ಡಾ ಅವರು ಕಳೆದ ತಿಂಗಳು ಕರ್ನಾಟಕದಿಂದ ತಮ್ಮ ಕೈ ತಲುಪಿದ ಕ್ಯಾಂಡಿಡೇಟ್ ಲಿಸ್ಟಿನ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸಿದ್ದಾರೆ.ಅಷ್ಟೇ ಅಲ್ಲ,ಆ ಲಿಸ್ಟಿನಿಂದ ಹಲವರ ಹೆಸರುಗಳನ್ನು ಕೈ ಬಿಡುವುದು ಅನಿವಾರ್ಯ ಎಂದಿದ್ದಾರೆ.ಯಾವಾಗ ವರಿಷ್ಟರು ಈ ಮಾತು ಹೇಳಿದರೋ?ಆಗ ಯಡಿಯೂರಪ್ಪ ಸಹಜವಾಗಿಯೇ ಅಸಮಾಧಾನಗೊಂಡಿದ್ದಾರೆ.
ಅಷ್ಟೇ ಅಲ್ಲ,ಮರುದಿನ ಮತ್ತೆ ಸಭೆ ಸೇರಿದಾಗ ಅಗ್ರೆಸಿವ್ ಆಗಿಯೇ ತಮ್ಮ ವಾದ ಮಂಡಿಸಿ;ನೋಡಿ ಸಾರ್,ಕಳೆದ ವಿಧಾನಸಭೆ ಚುನಾವಣೆಯಲ್ಲಿ ಏನೇನೋ ಪ್ಲಾನು ಮಾಡಲು ಹೋಗಿ ನಾವು ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡೆವು.ಈಗ ಲೋಕಸಭಾ ಚುನಾವಣೆಯಲ್ಲಿ ಅಂತಹ ಪ್ರಯೋಗಗಳು ಬೇಡ.ಈಗ ನಮಗೆ ಗೆಲ್ಲುವುದಷ್ಟೇ ಮುಖ್ಯ.ಹೀಗಾಗಿ ಗೆಲ್ಲುವ ಕ್ಯಾಂಡಿಡೇಟುಗಳು ಯಾರು ಅಂತ  ನಾವು ಈಗೊಂದು ಫೈನಲ್ ಲಿಸ್ಟ್ ಕೊಟ್ಟಿದ್ದೇವೆ.ಅದನ್ನೇ ಕ್ಲಿಯರ್ ಮಾಡಿ ಎಂದು ಅಮಿತ್ ಷಾ ಮತ್ತು ನಡ್ಡಾಗೆ ವಿವರಿಸಿದ್ದಾರೆ.
ಸರಿ,ಯಡಿಯೂರಪ್ಪ ಅವರು ಹೇಳಿದ  ಲಿಸ್ಟನ್ನು ಅಮಿತ್ ಷಾ ಮತ್ತು ನಡ್ಡಾ‌ ಪುನ: ಕೈಗೆತ್ತಿಕೊಂಡಿದ್ದಾರೆ.ಆದರೆ ಅದನ್ನು ನೋಡುತ್ತಾ ಹೋದಂತೆ ಅವರ ಮುಖ ಕಪ್ಪಿಟ್ಟಿದೆ.
ಯಾಕೆಂದರೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಿ.ಟಿ.ರವಿ ಅವರಿಗೆ ಸೀಟು ಕೊಡುವ ಲೆಕ್ಕಾಚಾರ ವರಿಷ್ಟರಲ್ಲಿದ್ದರೆ,ಈ ಕ್ಷೇತ್ರದಿಂದ ಹಾಲಿ ಸಂಸದ ಡಿ.ವಿ.ಸದಾನಂದಗೌಡರಿಗೆ ಮತ್ತೆ ಟಿಕೆಟ್ ನೀಡಬೇಕು ಅಂತ ಯಡಿಯೂರಪ್ಪ ಹೇಳಿದ್ದರು.
ಇದೇ ರೀತಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೊಡುವುದು ವರಿಷ್ಟರ ಲೆಕ್ಕಾಚಾರವಾಗಿದ್ದರೆ,ರಾಜವಂಶದ ಯದುವೀರ್ ಅವರಿಗೆ ಟಿಕೆಟ್ ಕೊಡಬೇಕು ಅಂತ ಯಡಿಯೂರಪ್ಪ ಪಟ್ಟು ಹಿಡಿದಿದ್ದರು.
ಇನ್ನು ಹಾವೇರಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಶಿವಕುಮಾರ್ ಉದಾಸಿ ಸ್ಪರ್ಧಿಸಲು ನಿರಾಸಕ್ತಿ ತೋರಿಸಿರುವುದರಿಂದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರಿಗೆ ಅಲ್ಲಿ ಟಿಕೆಟ್ ನೀಡಬೇಕು ಅಂತ ಅಮಿತ್ ಷಾ ಬಯಸಿದ್ದರೆ,ಬೇಡ,ಬೇಡ,ಇದು ಲಿಂಗಾಯತರು ಪವರ್ ಫುಲ್ ಆಗಿರುವ ಕ್ಷೇತ್ರ.ಹೀಗಾಗಿ ಇಲ್ಲಿಂದ ಸ್ಪರ್ಧಿಸಲು ಲಿಂಗಾಯತರಿಗೇ ಟಿಕೆಟ್ ಕೊಡಬೇಕು.ಹೇಗಿದ್ದರೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದಾರೆ.ಅವರಿಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕೂ ಆಸ್ತಿಯಾಗುತ್ತಾರೆ ಎಂಬುದು ಯಡಿಯೂರಪ್ಪ ಅವರ ಷರಾ.
ಮಂಗಳೂರು ಲೋಕಸಭಾ ಕ್ಷೇತ್ರದ ವಿಷಯ ಬಂದಾಗ ಹಾಲಿ ಸಂಸದ ನಳೀನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡುವುದು ವರಿಷ್ಟರ ನಿರ್ಧಾರವಾಗಿದ್ದರೆ,ಅವರ ವಿರುದ್ಧ ಭಿನ್ನಮತ ಭುಗಿಲೆದ್ದಿದೆ.ಅದರಲ್ಲೂ ಪುತ್ತಿಲ ಅವರಂತಹ ನಾಯಕರು ಕಟೀಲ್ ವಿರುದ್ದ ಬಹಿರಂಗ ಬಂಡಾಯ ಸಾರಿದ್ದು ಈ ಹಿನ್ನೆಲೆಯಲ್ಲಿ ಬಿಜೆಪಿಯ ಸೋಲು ತಪ್ಪಿಸಿ ಗೆಲುವಿನ ಬಾವುಟ ಹಾರಿಸಲು ಚೌತಾ ಅವರಿಗೆ ಟಿಕೆಟು ಕೊಡಬೇಕು ಎಂಬುದು ಯಡಿಯೂರಪ್ಪ ಅವರ ವಾದ.
ಈ ಮಧ್ಯೆ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರಿಗೆ ಟಿಕೆಟ್ ಕೊಡುವುದು ವರಿಷ್ಟರ ತೀರ್ಮಾನವಾಗಿದ್ದರೆ,ನೋ,ನೋ ಅಲ್ಲಿಂದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರೇ ಬೆಸ್ಟು ಕ್ಯಾಂಡಿಡೇಟು ಅಂತ ಯಡಿಯೂರಪ್ಪ ಫರ್ಮಾನು ಹೊರಡಿಸಿದ್ದರು.
ಇದೇ ರೀತಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಡಾ.ಸುಧಾಕರ್ ಅವರಿಗೆ ಟಿಕೆಟ್ ಕೊಡುವುದು ಅಮಿತ್ ಷಾ ಬಯಕೆಯಾಗಿದ್ದರೆ,ಯಲಹಂಕ ಶಾಸಕರಾದ ಎಸ್.ಆರ್.ವಿಶ್ವನಾಥ್ ಅವರ ಪುತ್ರ ಅಲೋಕ್ ಅವರಿಗೆ ಟಿಕೆಟ್ ಕೊಡಬೇಕು ಎಂಬುದು ಯಡಿಯೂರಪ್ಪ ವಾದ.
ಹೀಗೆ ಹತ್ತಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ತಾವು ಹೇಳಿದ ಕ್ಯಾಂಡಿಡೇಟುಗಳಿಗೂ ಯಡಿಯೂರಪ್ಪ ಅವರು ಹೇಳಿದ ಕ್ಯಾಂಡಿಡೇಟುಗಳಿಗೂ ವ್ಯತ್ಯಾಸವಿರುವುದನ್ನು ಗಮನಿಸಿದ ಅಮಿತ್ ಷಾ ಮತ್ತು ನಡ್ಡಾ ಅವರು:ಪಟ್ಟಿಯನ್ನು ಇಷ್ಟು ಬದಲಿಸುವುದು ಪ್ರಾಕ್ಟಿಕಲ್ ಅಲ್ಲ ಎಂದರೆ,ಇಲ್ಲ ಸಾರ್,ಈಗ ನಾನು ಸೂಚಿಸಿದವರಿಗೆ ಟಿಕೇಟು ನೀಡದಿದ್ದರೆ ನಾವು ನಿರೀಕ್ಷಿತ ಪ್ರಮಾಣದಲ್ಲಿ ಗೆಲ್ಲುವುದು ಕಷ್ಟ ಅಂತ ಯಡಿಯೂರಪ್ಪ ತಿರುಗೇಟು ಹೊಡೆದಿದ್ದಾರೆ.
ಯಾವಾಗ ಯಡಿಯೂರಪ್ಪ ಅವರು ಕಡ್ಡಿ ತುಂಡು ಮಾಡಿದಂತೆ ಮಾತನಾಡಿದರೋ?ಇದಾದ ನಂತರ ಸಭೆ ಬರಖಾಸ್ತಾಗಿದೆ.
ಅಷ್ಟೇ ಅಲ್ಲ,ಈ ಸಂಬಂಧ ಮಾರ್ಚ್ ಹತ್ತರ ಭಾನುವಾರ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು,ಅಲ್ಲಿ ಕ್ಯಾಂಡಿಡೇಟುಗಳ ಹೆಸರನ್ನು ಫೈನಲೈಸ್ ಮಾಡುತ್ತೇವೆ  ಅಂತ ನಡ್ಡಾ ಅವರು ರಾಜ್ಯದ ನಾಯಕರಿಗೆ ಸೂಚಿಸಿದ್ದಾರೆ.
ಹೀಗೆ ಸೂಚಿಸಿದವರಿಗೆ ಶನಿವಾರದ ಹೊತ್ತಿಗೆ ಕರ್ನಾಟಕದಿಂದ ನೆಗೆಟಿವ್ ಸಂದೇಶಗಳು ಬರತೊಡಗಿವೆ.ಒಂದು ವೇಳೆ ಯಡಿಯೂರಪ್ಪ ಅವರ ಪಟ್ಟಿಗೆ ಹೈಕಮಾಂಡ್ ಪ್ರಾಮಿನೆನ್ಸು ಕೊಟ್ಟರೆ ರಾಜ್ಯದ ಹಲವು  ಕ್ಷೇತ್ರಗಳಲ್ಲಿ ದಂಗೆ ಏಳುತ್ತದೆ ಎಂಬುದು ಈ ಸಂದೇಶ.ಅಂದ ಹಾಗೆ ಇಂತಹ ಸಂದೇಶ ರವಾನಿಸಿದ್ದು ಸಂತೋಷ್ ಗ್ಯಾಂಗು ಎಂಬುದು ರಹಸ್ಯವೇನಲ್ಲ.
ಅದೇನೇ ಇರಲಿ,ಒಟ್ಟಿನಲ್ಲಿ
ಯಾವಾಗ ಇಂತಹ ಸಂದೇಶಗಳು ತಲುಪತೊಡಗಿದವೋ?ಆಗ ದಿಲ್ಲಿಯ ಬಿಜೆಪಿ ವರಿಷ್ಟರು ಭಾನುವಾರ ನಡೆಯಬೇಕಿದ್ದ ಕೇಂದ್ರ ಚುನಾವಣಾ ಸಮಿತಿ ಸಭೆಯನ್ನು ಮುಂದೂಡಿ ನಿಟ್ಟುಸಿರು ಬಿಟ್ಟಿದ್ದಾರೆ.


ಬಂಡಾಯಕ್ಕೆ ಈಶ್ವರಪ್ಪ ಸಜ್ಜು
---------------------------------
ಅಂದ ಹಾಗೆ ಬಿಜೆಪಿ ವರಿಷ್ಟರಿಗೆ ತಲುಪಿರುವ ಮಾಹಿತಿಯ ಪ್ರಕಾರ ಮೊದಲ ಬಂಡಾಯಕ್ಕೆ ಸಜ್ಜಾಗಿರುವವರು ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ.ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಸೂಚನೆಯಂತೆ ರಾಜಕೀಯ ನಿವೃತ್ತಿ ಘೋಷಿಸಿದ ಈಶ್ವರಪ್ಪ ತಮ್ಮ ಸ್ವಕ್ಷೇತ್ರ ಶಿವಮೊಗ್ಗದ ಟಿಕೇಟನ್ನು ಬಿಟ್ಟುಕೊಟ್ಟಿದ್ದರು.
ಆದರೆ ಯಾವಾಗ ಲೋಕಸಭಾ ಚುನಾವಣೆ ಹತ್ತಿರವಾಗತೊಡಗಿತೋ?ಆಗ ದಿಲ್ಲಿಗೆ ಹೋದ ಈಶ್ವರಪ್ಪ ಅವರು ಅಮಿತ್ ಷಾ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆ ಮುಂದಿಟ್ಟಿದ್ದರು.
'ಸಾರ್,ವಯಸ್ಸಿನ ಕಾರಣ ನೀಡಿ ನನಗೆ ಅಸಂಬ್ಲಿ ಟಿಕೆಟ್ ತಪ್ಪಿಸಲಾಯಿತು.ಆದರೆ ಈಗ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಹಾಲಿ ಸಂಸದ ಶಿವಕುಮಾರ್ ಉದಾಸಿ ನಿರಾಸಕ್ತಿ ತೋರಿಸುತ್ತಿದ್ದಾರೆ.ಹೀಗಾಗಿ ನನ್ನ ಪುತ್ರ ಕಾಂತೇಶ್ ಗೆ ಹಾವೇರಿಯ ಟಿಕೆಟ್ ಕೊಡಿ ಅಂತ ವಿವರಿಸಿದ್ದರು.
ಅದರ ಪ್ರಕಾರ ಕಳೆದ ವಾರ ನಡೆದ ದಿಲ್ಲಿಯ ಸಭೆಯಲ್ಲಿ ಅಮಿತ್ ಷಾ ಅವರು ಕಾಂತೇಶ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.ಆದರೆ ಇದನ್ನೊಪ್ಪದ ಯಡಿಯೂರಪ್ಪ ಅವರು ಬೊಮ್ಮಾಯಿಗೆ ಟಿಕೆಟ್ ಕೊಡಿ ಎಂದಿದ್ದಾರೆ.
ಯಾವಾಗ ಈ ಬೆಳವಣಿಗೆಯ ವಿವರ ತಲುಪಿತೋ?ಆಗ ಈಶ್ವರಪ್ಪ ಅವರ ಬೆಂಬಲಿಗರು:ಓ,ಇವೆಲ್ಲ ಆಗು ಹೋಗದ ಕೆಲಸ.ಷಿಕಾರಿಪುರದಲ್ಲಿ ತಮ್ಮ‌ಮಗನಿಗೆ ಸಾದ ಲಿಂಗಾಯತರ ಸಪೋರ್ಟು ಇರುತ್ತದೆ ಎಂಬ ಕಾರಣಕ್ಕಾಗಿ ಯಡಿಯೂರಪ್ಪ ಅವರು ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಡಿಸಲು ಹೊರಟಿದ್ದಾರೆ.
ಇವತ್ತು ಅವರ ಒಬ್ಬ ಪುತ್ರ ರಾಘವೇಂದ್ರ ಸಂಸದ,ಮತ್ತೊಬ್ಬ ಪುತ್ರ ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷ.ನಾಳೆ ರಾಘವೇಂದ್ರ ಸೆಂಟ್ರಲ್ ಮಿನಿಸ್ಟರ್ ಆಗುತ್ತಾರೆ.ವಿಜಯೇಂದ್ರ ಮುಖ್ಯಮಂತ್ರಿ ಹುದ್ದೆಗೇರಲು ಅಣಿಯಾಗುತ್ತಾರೆ.ನಿಮ್ಮ ಮಗ ಕಾಂತೇಶ್ ಏನು ಚಿಪ್ಪು ಹಿಡಕೋಬೇಕಾ?ಅಂತ ರೋಷ ವ್ಯಕ್ತಪಡಿಸಿದ್ದಾರೆ.ಅಷ್ಟೇ ಅಲ್ಲ,ಕಾಂತೇಶ್ ಅವರಿಗೆ ಹಾವೇರಿ ಟಿಕೆಟ್ ತಪ್ಪಿದರೆ ನೀವು ಶಿವಮೊಗ್ಗದಿಂದ ಪಕ್ಷೇತರರಾಗಿ ಸ್ಪರ್ಧಿಸಿ.ಮತ ಬ್ಯಾಂಕ್ ಲೆಕ್ಕಾಚಾರ ಗಮನಿಸಿದರೆ ಬಿಜೆಪಿಯ ರಾಘವೇಂದ್ರ,ಕಾಂಗ್ರೆಸ್ಸಿನ ಗೀತಾ ಶಿವರಾಜ್ ಕುಮಾರ್ ಅವರನ್ನು ಸೋಲಿಸಿ ನೀವು ಗೆಲ್ಲುತ್ತೀರಿ ಎಂದಿದ್ದಾರೆ.
ಅರ್ಥಾತ್,ಈಡಿಗರು,ಮುಸ್ಲಿಮರ ಮತಗಳನ್ನು ಗೀತಾ ಶಿವರಾಜ್ ಕುಮಾರ್ ಪಡೆದರೆ,ಲಿಂಗಾಯತರ ಮೇಜರ್ ಷೇರು ರಾಘವೇಂದ್ರ ಅವರಿಗೆ ದಕ್ಕುತ್ತದೆ.ಈ ಮಧ್ಯೆ ಕುರುಬರು ಸೇರಿದಂತೆ ಹಿಂದುಳಿದ ವರ್ಗಗಳ ಮೇಜರ್ ಷೇರು,ಬ್ರಾಹ್ಮಣರ ಮೇಜರ್ ಷೇರು ಪಡೆದು ನೀವು ಗೆಲ್ಲಬಹುದು ಅಂತ ಲೆಕ್ಕ ಹೇಳಿದ್ದಾರೆ.
ಪರಿಣಾಮ?ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಾಲೀಮು ಶುರು ಮಾಡಿದ್ದಾರೆ.

Post a Comment

0 Comments